27
ಪೌಲನು ರೋಮಿಗೆ ಪ್ರಯಾಣಮಾಡಿದ್ದು
1 ನಾವು ಇಟಲಿಗೆ ಸಮುದ್ರ ಪ್ರಯಾಣ ಮಾಡಬೇಕೆಂದು ತೀರ್ಮಾನವಾದ ಮೇಲೆ ಪೌಲನನ್ನೂ ಇತರ ಕೈದಿಗಳನ್ನೂ ಯೂಲ್ಯನೆಂಬ ಹೆಸರಿನ ಒಬ್ಬ ಶತಾಧಿಪತಿಗೆ ಒಪ್ಪಿಸಿದರು. ಅವನು ಚಕ್ರವರ್ತಿಯ ದಳಕ್ಕೆ ಸೇರಿದವನು.
2 ಆಗ ಅದ್ರಮಿತ್ತಿಯದಿಂದ ಬಂದು ಏಷ್ಯಾ ಪ್ರಾಂತದ ಬಂದರುಗಳಿಗೆ ಹೋಗಲು ಸಿದ್ಧವಾಗಿದ್ದ ನೌಕೆಯನ್ನೇರಿ ನಾವು ಪ್ರಯಾಣ ಪ್ರಾರಂಭಿಸಿದೆವು. ಥೆಸಲೋನಿಕದಿಂದ ಬಂದ ಮಕೆದೋನ್ಯದ ಅರಿಸ್ತಾರ್ಕನು ನಮ್ಮೊಂದಿಗಿದ್ದನು.
3 ಮರುದಿನ ನಾವು ಸೀದೋನಿಗೆ ತಲುಪಿದೆವು. ಪೌಲನಿಗೆ ಯೂಲ್ಯನು ದಯೆತೋರಿ ಅವನು ತನ್ನ ಸ್ನೇಹಿತರ ಬಳಿಗೆ ಹೋಗುವುದಕ್ಕೂ ಅವರಿಂದ ಉಪಚಾರವನ್ನು ಹೊಂದುವುದಕ್ಕೂ ಅನುಮತಿಸಿದನು.
4 ಅಲ್ಲಿಂದ ಹೊರಟು, ಎದುರುಗಾಳಿ ಬೀಸುತ್ತಿದ್ದದರಿಂದ ನಾವು ಸಮುದ್ರ ಪ್ರಯಾಣಮಾಡಿ ಸೈಪ್ರಸ್ ದ್ವೀಪ ಸಮೀಪವಾಗಿ,
5 ಕಿಲಿಕ್ಯಯ ಹಾಗೂ ಪಂಫುಲ್ಯ ಪ್ರಾಂತ ತೀರಗಳ ಎದುರಾಗಿರುವ ಸಮುದ್ರವನ್ನು ದಾಟಿ, ಲುಕೀಯ ಪ್ರಾಂತದ ಮುರ ಪಟ್ಟಣ ಎಂಬಲ್ಲಿಗೆ ತಲುಪಿದೆವು.
6 ಅಲ್ಲಿ ಇಟಲಿಗೆ ಪ್ರಯಾಣಮಾಡುತ್ತಿದ್ದ ಅಲೆಕ್ಸಾಂದ್ರಿಯದ ನೌಕೆಯನ್ನು ಶತಾಧಿಪತಿಯು ಕಂಡು ನಮ್ಮನ್ನು ಆ ನೌಕೆಯಲ್ಲಿ ಹತ್ತಿಸಿದನು.
7 ಅನೇಕ ದಿನಗಳವರೆಗೆ ನಮ್ಮ ಪ್ರಯಾಣ ನಿಧಾನವಾಗಿ ಸಾಗಿತು. ಕ್ನೀದ ಪಟ್ಟಣ ಎಂಬಲ್ಲಿಗೆ ತಲುಪುವವರೆಗೆ ಬಹಳ ಪ್ರಯಾಸ ಪಡಬೇಕಾಯಿತು. ಎದುರುಗಾಳಿಯು ಅಡ್ಡಿಯಾದದ್ದರಿಂದ, ಸಲ್ಮೋನೆ ಭೂಶಿರವನ್ನು ದಾಟಿ, ಅದರ ಎದುರಾಗಿರುವ ಕ್ರೇತದ್ವೀಪವನ್ನು ತಲುಪಿದೆವು.
