ಫಿಲಿಷ್ಟಿಯರು ದೇವರ ಮಂಜೂಷವನ್ನು ಹಿಂದಕ್ಕೆ ಕಳುಹಿಸಿದ್ದು
೧ ಯೆಹೋವನ ಮಂಜೂಷವು ಫಿಲಿಷ್ಟಿಯರ ದೇಶದಲ್ಲಿ ಏಳು ತಿಂಗಳ ಕಾಲ ಇತ್ತು. ೨ ನಂತರ ಫಿಲಿಷ್ಟಿಯರು ಪೂಜಾರಿಗಳನ್ನೂ, ಕಣಿಹೇಳುವವರನ್ನೂ ಕರೆದು ಅವರಿಗೆ, “ಯೆಹೋವನ ಮಂಜೂಷವನ್ನು ಏನು ಮಾಡಬೇಕು? ಅದನ್ನು ಪುನಃ ಅದರ ಸ್ಥಳಕ್ಕೆ ಹೇಗೆ ಕಳುಹಿಸಬೇಕು ತಿಳಿಸಿರಿ” ಅನ್ನಲು ೩ ಅವರು, “ನೀವು ಇಸ್ರಾಯೇಲಿನ ದೇವರ ಮಂಜೂಷವನ್ನು ಸುಮ್ಮನೆ ಕಳುಹಿಸಬಾರದು. *ಪ್ರಾಯಶ್ಚಿತ್ತದ್ರವ್ಯದೊಡನೆ ಕಳುಹಿಸಿದರೆ ಮಾತ್ರ ಗುಣಹೊಂದುವಿರಿ. ಆತನ ಶಿಕ್ಷಾಹಸ್ತವು ನಿಮ್ಮನ್ನು ಬಾಧಿಸುತ್ತಿರುವುದಕ್ಕೆ ಕಾರಣವು ಗೊತ್ತಾಗುವುದು” ಎಂದು ಹೇಳಿದರು. ೪ ಜನರು, “ನಾವು ಪ್ರಾಯಶ್ಚಿತ್ತಾರ್ಥವಾಗಿ ಏನು ಕಳುಹಿಸಬೇಕು?” ಎಂದು ಕೇಳಲು ಅವರು, “ನಿಮಗೂ ನಿಮ್ಮ ಪ್ರಭುಗಳಿಗೂ ಒಂದೇ ವಿಧವಾದ ವ್ಯಾಧಿ ಇರುವುದರಿಂದ ಪ್ರಭುಗಳ ಸಂಖ್ಯೆಗೆ ಸರಿಯಾಗಿ ಬಂಗಾರದ ಐದು ಗಡ್ಡೆಗಳನ್ನೂ, ಬಂಗಾರದ ಐದು ಇಲಿಗಳನ್ನು ಮಾಡಿಸಬೇಕು. ೫ ನೀವು ನಿಮ್ಮ ದೇಶನಿವಾಸಿಗಳ ವಿನಾಶಕ್ಕೆ ಕಾರಣವಾಗಿರುವ ಗಡ್ಡೆ ಮತ್ತು ಇಲಿ ಇವುಗಳ ಸ್ವರೂಪಗಳನ್ನು ಚಿನ್ನದಿಂದ ಮಾಡಿಸಿ, ಇಸ್ರಾಯೇಲಿನ ದೇವರಿಗೆ ಅದನ್ನು ಅರ್ಪಿಸಿ ಮಹಿಮೆಯನ್ನು ಸಲ್ಲಿಸಿದರೆ, ಆತನ ಶಿಕ್ಷಾಹಸ್ತವು ನಿಮ್ಮನ್ನೂ, ನಿಮ್ಮ ದೇವತೆಗಳನ್ನೂ, ಪ್ರಾಂತಗಳನ್ನೂ ಬಿಟ್ಟುಹೋದೀತು. ೬ ಐಗುಪ್ತರಂತೆಯೂ ಫರೋಹನಂತೆಯೂ ನಿಮ್ಮ ಹೃದಯಗಳನ್ನು ಕಠಿಣಪಡಿಸಿಕೊಳ್ಳುವುದೇಕೆ? ಇಸ್ರಾಯೇಲ್ಯರನ್ನು ಕಳುಹಿಸಲೊಲ್ಲದ ಇವರನ್ನು ಯೆಹೋವನು ಎಷ್ಟೋ ವಿಧವಾಗಿ ಬಾಧಿಸಬೇಕಾಯಿತಲ್ಲಾ. ೭ ಈಗ ನೀವು ಒಂದು §ಹೊಸ ಬಂಡಿಯನ್ನು ಮಾಡಿಸಿರಿ. ಅದಕ್ಕೆ ಹಾಲು ಕರೆಯುವ ಮತ್ತು *ಎಂದೂ ನೊಗಹೊರದ ಎರಡು ಹಸುಗಳನ್ನು ಹೂಡಿಸಿರಿ. ಆ ಹಸುಗಳ ಕರುಗಳನ್ನು ಮನೆಗೆ ತೆಗೆದುಕೊಂಡು ಹೋಗಿರಿ ೮ ಆ ಬಂಡಿಯ ಮೇಲೆ ಯೆಹೋವನ ಮಂಜೂಷವನ್ನೂ, ನೀವು ಪ್ರಾಯಶ್ಚಿತ್ತಾರ್ಥವಾಗಿ ಕೊಡುವ ಬಂಗಾರದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಟ್ಟು ಕಳುಹಿಸಿಬಿಡಿರಿ. ೯ ಅ ಹಸುಗಳು ತಾವಾಗಿ ಸ್ವದೇಶದ ದಾರಿ ಹಿಡಿದು ಬೇತ್ ಷೆಮೆಷಿನ ಕಡೆಗೆ ಹೋದರೆ ಈ ದೊಡ್ಡ ಕೇಡನ್ನು ಬರಮಾಡಿದವನು ಯೆಹೋವನೇ ಎಂದೂ, ಆ ಮಾರ್ಗವನ್ನು ಹಿಡಿಯದಿದ್ದರೆ ಆತನ ಹಸ್ತವು ನಮ್ಮನ್ನು ಬಾಧಿಸಲ್ಲಿಲ್ಲ ಇದು ಆಕಸ್ಮಿಕವಾಗಿ ಬಂದಿದೆ ಎಂದು, ತಿಳಿದುಕೊಳ್ಳಿರಿ” ಅಂದರು.
೧೦ ಅದೇ ಪ್ರಕಾರ ಫಿಲಿಷ್ಟಿಯರು ಹಾಲುಕರೆಯುವ ಎರಡು ಹಸುಗಳನ್ನು ಹಿಡಿದುಕೊಂಡು ಬಂಡಿಗೆ ಹೂಡಿ ಅವುಗಳ ಕರುಗಳನ್ನು ಮನೆಯಲ್ಲಿ ಕಟ್ಟಿಹಾಕಿದರು. ೧೧ ಯೆಹೋವನ ಮಂಜೂಷವನ್ನೂ, ಚಿನ್ನದ ಇಲಿಗಳೂ, ಗಡ್ಡೆಗಳೂ ಇದ್ದ ಚಿಕ್ಕ ಪೆಟ್ಟಿಗೆಯನ್ನೂ ಬಂಡಿಯ ಮೇಲಿಟ್ಟರು. ೧೨ ಕೂಡಲೆ ಆ ಹಸುಗಳು ಬೇತ್ ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಕೂಗುತ್ತಾ ನೆಟ್ಟಗೆ ಮುಂದೆ ನಡೆದವು; ಎಡಬಲಕ್ಕೆ ತಿರುಗಲಿಲ್ಲ. ಫಿಲಿಷ್ಟಿಯ ಪ್ರಭುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆ ಹೋದರು. ೧೩ ಬೇತ್ ಷೆಮೆಷಿನವರು ಅಲ್ಲಿನ ತಗ್ಗಿನಲ್ಲಿ ಗೋದಿಯ ಬೆಳೆಯನ್ನು ಕೊಯ್ಯುತ್ತಿದ್ದರು. ಅವರು ಕಣ್ಣೆತ್ತಿ ಯೆಹೋವನ ಮಂಜೂಷವನ್ನು ನೋಡಿ ಬಹು ಸಂತೋಷಪಟ್ಟರು. ೧೪ ಬಂಡಿಯು ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿದ್ದ ದೊಡ್ಡ ಕಲ್ಲಿನ ಬಳಿಯಲ್ಲಿ ಬಂದು ನಿಂತಿತು. ಆಗ ಅವರು ಹೋಗಿ ಬಂಡಿಯ ಕಟ್ಟಿಗೆಗಳನ್ನು ಸೀಳಿ, ಆ ಹಸುಗಳನ್ನು ಯೆಹೋವನಿಗೆ ಯಜ್ಞಮಾಡಿದರು. ೧೫ ಲೇವಿಯರು ಯೆಹೋವನ ಮಂಜೂಷವನ್ನೂ, ಚಿನ್ನದ ವಸ್ತುಗಳುಳ್ಳ ಚಿಕ್ಕ ಪೆಟ್ಟಿಗೆಯನ್ನೂ ಇಳಿಸಿ ಆ ದೊಡ್ಡ ಕಲ್ಲಿನ ಮೇಲಿಟ್ಟರು. ಬೇತ್ ಷೆಮೆಷಿನವರು ಅದೇ ದಿನ ಯೆಹೋವನಿಗೆ ಸರ್ವಾಂಗಹೋಮಗಳನ್ನೂ ಮತ್ತು ಯಜ್ಞಗಳನ್ನೂ ಸಮರ್ಪಿಸಿದರು. ೧೬ ಇದನ್ನೆಲ್ಲಾ ನೋಡಿದ ಮೇಲೆ ಫಿಲಿಷ್ಟಿಯರ ಐದು ಮಂದಿ ಪ್ರಭುಗಳು ಅದೇ ದಿನ ಎಕ್ರೋನಿಗೆ ಹಿಂದಿರುಗಿದರು.
