29
ಒಡಂಬಡಿಕೆಯ ನವೀಕರಣ
1 ಯೆಹೋವ ದೇವರು ಹೋರೇಬಿನಲ್ಲಿ ಇಸ್ರಾಯೇಲರ ಸಂಗಡ ಮಾಡಿದ ಒಡಂಬಡಿಕೆ ಅಲ್ಲದೆ ಅವರು ಮೋವಾಬ್ ದೇಶದಲ್ಲಿ ಇಸ್ರಾಯೇಲರೊಡನೆ ಮಾಡಬೇಕೆಂದು ಮೋಶೆಗೆ ಆಜ್ಞಾಪಿಸಿದ ಒಡಂಬಡಿಕೆಯ ಮಾತುಗಳು ಇವೇ:
2 ಮೋಶೆಯು ಎಲ್ಲಾ ಇಸ್ರಾಯೇಲರನ್ನು ಕರೆದು ಅವರಿಗೆ ಹೀಗೆ ಹೇಳಿದನು:
ಯೆಹೋವ ದೇವರು ಈಜಿಪ್ಟ್ ದೇಶದಲ್ಲಿ ನಿಮ್ಮ ಕಣ್ಣು ಮುಂದೆಯೇ ಫರೋಹನಿಗೂ ಅವನ ಎಲ್ಲಾ ಸೇವಕರಿಗೂ ಅವನ ಎಲ್ಲಾ ದೇಶಕ್ಕೂ ಮಾಡಿದವುಗಳನ್ನೆಲ್ಲಾ ನೋಡಿದ್ದೀರಿ.
3 ಆ ದೊಡ್ಡ ಪರಿಶೋಧನೆಗಳನ್ನೂ ಆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಗಳನ್ನೂ ನಿಮ್ಮ ಕಣ್ಣಾರೆ ನೋಡಿದ್ದೀರಿ.
4 ಆದರೂ ಯೆಹೋವ ದೇವರು ಇಂದಿನವರೆಗೂ ತಿಳಿದುಕೊಳ್ಳುವ ಹೃದಯವನ್ನೂ ನೋಡುವ ಕಣ್ಣುಗಳನ್ನೂ ಕೇಳುವ ಕಿವಿಗಳನ್ನೂ ನಿಮಗೆ ಕೊಡಲಿಲ್ಲವಲ್ಲ!
5 “ನಾನು ನಲವತ್ತು ವರ್ಷ ನಿಮ್ಮನ್ನು ಮರುಭೂಮಿಯಲ್ಲಿ ನಡೆಸಿದೆನು. ನಿಮ್ಮ ಮೇಲಿರುವ ವಸ್ತ್ರಗಳು ಹರಿಯಲಿಲ್ಲ. ನಿಮ್ಮ ಪಾದಗಳಲ್ಲಿದ್ದ ಕೆರವಾಗಲಿ ಸವೆದುಹೋಗಲಿಲ್ಲ.
6 ನೀವು ರೊಟ್ಟಿ ತಿನ್ನಲಿಲ್ಲ; ದ್ರಾಕ್ಷಾರಸವನ್ನಾಗಲಿ, ಯಾವ ಮದ್ಯವನ್ನಾಗಲಿ ಕುಡಿಯಲೇ ಇಲ್ಲ. ಯೆಹೋವ ದೇವರೇ ನಿಮ್ಮ ದೇವರು ಎಂಬುದು ನಿಮಗೆ ತಿಳಿಯಬೇಕೆಂಬ ಉದ್ದೇಶದಿಂದ ಹೀಗಾಯಿತು.”
7 ನೀವು ಈ ಸ್ಥಳಕ್ಕೆ ಬಂದಾಗ, ಹೆಷ್ಬೋನಿನ ಅರಸನಾದ ಸೀಹೋನನೂ, ಬಾಷಾನಿನ ಅರಸನಾದ ಓಗನೂ ನಮ್ಮೆದುರಿಗೆ ಯುದ್ಧಕ್ಕೆ ಹೊರಟರು. ನಾವು ಅವರನ್ನು ಸೋಲಿಸಿ,
8 ಅವರ ದೇಶವನ್ನು ತೆಗೆದುಕೊಂಡು ರೂಬೇನ್ಯರಿಗೂ ಗಾದನವರಿಗೂ ಮನಸ್ಸೆಯ ಅರ್ಧ ಗೋತ್ರಕ್ಕೂ ಸೊತ್ತಾಗಿ ಕೊಟ್ಟೆವು.
