8
ವಿಗ್ರಹಕ್ಕೆ ಅರ್ಪಿಸಿದ ಆಹಾರವನ್ನು ಕುರಿತು ಬೋಧನೆ
1 *ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳ ವಿಷಯವನ್ನು ಕುರಿತಾದರೋ. “ನಮ್ಮೆಲ್ಲರಿಗೆ ಜ್ಞಾನವುಂಟೆಂದು” ನಾವು ಬಲ್ಲೆವು. ತಿಳಿವಳಿಕೆಯು ಉಬ್ಬಿಸುತ್ತದೆ, ಆದರೆ †ಪ್ರೀತಿಯು ಭಕ್ತಿಯನ್ನು ಬೆಳೆಸುತ್ತದೆ. 2 ಒಬ್ಬನು ತಾನು ‡ಏನಾದರೂ ತಿಳಿದುಕೊಂಡಿದ್ದೇನೆಂದು ಭಾವಿಸುವುದಾದರೆ §ಅವನು ತಿಳಿಯಬೇಕಾದ ರೀತಿಯಿಂದ ಇನ್ನೂ ತಿಳಿದುಕೊಂಡಿರುವುದಿಲ್ಲ. 3 ಆದರೆ ಯಾವನು ದೇವರನ್ನು ಪ್ರೀತಿಸುತ್ತಾನೋ ದೇವರು ಅವನನ್ನು ತಿಳಿದುಕೊಂಡಿದ್ದಾನೆ. 4 ಆದ್ದರಿಂದ ವಿಗ್ರಹಗಳಿಗೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದರ ವಿಷಯದಲ್ಲಿ, *“ಜಗತ್ತಿನಲ್ಲಿ ವಿಗ್ರಹವು ಏನೂ ಅಲ್ಲವೆಂದು” ನಮಗೆ ತಿಳಿದಿದೆ ಮತ್ತು †“ಒಬ್ಬ ದೇವರಿದ್ದಾನೆ ಹೊರತು ಬೇರೆ ದೇವರಿಲ್ಲವೆಂದೂ” ಬಲ್ಲೆವು. 5 ಆಕಾಶದಲ್ಲಿಯಾಗಲಿ ಭೂಮಿಯ ಮೇಲಾಗಲಿ ದೇವರುಗಳೆನಿಸಿಕೊಳ್ಳುವಂಥವುಗಳು ಅನೇಕವಿದ್ದರೂ, “ದೇವರುಗಳೆಂದೂ ಕರ್ತರೆಂದೂ ಪೂಜಿಸುವಂಥವುಗಳು” ಬಹಳವಿದ್ದರೂ, 6 ‡“ನಮಗಾದರೋ ಒಬ್ಬನೇ ತಂದೆಯಾದ ದೇವರು; §ಆತನೇ ಸಮಸ್ತಕ್ಕೂ ಮೂಲಕಾರಣನು; ನಾವು ಜೀವಿಸುವುದು ಆತನಿಗಾಗಿಯೇ, *ಮತ್ತು ಒಬ್ಬನೇ ಕರ್ತನಾದ ಯೇಸು ಕ್ರಿಸ್ತನೆಂಬ ಏಕ ಕರ್ತನು ನಮಗಿದ್ದಾನೆ. ಆತನ ಮುಖಾಂತರವೇ ಸಮಸ್ತವೂ ಉಂಟಾಯಿತು. †ನಾವೂ ಆತನ ಮುಖಾಂತರ ಉಂಟಾದೆವು.” 7 ಆದಾಗ್ಯೂ, ಈ ತಿಳಿವಳಿಕೆಯು ಎಲ್ಲರಲ್ಲಿಯೂ ಇಲ್ಲ. ಪ್ರತಿಯಾಗಿ, ‡ಕೆಲವರು ಈ ವರೆಗೂ ವಿಗ್ರಹಗಳ ಬಳಿಗೆ ಹೋಗುವ ರೂಢಿಯಲ್ಲಿದರಿಂದ ತಾವು ತಿನ್ನುವ ಈ ಆಹಾರವು ವಿಗ್ರಹಕ್ಕೆ ಅರ್ಪಿಸಿದ್ದೆಂದು ತಿನ್ನುತ್ತಾರೆ; ಅವರ ಮನಸ್ಸಾಕ್ಷಿಯು ಬಲಹೀನವಾದ್ದದರಿಂದ ಕಲುಷಿತವಾಗಿ ಹೋಗಿದೆ. 