4
ಕ್ರಿಸ್ತ ಯೇಸುವಿನ ಅಪೊಸ್ತಲರು
1 ಆದ್ದರಿಂದ ನೀವು ಈ ರೀತಿಯಾಗಿ ನಮ್ಮನ್ನು ಪರಿಗಣಿಸಬೇಕು: ನಾವು ಕ್ರಿಸ್ತ ಯೇಸುವಿನ ದಾಸರೆಂತಲೂ ದೇವರ ರಹಸ್ಯಗಳ ನಂಬಿಗಸ್ತ ನಿರ್ವಾಹಕರೆಂದೂ ಪರಿಗಣಿಸಿರಿ.
2 ಹೀಗಿರುವುದರಿಂದ ನಂಬಿಗಸ್ತರಾಗಿರುವುದು ನಿರ್ವಾಹಕರಲ್ಲಿ ಅವಶ್ಯವಾಗಿ ಕಾಣತಕ್ಕ ಸದ್ಗುಣವಾಗಿದೆ.
3 ನನಗಾದರೋ ನಿಮ್ಮಿಂದಾಗಲಿ, ಮನುಷ್ಯರ ನ್ಯಾಯಾಲಯದಿಂದಾಗಲಿ ವಿಚಾರಣೆಯಾಗುವುದು ಅತ್ಯಲ್ಪ ಕಾರ್ಯವಾಗಿದೆ. ನನ್ನನ್ನು ನಾನೇ ನ್ಯಾಯತೀರ್ಪು ಮಾಡಿಕೊಳ್ಳುವುದೂ ಇಲ್ಲ.
4 ನನ್ನ ಮನಸ್ಸಾಕ್ಷಿಯು ಶುದ್ಧವಾಗಿದೆ. ಆದರೆ ಅದು ನನ್ನನ್ನು ನಿರ್ದೋಷಿಯೆಂದು ಹೇಳುವಂತಿಲ್ಲ. ನನ್ನ ನ್ಯಾಯತೀರಿಸುವವರು ಕರ್ತದೇವರೇ,
5 ಆದುದರಿಂದ ನೀವು ಕಾಲಕ್ಕೆ ಮೊದಲು ಯಾವುದನ್ನು ಕುರಿತೂ ತೀರ್ಪುಮಾಡದೆ, ಕರ್ತದೇವರ ಬರುವಿಕೆಗಾಗಿ ಕಾಯಿರಿ. ಅವರು ಕತ್ತಲಲ್ಲಿರುವ ಗುಪ್ತ ಕಾರ್ಯಗಳನ್ನು ಬೆಳಕಿಗೆ ತಂದು ಮನುಷ್ಯನ ಹೃದಯದ ಉದ್ದೇಶಗಳನ್ನು ಪ್ರತ್ಯಕ್ಷಪಡಿಸುವರು. ಆಗ ಪ್ರತಿಯೊಬ್ಬನಿಗೆ ಬರತಕ್ಕ ಹೊಗಳಿಕೆಯು ದೇವರಿಂದ ಬರುವುದು.
6 ಪ್ರಿಯರೇ, ನಾನು ನಿಮ್ಮ ಪ್ರಯೋಜನಕ್ಕಾಗಿ ಇವುಗಳನ್ನು ದೃಷ್ಟಾಂತರೂಪವಾಗಿ ನನ್ನ ವಿಷಯದಲ್ಲಿಯೂ ಅಪೊಲ್ಲೋಸನ ವಿಷಯದಲ್ಲಿಯೂ ಹೇಳಿದ್ದೇನೆ. “ನೀವು ಬರೆದಿರುವುದಕ್ಕೆ ಮೀರಿ ಹೋಗಬಾರದು,” ಎಂಬ ಹೇಳಿಕೆಯ ಅರ್ಥವನ್ನು ನಮ್ಮಿಂದ ಕಲಿತುಕೊಳ್ಳಬಹುದು. ಆಗ ನಿಮ್ಮಲ್ಲಿ ಒಬ್ಬರು ಮತ್ತೊಬ್ಬರನ್ನು ಅನುಸರಿಸುತ್ತಿದ್ದೇವೆಂದು ಹೇಳಿಕೊಳ್ಳುವುದರ ವಿರೋಧವಾಗಿ ಹೆಮ್ಮೆ ಪಡುವುದಿಲ್ಲ.
