22
ದಾವೀದನ ರಚಿಸಿದ ಸ್ತುತಿಗೀತೆ
ಯೆಹೋವನು ದಾವೀದನನ್ನು ಎಲ್ಲಾ ಶತ್ರುಗಳ ಕೈಗೂ ಸೌಲನ ಕೈಗೂ ಸಿಕ್ಕದಂತೆ ತಪ್ಪಿಸಿದಾಗ ಅವನು ಯೆಹೋವನ ಘನಕ್ಕಾಗಿ ಈ ಜಯ ಗೀತೆಯನ್ನು ರಚಿಸಿ ಹೀಗೆ ಹಾಡಿದನು:
ಯೆಹೋವನು ನನ್ನ ಬಂಡೆಯೂ, ನನ್ನ ಕೋಟೆಯೂ ನನ್ನ ವಿಮೋಚಕನೂ ಆಗಿದ್ದಾನೆ.
ಆತನು ನನ್ನ ಆಶ್ರಯಗಿರಿಯಾಗಿರುವ ದೇವರೂ, ನನ್ನ ಗುರಾಣಿಯೂ ನನ್ನ ರಕ್ಷಣೆಯ ಕೊಂಬೂ, ನನ್ನ ದುರ್ಗವೂ, ನನ್ನ ಶರಣನೂ, ಹಿಂಸೆಯಿಂದ ನನ್ನನ್ನು ರಕ್ಷಿಸುವವನೂ ಆಗಿದ್ದಾನೆ.
ಯೆಹೋವನು ಸ್ತೋತ್ರಕ್ಕೆ ಅರ್ಹನು. ನಾನು ಆತನಿಗೆ ಮೊರೆಯಿಡಲು ಆತನು ನನ್ನನ್ನು ಶತ್ರುಗಳಿಂದ ರಕ್ಷಿಸುತ್ತಾನೆ.
ಮರಣ ಪ್ರವಾಹದ ಅಲ್ಲಕಲ್ಲೋಲಗಳು ನನ್ನನ್ನು ಸುತ್ತಿಕೊಂಡವು. ನಾಶಪ್ರವಾಹವು ನನ್ನನ್ನು ನಡುಗಿಸಿತು.
ಪಾತಾಳಪಾಶಗಳು ನನ್ನನ್ನು ಆವರಿಸಿಕೊಂಡವು, ಮರಣಕರವಾದ ಉರುಲುಗಳು ನನ್ನನ್ನು ಸುತ್ತಿಕೊಂಡವು.
ಅಂಥ ಕಷ್ಟದಲ್ಲಿ ನಾನು ಯೆಹೋವನಿಗೆ ಮೊರೆಯಿಟ್ಟೆನು. ನನ್ನ ದೇವರನ್ನು ಪ್ರಾರ್ಥಿಸಿದೆನು. ಆತನು ತನ್ನ ಮಂದಿರದಲ್ಲಿ ನನ್ನ ಸ್ವರವನ್ನು ಕೇಳಿದನು. ನನ್ನ ಪ್ರಾರ್ಥನೆ ಆತನ ಸನ್ನಿಧಿಗೆ ಕೇಳಿಸಿತು.
ಆಗ ಆತನ ಕೋಪದಿಂದ ಭೂಮಿಯು ಕಂಪಿಸಿತು. ಆಕಾಶದ ಆಧಾರಗಳು ನಡುಗಿ ಕದಲಿದವು.
ಆತನ ಮೂಗಿನಿಂದ ಹೊಗೆಯು ಬಂದಿತು. ಆತನ ಬಾಯಿಂದ ಅಗ್ನಿಜ್ವಾಲೆಯು ಹೊರಟು ಸಿಕ್ಕಿದ್ದೆಲ್ಲವನ್ನು ದಹಿಸಿ ಕೆಂಡವನ್ನಾಗಿ ಮಾಡಿತು.
10 ಆತನು ಆಕಾಶವನ್ನು ತಗ್ಗಿಸಿ ಇಳಿದು ಬಂದನು. ಆತನ ಪಾದಗಳ ಕೆಳಗೆ ಕಾರ್ಗತ್ತಲಿತ್ತು.
11 ಕೆರೂಬಿವಾಹನನಾಗಿ ಹಾರಿದನು. ವಾಯುವೇ ಆತನ ರೆಕ್ಕೆಗಳೋ ಎಂಬಂತೆ ಇಳಿದು ಪ್ರತ್ಯಕ್ಷನಾದನು.
12 ಕತ್ತಲನ್ನೂ, ಜಲಮಯವಾಗಿರುವ ನೀಲಮೇಘಗಳನ್ನೂ, ತನ್ನ ಸುತ್ತಲೂ ಗುಡಾರದಂತೆ ಕವಿಸಿಕೊಂಡನು.
