14
ಒಂದು ದಿನ ಸೌಲನ ಮಗನಾದ ಯೋನಾತಾನನು ತನ್ನ ಆಯುಧಗಳನ್ನು ಹೊರುವ ಸೇವಕನಿಗೆ, “ಆಚೆ ಇರುವ ಫಿಲಿಷ್ಟಿಯರ ಕಾವಲುದಂಡಿಗೆ ವಿರೋಧವಾಗಿ ಹೋಗೋಣ ಬಾ” ಎಂದು ಹೇಳಿದನು. ಆದರೆ ಈ ಸಂಗತಿಯನ್ನು ತನ್ನ ತಂದೆಗೆ ತಿಳಿಸಲಿಲ್ಲ. ಸೌಲನಾದರೋ ಗಿಬೆಯ ಪ್ರಾಂತ್ಯದ ಅಂತ್ಯಭಾಗವಾಗಿರುವ ಮಿಗ್ರೋನಿನಲ್ಲಿನ ಒಂದು ದಾಳಿಂಬೆ ವೃಕ್ಷದ ಅಡಿಯಲ್ಲಿ ತಂಗಿದ್ದನು. ಅವನ ಜೊತೆಯಲ್ಲಿ ಸುಮಾರು ಆರು ನೂರು ಮಂದಿ ಸೈನಿಕರೂ, *ಏಫೋದನ್ನು ಧರಿಸಿಕೊಂಡಿದ್ದ ಅಹೀಯನೂ ಇದ್ದರು. ಆ ಅಹೀಯನು ಶೀಲೋವಿನಲ್ಲಿ ಯೆಹೋವನ ಯಾಜಕನಾಗಿದ್ದ ಏಲಿಯ ಮರಿಮಗನೂ, ಫೀನೆಹಾಸನ ಮೊಮ್ಮಗನೂ, ಈಕಾಬೋದನ ಅಣ್ಣನಾದ ಅಹೀಟೂಬನ ಮಗನೂ ಆಗಿದ್ದನು. ಯೋನಾತಾನನು ಹೋದದ್ದು ಜನರಿಗೂ ಗೊತ್ತಿರಲಿಲ್ಲ. ಅವನು ಫಿಲಿಷ್ಟಿಯರ ಕಾವಲುದಂಡಿಗೆ ವಿರೋಧವಾಗಿ ಹೊರಟಾಗ, ಕಣಿವೆಯ ಮಾರ್ಗದ ಎರಡು ಕಡೆಗಳಲ್ಲಿ ಬೋಚೇಚ್, ಸೆನೆ ಎಂಬ ಎರಡು ಕಡಿದಾದ ಬಂಡೆಗಳು ಇದ್ದವು. ಅದರಲ್ಲಿ ಒಂದು ಬಂಡೆ ಉತ್ತರದಿಕ್ಕಿಗೆ ಎತ್ತರವಾಗಿ ಮಿಕ್ಮಾಷಿಗೂ, ಮತ್ತೊಂದು ದಕ್ಷಿಣದಿಕ್ಕಿನ ಗೆಬಕ್ಕೆ ಎದುರಾಗಿದ್ದವು. ಯೋನಾತಾನನು ತನ್ನ ಆಯುಧಗಳನ್ನು ಹೊರುವವನಿಗೆ, “ಸುನ್ನತಿಯಿಲ್ಲದ ಈ ಕಾವಲುದಂಡಿನವರಿಗೆ ವಿರೋಧವಾಗಿ ಹೋಗೋಣ ಬಾ. ಒಂದು ವೇಳೆ ಯೆಹೋವನು ತಾನೇ ನಮಗೋಸ್ಕರ ಕಾರ್ಯನಡಿಸುವನು. ಬಹು ಜನರಿದ್ದರೂ, ಸ್ವಲ್ಪ ಜನರಿದ್ದರೂ ರಕ್ಷಿಸುವುದು ಯೆಹೋವನಿಗೆ ಅಸಾಧ್ಯವಲ್ಲ” ಎಂದು ಹೇಳಿದನು. ಆಯುಧಗಳನ್ನು ಹೊರುವ ಸೇವಕನು, “ನಿನ್ನ ಮನಸ್ಸಿನಂತೆ ಮಾಡು, ನಿನ್ನ ಕೋರಿಕೆಯ ಹಾಗೆ ನಾನೂ ನಿನ್ನನ್ನು