೧೬
ಚೀಬನು ಅರಸನಿಗೆ ಆಹಾರ ತಂದದ್ದೂ
೧ ದಾವೀದನು ಗುಡ್ಡದ ತುದಿಯ ಆಚೆಗೆ ಹೋದ ಕೂಡಲೆ ಮೆಫೀಬೋಶೆತನ ಸೇವಕನಾದ ಚೀಬನು ತಡಿಹಾಕಿದ ಎರಡು ಕತ್ತೆಗಳ ಮೇಲೆ ಇನ್ನೂರು ರೊಟ್ಟಿಗಳನ್ನೂ, ನೂರು ಒಣಗಿದ ದ್ರಾಕ್ಷೇ ಗೊಂಚಲುಗಳನ್ನೂ, ನೂರು ಅಂಜೂರ ಹಣ್ಣುಗಳನ್ನೂ, ಒಂದು ಬುದ್ದಲಿ ದ್ರಾಕ್ಷಾರಸವನ್ನೂ ಹೇರಿಕೊಂಡು ಬಂದು ಅವನನ್ನು ಎದುರುಗೊಂಡನು. ೨ ಅರಸನು ಚೀಬನನ್ನು, “ಇವುಗಳನ್ನು ಯಾಕೆ ತಂದಿ?” ಎಂದು ಕೇಳಿದನು. ಅವನು, “ಅರಸನ ಮನೆಯವರು ಸವಾರಿಮಾಡುವುದಕ್ಕಾಗಿ ಕತ್ತೆಗಳನ್ನು, ಆಳುಗಳು ತಿನ್ನುವುದಕ್ಕಾಗಿ ಹಣ್ಣು ಮತ್ತು ರೊಟ್ಟಿಗಳನ್ನು, ಅರಣ್ಯದಲ್ಲಿ ದಣಿದವರು ಕುಡಿಯುವುದಕ್ಕಾಗಿ ದ್ರಾಕ್ಷಾರಸವನ್ನು ತಂದಿದ್ದೇನೆ” ಎಂದು ಉತ್ತರಕೊಟ್ಟನು. ೩ ಅರಸನು ತಿರುಗಿ ಅವನನ್ನು, “ನಿನ್ನ ಯಜಮಾನನ ಮಗನು ಎಲ್ಲಿದ್ದಾನೆ?” ಎಂದು ಕೇಳಲು ಅವನು, “ತನ್ನ ತಂದೆಯ ರಾಜ್ಯವನ್ನು ಇಸ್ರಾಯೇಲರು ಮರಳಿ ತನಗೇ ಕೊಡುವರೆಂದು ಹೇಳಿ ಅವನು ಯೆರೂಸಲೇಮಿನಲ್ಲೇ ಉಳಿದನು” ಅಂದನು ೪ ಆಗ ಅರಸನು ಅವನಿಗೆ, “ಮೆಫೀಬೋಶೆತನ ಆಸ್ತಿಯೆಲ್ಲಾ ನಿನ್ನದೇ” ಎಂದು ಹೇಳಲು ಅವನು, “ಅರಸನೇ ನಿನಗೆ ಸಾಷ್ಟಾಂಗ ನಮಸ್ಕಾರ ಮಾಡುತ್ತೇನೆ. ನನ್ನ ಒಡೆಯನೇ, ನಿನ್ನ ದೃಷ್ಟಿಯಲ್ಲಿ ನನಗೆ ದಯೆ ದೊರಕಲಿ” ಎಂದನು.
ಶಿಮ್ಮಿಯು ದಾವೀದನನ್ನು ಶಪಿಸಿದ್ದು
೫ ಅರಸನಾದ ದಾವೀದನು ಬಹುರೀಮಿಗೆ ಬಂದಾಗ ಸೌಲನ ವಂಶದವನೂ, ಗೇರನ ಮಗನೂ ಆದ ಶಿಮ್ಮೀಯು ದಾವೀದನನ್ನು ಶಪಿಸುತ್ತಾ, ಆ ಊರಿನಿಂದ ಹೊರಗೆ ಬಂದನು. ೬ ಅವನು ದಾವೀದನಿಗೂ, ಅವನ ಎಲ್ಲಾ ಸೇವಕರಿಗೂ, ಎಡಬಲದಲ್ಲಿರುವ ಸೈನಿಕರಿಗೂ ಮತ್ತು ಶೂರರಿಗೂ ಕಲ್ಲೆಸೆಯ ತೊಡಗಿದನು. ೭ ಅವನು ಅವರನ್ನು ಶಪಿಸುತ್ತಾ, “ಹೋಗು ಕೊಲೆಗಾರನೆ, ನೀಚನೆ ಹೋಗು, ೮ ಸೌಲನ ರಾಜ್ಯವನ್ನು ಕಸಿದುಕೊಂಡು ಅವನ ಮನೆಯವರನ್ನು ಕೊಂದದ್ದಕ್ಕಾಗಿ ಯೆಹೋವನು ನಿನಗೆ ಮುಯ್ಯಿ ತೀರಿಸಿದ್ದಾನೆ. ಆತನು ರಾಜ್ಯವನ್ನು ನಿನ್ನ ಮಗನಾದ ಅಬ್ಷಾಲೋಮನಿಗೆ ಕೊಟ್ಟು ಬಿಟ್ಟನು. ಕೊಲೆಗಾರನೇ ಇಗೋ, ನಿನಗೆ ಈಗ ತಕ್ಕ ಆಪತ್ತು ಬಂದಿದೆ” ಎಂದನು. ೯ ಆಗ ಚೆರೂಯಳ ಮಗನಾದ ಅಬೀಷೈಯು ಅರಸನಿಗೆ, “ಈ ಸತ್ತ ನಾಯಿ, ಅರಸನಾದ ನನ್ನ ಒಡೆಯನನ್ನು ಶಪಿಸುವುದೇನು? ಅಪ್ಪಣೆಯಾಗಲಿ. ನಾನು ಅವನಿರುವಲ್ಲಿಗೆ ಹೋಗಿ, ಅವನ ತಲೆಯನ್ನು ಹಾರಿಸಿಕೊಂಡು ಬರುವೆನು” ಎಂದನು. ೧೦ ಅದಕ್ಕೆ ಅರಸನು, “ಚೆರೂಯಳ ಮಕ್ಕಳೇ, ನಾನು ನಿಮಗೇನು ಮಾಡಿದೆ? ಬಹುಶಃ ಅವನು ನನ್ನನ್ನು ಶಪಿಸಿದ್ದಾನೆ, ಏಕೆಂದರೆ, ‘ದಾವೀದನನ್ನು ಶಪಿಸು’ ಎಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ ಮೇಲೆ ‘ನೀನು ಹೀಗೇಕೆ ಮಾಡಿದಿ?’ ಎಂದು ಅವನನ್ನು ಕೇಳುವವರು ಯಾರು?” ಎಂದು ಉತ್ತರ ಕೊಟ್ಟನು. ೧೧ ಇದಲ್ಲದೆ ಅವನು ಅಬೀಷೈಗೂ ತನ್ನ ಎಲ್ಲಾ ಸೇವಕರಿಗೂ, “ನೋಡಿರಿ, ನನ್ನಿಂದ ಹುಟ್ಟಿದ ನನ್ನ ಮಗನೇ ನನ್ನ ಪ್ರಾಣವನ್ನು ತೆಗೆಯಬೇಕೆಂದಿರುವಲ್ಲಿ ಈ ಬೆನ್ಯಾಮೀನನು ಹೀಗೆ ಮಾಡುವುದು ಯಾವ ದೊಡ್ಡ ಮಾತು? ಬಿಡಿರಿ, ಅವನು ಶಪಿಸಲಿ. ಹೀಗೆ ಮಾಡಬೇಕೆಂದು ಯೆಹೋವನೇ ಅವನಿಗೆ ಆಜ್ಞಾಪಿಸಿದ್ದಾನೆ. ೧೨ ಒಂದು ವೇಳೆ ಯೆಹೋವನು ನನ್ನ ಕಷ್ಟವನ್ನು ನೋಡಿ ಈ ಹೊತ್ತಿನ ಶಾಪಕ್ಕೆ ಬದಲಾಗಿ ನನಗೆ ಶುಭವನ್ನು ಅನುಗ್ರಹಿಸಾನು” ಎಂದು ಹೇಳಿದನು. ೧೩ ದಾವೀದನೂ ಅವನ ಜನರೂ ದಾರಿ ಹಿಡಿದು ಹೋಗುವಾಗ ಶಿಮ್ಮಿಯು ಶಪಿಸುತ್ತಾ, ಕಲ್ಲೆಸೆಯುತ್ತಾ, ಮಣ್ಣೆರೆಚುತ್ತಾ ಗುಡ್ಡದ ಪಕ್ಕದಲ್ಲೇ ನಡೆಯುತ್ತಿದ್ದನು. ೧೪ ಅರಸನೂ ಅವನ ಜೊತೆಯಲ್ಲಿ ಬಂದವರೆಲ್ಲರೂ ದಣಿದವರಾಗಿ, ಹೋಗಬೇಕಾದ ಸ್ಥಳವನ್ನು ಸೇರಿ, ಅಲ್ಲಿ ವಿಶ್ರಮಿಸಿಕೊಂಡರು.