13 ಆತನ ಸಾನ್ನಿಧ್ಯ ಪ್ರಕಾಶದಿಂದ ಉರಿಗೆಂಡಗಳು ಹೊರಟವು.
14 ಯೆಹೋವನು ಆಕಾಶದಿಂದ ಗುಡುಗಿದನು. ಪರಾತ್ಪರನಾದ ದೇವರು ಧ್ವನಿಗೊಟ್ಟನು.
15 ಆತನು ಬಾಣಗಳನ್ನೆಸೆದು ಶತ್ರುಗಳನ್ನು ಚದುರಿಸಿಬಿಟ್ಟನು. ಸಿಡಿಲಿನಿಂದ ಅವುಗಳನ್ನು ಕಳವಳಗೊಳಿಸಿದನು.
16 ಆಗ ಯೆಹೋವನ ಗದರಿಕೆಯಿಂದಲೂ ಆತನ ಶ್ವಾಸಭರದಿಂದಲೂ ಸಮುದ್ರದ ತಳವು ಕಾಣಿಸಿತು. ಭೂಮಂಡಲದ ಅಸ್ಥಿವಾರವು ತೋರಿಬಂದವು.
17 ಆತನು ಮೇಲಣಲೋಕದಿಂದ ಕೈಚಾಚಿ ನನ್ನನ್ನು ಹಿಡಿದು! ಮಹಾಜಲರಾಶಿಯೊಳಗಿಂದ ನನ್ನನ್ನು ಎಳೆದನು.
18 ನನಗಿಂತ ಬಲಿಷ್ಠರೂ, ಪುಷ್ಠರೂ ಆಗಿ ದ್ವೇಷಿಸುತ್ತಿದ್ದ ಶತ್ರುಗಳಿಂದ ನನ್ನನ್ನು ಬಿಡಿಸಿ ರಕ್ಷಿಸಿದನು.
19 ಅವರು ನನ್ನ ಆಪತ್ಕಾಲದಲ್ಲಿ ನನ್ನ ಮೇಲೆ ಬಿದ್ದರು. ಆಗ ಯೆಹೋವನು ನನಗೆ ಉದ್ಧಾರಕನಾದನು.
20 ಆತನು ನನ್ನನ್ನು ಅಪಾಯದಿಂದ ಬಿಡಿಸಿದನು. ನನ್ನನ್ನು ಮೆಚ್ಚಿ *ರಕ್ಷಿಸಿದನು.
21 ಯೆಹೋವನು ನನ್ನ ಸನ್ನಡತೆಗೆ ತಕ್ಕ ಪ್ರತಿಫಲ ನೀಡಿದನು. ನನ್ನ ಕೈಗಳ ಶುದ್ಧತ್ವಕ್ಕೆ ತಕ್ಕಂತೆ ಪ್ರತಿಫಲಕೊಟ್ಟನು.
22 ಯೆಹೋವನ ಮಾರ್ಗವನ್ನೇ ಅನುಸರಿಸಿದೆನಲ್ಲಾ ನನ್ನ ದೇವರನ್ನು ಬಿಟ್ಟು ದ್ರೋಹ ಮಾಡಲಿಲ್ಲ.
23 ನಾನು ಆತನ ಆಜ್ಞೆಗಳನ್ನು ಯಾವಾಗಲೂ ನನ್ನೆದುರಿನಲ್ಲಿ ಇಟ್ಟುಕೊಂಡೆನು. ಆತನ ವಿಧಿಗಳಿಂದ ತಪ್ಪಿ ಹೋಗಲಿಲ್ಲ.
24 ನಾನು ಆತನ ದೃಷ್ಟಿಯಲ್ಲಿ ನಿರ್ದೋಷಿಯು. ಪಾಪದಲ್ಲಿ ಬೀಳದಂತೆ ಜಾಗರೂಕತೆಯಿಂದ ನಡೆದುಕೊಂಡೆನು.
25 ಆದ್ದರಿಂದ ನನ್ನ ನೀತಿಗೆ ತಕ್ಕಂತೆಯೂ, ಆತನ ದೃಷ್ಟಿಯಲ್ಲಿ ನನ್ನ ನಿರಪರಾಧಕ್ಕೆ ತಕ್ಕಂತೆಯೂ ಯೆಹೋವನು ನನಗೆ ತಕ್ಕ ಪ್ರತಿಫಲವನ್ನು ಕೊಟ್ಟನು.
26 ನೀನು ಕೃಪೆಯುಳ್ಳವನಿಗೆ ಕೃಪಾವಂತನೂ, ದೋಷವಿಲ್ಲದವರಿಗೆ ನಿರ್ದೋಷಿಯೂ.