ಹಿಂಬಾಲಿಸುತ್ತೇನೆ” ಅಂದನು. ಆಗ ಯೋನಾತಾನನು ಅವನಿಗೆ, “ಅವರು ನಮ್ಮನ್ನು ಕಾಣುವಂತೆ ಸಮೀಪಕ್ಕೆ ಹೋಗೋಣ. ‘ನಾವು ನಿಮ್ಮ ಬಳಿಗೆ ಬರುವ ತನಕ ಅಲ್ಲೇ ನಿಲ್ಲಿರಿ’ ಎಂದು ಅವರು ನಮಗೆ ಹೇಳಿದರೆ ಮೇಲೆ ಹತ್ತದೆ ಇದ್ದ ಸ್ಥಳದಲ್ಲೇ ಇರೋಣ. 10 ಆದರೆ ಅವರು, ‘ಮೇಲೆ ಹತ್ತಿ ನಮ್ಮ ಬಳಿಗೆ ಬನ್ನಿರಿ’ ಎಂದು ನಮ್ಮನ್ನು ಕರೆದರೆ ಯೆಹೋವನು ಅವರನ್ನು ನಮ್ಮ ಕೈಗೆ ಒಪ್ಪಿಸಿದ್ದಾನೆ ಎಂಬುದಕ್ಕೆ ಇದೇ ಗುರುತು ಎಂದು ತಿಳಿದು ಮೇಲೆ ಹೋಗೋಣ” ಎಂದನು.
11 ಇವರಿಬ್ಬರೂ ಫಿಲಿಷ್ಟಿಯರ ಕಾವಲು ದಂಡಿನವರಿಗೆ ಕಾಣಿಸಿಕೊಂಡಾಗ ಅವರು, “ಇಗೋ, ಇಬ್ರಿಯರು ತಾವು ಅಡಗಿಕೊಂಡಿದ್ದ ಗುಹೆಗಳಿಂದ ಹೊರಗೆ ಬರುತ್ತಲಿದ್ದಾರೆ” ಎಂದು ತಮ್ಮೊಳಗೆ ಮಾತನಾಡಿಕೊಂಡರು. 12 ಅವರು ಯೋನಾತಾನನಿಗೂ ಅವನ ಆಯುಧಗಳನ್ನು ಹೊರುವವನಿಗೂ, “ಹತ್ತಿ ನಮ್ಮ ಬಳಿಗೆ ಬನ್ನಿರಿ; ನಿಮಗೆ ತೋರಿಸಿಬೇಕಾದ ಕಾರ್ಯ ಬಂದಿದೆ” ಎಂದರು. ಯೋನಾತಾನನು ತನ್ನ ಆಯುಧಗಳನ್ನು ಹೊರುವ ಸೇವಕನಿಗೆ, “ನೀನೂ ನನ್ನ ಸಂಗಡ ಹತ್ತಿ ಬಾ; ಯೆಹೋವನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿದ್ದಾನೆ” ಎಂದು ಹೇಳಿದನು. 13 ಯೋನಾತಾನನೂ ಅವನ ಆಯುಧಗಳನ್ನು ಹೊರುವ ಸೇವಕನೂ ತಮ್ಮ ಕೈ ಮತ್ತು ಮೊಣಕಾಲುಗಳ ಸಹಾಯದಿಂದ ಗಟ್ಟಾ ಹತ್ತಿದರು; ಯೋನಾತಾನನು ಫಿಲಿಷ್ಟಿಯರನ್ನು ನೆಲಕ್ಕುರುಳಿಸುತ್ತಾ ಹೋದನು. ಅವನ ಸೇವಕನು ಹಿಂದಿನಿಂದ ಅವರನ್ನು ಕೊಲ್ಲುತ್ತಾ ಹೋದನು. 14 ಯೋನಾತಾನನು ಅವನ ಸೇವಕನು ಮಾಡಿದ ಮೊದಲ ದಾಳಿಯಲ್ಲಿ ಸುಮಾರು ಇಪ್ಪತ್ತು ಜನರು §ಅರ್ಧ ಎಕರೆ ಭೂಮಿಯಲ್ಲಿ ಸತ್ತುಹೋದರು.
ಫಿಲಿಷ್ಟಿಯರ ಅಪಜಯ
15 ಆಗ ಪಾಳೆಯದಲ್ಲಿದ್ದವರೂ, ಕಾವಲುಗಾರರಾಗಿ ಠಾಣದಲ್ಲಿದ್ದವರೂ, ಸುಲಿಗೆಗೋಸ್ಕರ ಹೊರಗೆ ಹೋಗಿದ್ದವರೂ, ಉಳಿದ ಎಲ್ಲಾ ಜನರೂ ಭಯದಿಂದ ಕಳವಳಗೊಂಡರು. ಇದಲ್ಲದೆ ದೇವರು ಭೂಕಂಪವನ್ನು ಉಂಟುಮಾಡಿದ್ದರಿಂದ ಜನರಲ್ಲಿ ಮಹಾಭೀತಿಯುಂಟಾಯಿತು. 16 ಬೆನ್ಯಾಮೀನ್ಯರ ಗಿಬೆಯದಲ್ಲಿ ಕಾವಲಿದ್ದ ಸೌಲನ ಸೈನಿಕರು ಫಿಲಿಷ್ಟಿಯರ ದಂಡು *ಕಳವಳಗೊಂಡು ಚದರಿಹೋಗುತ್ತಿರುವುದನ್ನು ಕಂಡರು. 17 ಸೌಲನು ತನ್ನ ಜೊತೆಯಲ್ಲಿದ್ದವರಿಗೆ, “ನಮ್ಮನ್ನು ಬಿಟ್ಟುಹೋದವರು ಯಾರೆಂಬುದನ್ನು ಲೆಕ್ಕಮಾಡಿ ನೋಡಿರಿ” ಎಂದು ಆಜ್ಞಾಪಿಸಿದನು. ಅವರು ಲೆಕ್ಕಮಾಡಿ ನೋಡಿದಾಗ ಯೋನಾತಾನನೂ, ಅವನ ಆಯುಧಗಳನ್ನು ಹೊರುವ ಸೇವಕನೂ ಇಲ್ಲವೆಂದು ತಿಳಿದುಬಂದಿತು. 18 ಅನಂತರ ಸೌಲನು ಅಹೀಯನಿಗೆ, “ಏಫೋದನ್ನು ತೆಗೆದುಕೊಂಡು ಬಾ” ಎಂದು ಆಜ್ಞಾಪಿಸಿದನು. ಆ ಕಾಲದಲ್ಲಿ ಇವನು ಇಸ್ರಾಯೇಲರೊಳಗೆ ಏಫೋದನ್ನು ಧರಿಸುತ್ತಿದ್ದನಷ್ಟೆ. 19 ಸೌಲನು ಯಾಜಕನೊಡನೆ ಮಾತನಾಡುತ್ತಿರುವಷ್ಟರಲ್ಲಿ ಫಿಲಿಷ್ಟಿಯರ ಸೈನ್ಯದ ಗದ್ದಲವು ಬಲು ಹೆಚ್ಚಾಯಿತು. ಆಗ ಸೌಲನು ಯಾಜಕನಿಗೆ, “ನಿನ್ನ ಕೈಯನ್ನು ತೆಗೆ” ಎಂದು ಹೇಳಿ 20 ತನ್ನ ಜೊತೆಯಲ್ಲಿದ್ದವರನ್ನು ಕೂಡಿಕೊಂಡು ಯುದ್ಧಕ್ಕೆ ಹೋದನು. ಅಷ್ಟರಲ್ಲಿ ಫಿಲಿಷ್ಟಿಯರ ಸೈನ್ಯದಲ್ಲಿ ಗಲಿಬಿಲಿಯುಂಟಾಗಿ ಒಬ್ಬನನ್ನೊಬ್ಬನು ಕೊಂದುಹಾಕುತ್ತಿದ್ದರು. 21 ಇದಲ್ಲದೆ ಮೊದಲಿನಿಂದಲೇ ಫಿಲಿಷ್ಟಿಯರನ್ನು ಸೇರಿಕೊಂಡು ಅವರೊಡನೆ ಪಾಳೆಯದಲ್ಲಿದ್ದ ಇಬ್ರಿಯರು, ಸೌಲ ಮತ್ತು ಯೋನಾತಾನರ ಜೊತೆಯಲ್ಲಿ ಬಂದ ಇಸ್ರಾಯೇಲರನ್ನು ಕೂಡಿಕೊಂಡರು. 