8 ಆ ದ್ವೀಪದ ಕರಾವಳಿಯಲ್ಲಿಯೇ ಕಷ್ಟದಿಂದ ಮುಂದೆ ಸಾಗುತ್ತಾ, “ಚಂದರೇವುಗಳು” ಎಂದು ಕರೆಯಲಾಗುವ ಸ್ಥಳಕ್ಕೆ ಬಂದೆವು. ಅದು ಲಸಾಯ ಪಟ್ಟಣಕ್ಕೆ ಸಮೀಪದಲ್ಲಿತ್ತು.
9 ಬಹಳ ಸಮಯ ಕಳೆದುಹೋಯಿತು. ದೋಷಪರಿಹಾರದ ದಿನವು ಸಹ ಮುಗಿದು ಹೋಯಿತು. ಈ ಸಂದರ್ಭದಲ್ಲಿ ಸಮುದ್ರ ಪ್ರಯಾಣ ಅಪಾಯಕರವಾಗಿದ್ದುದರಿಂದ ಪೌಲನು,
10 “ಸಹೋದರರೇ, ನಮ್ಮ ಸಮುದ್ರ ಪ್ರಯಾಣವು ಅಪಾಯಕಾರಿಯಾಗಿರುವಂತೆ ತೋರುತ್ತದೆ. ಇದರಿಂದ ನಮ್ಮ ನೌಕೆಗೂ ಸರಕಿಗೂ ಅಷ್ಟೇ ಅಲ್ಲ, ನಮ್ಮ ಪ್ರಾಣಗಳಿಗೂ ದೊಡ್ಡ ಹಾನಿ ಬರುವ ಸಂಭವವಿದೆ,” ಎಂದು ಎಚ್ಚರಿಸಿದನು.
11 ಆದರೆ ಶತಾಧಿಪತಿಯು ಪೌಲನು ಹೇಳಿದ್ದಕ್ಕೆ ಕಿವಿಗೊಡದೆ ನೌಕೆಯ ನಾವಿಕನು ಹಾಗೂ ಯಜಮಾನನು ಹೇಳಿದ ಮಾತುಗಳಿಗೆ ಕಿವಿಗೊಟ್ಟನು.
12 ಆದರೆ ಚಳಿಗಾಲ ಕಳೆಯಲು ಆ ಬಂದರು ಅನುಕೂಲವಾಗಿರಲಿಲ್ಲ. ಆದ್ದರಿಂದ ಹೆಚ್ಚು ಮಂದಿ ಪ್ರಯಾಣ ಮುಂದುವರಿಸಬೇಕೆಂದು ತೀರ್ಮಾನಿಸಿದರು. ಸಾಧ್ಯವಾದರೆ ಫೊಯಿನಿಕ್ಸನ್ನು ತಲುಪಿ ಅಲ್ಲಿಯೇ ಚಳಿಗಾಲವನ್ನು ಕಳೆಯಬೇಕೆಂಬುದು ಅವರ ಯೋಚನೆಯಾಗಿತ್ತು. ಫೊಯಿನಿಕ್ಸ, ಕ್ರೇತದ್ವೀಪದ ಒಂದು ಬಂದರು. ಇದು ಈಶಾನ್ಯ ದಿಕ್ಕಿಗೂ ಆಗ್ನೇಯ ದಿಕ್ಕಿಗೂ ಅಭಿಮುಖವಾಗಿತ್ತು.
