ಹಾರುವ ಸುರುಳಿಯ ಕನಸು
೧ ಆಗ ನಾನು ಕಣ್ಣೆತ್ತಿ ನೋಡಲು ಇಗೋ, ಹಾರುತ್ತಿರುವ ಒಂದು ಸುರುಳಿಯು ಕಾಣಿಸಿತು.
೨ ಆಗ ದೂತನು ನನಗೆ, “ನಿನಗೆ ಏನು ಕಾಣಿಸುತ್ತದೆ?” ಎಂದಾಗ ನಾನು, ಹಾರುತ್ತಿರುವ ಒಂದು ಸುರುಳಿಯು ಕಾಣಿಸುತ್ತದೆ ಅದರ ಉದ್ದ ಇಪ್ಪತ್ತು ಮೊಳ, ಅಗಲ ಹತ್ತು ಮೊಳ ಎಂದು ಉತ್ತರಕೊಟ್ಟೆನು.
೩ ಆಗ ದೂತನು ನನಗೆ, “ದೇಶದ ಮೇಲೆಲ್ಲಾ ಹೊರಟು ಬಂದಿರುವ ಶಾಪವು ಇದೇ. ಕಳ್ಳತನ ಮಾಡುವ ಪ್ರತಿಯೊಬ್ಬರೂ ದೇಶದಿಂದ ಹೊರಗೆ ತೆಗೆದುಹಾಕಲ್ಪಡುವರು. ಇದಕ್ಕೆ ತಕ್ಕ ಹಾಗೆ ಪ್ರತಿಯೊಬ್ಬ ಸುಳ್ಳು ಸಾಕ್ಷಿಯೂ ದೇಶದಿಂದ ಹೊರಗೆ ತೆಗೆದುಹಾಕಲ್ಪಡುವನು. ೪ ನಾನು ಶಾಪವನ್ನು ಕಳುಹಿಸುತ್ತೇನೆ. ಸೇನಾಧೀಶ್ವರ ಯೆಹೋವನು ಇಂತೆನ್ನುತ್ತಾನೆ, ‘ನನ್ನ ಅಪ್ಪಣೆಯಂತೆ ಅದು ಕಳ್ಳನ ಮನೆಯಲ್ಲಿಯೂ, ನನ್ನ ಹೆಸರೆತ್ತಿ ಸುಳ್ಳು ಸಾಕ್ಷಿಹೇಳುವವನ ಮನೆಯೊಳಗೆ ನುಗ್ಗಿ ಮತ್ತು ಅವನ ಮನೆಯಲ್ಲಿನ ಮರಗಳನ್ನೂ, ಅದರ ಕಲ್ಲುಗಳನ್ನೂ ನಾಶಮಾಡುವುದು’ ” ಎಂದು ಹೇಳಿದನು.
ಕೊಳಗದೊಳಗಣ ಹೆಂಗಸಿನ ವಿಷಯವಾದ ಕನಸು
೫ ಆಗ ನನ್ನ ಸಂಗಡ ಮಾತನಾಡುತ್ತಿದ್ದ ದೂತನು ಬಂದು, “ಕಂಡು ಬರುತ್ತಿರುವ ಆ ವಸ್ತು ಏನೆಂದು ನೋಡು” ಎಂಬುದಾಗಿ ನನಗೆ ಹೇಳಿದನು.
೬ ನಾನು, “ಏನದು?” ಎಂದು ಕೇಳಿದ್ದಕ್ಕೆ ಅವನು, “ಇದು ಅಳೆಯುವ ಬುಟ್ಟಿ” ಎಂದನು. ಇದಲ್ಲದೆ ಅವನು, “ಇದೇ ಸಮಸ್ತ ಭೂಮಿಯಲ್ಲಿಯ ಜನರ ಅಧರ್ಮವು” ಎಂದನು.
೭ ಇಗೋ, ತಟ್ಟೆಯಾಕಾರದ ಸೀಸದ ಮುಚ್ಚಳವು ತೆರೆಯಲ್ಪಡಲಾಗಿ ಆಹಾ, ಒಬ್ಬ ಸ್ತ್ರಿ ಅದರಲ್ಲಿ ಕುಳಿತುಕೊಂಡಿದ್ದಳು. ೮ ಆಗ ದೂತನು ಹೇಳಿದ್ದೇನೆಂದರೆ, “ಇದು ದುಷ್ಟತ್ವವು” ಎಂದು ಹೇಳಿ ಅವಳನ್ನು ಬುಟ್ಟಿಯೊಳಗೆ ಪುನಃ ಅದುಮಿ ಆ ಬುಟ್ಟಿಯ ಮುಚ್ಚಳವನ್ನು ಮುಚ್ಚಿದನು.
೯ ನಾನು ಕಣ್ಣೆತ್ತಿ ನೋಡಲು, ಆಹಾ ಕೊಕ್ಕರೆಯ ರೆಕ್ಕೆಯಂತಿರುವ ರೆಕ್ಕೆಯುಳ್ಳ ಇಬ್ಬರು ಹೆಂಗಸರು ಕಂಡುಬಂದರು. ಅವರ ರೆಕ್ಕೆಗಳೊಳಗೆ ಗಾಳಿಯು ತುಂಬಿಕೊಂಡಿತ್ತು. ಅವರು ಅಳತೆಯ ಬುಟ್ಟಿಯನ್ನು ಎತ್ತಿಕೊಂಡು ಹಾರಿ ಹೋದರು.
೧೦ ಆಗ ನಾನು ನನ್ನ ಸಂಗಡ ಮಾತನಾಡಿದ ದೂತನಿಗೆ, “ಇವರು ಅಳತೆಯ ಬುಟ್ಟಿಯನ್ನು ಎಲ್ಲಿಗೆ ಹೊತ್ತುಕೊಂಡು ಹೋಗುತ್ತಾರೆ?” ಎಂದು ಹೇಳಿದೆನು.
೧೧ ದೂತನು ನನಗೆ, “ಶಿನಾರ್ ದೇಶದಲ್ಲಿ ಅವಳಿಗೆ ಮನೆಕಟ್ಟುವುದಕ್ಕಾಗಿ ಹೋಗುತ್ತಾರೆ. ಅಲ್ಲಿ ಅದು ಸ್ಥಾಪಿಸಲ್ಪಟ್ಟು ತನ್ನ ಸ್ವಂತ ಸ್ಥಾನದಲ್ಲಿ ಇರಿಸಲ್ಪಡುವುದು” ಎಂದನು.