22 ಎಫ್ರಾಯೀಮಿನ ಪರ್ವತ ಪ್ರಾಂತ್ಯದಲ್ಲಿ ಅಡಗಿಕೊಂಡಿದ್ದ ಇಸ್ರಾಯೇಲರಿಗೆ ಫಿಲಿಷ್ಟಿಯರು ಓಡಿಹೋದರೆಂಬ ವರ್ತಮಾನವು ಮುಟ್ಟಿದಾಗ ಅವರೂ ಯುದ್ಧಕ್ಕೆ ಬಂದು ಅವರನ್ನು ಬೆನ್ನಟ್ಟಿದರು. 23 ಹೀಗೆ ಯೆಹೋವನು ಆ ದಿನದಲ್ಲಿ ಇಸ್ರಾಯೇಲರಿಗೆ ಜಯವನ್ನುಂಟುಮಾಡಿದನು. ಯುದ್ಧವು ಬೇತಾವೆನಿನ ಆಚೆಯವರೆಗೂ ನಡೆಯಿತು.
ಸೌಲನ ಬುದ್ಧಿಹೀನ ಆಜ್ಞೆ
24 ಆ ದಿನ ಸೌಲನು ಇಸ್ರಾಯೇಲರನ್ನು ಕುರಿತು, “ಶತ್ರುಗಳಿಗೆ ಮುಯ್ಯಿತೀರಿಸುವುದಕ್ಕೋಸ್ಕರ ನಿಮ್ಮಲ್ಲಿ ಒಬ್ಬನಾದರೂ ಸಾಯಂಕಾಲದವರೆಗೆ ಊಟಮಾಡಬಾರದು; ಮಾಡಿದವನು ಶಾಪಗ್ರಸ್ತನಾಗಲಿ” ಎಂದು ಆಣೆಯಿಟ್ಟಿದ್ದರಿಂದ ಅಂದು ಅವರೆಲ್ಲರೂ ಬಹುವಾಗಿ ಬಳಲಿಹೋಗಿದ್ದರೂ ಒಬ್ಬನಾದರೂ ಆಹಾರ ಪಧಾರ್ಥವನ್ನು ರುಚಿಸಿ ನೋಡಿರಲಿಲ್ಲ. 25 §ಸೈನ್ಯದವರೆಲ್ಲರೂ ನೆಲಜೇನು ಇರುವ ಕಾಡಿಗೆ ಬಂದರು. 26 ಅವರು ಅಲ್ಲಿ ಜೇನುತುಪ್ಪ ಹರಿಯುವುದನ್ನು ಕಂಡರೂ ಶಾಪಕ್ಕೆ ಭಯಪಟ್ಟದರಿಂದ ಯಾವನೂ ಅದನ್ನು ಬಾಯೊಳಗೆ ಹಾಕಲಿಲ್ಲ. 27 ಯೋನಾತಾನನಿಗೆ ತನ್ನ ತಂದೆಯು ಜನರಿಗೆ ಆಣೆಯಿಟ್ಟು ಹೇಳಿದ್ದು ಗೊತ್ತಿರಲಿಲ್ಲವಾದ್ದರಿಂದ ಅವನು ತನ್ನ ಕೋಲನ್ನು ಜೇನುಹುಟ್ಟಿನಲ್ಲಿ ಚುಚ್ಚಿ, ಕೈಯಿಂದ ತೆಗೆದು ತಿನ್ನಲು ಅವನ *ಕಣ್ಣುಗಳು ಕಳೆಗೊಂಡವು. 28 ಕೂಡಲೆ ಒಬ್ಬನು ಅವನಿಗೆ, “ಈ ಹೊತ್ತು ಊಟಮಾಡುವಂಥವರು ಶಾಪಗ್ರಸ್ತರಾಗುವರೆಂದು ನಿನ್ನ ತಂದೆಯು ಆಣೆಯಿಟ್ಟು ಹೇಳಿದ್ದಾನೆ” ಎಂದು ತಿಳಿಸಿದನು. 