14
ಪ್ರವಾದಿಸುವ ಮತ್ತು ಅನ್ಯಭಾಷೆಗಳನ್ನಾಡುವ ವರಗಳು
1 ಪ್ರೀತಿಯ ಮಾರ್ಗ ಅನುಸರಿಸಿರಿ, ಆತ್ಮಿಕ ವರಗಳನ್ನು, ವಿಶೇಷವಾಗಿ ಪ್ರವಾದಿಸುವ ವರವನ್ನು ಆಸಕ್ತಿಯಿಂದ ಅಪೇಕ್ಷಿಸಿರಿ.
2 ಅನ್ಯಭಾಷೆಗಳನ್ನು ಆಡುವವನು ಮನುಷ್ಯರ ಸಂಗಡವಲ್ಲ, ದೇವರೊಂದಿಗೆ ಮಾತನಾಡುತ್ತಾನೆ. ಅವನು ಮಾತನಾಡುವುದನ್ನು ಯಾರೂ ಅರ್ಥಮಾಡಿಕೊಳ್ಳುವುದಿಲ್ಲ. ಏಕೆಂದರೆ ಅವನು ಆತ್ಮದಲ್ಲಿ ರಹಸ್ಯಗಳನ್ನು ಮಾತನಾಡುವವನಾಗಿದ್ದಾನೆ.
3 ಪ್ರವಾದಿಸುವವನಾದರೋ, ಜನರ ಭಕ್ತಿವೃದ್ಧಿಗಾಗಿ, ಪ್ರೋತ್ಸಾಹಕ್ಕಾಗಿ, ಸಂತೈಸುವಿಕೆಗಾಗಿ ಮಾತನಾಡುತ್ತಾನೆ.
4 ಅನ್ಯಭಾಷೆಗಳನ್ನಾಡುವವನು ತನಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುವನು. ಆದರೆ ಪ್ರವಾದಿಸುವವನು ಸಭೆಗೆ ಭಕ್ತಿವೃದ್ಧಿಯನ್ನುಂಟುಮಾಡಿಕೊಳ್ಳುತ್ತಾನೆ.
5 ನೀವೆಲ್ಲರೂ ಅನ್ಯಭಾಷೆಗಳನ್ನಾಡಬೇಕೆಂದು ಈಗ ನಾನು ಅಪೇಕ್ಷಿಸಿದರೂ, ಅದಕ್ಕಿಂತ ಹೆಚ್ಚಾಗಿ ನೀವು ಪ್ರವಾದಿಸಬೇಕೆಂದು ಅಪೇಕ್ಷಿಸುತ್ತೇನೆ. ಅನ್ಯಭಾಷೆಗಳನ್ನಾಡುವವನು ಸಭೆಗೆ ಭಕ್ತಿವೃದ್ಧಿಯಾಗುವಂತೆ ಅದರ ಅರ್ಥವನ್ನು ಹೇಳದೆ ಹೋದರೆ, ಅವನಿಗಿಂತ ಪ್ರವಾದಿಸುವವನೇ ಶ್ರೇಷ್ಠನು.
6 ಹೀಗಿರುವುದರಿಂದ ಪ್ರಿಯರೇ, ನಾನು ನಿಮ್ಮ ಬಳಿಗೆ ಬಂದು ಪ್ರಕಟನೆಯಿಂದಾಗಲಿ, ವಿದ್ಯೆಯಿಂದಾಗಲಿ, ಪ್ರವಾದನೆಯಿಂದಾಗಲಿ, ಉಪದೇಶದಿಂದಾಗಲಿ ಮಾತನಾಡದೆ, ಅನ್ಯಭಾಷೆಗಳಿಂದ ಮಾತನಾಡುವವನಾಗಿದ್ದರೆ, ನನ್ನಿಂದ ನಿಮಗೇನು ಪ್ರಯೋಜನ?