9 ಹೀಗಿರುವುದರಿಂದ ನೀವು ಮಾಡುವ ಎಲ್ಲದರಲ್ಲಿಯೂ ಸಫಲವಾಗುವಂತೆ ಈ ಒಡಂಬಡಿಕೆಯ ಮಾತುಗಳನ್ನು ಕೇಳಿ ನಡೆಯಬೇಕು.
10 ನೀವೆಲ್ಲರು ಈ ಹೊತ್ತು ನಿಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತಿದ್ದೀರಿ. ನಿಮ್ಮ ಗೋತ್ರಗಳ ಮುಖ್ಯಸ್ಥರೂ ಹಿರಿಯರೂ ಅಧಿಕಾರಿಗಳೂ ಇಸ್ರಾಯೇಲಿನ ಜನರೆಲ್ಲರೂ
11 ನಿಮ್ಮ ಮಕ್ಕಳೂ ಹೆಂಡತಿಯರೂ ನಿಮ್ಮ ಪಾಳೆಯದಲ್ಲಿರುವ ಪರದೇಶಿಯರೂ ನಿಮಗಾಗಿ ಕಟ್ಟಿಗೆ ಕಡಿಯುವವರೂ ನೀರು ಸೇದುವವರೂ ಸಹ
12 ನಿಮ್ಮ ದೇವರಾದ ಯೆಹೋವ ದೇವರು ಈ ಹೊತ್ತು ನಿಮ್ಮ ಸಂಗಡ ಮಾಡಿಕೊಳ್ಳುವ ಒಡಂಬಡಿಕೆಯನ್ನು ಸೇರುವುದಕ್ಕೆ ಅವರು ಆಣೆಯಿಟ್ಟು ಮುದ್ರಿಸಿದ್ದಾರೆ.
13 ಆ ಒಡಂಬಡಿಕೆ ಯಾವುದೆಂದರೆ, ದೇವರು ನಿಮಗೆ ಹೇಳಿದಂತೆಯೂ, ನಿಮ್ಮ ಪಿತೃಗಳಾದ ಅಬ್ರಹಾಮನಿಗೂ, ಇಸಾಕನಿಗೂ, ಯಾಕೋಬನಿಗೂ ಪ್ರಮಾಣ ಮಾಡಿದಂತೆಯೂ, ಈ ಹೊತ್ತು ನಿಮ್ಮನ್ನು ತಮ್ಮ ಜನರನ್ನಾಗಿ ಸ್ಥಾಪಿಸಿ, ನಿಮಗೆ ದೇವರಾಗಬೇಕೆಂಬುದೇ.
14 ಇದಲ್ಲದೆ ನಿಮ್ಮ ಸಂಗಡ ಮಾತ್ರ ಈ ಒಡಂಬಡಿಕೆಯನ್ನೂ, ಈ ಆಣೆಯನ್ನೂ ಮಾಡುವುದಲ್ಲದೆ
15 ಈ ಹೊತ್ತು ಇಲ್ಲಿ ನಮ್ಮೊಡನೆ ನಮ್ಮ ದೇವರಾದ ಯೆಹೋವ ದೇವರ ಮುಂದೆ ನಿಂತವರ ಸಂಗಡ, ಈ ಹೊತ್ತು ಇಲ್ಲಿ ನಮ್ಮೊಡನೆ ಇಲ್ಲದವರ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ.