೧೭ ಫಿಲಿಷ್ಟಿಯರು ಯೆಹೋವನಿಗೆ ಸಮರ್ಪಿಸಿದ ಚಿನ್ನದ ಗಡ್ಡೆಗಳು ಅಷ್ಡೋದ್, ಗಾಜಾ, ಅಷ್ಕೆಲೋನ್, ಗತ್ ಊರು, ಎಕ್ರೋನ್ ಎಂಬ ಅವರ ಸಂಸ್ಥಾನಗಳ ಸಂಖ್ಯೆಗಳಿಗೂ ೧೮ ಅವರು ಕಳುಹಿಸಿದ ಬಂಗಾರದ ಇಲಿಗಳು ಫಿಲಿಷ್ಟಿಯರ ಐದು ಮಂದಿ ಅರಸುಗಳ ಅಧೀನದಲ್ಲಿದ್ದ ಎಲ್ಲಾ ಗ್ರಾಮ ನಗರಗಳ ಸಂಖ್ಯೆಗಳಿಗೂ ಸರಿಯಾಗಿದ್ದವು. ಬೇತ್ ಷೆಮೆಷಿನವನಾದ ಯೆಹೋಶುವನ ಹೊಲದಲ್ಲಿ ಇರುವ ಯೆಹೋವನ ಮಂಜೂಷವೂ ಇಡಲ್ಪಟ್ಟ ಆ ದೊಡ್ಡ ಕಲ್ಲೇ ಇದಕ್ಕೆ ಸಾಕ್ಷಿಯಾಗಿ ಇಂದಿಗೂ ಇದೆ. ೧೯ ಬೇತ್ ಷೆಮೆಷಿನವರು ಯೆಹೋವನ ಮಂಜೂಷದಲ್ಲಿ ಇಣಕಿ ನೋಡಿದ್ದರಿಂದ §ಯೆಹೋವನು ಅವರಲ್ಲಿ ಎಪ್ಪತ್ತು ಮಂದಿಯನ್ನು ಸಾಯಿಸಿದನು. ಇದಲ್ಲದೆ ಐವತ್ತು ಸಾವಿರ ಜನರು ಮರಣ ಹೊಂದಿದರು. ಯೆಹೋವನು ತಮ್ಮಲ್ಲಿ ಮಹಾನಾಶನವನ್ನು ಉಂಟುಮಾಡಿದ್ದರಿಂದ ಬೇತ್ ಷೆಮೆಷಿನವರು ಗೋಳಾಡಿದರು. ೨೦ ಪರಿಶುದ್ಧ ದೇವರಾದ ಯೆಹೋವನ ಮುಂದೆ ಯಾರು ನಿಂತಾರು? ನಮ್ಮನ್ನು ಬಿಟ್ಟು ಈತನು ಹೋಗತಕ್ಕ ಸ್ಥಳ ಯಾವುದು ಎಂದು ಮಾತನಾಡಿಕೊಂಡು ೨೧  *ಕಿರ್ಯತ್ಯಾರೀಮಿನವರ ಬಳಿಗೆ ದೂತರನ್ನು ಕಳುಹಿಸಿ ಅವರಿಗೆ, “ಫಿಲಿಷ್ಟಿಯರು ಯೆಹೋವನ ಮಂಜೂಷವನ್ನು ಕಳುಹಿಸಿದ್ದಾರೆ; ನೀವು ಬಂದು ಅದನ್ನು ತೆಗೆದುಕೊಂಡು ಹೋಗಿರಿ” ಎಂದು ಹೇಳಿದರು.
* ೬:೩ ಯಾಜಕ. 5: 15-16. ೬:೪ ಯೆಹೋ. 13: 3. ೬:೬ ವಿಮೋ. 8:13; 12:31. § ೬:೭ 2 ಸಮು. 6: 3. * ೬:೭ ಅರಣ್ಯ. 19:2. ೬:೯ ಯೆಹೋ 15:10. ೬:೧೬ ವ. 4. § ೬:೧೯ ವಿಮೋ. 19:21. * ೬:೨೧ ಯೆಹೋ. 9: 17; 18:14.