7 ಕೊಳಲು, ವೀಣೆ ಮೊದಲಾದ ನಿರ್ಜೀವ ವಾದ್ಯಗಳ ಸ್ವರಗಳ ಹಾಗೆ, ವಿವಿಧ ಶೃತಿಗಳು ಕಂಡುಬರದಿದ್ದರೆ, ಊದಿದ್ದು ಕೊಳಲೋ ಅಥವಾ ಬಾರಿಸಿದ್ದು ವೀಣೆಯೋ ಎಂದು ತಿಳಿಯುವುದು ಹೇಗೆ?
8 ತುತೂರಿಯನ್ನು ಸ್ಪಷ್ಟವಾಗಿ ಊದದಿದ್ದರೆ, ಯಾರು ತಾನೇ ಯುದ್ಧಕ್ಕೆ ಸನ್ನದ್ಧರಾಗುವರು?
9 ಅದರಂತೆಯೇ, ನೀವೂ ಸ್ಪಷ್ಟವಾದ ಭಾಷೆಯಿಂದ ಮಾತನಾಡದೆ ಹೋದರೆ, ಮಾತನಾಡಿದ್ದು ಏನೆಂದು ತಿಳಿಯುವುದು ಹೇಗೆ? ನೀವು ಗಾಳಿಯ ಸಂಗಡ ಮಾತನಾಡಿದ ಹಾಗಿರುವುದಷ್ಟೆ.
10 ಲೋಕದಲ್ಲಿ ಎಷ್ಟು ವಿಧವಾದ ಭಾಷೆಗಳಿದ್ದರೂ, ಅವುಗಳಲ್ಲಿ ಒಂದಾದರೂ ಅರ್ಥರಹಿತವಾದುದಲ್ಲ.
11 ನಾನು ಭಾಷೆಯ ಅರ್ಥವನ್ನು ಗ್ರಹಿಸದಿದ್ದರೆ, ಮಾತಾಡುವವನಿಗೆ ನಾನು ಅನ್ಯದೇಶದವನಂತಿರುವೆನು, ಮಾತನಾಡುವವನು ನನಗೆ ಅನ್ಯದೇಶದವನಂತಿರುವನು.
12 ಅದರಂತೆಯೇ, ನೀವು ಸಹ ಆತ್ಮಿಕ ವರಗಳನ್ನು ಬಯಸುವುದರಿಂದ, ಸಭೆಗೆ ಭಕ್ತಿವೃದ್ಧಿ ಉಂಟುಮಾಡುವ ವರಗಳನ್ನೇ ಸಮೃದ್ಧವಾಗಿ ಪ್ರಯತ್ನಿಸಿರಿ.
13 ಆದ್ದರಿಂದ, ಅನ್ಯಭಾಷೆಗಳನ್ನಾಡುವವನು ತಾನಾಡುವ ಮಾತಿನ ಅರ್ಥವನ್ನು ಹೇಳುವುದಕ್ಕೆ ದೇವರನ್ನು ಪ್ರಾರ್ಥಿಸಲಿ.
14 ಏಕೆಂದರೆ ನಾನು ಅನ್ಯಭಾಷೆಗಳಲ್ಲಿ ಪ್ರಾರ್ಥಿಸಿದರೆ, ನನ್ನ ಆತ್ಮವು ಪ್ರಾರ್ಥಿಸುವುದು. ಆದರೆ ನನ್ನ ಬುದ್ಧಿ ನಿಷ್ಫಲವಾಗಿರುವುದು.
15 ಹಾಗಾದರೇನು? ನಾನು ಆತ್ಮದಿಂದ ಪ್ರಾರ್ಥಿಸುವೆನು, ಬುದ್ಧಿಯಿಂದಲೂ ಪ್ರಾರ್ಥಿಸುವೆನು. ಆತ್ಮದಿಂದ ಹಾಡುವೆನು, ಬುದ್ಧಿಯಿಂದಲೂ ಹಾಡುವೆನು.