29 ಜನರು ಬಹಳವಾಗಿ ಬಳಲಿ ಹೋದದ್ದನ್ನು ಕಂಡು ಯೋನಾತಾನನು ಆ ಮನುಷ್ಯನಿಗೆ, “ನನ್ನ ತಂದೆಯು ದೇಶದಲ್ಲಿ ಇಕ್ಕಟ್ಟನ್ನು ಉಂಟುಮಾಡಿದ್ದಾನೆ; ನಾನು ಸ್ವಲ್ಪ ಜೇನುತುಪ್ಪವನ್ನು ತಿಂದದ್ದರಿಂದ ನನ್ನ ಕಣ್ಣುಗಳು ಹೇಗೆ ಕಳೆಗೊಂಡಿರುತ್ತವೆ ನೋಡು. 30 ಜನರು ತಾವು ಇಂದು ಶತ್ರುಗಳಿಂದ ಸುಲಿದುಕೊಂಡ ಆಹಾರವನ್ನು ಯಥೇಚ್ಛವಾಗಿ ಊಟಮಾಡಿದ್ದರೆ ಅವರು ಇನ್ನಷ್ಟು ಬಲಗೊಳ್ಳುತ್ತಿದ್ದರು. ಫಿಲಿಷ್ಟಿಯರಲ್ಲಿ ಹತರಾಗದವರು ಇನ್ನೂ ಹೆಚ್ಚು ಮಂದಿ ಇದ್ದಾರೆ” ಅಂದನು. 31 ಆ ದಿನ ಜನರು ಮಿಕ್ಮಾಷಿನಿಂದ ಅಯ್ಯಾಲೋನಿನ ವರೆಗೆ ಫಿಲಿಷ್ಟಿಯರನ್ನು ಹೊಡೆದು ಬಹಳವಾಗಿ ದಣಿದಿದ್ದರು. 32 ಅವರು ತಾವು ಕೊಳ್ಳೆಮಾಡಿದ ಎತ್ತು, ಕುರಿ, ಕರು ಇವುಗಳನ್ನು ಹಿಡಿದು ನೆಲದ ಮೇಲೆಯೇ ಕೊಂದು ಮಾಂಸವನ್ನು ರಕ್ತದೊಡನೆ ತಿಂದರು. 33 ಆಗ ಕೆಲವರು ಸೌಲನಿಗೆ, “ನೋಡು, ಜನರು ರಕ್ತದೊಂದಿಗೆ ಊಟಮಾಡಿ ಯೆಹೋವನಿಗೆ ವಿರುದ್ಧವಾಗಿ ಪಾಪ ಮಾಡುತ್ತಾರೆ” ಎಂದು ತಿಳಿಸಿದರು. ಸೌಲನು ಅವರಿಗೆ, “ಇದು ಮಹಾಪಾತಕವೇ ಸರಿ; ನೀವು ಬೇಗನೆ ನನ್ನ ಬಳಿಗೆ ದೊಡ್ಡ ಕಲ್ಲೊಂದನ್ನು ಹೊರಳಿಸಿ ತಂದಿಟ್ಟು; 34 ಜನರ ಬಳಿಗೆ ಹೋಗಿ ಅವರಿಗೆ, ‘ರಕ್ತದೊಂದಿಗೆ ಭೋಜನ ಮಾಡಿ ಯೆಹೋವನಿಗೆ ವಿರುದ್ಧವಾಗಿ ಪಾಪಮಾಡಬೇಡಿರಿ; ನಿಮ್ಮ ನಿಮ್ಮ ಎತ್ತು ಕುರಿಗಳನ್ನು ಇಲ್ಲಿ ತಂದು, ಕೊಂದು ತಿನ್ನಬೇಕೆಂದು ಹೇಳಿರಿ’ ” ಅಂದನು. ಹಾಗೆಯೇ ಜನರೆಲ್ಲರೂ ತಮ್ಮ ತಮ್ಮ ಎತ್ತು ಕುರಿಗಳನ್ನು ಅದೇ ರಾತ್ರಿ ಅಲ್ಲಿಗೆ ತಂದು ಕೊಂದು ತಿಂದರು. 35 ಸೌಲನು ಯೆಹೋವನಿಗೋಸ್ಕರ ಒಂದು ಯಜ್ಞವೇದಿಯನ್ನು ಕಟ್ಟಿಸಿದನು; ಅವನು ಕಟ್ಟಿಸಿದ ಯಜ್ಞವೇದಿಗಳಲ್ಲಿ ಇದೇ ಮೊದಲನೆಯದು.
