17
ಥೆಸಲೋನಿಕದಲ್ಲಿ
1 ಅವರು ಅಂಫಿಪೊಲಿ ಮತ್ತು ಅಪೊಲೋನ್ಯ ಮಾರ್ಗವಾಗಿ ಥೆಸಲೋನಿಕಕ್ಕೆ ಬಂದರು. ಅಲ್ಲಿ ಯೆಹೂದ್ಯರ ಒಂದು ಸಭಾಮಂದಿರವಿತ್ತು.
2 ಪೌಲನು ತನ್ನ ವಾಡಿಕೆಯಂತೆ ಮೂರು ಸಬ್ಬತ್ ದಿನಗಳಂದು ಅವರ ಬಳಿ ಹೋಗಿ, ಅವರಲ್ಲಿ ಪವಿತ್ರ ವೇದಗಳ ಬಗ್ಗೆ ವಾದಿಸಿ,
3 ಕ್ರಿಸ್ತ ಯೇಸು ಯಾತನೆಯನ್ನು ಅನುಭವಿಸಿ, ಸತ್ತವರೊಳಗಿಂದ ಜೀವಂತವಾಗಿ ಎದ್ದು ಬರಬೇಕಾಗಿತ್ತೆಂಬುದನ್ನು ವಿವರಿಸಿ, “ನಾನು ನಿಮಗೆ ಪ್ರಕಟಿಸುತ್ತಿರುವ ಯೇಸುವೇ ಆ ಕ್ರಿಸ್ತ,” ಎಂದು ಅವನು ಅವರ ಮುಂದೆ ಬಹಿರಂಗಪಡಿಸಿದನು.
4 ಅವರಲ್ಲಿ ಕೆಲವರು ದೇವಭಕ್ತಿಯುಳ್ಳ ಗ್ರೀಕರೂ ಪ್ರಮುಖರಾಗಿದ್ದ ಮಹಿಳೆಯರೂ ದೊಡ್ಡ ಸಂಖ್ಯೆಯಲ್ಲಿ ಒಡಂಬಟ್ಟವರಾಗಿ ಪೌಲ, ಸೀಲರನ್ನು ಸೇರಿಕೊಂಡರು.
5 ಆದರೆ ಯೆಹೂದ್ಯರು ಮತ್ಸರದಿಂದ ಕೂಡಿ, ಬೀದಿಗಳಲ್ಲಿ ತಿರುಗಾಡುವ ಕೆಲವು ದುಷ್ಟವ್ಯಕ್ತಿಗಳನ್ನು ಕೂಡಿಸಿ ಪಟ್ಟಣದಲ್ಲಿ ಗಲಭೆ ಎಬ್ಬಿಸಿದರು. ಜನಸಮೂಹದ ಮುಂದೆ ಪೌಲ, ಸೀಲರನ್ನು ಎಳೆದು ತರುವಂತೆ ಅವರನ್ನು ಹುಡುಕುತ್ತಾ ಯಾಸೋನ ಎಂಬುವನ ಮನೆಯನ್ನು ಮುತ್ತಿದರು.
6 ಆದರೆ ಅಲ್ಲಿ ಅವರಿಲ್ಲದಿರುವುದನ್ನು ಕಂಡು ಅವರು ಯಾಸೋನನನ್ನೂ ಕೆಲವು ಸಹೋದರರನ್ನೂ ಎಳೆದುಕೊಂಡು ಬಂದು ಪಟ್ಟಣದ ಅಧಿಕಾರಿಗಳ ಮುಂದೆ ನಿಲ್ಲಿಸಿ, “ಲೋಕವನ್ನು ತಲೆಕೆಳಗೆ ಮಾಡಿರುವ ಈ ಮನುಷ್ಯರು ಇಲ್ಲಿಗೂ ಬಂದಿದ್ದಾರೆ.