7 ನಿಮ್ಮನ್ನು ಇತರರಿಗಿಂತಲೂ ವ್ಯತ್ಯಾಸವುಳ್ಳವರಾಗಿ ಮಾಡಿದವರು ಯಾರು? ನೀವು ದೇವರಿಂದ ಪಡೆಯದಿರುವಂಥದು ನಿಮ್ಮಲ್ಲಿ ಯಾವುದಾದರೂ ಇದೆಯೇ? ಹೀಗೆ ಎಲ್ಲವನ್ನೂ ಪಡೆದ ಮೇಲೆ, ಪಡೆಯದವರಂತೆ ನೀವು ಹೆಮ್ಮೆ ಪಟ್ಟುಕೊಳ್ಳುವುದೇಕೆ?
8 ಈಗ ನೀವು ತೃಪ್ತರಾಗಿದ್ದೀರಿ! ಈಗಾಗಲೇ ಐಶ್ವರ್ಯವಂತರಾಗಿದ್ದೀರಿ. ನಮ್ಮ ಸಹಾಯವಿಲ್ಲದೆ ಆಳುತ್ತಿದ್ದೀರಿ. ನೀವು ನಿಜವಾಗಿಯೂ ಅರಸರಾಗಿದ್ದರೆ, ನಾವು ಸಹ ನಿಮ್ಮೊಂದಿಗೆ ಸೇರಿ ಆಳುತ್ತಿದ್ದೇವಲ್ಲವೇ?
9 ಅಪೊಸ್ತಲರಾದ ನಮ್ಮನ್ನು ಮರಣದಂಡನೆ ಹೊಂದಿದವರಂತೆ ದೇವರು ಮೆರವಣಿಗೆಯ ಕಡೆಯವರನ್ನಾಗಿ ಮಾಡಿ ತೋರಿಸಿದ್ದಾರೆಂದು ನನಗನಿಸುತ್ತದೆ. ಏಕೆಂದರೆ, ದೇವರು ನಮ್ಮನ್ನು ದೇವದೂತರಿಗೂ ಮನುಷ್ಯರಿಗೂ ಇಡೀ ಜಗತ್ತಿಗೂ ಹಾಸ್ಯಾಸ್ಪದವಾದ ನೋಟವನ್ನಾಗಿ ಮಾಡಿದ್ದಾರೆ.
10 ನಾವು ಕ್ರಿಸ್ತ ಯೇಸುವಿನ ನಿಮಿತ್ತ ಮೂರ್ಖರಾಗಿದ್ದೇವೆ! ನೀವೋ ಕ್ರಿಸ್ತ ಯೇಸುವಿನಲ್ಲಿ ಬುದ್ಧಿವಂತರು, ನಾವೋ ಬಲಹೀನರು. ನೀವು ಬಲಿಷ್ಠರು, ನೀವು ಮಾನವಂತರು, ನಾವೋ ಮಾನಹೀನರು!
11 ಈ ಗಳಿಗೆಯವರೆಗೂ ನಾವು ಹಸಿದು ಬಾಯಾರಿದವರೂ, ಸಾಕಷ್ಟು ವಸ್ತ್ರವಿಲ್ಲದವರೂ, ಕ್ರೂರವಾಗಿ ಪೆಟ್ಟಿಗೆ ಗುರಿಯಾಗುವವರೂ, ಮನೆಯಿಲ್ಲದವರೂ,
12 ಸ್ವಂತ ಕೈಯಿಂದ ಕೆಲಸಮಾಡಿ ದುಡಿಯುವವರೂ ಆಗಿದ್ದೇವೆ. ಶಪಿಸಿಕೊಂಡು ಆಶೀರ್ವದಿಸುತ್ತೇವೆ, ಹಿಂಸೆಪಟ್ಟು ಸಹಿಸಿಕೊಳ್ಳುತ್ತೇವೆ,
13 ಅಪಕೀರ್ತಿ ಹೊಂದಿ ಸಮಾಧಾನವಾಗುತ್ತೇವೆ. ನಾವು ಈಗಿನ ವರೆಗೂ ಭೂಮಿಯ ಕಸವೋ ವಿಶ್ವದ ಹೊಲಸೋ ಎಂಬಂತೆ ಆಗಿದ್ದೇವೆ.