16 ನೀನು ಆತ್ಮದಲ್ಲಿ ಮಾತ್ರ ಸ್ತೋತ್ರ ಮಾಡಿದರೆ, ತಿಳುವಳಿಕೆ ಇಲ್ಲದೆ ಕುಳಿತಿರುವವನು ನಿನ್ನ ಕೃತಜ್ಞತಾಸ್ತುತಿಗೆ, “ಆಮೆನ್” ಎಂದು ಹೇಳುವುದು ಹೇಗೆ?
17 ನೀನು ಚೆನ್ನಾಗಿ ಕೃತಜ್ಞತಾಸ್ತುತಿ ಮಾಡುತ್ತೀ ನಿಜವೇ. ಆದರೆ, ಮತ್ತೊಬ್ಬನಿಗೆ ಭಕ್ತಿವೃದ್ಧಿಯಾಗಲಿಲ್ಲ.
18 ನಾನು ನಿಮ್ಮೆಲ್ಲರಿಗಿಂತಲೂ ಹೆಚ್ಚಾಗಿ ಅನ್ಯಭಾಷೆಗಳನ್ನಾಡುತ್ತೇನೆಂದು ದೇವರಿಗೆ ಕೃತಜ್ಞತೆ ಮಾಡುತ್ತೇನೆ.
19 ಆದರೂ ಸಭೆಯಲ್ಲಿ ಅನ್ಯಭಾಷೆಗಳಿಂದ ಹತ್ತು ಸಾವಿರ ಮಾತುಗಳನ್ನಾಡುವುದಕ್ಕಿಂತ, ನನ್ನ ಬುದ್ಧಿಯಿಂದ ಐದೇ ಮಾತುಗಳನ್ನಾಡಿ, ಇತರರಿಗೆ ಉಪದೇಶ ಮಾಡುವುದನ್ನೇ ನಾನು ಇಷ್ಟಪಡುತ್ತೇನೆ.
20 ಸಹೋದರರೇ, ಮಕ್ಕಳಂತೆ ಯೋಚಿಸುವುದನ್ನು ಬಿಟ್ಟುಬಿಡಿರಿ. ಕೇಡಿನ ವಿಷಯದಲ್ಲಿ ಶಿಶುಗಳಂತೆ ಇದ್ದರೂ, ನಿಮ್ಮ ಯೋಚನೆಯಲ್ಲಿ ಪ್ರಾಯಸ್ಥರಾಗಿರಿ.
21 “ಬೇರೆಭಾಷೆಯವರ ಮೂಲಕವಾಗಿಯೂ
ವಿದೇಶದವರ ತುಟಿಗಳಿಂದಲೂ
ನಾನು ಈ ಜನರೊಡನೆ ಮಾತಾಡುವೆನು,
ಆದರೂ ಅವರು ನನಗೆ ಕಿವಿಗೊಡುವುದಿಲ್ಲವೆಂದು
ಕರ್ತದೇವರು ಹೇಳುತ್ತಾರೆ,”
ಎಂದು ನಿಯಮದಲ್ಲಿ ಬರೆದಿದೆ.
22 ಆದ್ದರಿಂದ, ಅನ್ಯಭಾಷೆಗಳನ್ನಾಡುವುದು ವಿಶ್ವಾಸಿಗಳಿಗೆ ಅಲ್ಲ, ಅವಿಶ್ವಾಸಿಗಳಿಗೆ ಸೂಚನೆಯಾಗಿದೆ. ಆದರೆ ಪ್ರವಾದಿಸುವುದು ಅವಿಶ್ವಾಸಿಗಳಿಗಲ್ಲ, ವಿಶ್ವಾಸಿಗಳಿಗೆ ಸೂಚನೆಯಾಗಿದೆ.