7 ಯಾಸೋನನು ಅವರನ್ನು ತನ್ನ ಮನೆಯಲ್ಲಿ ಸೇರಿಸಿಕೊಂಡಿದ್ದಾನೆ. ಅವರು ಯೇಸು ಎಂಬ ಬೇರೊಬ್ಬ ಅರಸನಿದ್ದಾನೆ ಎಂದು ಹೇಳುತ್ತಾ ಕೈಸರನ ವಿರುದ್ಧವಾಗಿ ನಡೆಯುತ್ತಾರೆ,” ಎಂದು ಗಟ್ಟಿಯಾಗಿ ಕೂಗಿದರು.
8 ಇದನ್ನು ಕೇಳಿದ ಜನರೂ ಪಟ್ಟಣದ ಅಧಿಕಾರಿಗಳೂ ಕಳವಳಗೊಂಡರು.
9 ಆಮೇಲೆ ಯಾಸೋನನಿಂದಲೂ ಮತ್ತಿತರರಿಂದಲೂ ಜಾಮೀನು ಪಡೆದು ಅವರನ್ನು ಬಿಡುಗಡೆ ಮಾಡಿದರು.
ಬೆರೋಯದಲ್ಲಿ
10 ರಾತ್ರಿಯಾದ ಕೂಡಲೇ, ಸಹೋದರರು ಪೌಲ, ಸೀಲರನ್ನು ಬೆರೋಯಕ್ಕೆ ಕಳುಹಿಸಿದರು. ಅಲ್ಲಿಗೆ ಅವರು ತಲುಪಿದಾಗ ಅಲ್ಲಿಯೂ ಯೆಹೂದ್ಯರ ಸಭಾಮಂದಿರಕ್ಕೆ ಹೋದರು.
11 ಬೆರೋಯದಲ್ಲಿದ್ದವರು ಥೆಸಲೋನಿಕದವರಿಗಿಂತ ಹೆಚ್ಚು ಸದ್ಗುಣವುಳ್ಳವರು; ಅವರು ವಾಕ್ಯವನ್ನು ಅತ್ಯಾಸಕ್ತಿಯಿಂದ ಸ್ವೀಕರಿಸಿ, ಇವರು ಹೇಳಿದ್ದು ಸರಿಯಾದದ್ದೋ ಏನೋ ಎಂದು ಅವರು ಪ್ರತಿದಿನವೂ ಪವಿತ್ರ ವೇದಗಳನ್ನು ಪರೀಕ್ಷಿಸುತ್ತಿದ್ದರು.
12 ಆದ್ದರಿಂದ ಅವರಲ್ಲಿ ಅನೇಕರು ವಿಶ್ವಾಸ ಹೊಂದಿದರು. ಅನೇಕ ಗ್ರೀಕ್ ಪುರುಷರೂ ಪ್ರಮುಖ ಸ್ತ್ರೀಯರೂ ವಿಶ್ವಾಸವನ್ನಿಟ್ಟರು.
13 ಆದರೆ ಪೌಲನು ದೇವರ ವಾಕ್ಯವನ್ನು ಬೆರೋಯದಲ್ಲಿ ಬೋಧಿಸುತ್ತಿದ್ದಾನೆಂಬುದು ಥೆಸಲೋನಿಕದಲ್ಲಿದ್ದ ಯೆಹೂದ್ಯರಿಗೆ ತಿಳಿದುಬಂದಾಗ ಅವರು ಅಲ್ಲಿಗೂ ಬಂದು, ಜನಸಮೂಹವನ್ನು ಪ್ರಚೋದಿಸಿ ಗಲಭೆ ಎಬ್ಬಿಸಿದರು.
14 ಆದ್ದರಿಂದ ಸಹೋದರರು ಕೂಡಲೇ ಪೌಲನನ್ನು ಸಮುದ್ರ ತೀರಕ್ಕೆ ಕಳುಹಿಸಿಬಿಟ್ಟರು. ಆದರೆ ಸೀಲ ಮತ್ತು ತಿಮೊಥೆ ಬೆರೋಯದಲ್ಲಿಯೇ ಉಳಿದುಕೊಂಡರು.