36 ಸೌಲನು ತನ್ನ ಸೈನಿಕರನ್ನು, “ಬನ್ನಿರಿ; ನಾವು ಈ ರಾತ್ರಿಯಲ್ಲೇ ಫಿಲಿಷ್ಟಿಯರನ್ನು ಬೆನ್ನಟ್ಟಿ, ಬೆಳಗಾಗುವವರೆಗೆ ಅವರನ್ನು ಸುಲಿದುಕೊಂಡು, ಒಬ್ಬನನ್ನೂ ಉಳಿಸದೆ ಕೊಂದುಹಾಕೋಣ” ಎಂದು ಕರೆದನು. ಅವರು, “ನಿನ್ನ ಇಷ್ಟದಂತೆ ಆಗಲಿ” ಎಂದು ಹೇಳಿದರು. ಆದರೆ ಯಾಜಕನು, “ಇತ್ತ ಬನ್ನಿರಿ; ನಾವು ದೇವರನ್ನು ವಿಚಾರಿಸೋಣ” ಎಂದನು. 37 ಆಗ ಸೌಲನು, “ದೇವಾ, ನಾವು ಫಿಲಿಷ್ಟಿಯರನ್ನು ಬೆನ್ನಟ್ಟಬಹುದೋ? ನೀನು ಅವರನ್ನು ಇಸ್ರಾಯೇಲ್ಯರ ಕೈಗೆ ಒಪ್ಪಿಸಿಕೊಡುವಿಯೋ?” ಎಂದು ಕೇಳಿಕೊಂಡರೂ ದೇವರು ಅವನಿಗೆ ಆ ದಿನ ಉತ್ತರಕೊಡಲೇ ಇಲ್ಲ. 38 ಆಗ ಸೌಲನು ಪ್ರಜೆಗಳ ಮುಖಂಡರಿಗೆ, “ನೀವೆಲ್ಲರೂ ಇಲ್ಲಿ ಬಂದು, ಈ ಹೊತ್ತು ಪಾಪ ಯಾವುದರಿಂದ ಉಂಟಾಯಿತು ಎಂದು ವಿಚಾರಿಸಿ ಗೊತ್ತುಮಾಡಿರಿ. 39 ಇಸ್ರಾಯೇಲ್ಯರ ರಕ್ಷಕನಾದ ಯೆಹೋವನ ಆಣೆ, ಪಾಪಮಾಡಿದವನು ನನ್ನ ಮಗನಾದ ಯೋನಾತಾನನಾಗಿದ್ದರೂ ಸರಿಯೇ, ಅವನು ಸಾಯಲೇಬೇಕು” ಎಂದು ಹೇಳಿದನು; ಜನರು ಏನೂ ಮಾತನಾಡದೆ ಮೌನವಾಗಿದ್ದರು. 40 ಆಗ ಸೌಲನು ಅವರಿಗೆ, “ನೀವೆಲ್ಲರೂ ಒಂದು ಕಡೆ ನಿಲ್ಲಿರಿ; ನಾನೂ ನನ್ನ ಮಗನಾದ ಯೋನಾತಾನನೂ ಮತ್ತೊಂದು ಕಡೆಯಲ್ಲಿರುವೆವು” ಅನ್ನಲು ಅವರು, “ನಿನ್ನ ಇಷ್ಟದಂತೆ ಆಗಲಿ” ಅಂದರು. 