ಚಂಡಮಾರುತ
13 ದಕ್ಷಿಣ ಸುಳಿಗಾಳಿ ಬೀಸಲು ಪ್ರಾರಂಭಿಸಿದಾಗ, ಅವರು ತಾವು ಬಯಸಿದ್ದು ದೊರೆಯಿತೆಂದು ಭಾವಿಸಿದರು; ಆದ್ದರಿಂದ ಅವರು ಲಂಗರು ಎತ್ತಿಕಟ್ಟಿ ಕ್ರೇತದ್ವೀಪದ ತೀರದ ಸಮೀಪವಾಗಿಯೇ ಸಮುದ್ರ ಪ್ರಯಾಣ ಬೆಳೆಸಿದರು.
14 ಆದರೆ ಸ್ವಲ್ಪ ಸಮಯದಲ್ಲಿಯೇ “ಈಶಾನ್ಯ ಮಾರುತ” ಎಂಬ ಪ್ರಚಂಡ ಗಾಳಿ ದ್ವೀಪದ ಕಡೆಯಿಂದ ಬೀಸತೊಡಗಿತು.
15 ನೌಕೆ ಬಿರುಗಾಳಿಗೆ ಸಿಕ್ಕಿಕೊಂಡು ಮುಂದೆ ಹೋಗಲಾರದೆ ಇರಲು, ಗಾಳಿ ಬೀಸಿದ ಕಡೆಗೆ ನೂಕಿಸಿಕೊಂಡು ಹೋದೆವು.
16 ಕ್ಲೌಡ ಎಂಬ ಪುಟ್ಟ ದ್ವೀಪದ ಮರೆಯಲ್ಲಿ ಹೋಗುತ್ತಿದ್ದಾಗ, ಜೀವರಕ್ಷಕ ದೋಣಿಯನ್ನು ಸರಿಪಡಿಸಿಕೊಂಡು ಹೋಗುವುದು ನಮಗೆ ಕಷ್ಟಕರವಾಯಿತು.
17 ನೌಕೆಯವರು ಅದನ್ನು ಮೇಲಕ್ಕೆಳೆದು ಹಗ್ಗಗಳಿಂದ ನೌಕೆಯ ಕೆಳಭಾಗಕ್ಕೆ ಬಿಗಿಯಾಗಿ ಕಟ್ಟಿದರು. ಸುರ್ತಿಸ್ ಎಂಬ ಉಸುಬಿನಲ್ಲಿ ನೌಕೆ ಸಿಕ್ಕಿಕೊಳ್ಳಬಹುದೆಂಬ ಭಯದಿಂದ ಅವರು ನೌಕೆಯ ಹಾಯಿಯನ್ನು ಇಳಿಸಿ, ಗಾಳಿ ಬೀಸುತ್ತಿದ್ದ ಕಡೆಗೆ ನೌಕೆ ತೇಲುವಂತೆ ಬಿಟ್ಟರು.
18 ಚಂಡಮಾರುತದಿಂದ ನಾವು ಬಹಳ ಹೊಯ್ದಾಡಿದ್ದರಿಂದ ಮರುದಿನ ಅವರು ಸರಕುಗಳನ್ನು ನೌಕೆಯಿಂದ ಹೊರಗೆ ಎಸೆಯಲು ಪ್ರಾರಂಭಿಸಿದರು.
19 ಮೂರನೆಯ ದಿನ ನೌಕೆಯ ಅಡ್ಡ ಮರವನ್ನು ತಮ್ಮ ಕೈಗಳಿಂದಲೇ ಎತ್ತಿ ಹೊರಗೆ ಎಸೆದರು.
20 ಅನೇಕ ದಿನಗಳವರೆಗೆ ಸೂರ್ಯನನ್ನಾಗಲಿ, ನಕ್ಷತ್ರಗಳನ್ನಾಗಲಿ ಕಾಣದೆ ಚಂಡಮಾರುತ ಬೀಸುತ್ತಲೇ ಇದ್ದುದರಿಂದ ನಾವು ತಪ್ಪಿಸಿಕೊಳ್ಳುವ ಎಲ್ಲಾ ನಿರೀಕ್ಷೆಯನ್ನು ಕಳೆದುಕೊಂಡೆವು.