15 ಪೌಲನನ್ನು ಬಿಟ್ಟು ಬರಲು ಹೋದವರು ಅವನ ಜೊತೆ ಅಥೇನೆ ಪಟ್ಟಣದವರೆಗೆ ಹೋದರು. ಸೀಲ ಮತ್ತು ತಿಮೊಥೆಯರು ಸಾಧ್ಯವಾದಷ್ಟು ಬೇಗನೇ ತನ್ನ ಬಳಿ ಬರಬೇಕೆಂಬ ಅಪ್ಪಣೆಯನ್ನು ಪೌಲನಿಂದ ಪಡೆದು, ಅವರು ಬೆರೋಯಕ್ಕೆ ಹಿಂತಿರುಗಿ ಹೋದರು.
ಅಥೇನೆ ಪಟ್ಟಣದಲ್ಲಿ
16 ಪೌಲನು ಅವರಿಗಾಗಿ ಕಾಯುತ್ತಾ ಅಥೇನೆಯಲ್ಲಿ ಇದ್ದಾಗ, ಆ ಪಟ್ಟಣವು ವಿಗ್ರಹಗಳಿಂದ ತುಂಬಿಕೊಂಡಿದ್ದನ್ನು ಕಂಡು, ಅವನ ಆತ್ಮವು ಅವನೊಳಗೆ ಕುದಿಯಿತು.
17 ಆದ್ದರಿಂದ ಅವನು ಸಭಾಮಂದಿರದಲ್ಲಿ ಯೆಹೂದ್ಯರೊಂದಿಗೂ ದೇವಭಕ್ತಿಯುಳ್ಳ ಗ್ರೀಕರೊಂದಿಗೂ ಅಲ್ಲದೆ ಬಹಿರಂಗ ಸಂತೆಪೇಟೆ ಸ್ಥಳದಲ್ಲಿ ದಿನದಿನವೂ ಬರುತ್ತಿದ್ದ ಜನರೊಂದಿಗೂ ಚರ್ಚೆ ಮಾಡುತ್ತಿದ್ದನು.
18 ಆದರೆ ಎಪಿಕೂರಿಯರು ಹಾಗೂ ಸ್ತೋಯಿಕರು ಎಂಬ ತತ್ವಜ್ಞಾನಿಗಳಲ್ಲಿ ಸಹ ಕೆಲವರು ಅವನೊಂದಿಗೆ ವಾಗ್ವಾದ ಮಾಡಲು ಪ್ರಾರಂಭಿಸಿ, “ಈ ಬಾಯಿಬಡುಕ ಏನು ಹೇಳಬೇಕೆಂದಿದ್ದಾನೆ?” ಎಂದರು. ಇನ್ನೂ ಕೆಲವರು, “ಅವನು ವಿದೇಶದ ದೇವರುಗಳ ಬಗ್ಗೆ ಪ್ರಸ್ತಾಪಿಸುವಂತೆ ತೋರುತ್ತದೆ,” ಎಂದರು. ಏಕೆಂದರೆ ಅವನು ಯೇಸುವನ್ನು ಮತ್ತು ಪುನರುತ್ಥಾನವನ್ನು ಕುರಿತ ಸುವಾರ್ತೆ ಸಾರುತ್ತಿದ್ದನು.
19 ಆಗ ಅವರು ಪೌಲನನ್ನು ಕರೆದುಕೊಂಡು ಅರಿಯೊಪಾಗ ಎಂಬ ಸ್ಥಳಕ್ಕೆ ಬಂದು, “ನೀನು ಹೇಳುತ್ತಿರುವ ಈ ಹೊಸ ಉಪದೇಶ ಏನೆಂಬುದನ್ನು ನಾವು ತಿಳಿದುಕೊಳ್ಳಬಹುದೋ?
20 ನೀನು ಕೆಲವು ವಿಚಿತ್ರವಾದ ವಿಚಾರಗಳನ್ನು ನಮಗೆ ಹೇಳುತ್ತಿರುವೆ. ಆದ್ದರಿಂದ ಅವುಗಳ ಅರ್ಥವನ್ನು ತಿಳಿಯಬಯಸುತ್ತೇವೆ,” ಎಂದರು.