27 ಶುದ್ಧನಿಗೆ ಪರಿಶುದ್ಧನೂ, ವಕ್ರಬುದ್ಧಿಯವನಿಗೆ ವಕ್ರನೂ ಆಗಿರುವಿ.
28 ದೀನರನ್ನು ಉದ್ಧರಿಸುತ್ತಿ. ಹಮ್ಮಿನವರನ್ನು ಕಂಡುಹಿಡಿದು ತಗ್ಗಿಸಿಬಿಡುತ್ತಿ.
29 ಯೆಹೋವನೇ, ನನ್ನ ದೀಪವು ನೀನೇ. ಯೆಹೋವನು ನನಗೆ ಬೆಳಕನ್ನು ಕೊಟ್ಟು ನನ್ನ ಕತ್ತಲನ್ನು ಪರಿಹರಿಸುವನು.
30 ನಿನ್ನ ಬಲದಿಂದ ನಾನು ದಂಡಿನ ಮೇಲೆ ಬೀಳುವೆನು. ನನ್ನ ದೇವರ ಸಹಾಯದಿಂದ ಪ್ರಾಕಾರಗಳನ್ನು ಹಾರುವೆನು.
31 ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು ಯೆಹೋವನ ವಚನವು ಶುದ್ಧವಾದದ್ದು. ಆತನು ಆಶ್ರಿತರೆಲ್ಲರಿಗೆ ಗುರಾಣಿಯಾಗಿದ್ದಾನೆ.
32 ಯೆಹೋವನಲ್ಲದೆ ದೇವರು ಯಾರು? ನಮ್ಮ ದೇವರ ಹೊರತು ಶರಣನು ಎಲ್ಲಿ?
33 ದೇವರು ನನ್ನ ಬಲವಾದ ಕೋಟೆಯಾಗಿದ್ದಾನೆ. ಆತನು ನನ್ನ ಮಾರ್ಗವನ್ನು ಸರಾಗಮಾಡುತ್ತಾನೆ.
34 ನನ್ನ ಕಾಲನ್ನು ಜಿಂಕೆಯ ಕಾಲಿನಂತೆ ಚುರುಕು ಮಾಡುತ್ತಾನೆ. ನನ್ನನ್ನು ಉನ್ನತಪ್ರದೇಶಗಳಲ್ಲಿ ನಿಲ್ಲಿಸುತ್ತಾನೆ
35 ಆತನು ನನಗೆ ಯುದ್ಧ ವಿದ್ಯೆಯನ್ನು ಕಲಿಸಿದ್ದರಿಂದ ನಾನು ತಾಮ್ರದ ಬಿಲ್ಲನ್ನಾದರೂ ಉಪಯೋಗಿಸಬಲ್ಲೆನು.
36 ನೀನು ನನಗೋಸ್ಕರ ಗುರಾಣಿಯನ್ನು ಹಿಡಿದು ರಕ್ಷಿಸಿದ್ದೀ. ನಿನ್ನ ಕೃಪಾಕಟಾಕ್ಷವು ನನ್ನನ್ನು ಉನ್ನತಕ್ಕೆ ಏರಿಸಿದೆ.
37 ನೀನು ನನ್ನ ಕಾಲುಗಳಿಗೆ ವಿಶಾಲ ಸ್ಥಳವನ್ನು ಕೊಟ್ಟಿದ್ದರಿಂದ ನನ್ನ ಕಾಲುಗಳು ಕದಲುವುದಿಲ್ಲ.
38 ನನ್ನ ಶತ್ರುಗಳನ್ನು ಹಿಂದಟ್ಟಿ ಸಂಹರಿಸುವೆನು. ಅವರನ್ನು ಇಲ್ಲದಂತೆ ಮಾಡುವವರೆಗೂ ಹಿಂದಿರುಗುವುದಿಲ್ಲ.
39 ಅವರನ್ನು ನಿರ್ನಾಮಗೊಳಿಸುವೆನು, ಹೊಡೆದು ಏಳಲಾರದಂತೆ ಮಾಡುವೆನು. ಅವರು ನನ್ನ ಪಾದದ ಕೆಳಗೆ ಬೀಳುವರು.
40 ನೀನು ನನಗೆ ಯುದ್ಧಕ್ಕಾಗಿ ಶೌರ್ಯವೆಂಬ ನಡುಕಟ್ಟನ್ನು ಬಿಗಿದಿದ್ದಿ. ಎದುರಾಳಿಗಳನ್ನು ಕುಗ್ಗಿಸಿ ನನಗೆ ಅಧೀನಮಾಡಿದ್ದಿ.