21 ಬಹಳ ದಿನಗಳವರೆಗೆ ಜನರು ಊಟ ಮಾಡದೇ ಇದ್ದಾಗ, ಪೌಲನು ಅವರ ಮುಂದೆ ಎದ್ದು ನಿಂತುಕೊಂಡು ಹೀಗೆ ಹೇಳಿದನು: “ಸ್ನೇಹಿತರೇ, ನೀವು ಕ್ರೇತದಿಂದ ಮುಂದೆ ಪ್ರಯಾಣ ಮಾಡಬಾರದೆಂದು ಹೇಳಿದ ನನ್ನ ಮಾತಿಗೆ ವಿಧೇಯರಾಗಿದ್ದರೆ ಈ ಕಷ್ಟನಷ್ಟವನ್ನು ತಡೆಯಬಹುದಿತ್ತು.
22 ಈಗಲಾದರೂ ನೀವು ಧೈರ್ಯ ಕಳೆದುಕೊಳ್ಳಬೇಡಿರಿ ಎಂದು ನಿಮಗೆ ಸಲಹೆ ಕೊಡುತ್ತೇನೆ. ನಿಮ್ಮಲ್ಲಿ ಯಾರಿಗೂ ಪ್ರಾಣ ಹಾನಿಯಾಗುವುದಿಲ್ಲ. ನೌಕೆ ಮಾತ್ರವೇ ನಾಶವಾಗಿ ಹೋಗುವುದು.
23 ನಾನು ಯಾವ ದೇವರಿಗೆ ಸೇರಿದ್ದೇನೋ ಮತ್ತು ಯಾರನ್ನು ಸೇವೆ ಮಾಡುತ್ತಿದ್ದೇನೋ ಆ ದೇವರ ದೂತನೊಬ್ಬನು ನಿನ್ನೆ ರಾತ್ರಿ ನನ್ನ ಬಳಿ ನಿಂತುಕೊಂಡು,
24 ‘ಪೌಲನೇ, ಭಯಪಡಬೇಡ. ನೀನು ಕೈಸರನ ಮುಂದೆ ನಿಲ್ಲಬೇಕು. ಇಗೋ, ದೇವರು ನಿನ್ನೊಂದಿಗೆ ಪ್ರಯಾಣ ಮಾಡುತ್ತಿರುವವರ ಪ್ರಾಣಗಳನ್ನು ನಿನಗೆ ಉಳಿಸಿಕೊಟ್ಟಿದ್ದಾರೆ,’ ಎಂದನು.
25 ಆದ್ದರಿಂದ ಗೆಳೆಯರೇ, ಧೈರ್ಯಗೊಳ್ಳಿರಿ, ನನಗೆ ಹೇಳಿದಂತೆಯೇ ಸಂಭವಿಸುವುದೆಂದು ನಾನು ದೇವರನ್ನು ನಂಬುತ್ತೇನೆ.
26 ಆದರೆ ನಾವು ಯಾವುದೋ ಒಂದು ದ್ವೀಪದ ದಡದಲ್ಲಿ ಅಪ್ಪಳಿಸುತ್ತೇವೆ,” ಎಂದನು.
ನೌಕೆ ಒಡೆದುಹೋದದ್ದು
27 ಹದಿನಾಲ್ಕನೇ ರಾತ್ರಿ ಬಂದ ಮೇಲೆ ನಾವು ಆದ್ರಿಯ ಸಮುದ್ರದಲ್ಲಿ ಬಿರುಗಾಳಿಯು ನಮ್ಮನ್ನು ಹೊಯ್ದಾಡಿಸುತ್ತಿದ್ದಾಗ, ಸುಮಾರು ಮಧ್ಯರಾತ್ರಿಯಲ್ಲಿ ನಾವು ನೆಲವನ್ನು ತಲುಪುತ್ತಿದ್ದೇವೆಂದು ನಾವಿಕರು ಭಾವಿಸಿ,
28 ನೀರಿನ ಆಳವನ್ನು ಪರೀಕ್ಷಿಸಿದಾಗ, ಅದು ನೂರಿಪ್ಪತ್ತು ಅಡಿ ಆಳವೆಂದು ಕಂಡುಕೊಂಡರು. ಸ್ವಲ್ಪ ಸಮಯದ ತರುವಾಯ ಆಳ ನೋಡಿದಾಗ, ಅದು ತೊಂಬತ್ತು ಅಡಿಯಿತ್ತು.