41 ಅನಂತರ ಸೌಲನು, “§ಇಸ್ರಾಯೇಲ್ಯರ ದೇವರೇ, ಸತ್ಯವನ್ನು ತಿಳಿಸು” ಎಂದು ಯೆಹೋವನನ್ನು ಪ್ರಾರ್ಥಿಸಿ ಚೀಟು ಹಾಕಿದಾಗ *ಅದು ಅವನಿಗೂ ಯೋನಾತಾನನಿಗೂ ಬಂದಿತು, ಜನರು ಪಾರಾದರು. 42 ಸೌಲನು ಪುನಃ, “ನಮ್ಮಿಬ್ಬರೊಳಗೆ ಚೀಟು ಹಾಕಿರಿ” ಎಂದು ಹೇಳಿದನು. ಹಾಗೆಯೇ ಮಾಡಿದಾಗ ಚೀಟು ಯೋನಾತಾನನಿಗೆ ಬಿದ್ದಿತು. 43 ಆಗ ಸೌಲನು ಯೋನಾತಾನನನ್ನು, “ನೀನು ಏನು ಮಾಡಿದಿ, ಹೇಳು” ಎಂದು ಕೇಳಲು ಅವನು, “ನಾನು ಕೋಲಿನಿಂದ ಸ್ವಲ್ಪ ಜೇನುತುಪ್ಪವನ್ನು ತೆಗೆದುಕೊಂಡು ತಿಂದೆನು; ನಾನು ಸಾಯುವುದಕ್ಕೆ ಸಿದ್ಧನಾಗಿದ್ದೇನೆ” ಎಂದು ಉತ್ತರಕೊಟ್ಟನು. 44 ಅದಕ್ಕೆ ಸೌಲನು, “ಯೋನಾತಾನನೇ, ನಾನು ನಿನ್ನನ್ನು ಕೊಲ್ಲದೆ ಬಿಟ್ಟರೆ ದೇವರು ನನಗೆ ಬೇಕಾದದ್ದನ್ನು ಮಾಡಲಿ” ಎಂದನು. 45 ಜನರು ಅವನಿಗೆ, “ದೇವರ ಸಹಾಯದಿಂದ ಈ ಹೊತ್ತು ಇಸ್ರಾಯೇಲರಿಗೆ ಮಹಾ ಜಯವನ್ನುಂಟುಮಾಡಿದ ಯೋನಾತಾನನು ಸಾಯಬೇಕೋ? ಕೂಡದು; ಯೆಹೋವನಾಣೆ, ಅವನ ತಲೆಗೂದಲುಗಳಲ್ಲಿ ಒಂದನ್ನೂ ನೆಲಕ್ಕೆ ಬೀಳಿಸಬಾರದು” ಎಂದು ಹೇಳಿ, ಪ್ರಾಯಶ್ಚಿತ್ತವನ್ನು ಕೊಟ್ಟು, ಅವನನ್ನು ಬಿಡಿಸಿದರು. 46 ಸೌಲನು ಆ ಮೇಲೆ ಫಿಲಿಷ್ಟಿಯರನ್ನು ಹಿಂದಟ್ಟದೆ ತನ್ನ ಮನೆಗೆ ಹೋದನು. ಫಿಲಿಷ್ಟಿಯರೂ ತಮ್ಮ ಪ್ರಾಂತ್ಯಕ್ಕೆ ಹೋದರು.