ಅಬ್ಷಾಲೋಮನು ಅಹೀತೋಫೆಲನ ಉಪದೇಶದಿಂದ ನಡೆದುಕೊಂಡ ರೀತಿ
೧೫ ಅಬ್ಷಾಲೋಮನು ಎಲ್ಲಾ ಇಸ್ರಾಯೇಲರೊಡನೆ ಯೆರೂಸಲೇಮಿಗೆ ಬಂದನು. ಅಹೀತೋಫೇಲನೂ ಅವನ ಸಂಗಡ ಇದ್ದನು. ೧೬ ಅರ್ಕಿಯನೂ ದಾವೀದನ ಸ್ನೇಹಿತನೂ ಆಗಿದ್ದ ಹೂಷೈಯು ಅಬ್ಷಾಲೋಮನ ಬಳಿಗೆ ಬಂದು, “ಅರಸನು ಚಿರಂಜೀವಿಯಾಗಿರಲಿ, ಅರಸನು ಚಿರಂಜೀವಿಯಾಗಿರಲಿ” ಎಂದು ಕೂಗಿದನು. ೧೭ ಅಬ್ಷಾಲೋಮನು ಅವನಿಗೆ “ಸ್ನೇಹಿತನ ಬಗ್ಗೆ ನಿನಗಿರುವ ಪ್ರಾಮಾಣಿಕತೆ ಪ್ರೀತಿ ಇಷ್ಟೇತಾನೇ? ನೀನು ನಿನ್ನ ಸ್ನೇಹಿತನೊಡನೆ ಯಾಕೆ ಹೋಗಲಿಲ್ಲ?” ಅಂದನು. ೧೮ ಅದಕ್ಕೆ ಹೂಷೈಯು, “ಹಾಗಲ್ಲ ಯೆಹೋವನೂ, ಈ ಜನರೂ, ಎಲ್ಲಾ ಇಸ್ರಾಯೇಲರೂ ಯಾರನ್ನು ಆರಿಸಿದ್ದಾರೋ ನಾನು ಅವನ ಪಕ್ಷದವನಾಗಿರುತ್ತೇನೆ. ನಾನು ಅವನ ಬಳಿಯಲ್ಲಿ ವಾಸಿಸುವೆನು. ೧೯ ಇದಲ್ಲದೆ ನಾನು ಈಗ ಸೇವೆಮಾಡಬೇಕೆಂದಿರುವುದು ರಾಜಪುತ್ರನ ಸನ್ನಿಧಿಯಲ್ಲಿ ಅಲ್ಲವೇ? ನಿನ್ನ ತಂದೆಯ ಸನ್ನಿಧಿಯಲ್ಲಿ ಸೇವೆ ಸಲ್ಲಿಸಿದಂತೆ ನಿನ್ನ ಸನ್ನಿಧಿಯಲ್ಲಿಯೂ ಸೇವೆ ಸಲ್ಲಿಸುವೆನು” ಎಂದು ಉತ್ತರ ಕೊಟ್ಟನು.
೨೦ ಅನಂತರ ಅಬ್ಷಾಲೋಮನು, “ನಾವು ಈಗ ಮಾಡತಕ್ಕದ್ದೇನು? ಆಲೋಚನೆ ಹೇಳು” ಎಂಬುದಾಗಿ ಅಹೀತೋಫೆಲನನ್ನು ಕೇಳಿದನು. ೨೧ ಆಗ ಅಹೀತೋಫೆಲನು, “ಹೋಗಿ ನಿನ್ನ ತಂದೆಯು ಮನೆಕಾಯುವುದಕ್ಕೆ ಬಿಟ್ಟಿರುವ ಅವನ ಉಪಪತ್ನಿಯರೊಡನೆ ಸಂಗಮಿಸು. ಹೀಗೆ ಮಾಡುವುದಾದರೆ ನೀನು ನಿನ್ನ ತಂದೆಗೆ ವೈರಿಯಾಗುವೆ ಎಂದು ಎಲ್ಲಾ ಇಸ್ರಾಯೇಲ್ಯರಿಗೆ ತಿಳಿಯುವುದರಿಂದ ನಿನ್ನ ಪಕ್ಷದವರು ಬಲಗೊಳ್ಳುವರು” ಎಂದು ಉತ್ತರ ಕೊಟ್ಟನು. ೨೨ ಆಗ ಅವರು ಅಬ್ಷಾಲೋಮನಿಗೋಸ್ಕರ ಮಾಳಿಗೆಯ ಮೇಲೆ ಗುಡಾರ ಹಾಕಿದರು. ಅವನು ಎಲ್ಲಾ ಇಸ್ರಾಯೇಲ್ಯರ ಮುಂದೆಯೇ ತನ್ನ ತಂದೆಯ ಉಪಪತ್ನಿಗಳನ್ನು ಸಂಗಮಿಸಿದನು. ೨೩ ಆ ಕಾಲದಲ್ಲಿ ಅಹೀತೋಫೆಲನ ಆಲೋಚನೆಗಳಿಗೆ ದೈವೋತ್ತರಗಳಿರುವಷ್ಟು ಬೆಲೆಯಿತ್ತು. ದಾವೀದನೂ ಮತ್ತು ಅಬ್ಷಾಲೋಮನೂ ಅವನ ಆಲೋಚನೆಗಳನ್ನು ಗೌರವಿಸುತ್ತಿದ್ದರು.