16 ಏಕೆಂದರೆ ನಾವು ಈಜಿಪ್ಟ್ ದೇಶದಲ್ಲಿ ಹೇಗೆ ವಾಸವಾಗಿದ್ದೆವೆಂದೂ, ನೀವು ದಾಟಿಬಂದ ಜನಾಂಗಗಳನ್ನು ನಾವು ಹೇಗೆ ದಾಟಿ ಬಂದೆವೆಂದೂ ನಿಮಗೆ ತಿಳಿದಿದೆ.
17 ಅವರ ಬಳಿಯಲ್ಲಿರುವ ಮರ, ಕಲ್ಲು, ಬೆಳ್ಳಿ, ಬಂಗಾರಗಳ ಅಸಹ್ಯವಾದ ಬೊಂಬೆಗಳನ್ನೂ ನೀವು ನೋಡಿದ್ದೀರಲ್ಲವೇ?
18 ಈ ಹೊತ್ತು ನಮ್ಮ ದೇವರಾದ ಯೆಹೋವ ದೇವರನ್ನು ಬಿಟ್ಟು ಆ ಜನಾಂಗಗಳ ದೇವರುಗಳಿಗೆ ಸೇವೆ ಮಾಡುವುದಕ್ಕೆ ತಿರುಗಿಕೊಳ್ಳುವ ಹೃದಯವುಳ್ಳ ಪುರುಷನಾದರೂ ಸ್ತ್ರೀಯಾದರೂ ಕುಟುಂಬವಾದರೂ ಗೋತ್ರವಾದರೂ ಇರಬಾರದು. ಈ ಘೋರ ವಿಷವನ್ನೂ, ಬೆಳೆಸುವ ಬೇರೂ ನಿಮ್ಮಲ್ಲಿ ಇರಬಾರದು.
19 ಶಾಪದಿಂದ ಕೂಡಿರುವ ಈ ಪ್ರತಿಜ್ಞೆಯನ್ನು ಕೇಳಿದ ಯಾವನಾದರೂ ತನ್ನೊಳಗೆ, “ನಾನು ಹಟ ಹಿಡಿದು, ಅವಿಧೇಯನಾದರೂ ನನಗೆ ಕ್ಷೇಮವೇ,” ಎಂದು ಹೇಳಿಕೊಂಡು ತನ್ನ ಹೃದಯದಲ್ಲಿ ತನ್ನನ್ನು ಆಶೀರ್ವದಿಸಿಕೊಳ್ಳುವವನು ಇರಬಾರದು. ಅಂಥವನು ನೀರಾವರಿ ನಾಡಿಗೂ ಒಣ ನಾಡಿಗೂ ನಾಶನವನ್ನು ತರುವನು.
20 ಅಂಥವನನ್ನು ಯೆಹೋವ ದೇವರು ಉಳಿಸುವುದಿಲ್ಲ, ಆಗಲೇ ಯೆಹೋವ ದೇವರ ಕೋಪವೂ, ರೋಷವೂ ಆ ಮನುಷ್ಯನನ್ನು ಸುಡುವುದು. ಈ ಗ್ರಂಥದಲ್ಲಿ ಬರೆದಿರುವ ಶಾಪವೆಲ್ಲಾ ಅವನ ಮೇಲೆ ಬರುವುದು. ಯೆಹೋವ ದೇವರು ಅವನ ಹೆಸರನ್ನು ಆಕಾಶದ ಕೆಳಗಿನಿಂದ ಅಳಿಸಿಬಿಡುವರು.
21 ಈ ನಿಯಮದ ಗ್ರಂಥದಲ್ಲಿ ಬರೆದಿರುವ ಒಡಂಬಡಿಕೆಯ ಎಲ್ಲಾ ಶಾಪಗಳ ಪ್ರಕಾರ ಯೆಹೋವ ದೇವರು ಅವನನ್ನು ಇಸ್ರಾಯೇಲಿನ ಎಲ್ಲಾ ಗೋತ್ರಗಳೊಳಗಿಂದ ಕೇಡಿಗೆ ಪ್ರತ್ಯೇಕಿಸುವರು.