21 ಅಲ್ಲಿ ನೆಲೆಸಿದ್ದ ಅಥೇನೆಯ ನಿವಾಸಿಗಳೂ ವಿದೇಶಿಯರೂ ಹೊಸ ಹೊಸ ವಿಷಯಗಳನ್ನು ಹೇಳುವುದಕ್ಕೂ ಕೇಳುವುದಕ್ಕೂ ಹೊರತು ಇತರ ವಿಷಯಗಳಲ್ಲಿ ಸಮಯ ಕಳೆಯುತ್ತಿರಲಿಲ್ಲ.
22 ಅರಿಯೊಪಾಗದ ಗುಂಪಿನ ಮುಂದೆ ನಿಂತು ಪೌಲನು ಹೀಗೆಂದನು: “ಅಥೇನೆಯ ಜನರೇ! ನೀವು ಪ್ರತಿಯೊಂದರಲ್ಲಿಯೂ ಹೇಗೆ ಬಹು ಧಾರ್ಮಿಕರಾಗಿದ್ದೀರಿ ಎಂಬುದನ್ನು ನಾನು ಕಂಡುಕೊಂಡಿದ್ದೇನೆ.
23 ನಾನು ಸುತ್ತಮುತ್ತಲೂ ತಿರುಗಾಡುತ್ತಾ, ನಿಮ್ಮ ಆರಾಧನಾ ವಿಗ್ರಹಗಳನ್ನು ಲಕ್ಷ್ಯವಿಟ್ಟು ಗಮನಿಸಿದಾಗ,
‘ತಿಳಿಯದ ದೇವರಿಗೆ’
ಎಂಬ ಬರಹವಿದ್ದ ಬಲಿಪೀಠವನ್ನು ನೋಡಿದೆನು. ಆದ್ದರಿಂದ ನೀವು ಯಾವುದನ್ನು ತಿಳಿಯದೆ ಪೂಜಿಸುತ್ತಿರುವಿರೋ ಅದನ್ನೇ ನಾನು ನಿಮಗೆ ಪ್ರಕಟಿಸುತ್ತೇನೆ.
24 “ಜಗತ್ತನ್ನೂ ಅದರಲ್ಲಿರುವ ಸಮಸ್ತವನ್ನೂ ಸೃಷ್ಟಿಸಿದ ದೇವರು ಇಹಪರಲೋಕಗಳ ಅಧಿಪತಿಯಾಗಿದ್ದಾರೆ. ಅವರು ಕೈಗಳಿಂದ ಕಟ್ಟಿದ ದೇವಾಲಯಗಳಲ್ಲಿ ವಾಸಿಸುವವರಲ್ಲ.
25 ದೇವರಿಗೆ ಏನಾದರೂ ಅವಶ್ಯಕತೆಯಿರುವಂತೆ ಮಾನವ ಹಸ್ತಗಳ ಸೇವೆಯು ಅಗತ್ಯವಿರುವುದಿಲ್ಲ. ದೇವರೇ ಎಲ್ಲರಿಗೂ ಜೀವವನ್ನೂ ಉಸಿರನ್ನೂ ಪ್ರತಿಯೊಂದನ್ನೂ ದಯಪಾಲಿಸಿರುವುದರಿಂದ,
26 ದೇವರು ಒಬ್ಬ ಮನುಷ್ಯನಿಂದ ಎಲ್ಲಾ ದೇಶಗಳನ್ನು ಸೃಷ್ಟಿಸಿ, ಜನರು ಇಡೀ ಭೂಲೋಕವನ್ನು ತುಂಬಿಕೊಳ್ಳುವಂತೆ ಮಾಡಿದರು; ಅವರವರು ಇರತಕ್ಕ ಕಾಲಾವಧಿಯನ್ನೂ ವಾಸಿಸಲು ನಿರ್ದಿಷ್ಟ ಸ್ಥಳಗಳನ್ನೂ ನೇಮಿಸಿದ್ದಾರೆ.
27 ದೇವರು ನಮ್ಮಲ್ಲಿ ಯಾರಿಂದಲೂ ದೂರವಾಗಿಲ್ಲವಾದರೂ ದೇವರನ್ನು ನಾವು ಅಪೇಕ್ಷಿಸುವಂತೆ ನಾವು ದೇವರನ್ನು ಹುಡುಕಿ ಕಂಡುಕೊಳ್ಳುವಂತೆ ಹೀಗೆ ಮಾಡಿದರು.