41 ನನ್ನ ಶತ್ರುಗಳನ್ನು ಬೆಂಗೊಟ್ಟು ಓಡಮಾಡಿದ್ದೀ. ನನ್ನ ಶತ್ರುಗಳನ್ನು ನಿರ್ಮೂಲ ಮಾಡುವೆನು.
42 ಅವರು ಸಹಾಯಕ್ಕಾಗಿ ಕೂಗಿಕೊಂಡರೂ ರಕ್ಷಿಸುವವನಿಲ್ಲ. ಯೆಹೋವನಿಗೆ ಮೊರೆಯಿಟ್ಟರೂ ಆತನು ಉತ್ತರವನ್ನು ಕೊಡಲೇ ಇಲ್ಲ.
43 ಭೂಮಿಯ ಧೂಳನ್ನೋ ಎಂಬಂತೆ ಅವರನ್ನು ಪುಡಿಪುಡಿ ಮಾಡಿದೆನು. ಬೀದಿಯಲ್ಲಿರುವ ಕೆಸರನ್ನೋ ಎಂಬಂತೆ ಅವರನ್ನು ತುಳಿದು ಎಸೆದುಬಿಟ್ಟೆನು.
44 ನನ್ನ ಜನರ ಕಲಹಗಳಿಗೆ ನನ್ನನ್ನು ತಪ್ಪಿಸಿದ್ದಿ. ಜನಾಂಗಗಳಿಗೆ ದೊರೆಯಾಗುವಂತೆ ನನ್ನನ್ನು ಉಳಿಸಿದ್ದಿ. ನಾನರಿಯದ ಜನಾಂಗದವರು ಸಹ ನನಗೆ ಅಧೀನರಾಗುವರು.
45 ದೇಶಾಂತರದವರು ನನ್ನ ಮುಂದೆ ಮುದುರಿಕೊಳ್ಳುವರು. ನನ್ನ ಸುದ್ದಿಯನ್ನು ಕೇಳಿದ ಮಾತ್ರಕ್ಕೆ ನನಗೆ ವಿಧೇಯರಾಗುವರು.
46 ಅವರು ಧೈರ್ಯಗುಂದಿದವರಾಗಿ ತಮ್ಮ ತಮ್ಮ ಕೋಟೆಗಳಿಂದ ನಡುಗುತ್ತಾ ಬರುವರು.
47 ಯೆಹೋವನು ಚೈತನ್ಯಸ್ವರೂಪನು. ನನ್ನ ಶರಣನಿಗೆ ಸ್ತೋತ್ರ. ನನ್ನ ಆಶ್ರಯಗಿರಿಯಾಗಿರುವ ದೇವರಿಗೆ ಕೊಂಡಾಟ.
48 ಆತನು ನನ್ನ ಶತ್ರುಗಳಿಗೆ ಪ್ರತಿದಂಡನೆಮಾಡುವ ದೇವರು. ಜನಾಂಗಗಳನ್ನು ನನಗೆ ಅಧೀನಪಡಿಸುತ್ತಾನೆ.
49 ಶತ್ರುಗಳಿಂದ ನನ್ನನ್ನು ಬಿಡಿಸುವಾತನೇ, ನೀನು ನನ್ನನ್ನು ನನ್ನ ಎದುರಾಳಿಗಳಿಂದ ತಪ್ಪಿಸಿ ಉನ್ನತಪಡಿಸುತ್ತಿ. ಬಲಾತ್ಕಾರಿಗಳಿಂದ ನನ್ನನ್ನು ರಕ್ಷಿಸುತ್ತಿ.
50 ಈ ಕಾರಣದಿಂದ ಯೆಹೋವನೇ, ಅನ್ಯಜನಾಂಗಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು. ನಿನ್ನ ನಾಮವನ್ನು ಸಂಕೀರ್ತಿಸುವೆನು.
51 ಆತನು ತಾನು ನೇಮಿಸಿದ ಅರಸನಿಗೋಸ್ಕರ ವಿಶೇಷ ರಕ್ಷಣೆಯನ್ನು ದಯಪಾಲಿಸುವವನಾಗಿದ್ದಾನೆ. ತಾನು ಅಭಿಷೇಕಿಸಿದ ದಾವೀದನಿಗೂ, ಅವನ ಸಂತತಿಯವರೆಗೆ ಸದಾಕಾಲವೂ ಕೃಪೆಯನ್ನು ಅನುಗ್ರಹಿಸುವವನಾಗಿದ್ದಾನೆ.
* 22:20 ಅಥವಾ ವಿಶಾಲ ಸ್ಥಳದಲ್ಲಿ ಸೇರಿಸಿದನು. 22:30 ಅಥವಾ ನಾನು ಜಜ್ಜಿಹಾಕುವೆನು.