22 ಹೀಗೆ ನಿಮ್ಮ ತರುವಾಯ ಹುಟ್ಟುವ ನಿಮ್ಮ ಮಕ್ಕಳ ಮುಂದಿನ ಸಂತತಿಯೂ, ದೂರದೇಶದಿಂದ ಬರುವ ಅನ್ಯನೂ, ಆ ದೇಶದ ವಿಪತ್ತುಗಳನ್ನೂ, ಯೆಹೋವ ದೇವರು ಅದರಲ್ಲಿ ಬರಮಾಡಿದ ರೋಗಗಳನ್ನೂ ನೋಡುವರು.
23 ಯೆಹೋವ ದೇವರು ತಮ್ಮ ದೈವಿಕ ಕೋಪದಲ್ಲಿ ಕೆಡವಿ ಹಾಕಿದ ಸೊದೋಮ್, ಗೊಮೋರ, ಅದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಂತೆ ಆ ದೇಶವೆಲ್ಲಾ ಗಂಧಕವೂ, ಉಪ್ಪೂ ಉರಿಯುತ್ತಾ, ವ್ಯವಸಾಯವಾದರೂ ಹುಲ್ಲಾದರೂ ಬೆಳೆಯದೆ ಇರುವುದು.
24 ಆಗ ಎಲ್ಲಾ ದೇಶದವರೂ, “ಯೆಹೋವ ದೇವರು ಈ ದೇಶಕ್ಕೆ ಏಕೆ ಹೀಗೆ ಮಾಡಿದ್ದಾರೆ? ಈ ದೊಡ್ಡ ಕೋಪಾಗ್ನಿಗೆ ಕಾರಣವೇನು?” ಎಂದು ಕೇಳುವರು.
25 ಆಗ ಜನರು, “ಇಸ್ರಾಯೇಲರು ತಮ್ಮನ್ನು ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದ ತಮ್ಮ ಪಿತೃಗಳ ದೇವರಾದ ಯೆಹೋವ ದೇವರು ತಮ್ಮ ಸಂಗಡ ಮಾಡಿದ ಒಡಂಬಡಿಕೆಯನ್ನು ಉಲ್ಲಂಘಿಸಿದ್ದಾರೆ.
26 ಅವರು ತಮಗೆ ನೇಮಕವಾಗದಿದ್ದ ಹಾಗು ಗೊತ್ತಿಲ್ಲದಿದ್ದ ಇತರ ದೇವರುಗಳನ್ನು ಅವಲಂಬಿಸಿ ಪೂಜಿಸಿದ್ದಾರೆ.
27 ಆದ್ದರಿಂದ ಯೆಹೋವ ದೇವರು ಇಸ್ರಾಯೇಲ್ ದೇಶದ ಮೇಲೆ ಕೋಪಗೊಂಡು ಈ ಗ್ರಂಥದಲ್ಲಿ ಬರೆದಿರುವ ಶಾಪಗಳನ್ನು ಅವರ ಮೇಲೆ ಬರಮಾಡಿದ್ದಾರೆ.
28 ಯೆಹೋವ ದೇವರು ಅವರನ್ನು ತೀವ್ರಕೋಪದಲ್ಲಿಯೂ, ಮಹಾ ಆಸಕ್ತಿಯಲ್ಲಿಯೂ ದೇಶದಿಂದ ಕಿತ್ತುಹಾಕಿ, ಇಂದು ಇರುವ ಪ್ರಕಾರ ಅವರನ್ನು ಬೇರೆ ದೇಶಕ್ಕೆ ಕಳುಹಿಸಿದ್ದಾರೆ.”
29 ರಹಸ್ಯಗಳು ನಮ್ಮ ದೇವರಾದ ಯೆಹೋವ ದೇವರಿಗೆ ಸೇರಿದ್ದು, ಆದರೆ ಪ್ರಕಟವಾದ ಈ ನಿಯಮದ ಮಾತುಗಳನ್ನೆಲ್ಲಾ ನಾವು ಕೈಕೊಳ್ಳುವ ಹಾಗೆ ನಮಗೂ, ನಮ್ಮ ಮಕ್ಕಳಿಗೂ ನಿತ್ಯವಾಗಿ ಇರುತ್ತವೆ.