8 ಆದರೆ ನಾವು ತಿನ್ನುವ §ಆಹಾರವು ದೇವರನ್ನು ಮೆಚ್ಚಿಸುವುದಿಲ್ಲ. ತಿನ್ನದಿರುವುದರಿಂದ ನಷ್ಟವೂ ಇಲ್ಲ, ತಿನ್ನುವುದರಿಂದ ಲಾಭವೂ ಇಲ್ಲ. 9 *ಆದರೆ ಈ ನಿಮ್ಮ ಸ್ವಾತಂತ್ರ್ಯವು ನಂಬಿಕೆಯಲ್ಲಿ ಬಲಹೀನನಾದವನಿಗೆ ಅಡ್ಡಿಯಾಗದಂತೆ ಎಚ್ಚರವಾಗಿರಿ. 10 ಜ್ಞಾನಿಯಾದ ನೀನೇ ವಿಗ್ರಹಾಲಯದಲ್ಲಿ ಊಟಕ್ಕೆ ಕುಳಿತಿರುವುದನ್ನು ದುರ್ಬಲವಾದ ಮನಸ್ಸಾಕ್ಷಿಯುಳ್ಳ ಸಹೋದರನು ಕಂಡರೆ ಅವನೂ ಕೂಡ ವಿಗ್ರಹಕ್ಕೆ ಅರ್ಪಿಸಿದ ಆಹಾರಪದಾರ್ಥಗಳನ್ನು ತಿನ್ನುವುದಕ್ಕೆ ಧೈರ್ಯಗೊಂಡನಲ್ಲವೇ. 11 ಹೀಗೆ ಈ ನಿನ್ನ ಜ್ಞಾನದಿಂದ †ಆ ಬಲಹೀನ ಸಹೋದರನು ನಾಶವಾಗುತ್ತಾನೆ. ಅವನಿಗಾಗಿಯೂ ಕ್ರಿಸ್ತನು ತನ್ನ ಪ್ರಾಣ ಕೊಟ್ಟನಲ್ಲವೇ. 12 ಹೀಗಿರಲಾಗಿ ನೀವು ಸಹೋದರರ ವಿರುದ್ಧ ಪಾಪ ಮಾಡಿ ‡ಅವರ ದುರ್ಬಲವಾದ ಮನಸ್ಸಾಕ್ಷಿಯನ್ನು ನೋಯಿಸಿದರೆ ನೀವು §ಕ್ರಿಸ್ತನ ವಿರುದ್ಧ ಪಾಪಮಾಡುವವರಾಗುತ್ತೀರಿ. 13 *ಆದ್ದರಿಂದ ಆಹಾರಪದಾರ್ಥವು ನನ್ನ ಸಹೋದರನಿಗೆ ಅಡ್ಡಿಯಾಗುವುದಾದರೆ ನಾನು ಎಂದಿಗೂ ಮಾಂಸವನ್ನು ತಿನ್ನುವುದಿಲ್ಲ; ನಾನು ನನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವುದಿಲ್ಲಾ.
* 8:1 1 ಕೊರಿ 8:4,7,10 † 8:1 1 ಕೊರಿ 13:4-13 ‡ 8:2 ಗಲಾ. 6:3; 1 ಕೊರಿ 3:18 § 8:2 1 ಕೊರಿ 13:8-12 * 8:4 1 ಕೊರಿ 10:19; ಯೆಶಾ 41:24 † 8:4 1 ಕೊರಿ 8:6; ಧರ್ಮೋ 4:35,39; 6:4 ‡ 8:6 1 ಕೊರಿ 8:4; ಎಫೆ 4:6 § 8:6 ರೋಮಾ. 11:36 * 8:6 ಎಫೆ 4:5 † 8:6 ಯೋಹಾ 1:3 ‡ 8:7 ರೋಮಾ. 14:14,22,23 § 8:8 ರೋಮಾ. 14:17 * 8:9 1 ಕೊರಿ 10:23; ರೋಮಾ. 14:21; ಗಲಾ. 5:13 † 8:11 ರೋಮಾ. 14:15,20 ‡ 8:12 ಮತ್ತಾ 18:6 § 8:12 ಮತ್ತಾ 25:45 * 8:13 ರೋಮಾ. 4:13,21