ಸೌಲನ ಯುದ್ಧಗಳೂ ಅವನ ಕುಟುಂಬವೂ
47 ಸೌಲನು ಇಸ್ರಾಯೇಲ್ಯರಿಗೆ ಅರಸನಾದ ಮೇಲೆ ಅವನು ಸುತ್ತಣ ವೈರಿಗಳಾದ ಮೋವಾಬ್ಯರು, ಅಮ್ಮೋನಿಯರು, ಎದೋಮ್ಯರು, ಚೋಬದ ಅರಸರು, ಫಿಲಿಷ್ಟಿಯರು ಇವರೊಡನೆ ಯುದ್ಧಮಾಡಿದನು. ಅವನು ಹೋದ ಕಡೆಯಲ್ಲೆಲ್ಲಾ ಜಯವನ್ನೇ ಹೊಂದಿದನು. 48 ಇದಲ್ಲದೆ ಅವನು ಅಮಾಲೇಕ್ಯರಿಗೆ ವಿರೋಧವಾಗಿ ದಂಡೆತ್ತಿ ಹೋಗಿ ಪರಾಕ್ರಮದಿಂದ ಅವರನ್ನು ಸದೆಬಡಿದನು. ಇಸ್ರಾಯೇಲ್ಯರನ್ನು ಸುಲಿಗೆಮಾಡುವವರ ಕೈಗೆ ಸಿಕ್ಕದಂತೆ ತಪ್ಪಿಸಿದನು.
49 ಸೌಲನ ಗಂಡು ಮಕ್ಕಳು - ಯೋನಾತಾನ, ಇಷ್ವಿ ಮತ್ತು ಮಲ್ಕೀಷೂವ. ಅವನ ಹೆಣ್ಣು ಮಕ್ಕಳು - ಮೇರಬ್ ಮತ್ತು ಮೀಕಲ್. 50 ಅಹೀಮಾಚನ ಮಗಳಾದ ಅಹೀನೋವಮಳು ಸೌಲನ ಹೆಂಡತಿ. ನೇರನ ಮಗನಾದ ಅಬ್ನೇರನು ಅವನ ಸೇನಾಪತಿ. ನೇರನು ಸೌಲನು ಚಿಕ್ಕಪ್ಪನು. 51 ಸೌಲನ ತಂದೆಯಾದ ಕೀಷನೂ, ಅಬ್ನೇರನ ತಂದೆಯಾದ ನೇರನೂ ಅಬೀಯೇಲನ ಮಕ್ಕಳು.
52 ಸೌಲನ ಜೀವಮಾನದಲ್ಲೆಲ್ಲಾ ಫಿಲಿಷ್ಟಿಯರಿಗೂ ಇಸ್ರಾಯೇಲರಿಗೂ ಘೋರ ಯುದ್ಧವಾಗುತ್ತಿದ್ದುದ್ದರಿಂದ ಅವನು ಎಲ್ಲಿಯಾದರೂ ಒಬ್ಬ ಬಲಿಷ್ಠನೂ ಪರಾಕ್ರಮಶಾಲಿಯೂ ಆದ ಮನುಷ್ಯನನ್ನು ಕಂಡರೆ, ಕೂಡಲೆ ಅವನನ್ನು ತನ್ನ ಹತ್ತಿರ ಇಟ್ಟುಕೊಳ್ಳುತ್ತಿದ್ದನು.
* 14:3 ವಿಮೋ 28:6-30. 14:3 ಯೆಹೋ. 18:1. 14:6 ನ್ಯಾಯ 7:4,7 § 14:14 ಇಬ್ರಿಯ ಭಾಷೆಯಲ್ಲಿ: ಒಂದು ದಿನದಲ್ಲಿ ಉಳುವಷ್ಟು ಭೂಮಿಯ ಅರ್ಧ ಅಥವಾ ಒಂದು ಜೋಡಿ ಎತ್ತು ಒಪ್ಪೊತ್ತಿನಲ್ಲಿ ಉಳುವಷ್ಟು ಭೂಮಿ. * 14:16 ಯೆಹೋ. 2:9. 14:19 ಅರಣ್ಯ 27:21. 14:20 ನ್ಯಾಯ 7:22 § 14:25 ಇಸ್ರಾಯೇಲ ಜನರೆಲ್ಲರು. * 14:27 ಅವನು ತನ್ನ ಬಲವನ್ನು ಪುನಃ ಪಡೆದುಕೊಂಡನು. ಪುನಶ್ಚೇತನ 14:32 ಯಾಜ 3:17. 14:39 ರೂತ. 3:13. § 14:41 ವಿಮೋ 28:30. * 14:41 ಅ.ಕೃ. 1:24-26.