23 ಆದಕಾರಣ ಸಭೆಯೆಲ್ಲವೂ ಕೂಡಿಬಂದಾಗ ಎಲ್ಲರೂ ಅನ್ಯಭಾಷೆಗಳನ್ನಾಡಿದರೆ, ಅಜ್ಞಾನಿಗಳು ಇಲ್ಲವೆ ಅವಿಶ್ವಾಸಿಗಳು ಒಳಗೆ ಬಂದು, ನೀವು ಹುಚ್ಚರೆಂದು ಹೇಳುವುದಿಲ್ಲವೇ?
24 ಆದರೆ ನೀವೆಲ್ಲರೂ ಪ್ರವಾದಿಸುತ್ತಿರಲು, ಅವಿಶ್ವಾಸಿಯಾಗಲಿ, ಅನ್ವೇಷಕನಾಗಲಿ ಒಳಗೆ ಬಂದರೆ, ಅವನು ತಾನು ಪಾಪಿಯೆಂಬ ಮನವರಿಕೆಯನ್ನು ಹೊಂದುವನು. ಅವನು ಎಲ್ಲರ ಮಾತಿನಿಂದ ಪರಿಶೋಧಿತನಾಗುವನು.
25 ಅವನ ಹೃದಯದ ರಹಸ್ಯಗಳು ಬಯಲಾಗುವುವು. ಅವನು ಅಡ್ಡಬಿದ್ದು ದೇವರನ್ನು ಆರಾಧಿಸಿ, “ದೇವರು ನಿಜವಾಗಿಯೂ ನಿಮ್ಮ ಮಧ್ಯದಲ್ಲಿ ಇದ್ದಾರೆ!” ಎಂದು ಪ್ರಕಟಪಡಿಸುವನು.
ಆರಾಧನೆಯ ಕ್ರಮ
26 ಹಾಗಾದರೇನು ಪ್ರಿಯರೇ? ನೀವು ಸಭೆಯಾಗಿ ಕೂಡಿಬರುವಾಗ ಪ್ರತಿಯೊಬ್ಬನಿಗೆ ಕೀರ್ತನೆಯಾಗಲಿ, ಸಂದೇಶವಾಗಲಿ, ಪ್ರಕಟನೆಯಾಗಲಿ, ಅನ್ಯಭಾಷೆಯನ್ನಾಡುವುದಾಗಲಿ, ಅನ್ಯಭಾಷೆಗಳ ಅರ್ಥವನ್ನು ಹೇಳುವ ವರವಾಗಲಿ ಇರುತ್ತದಷ್ಟೆ. ಇವೆಲ್ಲವೂ ಸಭೆಗೆ ಭಕ್ತಿವೃದ್ಧಿಗಾಗಿಯೇ ಇರಲಿ.
27 ಯಾವನಾದರೂ ಅನ್ಯಭಾಷೆಗಳನ್ನಾಡುವುದಾದರೆ, ಇಬ್ಬರು ಅಥವಾ ಹೆಚ್ಚೆಂದರೆ ಮೂವರು ಒಬ್ಬೊಬ್ಬರಾಗಿ ಮಾತನಾಡಬೇಕು, ಒಬ್ಬನು ಅರ್ಥವನ್ನು ಹೇಳಲಿ.
28 ಅರ್ಥವನ್ನು ಹೇಳುವವನಿಲ್ಲದಿದ್ದರೆ, ಅನ್ಯಭಾಷೆಗಳನ್ನಾಡುವವನು ಸಭೆಯಲ್ಲಿ ಮೌನವಾಗಿರಲಿ. ಅವನು ತನ್ನೊಂದಿಗೂ ದೇವರೊಂದಿಗೂ ಮಾತನಾಡಿಕೊಳ್ಳಲಿ.
29 ಪ್ರವಾದಿಗಳು ಇಬ್ಬರಾಗಲಿ, ಮೂವರಾಗಲಿ ಮಾತಾಡಲಿ, ಇತರರರು ವಿವೇಚನೆ ಮಾಡಲಿ.