29 ನಾವು ಬಂಡೆಗಳಿಗೆ ಅಪ್ಪಳಿಸಬಹುದೆಂಬ ಭಯದಿಂದ, ಹಿಂಭಾಗದಿಂದ ನಾಲ್ಕು ಲಂಗರುಗಳನ್ನು ಕೆಳಗಿಳಿಸಿ, ಬೆಳಗಾಗಲೆಂದು ಹಾರೈಸುತ್ತಿದ್ದೆವು.
30 ನೌಕೆಯಿಂದ ತಪ್ಪಿಸಿಕೊಂಡು ಹೋಗಲು ನಾವಿಕರು ನೌಕೆಯ ಮುಂಭಾಗದಲ್ಲಿದ್ದ ಲಂಗರುಗಳನ್ನು ಕೆಳಗಿಳಿಸುವ ನೆಪದಿಂದ ದೋಣಿಯನ್ನು ಸಮುದ್ರದಲ್ಲಿ ಇಳಿಸಿದರು.
31 ಆಗ ಪೌಲನು ಶತಾಧಿಪತಿಗೂ ಸೈನಿಕರಿಗೂ, “ಈ ಜನರು ನೌಕೆಯಲ್ಲಿ ಉಳಿದುಕೊಳ್ಳದಿದ್ದರೆ ನೀವು ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ,” ಎಂದನು.
32 ಆದ್ದರಿಂದ ಸೈನಿಕರು ದೋಣಿಗೆ ಕಟ್ಟಿದ್ದ ಹಗ್ಗಗಳನ್ನು ಕಡಿದುಹಾಕಿ ಅದು ಸಮುದ್ರದ ಪಾಲಾಗುವಂತೆ ಮಾಡಿದರು.
33 ಬೆಳಗಾಗುತ್ತಿದ್ದಂತೆ ಪೌಲನು ಅವರೆಲ್ಲರೂ ಏನನ್ನಾದರೂ ತಿನ್ನಬೇಕೆಂದು ಒತ್ತಾಯ ಮಾಡಿ, “ಕಳೆದ ಹದಿನಾಲ್ಕು ದಿನಗಳಿಂದ ನೀವು ಕಾದುಕೊಂಡವರಾಗಿ ಊಟವನ್ನೇ ಮಾಡಿಲ್ಲ.
34 ಆದ್ದರಿಂದ ಊಟಮಾಡಿರಿ ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಇದು ನಿಮ್ಮ ಪ್ರಾಣವನ್ನು ಉಳಿಸಿಕೊಳ್ಳುವುದಕ್ಕಾಗಿಯೇ. ನೀವು ಜೀವದಿಂದ ಉಳಿಯಬೇಕು. ಏಕೆಂದರೆ ನಿಮ್ಮ ತಲೆಕೂದಲು ಒಂದಾದರೂ ನಾಶವಾಗುವುದಿಲ್ಲ,” ಎಂದನು.
35 ಹೀಗೆ ಹೇಳಿದ ನಂತರ ಅವನು ರೊಟ್ಟಿಯನ್ನು ತೆಗೆದುಕೊಂಡು ಅವರೆಲ್ಲರ ಎದುರಿನಲ್ಲಿ ದೇವರಿಗೆ ಕೃತಜ್ಞತೆ ಸಲ್ಲಿಸಿ, ಅದನ್ನು ಮುರಿದು ತಿನ್ನಲು ಪ್ರಾರಂಭಿಸಿದನು.
36 ಅವರೆಲ್ಲರೂ ಧೈರ್ಯಹೊಂದಿ ಊಟಮಾಡಿದರು.
37 ಅಲ್ಲಿ ನೌಕೆಯಲ್ಲಿ ನಾವೆಲ್ಲಾ ಒಟ್ಟು ಇನ್ನೂರ ಎಪ್ಪತ್ತಾರು ಜನರಿದ್ದೆವು.