28 ಏಕೆಂದರೆ, ‘ನಾವು ಜೀವಿಸುವುದೂ ಚಲಿಸುವುದೂ ಇರುವುದೂ ದೇವರಲ್ಲಿಯೇ.’ ನಿಮ್ಮ ಕವಿಗಳಲ್ಲಿ ಕೆಲವರು ಹೇಳಿರುವಂತೆ, ‘ನಾವು ನಿಜಕ್ಕೂ ದೇವರ ಮಕ್ಕಳೇ ಆಗಿದ್ದೇವೆ.’
29 “ನಾವು ದೇವರ ಮಕ್ಕಳಾಗಿರುವುದರಿಂದ, ಮಾನವ ಕಲ್ಪನೆ, ಕುಶಲತೆಯಿಂದ ರೂಪಿಸಿದ ಬೆಳ್ಳಿ, ಬಂಗಾರ, ಶಿಲೆಯ ಮೂರ್ತಿಯಂತೆ ದೇವರು ಇದ್ದಾರೆಂದು ನಾವು ಭಾವಿಸಬಾರದು.
30 ಇಂಥಾ ಅಜ್ಞಾನ ಕಾಲವನ್ನು ಹಿಂದಿನ ಕಾಲದಲ್ಲಿ ದೇವರು ತಮ್ಮ ಗಮನಕ್ಕೆ ತಂದುಕೊಳ್ಳಲಿಲ್ಲ. ಆದರೆ ಈಗ ಎಲ್ಲಾ ಕಡೆಗಳಲ್ಲಿರುವ ಸರ್ವಮಾನವರೂ ಪಶ್ಚಾತ್ತಾಪ ಪಡಬೇಕೆಂದು ದೇವರು ಆಜ್ಞಾಪಿಸುತ್ತಾರೆ.
31 ಏಕೆಂದರೆ ದೇವರು ನೇಮಿಸಿದ ಒಬ್ಬರ ಮುಖಾಂತರ ಇಡೀ ಜಗತ್ತಿಗೆ ನೀತಿಗನುಸಾರವಾಗಿ ನ್ಯಾಯತೀರ್ಪು ಮಾಡುವ ಒಂದು ದಿನವನ್ನು ನೇಮಕ ಮಾಡಿದ್ದಾರೆ. ಇದನ್ನು ಎಲ್ಲರಿಗೂ ಖಚಿತ ಪಡಿಸಲೆಂದೇ ಆ ಒಬ್ಬರನ್ನು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಿದ್ದಾರೆ.”
32 ಸತ್ತವರ ಪುನರುತ್ಥಾನದ ವಿಷಯವನ್ನು ಕೇಳಿದಾಗ, ಅವರಲ್ಲಿ ಕೆಲವರು ಪರಿಹಾಸ್ಯ ಮಾಡಿದರು. ಇತರರು, “ನಾವು ಇನ್ನೊಮ್ಮೆ ಈ ವಿಷಯದ ಮೇಲೆ ನೀನು ಮಾತನಾಡುವುದನ್ನು ಕೇಳುತ್ತೇವೆ,” ಎಂದರು.
33 ಹೀಗಿರಲು ಪೌಲನು ಅವರ ಮಧ್ಯದಿಂದ ಹೊರಟುಹೋದನು.
34 ಆದರೆ ಕೆಲವರು ಪೌಲನನ್ನು ಅಂಟಿಕೊಂಡು ದೇವರಲ್ಲಿ ವಿಶ್ವಾಸವನ್ನಿಟ್ಟರು. ಅವರಲ್ಲಿ ಅರಿಯೊಪಾಗದ ದಿಯೊನುಸ್ಯನು ಮತ್ತು ದಾಮರಿ ಎಂಬ ಹೆಸರಿನ ಒಬ್ಬ ಮಹಿಳೆ ಹಾಗೂ ಇನ್ನಿತರರೂ ಇದ್ದರು.