30 ಕುಳಿತಿರುವ ಮತ್ತೊಬ್ಬನಿಗೆ ಏನಾದರೂ ಪ್ರಕಟನೆಯಾದರೆ, ಮೊದಲಿನವನು ಮೌನವಾಗಿರಲಿ.
31 ಎಲ್ಲರೂ ಕಲಿತುಕೊಳ್ಳುವಂತೆಯೂ, ಎಲ್ಲರೂ ಪ್ರೋತ್ಸಾಹ ಹೊಂದುವಂತೆಯೂ, ನೀವೆಲ್ಲರು ಒಬ್ಬೊಬ್ಬರಾಗಿ ಪ್ರವಾದಿಸಿರಿ.
32 ಪ್ರವಾದಿಗಳ ಆತ್ಮಗಳು ಪ್ರವಾದಿಗಳ ಸ್ವಾಧೀನದಲ್ಲಿವೆ.
33 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ, ದೇವರು ಗಲಿಬಿಲಿಯ ದೇವರಲ್ಲ, ಸಮಾಧಾನದ ದೇವರಾಗಿದ್ದಾರೆ.
34 ದೇವಜನರ ಎಲ್ಲಾ ಸಭೆಗಳಲ್ಲಿರುವಂತೆ ಸ್ತ್ರೀಯರು ಸಭೆಯ ಕೂಟಗಳಲ್ಲಿ ಮೌನವಾಗಿರಲಿ. ಏಕೆಂದರೆ ಮಾತನಾಡಲು ಅವರಿಗೆ ಅನುಮತಿಯಿಲ್ಲ, ನಿಯಮವು ಸಹ ಹೇಳಿರುವಂತೆ ಅವರು ಅಧೀನರಾಗಿರಬೇಕು.
35 ಅವರು ಏನಾದರೂ ಕಲಿಯಬಯಸಿದರೆ, ಮನೆಯಲ್ಲಿ ಗಂಡಂದಿರನ್ನು ಕೇಳಲಿ. ಸ್ತ್ರೀಯರು ಸಭೆಯಲ್ಲಿ ಮಾತನಾಡುವುದು ನಾಚಿಕೆಪಡುವಂಥದಾಗಿದೆ.
36 ದೇವರ ವಾಕ್ಯವು ನಿಮ್ಮಿಂದ ಹೊರಟಿತೋ? ಅಥವಾ ಅದು ತಲುಪಿದ್ದು ನಿಮಗೆ ಮಾತ್ರವೋ?
37 ಯಾವನಾದರೂ ತನ್ನನ್ನು ಪ್ರವಾದಿಯೆಂದಾಗಲಿ, ಆತ್ಮನ ವರಗಳನ್ನು ಹೊದಿದವನೆಂದಾಗಲಿ ಭಾವಿಸುವುದಾದರೆ, ನಾನು ನಿಮಗೆ ಬರೆದಿರುವ ಸಂಗತಿಗಳು ಕರ್ತದೇವರ ಆಜ್ಞೆಗಳೆಂದು ಸ್ಪಷ್ಟವಾಗಿ ತಿಳಿದುಕೊಳ್ಳಲಿ.
38 ಆದರೆ ಯಾರಾದರೂ ಇದನ್ನು ತಿರಸ್ಕಸಿದರೆ, ಅವರೂ ತಿರಸ್ಕಾರಕ್ಕೆ ಗುರಿಯಾಗುವರು.
39 ಆದಕಾರಣ ನನ್ನ ಪ್ರಿಯರೇ, ಪ್ರವಾದಿಸುವ ವರಕ್ಕಾಗಿ ಆಸಕ್ತರಾಗಿರಿ. ಅನ್ಯಭಾಷೆಯನ್ನಾಡುವುದಕ್ಕೆ ಅಡ್ಡಿಮಾಡಬೇಡಿರಿ.
40 ಆದರೆ ಎಲ್ಲವನ್ನೂ ಯೋಗ್ಯವಾಗಿಯೂ ಕ್ರಮವಾಗಿಯೂ ಮಾಡಿರಿ.