38 ಎಲ್ಲರೂ ಸಾಕಷ್ಟು ಊಟಮಾಡಿದ ಮೇಲೆ ಗೋಧಿಯನ್ನು ಸಮುದ್ರದಲ್ಲಿ ಎಸೆದು ನೌಕೆಯ ಭಾರವನ್ನು ಹಗುರಗೊಳಿಸಿದರು.
39 ಬೆಳಗಾದ ಮೇಲೆ ನೆಲವನ್ನು ಗುರುತಿಸಲು ಅವರಿಗೆ ಸಾಧ್ಯವಾಗಲಿಲ್ಲ. ಆದರೆ ಅವರು ದಡವನ್ನು ಕಂಡು ಸಾಧ್ಯವಾದರೆ ಅಲ್ಲಿ ನೌಕೆಯನ್ನು ನಿಲ್ಲಿಸಬೇಕೆಂದು ತೀರ್ಮಾನಿಸಿದರು.
40 ಲಂಗರುಗಳನ್ನು ಸಡಿಲಗೊಳಿಸಿ ಅವುಗಳನ್ನು ಸಮುದ್ರದಲ್ಲಿ ಬಿಟ್ಟರು. ಚುಕ್ಕಾಣಿಗಳಿಗೆ ಕಟ್ಟಿದ್ದ ಹಗ್ಗಗಳನ್ನು ಬಿಚ್ಚಿದರು. ಹಾಯಿಯನ್ನು ಗಾಳಿಗೆ ಎತ್ತಿಕಟ್ಟಿ ನೌಕೆ ದಡದ ಕಡೆಗೆ ಚಲಿಸುವಂತೆ ಮಾಡಿದರು.
41 ಆದರೆ ನೌಕೆ ಮಧ್ಯದಲ್ಲಿ ಮರುಳು ದಿಬ್ಬಕ್ಕೆ ಅಪ್ಪಳಿಸಿ ಮುಳುಗಲಿಕ್ಕೆ ಪ್ರಾರಂಭಿಸಿತು. ನೌಕೆಯ ಮುಂಭಾಗ ಮರಳಲ್ಲಿ ಸಿಕ್ಕಿ ಅಲ್ಲಾಡದೇ ನಿಂತಿತು; ಹಿಂಭಾಗ ಬಿರುಗಾಳಿಯ ಹೊಡೆತಕ್ಕೆ ಸಿಕ್ಕಿ ಮುರಿದುಹೋಯಿತು.
42 ಆಗ ಕೈದಿಗಳು ಈಜಿಕೊಂಡು ತಪ್ಪಿಸಿಕೊಳ್ಳದಂತೆ ಸೈನಿಕರು ಅವರನ್ನು ಕೊಲ್ಲಲು ಯೋಚನೆ ಮಾಡಿದರು.
43 ಆದರೆ ಶತಾಧಿಪತಿಯು ಪೌಲನನ್ನು ಉಳಿಸಬೇಕೆಂದು ಬಯಸಿ, ಸೈನಿಕರು ಹಾಗೆ ಮಾಡದಂತೆ ನೋಡಿಕೊಂಡು, ಈಜಲು ಬಲ್ಲವರು ಮೊದಲು ಸಮುದ್ರದಲ್ಲಿ ಜಿಗಿದು ಭೂಮಿಯನ್ನು ತಲುಪಬೇಕೆಂದು ಆಜ್ಞಾಪಿಸಿದನು.
44 ಕೆಲವರು ಹಲಗೆಗಳ ಮೇಲೆ ಮತ್ತು ಕೆಲವರು ನೌಕೆಯ ತುಂಡುಗಳ ಸಹಾಯದಿಂದ ದಡ ಸೇರಬೇಕೆಂದು ಆಜ್ಞಾಪಿಸಿದನು. ಹೀಗೆ ಎಲ್ಲರೂ ಸುರಕ್ಷಿತವಾಗಿ ದಡ ಸೇರಿದರು.