ಪೌಲನ ಬೇಡಿಕೆ ಹಾಗೂ ಬುದ್ಧಿಮಾತುಗಳು
14 ನಾನು ನಿಮ್ಮನ್ನು ನಾಚಿಕೆಪಡಿಸುವುದಕ್ಕಾಗಿ ಬರೆಯದೆ, ನನ್ನ ಪ್ರಿಯ ಮಕ್ಕಳೆಂದು ನಿಮಗೆ ಬುದ್ಧಿ ಹೇಳುತ್ತೇನಷ್ಟೆ.
15 ಏಕೆಂದರೆ, ನಿಮಗೆ ಕ್ರಿಸ್ತ ಯೇಸುವಿನಲ್ಲಿ ಹತ್ತು ಸಾವಿರ ಮಂದಿ ಪೋಷಕರು ಇದ್ದರೂ, ತಂದೆಗಳು ಬಹುಮಂದಿ ಇಲ್ಲ. ಸುವಾರ್ತೆಯ ಮೂಲಕ ಕ್ರಿಸ್ತ ಯೇಸುವಿನಲ್ಲಿ ನಾನು ನಿಮ್ಮ ತಂದೆಯಾದೆನು.
16 ಆದ್ದರಿಂದ ನೀವು ನನ್ನನ್ನು ಅನುಕರಣೆ ಮಾಡುವವರಾಗಿ ಇರಬೇಕು ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ.
17 ಇದರ ನಿಮಿತ್ತವೇ ಕರ್ತ ದೇವರಲ್ಲಿ ನಂಬಿಗಸ್ತನಾಗಿರುವ ನನ್ನ ಮಗ ತಿಮೊಥೆಯನನ್ನು ನಿಮ್ಮ ಬಳಿಗೆ ಕಳುಹಿಸಿಕೊಟ್ಟಿದ್ದೇನೆ. ಅವನು ನನಗೆ ಪ್ರಿಯನಾಗಿದ್ದಾನೆ. ನಾನು ಎಲ್ಲಾ ಕಡೆಗಳಲ್ಲಿಯೂ ಪ್ರತಿಯೊಂದು ಸಭೆಯಲ್ಲಿಯೂ ಬೋಧಿಸುವುದರ ಪ್ರಕಾರ, ಅವನು ಕ್ರಿಸ್ತ ಯೇಸುವಿನಲ್ಲಿರುವ ನನ್ನ ನಡವಳಿಕೆಯನ್ನು, ನಿಮ್ಮ ನೆನಪಿಗೆ ತರುವನು.
18 ನಾನು ನಿಮ್ಮಲ್ಲಿಗೆ ಬರುವುದಿಲ್ಲವೆಂದು ಕೆಲವರು ಅಹಂಕಾರಿಗಳಾಗಿದ್ದಾರೆ.
19 ಆದರೆ ಕರ್ತದೇವರ ಚಿತ್ತವಿದ್ದರೆ, ನಾನು ಬೇಗ ನಿಮ್ಮ ಬಳಿಗೆ ಬಂದು, ಅಹಂಕಾರಿಗಳ ಮಾತನ್ನಲ್ಲ, ಅವರಿಗೆ ಎಷ್ಟು ಶಕ್ತಿ ಇದೆ ಎಂಬುವುದನ್ನು ಕಂಡುಕೊಳ್ಳುವೆನು.
20 ಏಕೆಂದರೆ ದೇವರ ರಾಜ್ಯವು ಮಾತಿನಲ್ಲಿ ಅಲ್ಲ, ಶಕ್ತಿಯಲ್ಲಿ ಇದೆ.
21 ಶಿಸ್ತಿನ ಬೆತ್ತವನ್ನು ಹಿಡಿದು ಬಿಗಿಯಲು ನಿಮ್ಮ ಬಳಿ ಬರಲೋ? ಅಥವಾ ಪ್ರೀತಿ ಸೌಮ್ಯದಿಂದ ಬರಲೋ? ನಿಮಗೆ ಯಾವುದು ಇಷ್ಟ?