ಬೋವಜನು ರೂತಳಿಗೆ ವಾಗ್ದಾನಮಾಡಿದ್ದು
೧ ನೊವೊಮಿಯು ಸೊಸೆಗೆ, “ನನ್ನ ಮಗಳೇ, ನಿನಗೆ ಒಳ್ಳೆಯದಾಗುವುದಕ್ಕಾಗಿ, ನೀನು ಗೃಹಿಣಿಯಾಗಿ ಸುಖದಿಂದಿರುವುದಕ್ಕೋಸ್ಕರ ನಾನು ಪ್ರಯತ್ನಿಸಬೇಕಲ್ಲವೇ? ೨ ಈಗ ನೀನು ಯಾರ ಹೆಣ್ಣಾಳುಗಳ ಜೊತೆಯಲ್ಲಿರುತ್ತೀಯೋ ಆ ಬೋವಜನು ನಮ್ಮ ಸಂಬಂಧಿಕನಲ್ಲವೇ? ಅವನು ಈ ರಾತ್ರಿ ಕಣದಲ್ಲಿ ಜವೆಗೋದಿಯನ್ನು ತೂರುವನು. ೩ ನೀನು ಸ್ನಾನಮಾಡಿ, ಸುಗಂಧತೈಲವನ್ನು ಹಚ್ಚಿಕೊಂಡು, ಶ್ರೇಷ್ಠವಸ್ತ್ರಗಳನ್ನು ಧರಿಸಿಕೊಂಡು ಅಲ್ಲಿಗೆ ಹೋಗು; ಅವನು ಅನ್ನಪಾನಗಳನ್ನು ತೆಗೆದುಕೊಳ್ಳುವವರೆಗೂ ಮರೆಯಾಗಿದ್ದು. ೪ ಅವನು ಮಲಗಿದ ಸ್ಥಳವನ್ನು ತಿಳಿದುಕೊಂಡು ಹೋಗಿ ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದು ಬಿಟ್ಟು ಅಲ್ಲೇ ಮಲಗಿಕೋ; ಆ ಮೇಲೆ ಮಾಡತಕ್ಕದ್ದನ್ನು ಅವನು ನಿನಗೆ ತಿಳಿಸುವನು” ಅಂದಳು. ೫ ಅದಕ್ಕೆ ರೂತಳು “ನೀನು ಹೇಳಿದ ಹಾಗೆಯೇ ಮಾಡುವೆನು” ಎಂದು ಹೇಳಿದಳು.
೬ ಅತ್ತೆಯ ಆಜ್ಞೆಯಂತೆಯೇ ಕಣಕ್ಕೆ ಹೋಗಿ, ೭ ಬೋವಜನು ಅನ್ನಪಾನಗಳನ್ನು ತೆಗೆದುಕೊಂಡು ಸಂತುಷ್ಟನಾಗಿ ರಾಶಿಯ ಬಳಿಯಲ್ಲಿ ಮಲಗಿದ ಮೇಲೆ ರಹಸ್ಯವಾಗಿ ಬಂದು ಅವನ ಕಾಲುಗಳ ಮೇಲಣ ಹೊದಿಕೆಯನ್ನು ತೆಗೆದುಬಿಟ್ಟು, ಕಾಲ್ಬದಿಯಲ್ಲಿ ಮಲಗಿದಳು. ೮ ಮಧ್ಯರಾತ್ರಿಯಲ್ಲಿ ಎಚ್ಚರವಾದಾಗ ಬೋವಾಜನು ತನ್ನ ಕಾಲುಗಳ ಬಳಿಯಲ್ಲಿ ಮಲಗಿರುವ ಹೆಂಗಸನ್ನು ಕಂಡು, ೯ ಹೆದರಿ ಆಕೆಯನ್ನು “ನೀನು ಯಾರು?” ಎಂದು ಕೇಳಲು ಆಕೆಯು “ನಾನು ನಿನ್ನ ದಾಸಿಯಾದ ರೂತಳು, ನೀನು ಸಮೀಪಬಂಧುವಾಗಿರುವುದರಿಂದ ನಿನ್ನ ಹೊದಿಕೆಯ ಅಂಚನ್ನು ನನ್ನ ಮೇಲೆ ಹಾಕು” ಅಂದಳು. ೧೦ ಆಗ ಅವನು “ಮಗಳೇ, ಯೆಹೋವನಿಂದ ನಿನಗೆ ಆಶೀರ್ವಾದವಾಗಲಿ; ನೀನು ಬಡವರೂ ಅಥವಾ ಐಶ್ವರ್ಯವಂತರೂ ಆದ ಯೌವನಸ್ಥರ ಹಿಂದೆ ಹೋಗಲಿಲ್ಲ. ಈಗ ನಿನ್ನ ಪತಿಭಕ್ತಿಯು ಮೊದಲಗಿಂತ ವಿಶೇಷವಾಗಿ ಪ್ರತ್ಯಕ್ಷವಾಯಿತು. ೧೧ ನನ್ನ ಮಗಳೇ, ಈಗ ಭಯಪಡಬೇಡ. ನೀನು ಗುಣವಂತೆಯೆಂಬುದು ಊರಿನವರಿಗೆಲ್ಲಾ ತಿಳಿದಿದೆ; ಆದ್ದರಿಂದ ನೀನು ಹೇಳಿದ್ದನ್ನೆಲ್ಲಾ ಮಾಡುವೆನು. ೧೨ ನಾನು ಸಮೀಪಬಂಧುವೆಂಬುದು ನಿಜ; ಆದರೂ ನನಗಿಂತ ಸಮೀಪ ಬಂಧು ಒಬ್ಬನಿದ್ದಾನೆ. ೧೩ ಈ ರಾತ್ರಿ ಇಲ್ಲೇ ಇರು; ನಾಳೆ ಅವನು ಮೈದುನಧರ್ಮವನ್ನು ನೆರವೇರಿಸಿದರೆ ಸರಿ; ಇಲ್ಲವಾದರೆ ಯೆಹೋವನಾಣೆ, ನಾನೇ ಅದನ್ನು ನೆರವೇರಿಸುವೆನು. ಬೆಳಗಾಗುವ ತನಕ ಇಲ್ಲೇ ಮಲಗಿಕೋ” ಎಂದು ಹೇಳಿದನು. ೧೪ ಆಕೆಯು ಆ ವರೆಗೂ ಅವನ ಕಾಲುಗಳ ಬಳಿಯಲ್ಲೇ ಮಲಗಿಕೊಂಡಿದ್ದಳು. ಒಬ್ಬ ಹೆಂಗಸು ಕಣಕ್ಕೆ ಬಂದಿದ್ದಳೆಂಬುವುದು ಯಾರಿಗೂ ಗೊತ್ತಾಗಬಾರದೆಂದು ಅವನು ಹೇಳಿದ್ದರಿಂದ ಗುರುತು ಹಿಡಿಯಲಾರದಷ್ಟು ಕತ್ತಲಿರುವಾಗಲೇ ಆಕೆಯು ಎದ್ದಳು. ೧೫ ಆಗ ಅವನು ಆಕೆಗೆ “ನಿನ್ನ ಮೇಲ್ಹೋದಿಕೆಯನ್ನು ಹಾಸು” ಎಂದು ಹೇಳಿದನು, ಆಕೆ ಹಾಸಲು ಅದರಲ್ಲಿ ಆರು ಪಡಿ (ಸುಮಾರು ಮೂವತ್ತು ಸೇರಿನಷ್ಟು) ಜವೆಗೋದಿಯನ್ನು ಹಾಕಿ ಹೊರಿಸಿ ಕಳುಹಿಸಿದನು. ಆಕೆಯು ಊರೊಳಕ್ಕೆ ಹೋದಳು. ೧೬ ಅತ್ತೆಯ ಬಳಿಗೆ ಬಂದಾಗ, ಅತ್ತೆಯು “ನನ್ನ ಮಗಳೇ, ನೀನು ಹೋಗಿದ್ದ ಕಾರ್ಯವೇನಾಯಿತು?” ಎಂದು ಕೇಳಲು ಆಕೆಯು ಆ ಮನುಷ್ಯನು ಮಾಡಿದ್ದೆಲ್ಲವನ್ನೂ ತಿಳಿಸಿ, ೧೭ “ ‘ನೀನು ಬರಿಗೈಯಿಂದ ಅತ್ತೆಯ ಬಳಿಗೆ ಹೋಗಬಾರದೆಂದು’ ಹೇಳಿ ಈ ಆರು ಪಡಿ ಜವೆಗೋದಿಯನ್ನು ಕೊಟ್ಟನು” ಅಂದಳು. ೧೮ ಅತ್ತೆಯು “ನನ್ನ ಮಗಳೇ, ಈ ಕಾರ್ಯವು ಏನಾಗುವುದೆಂದು ಗೊತ್ತಾಗುವವರೆಗೂ ಸುಮ್ಮನಿರು; ಈ ವಿಷಯವನ್ನು ಇತ್ಯರ್ಥ ಮಾಡುವವರೆಗೂ ಅವನಿಗೆ ಸಮಾಧಾನವಿರಲಾರದು” ಎಂದು ಹೇಳಿದಳು.