9
ಎಲ್ಲರ ಅಂತ್ಯಸ್ಥಿತಿಯೂ ಒಂದೇ
1 ನಾನು ಇವೆಲ್ಲವುಗಳ ಮೇಲೆ ಅಭ್ಯಾಸ ಮಾಡಿ ಈ ತೀರ್ಮಾನಕ್ಕೆ ಬಂದೆನು. ಅದೇನೆಂದರೆ, ನೀತಿವಂತರ ಮತ್ತು ಜ್ಞಾನಿಗಳ ಕೆಲಸಗಳು ದೇವರ ಕೈಯಲ್ಲಿವೆ. ಆದರೆ ಅವರಿಗೆ ಪ್ರೀತಿ ಕಾದಿದೆಯೋ ಅಥವಾ ದ್ವೇಷ ಕಾದಿದೆಯೋ ಎಂದು ಯಾರಿಗೂ ಗೊತ್ತಿಲ್ಲ.
2 ಎಲ್ಲವೂ ಎಲ್ಲರಿಗೂ ಒಂದೇ ಬಗೆಯಾಗಿ ಸಂಭವಿಸುವುದು. ನೀತಿವಂತನಿಗೂ ದುಷ್ಟನಿಗೂ ಒಳ್ಳೆಯವನಿಗೂ ಕೆಟ್ಟವನಿಗೂ ಶುದ್ಧನಿಗೂ ಅಶುದ್ಧನಿಗೂ ಮತ್ತು ಯಜ್ಞ ಅರ್ಪಿಸುವವನಿಗೂ ಅರ್ಪಿಸದವನಿಗೂ ಒಂದೇ ಗತಿಯಾಗುವುದು.
ಒಳ್ಳೆಯವನಿಗೆ ಹೇಗೋ
ಹಾಗೆಯೇ ಪಾಪಿಗೂ ಇರುವುದು.
ಆಣೆಯಿಡುವವನಿಗೆ ಹೇಗೋ ಹಾಗೆಯೇ,
ಆಣೆಯಿಡಲು ಭಯಪಡುವವನಿಗೂ ಇರುವುದು.
3 ಸೂರ್ಯನ ಕೆಳಗೆ ಮಾಡುವ ಎಲ್ಲಾ ಸಂಗತಿಗಳಲ್ಲಿಯೂ ಇದೂ ಒಂದು ವ್ಯಸನವು. ಎಲ್ಲರಿಗೂ ಒಂದೇ ಗತಿ ಇದೆ. ಹೌದು, ಮನುಷ್ಯರ ಹೃದಯದಲ್ಲಿ ಕೆಟ್ಟತನ ತುಂಬಿವೆ. ಅವರು ಬದುಕಿರುವ ತನಕ ಅವರ ಹೃದಯಗಳಲ್ಲಿ ಹುಚ್ಚುತನವಿದೆ. ಅನಂತರ ಅವರು ಸಾಯುತ್ತಾರೆ.
4 ಜೀವಂತರ ಗುಂಪಿಗೆ ಸೇರಿಕೊಂಡವನಿಗೆ ನಿರೀಕ್ಷೆ ಇರುವುದು. ಸತ್ತ ಸಿಂಹಕ್ಕಿಂತ ಬದುಕಿರುವ ನಾಯಿಯೇ ಉತ್ತಮ.
5 ಬದುಕಿರುವವರು ತಾವು ಸಾಯುತ್ತೇವೆಂದು ತಿಳಿದಿದ್ದಾರೆ,
ಆದರೆ ಸತ್ತವರಿಗೆ ಏನೂ ತಿಳಿಯದು;
ಅವರಿಗೆ ಇನ್ನು ಮೇಲೆ ಪ್ರತಿಫಲ ಇಲ್ಲ.
ಅವರ ಹೆಸರನ್ನು ಸಹ ಜನರು ಮರೆತುಬಿಡುತ್ತಾರೆ.
6 ಅವರ ಪ್ರೀತಿಯೂ ಅವರ ದ್ವೇಷವೂ
ಅವರ ಅಸೂಯೆ ಕೂಡ, ಅವರು ಸತ್ತಾಗಲೇ ಅಳಿದುಹೋಗುತ್ತವೆ.
ಸೂರ್ಯನ ಕೆಳಗೆ ನಡೆಯುವ ಯಾವ ಸಂಗತಿಗಳಲ್ಲಿಯೂ
ಸತ್ತವರಿಗೆ ಇನ್ನೆಂದಿಗೂ ಪಾಲು ಇಲ್ಲ.
7 ನೀನು ಹೋಗಿ ನಿನ್ನ ಆಹಾರವನ್ನು ಸಂತೋಷದಿಂದ ತಿಂದು ಹರ್ಷ ಹೃದಯದಿಂದ ನಿನ್ನ ದ್ರಾಕ್ಷಾರಸವನ್ನು ಕುಡಿ. ಏಕೆಂದರೆ ನಿನ್ನ ಕೆಲಸಗಳನ್ನು ದೇವರು ಈಗಾಗಲೇ ಮೆಚ್ಚಿಕೊಂಡಿದ್ದಾರೆ.
8 ನಿನ್ನ ವಸ್ತ್ರಗಳು ಯಾವಾಗಲೂ ಬಿಳುಪಾಗಿರಲಿ, ನಿನ್ನ ತಲೆಗೆ ಯಾವಾಗಲೂ ಎಣ್ಣೆ ಹಚ್ಚಿರಲಿ.
9 ಈ ನಿರರ್ಥಕವಾದ ಎಲ್ಲಾ ದಿನಗಳಲ್ಲಿ ಸೂರ್ಯನ ಕೆಳಗೆ ದೇವರು ನಿನಗೆ ಕೊಟ್ಟ ಜೀವನದ ಎಲ್ಲಾ ದಿನಗಳಲ್ಲಿ, ನೀನು ಪ್ರೀತಿಸುವ ನಿನ್ನ ಹೆಂಡತಿಯೊಡನೆ ಆನಂದದಿಂದ ವಾಸಿಸು. ಸೂರ್ಯನ ಕೆಳಗೆ ನೀನು ಪಡುವ ನಿನ್ನ ಜೀವನದ ಕಷ್ಟದಲ್ಲಿ ಇದೇ ನಿನ್ನ ಪಾಲಾಗಿದೆ.
10 ನಿನ್ನ ಕೈಗೆ ಸಿಕ್ಕಿದ ಕೆಲಸವನ್ನೆಲ್ಲಾ ನಿನ್ನ ಪೂರ್ಣ ಶಕ್ತಿಯಿಂದ ಮಾಡು. ಏಕೆಂದರೆ ನೀನು ಹೋಗಲಿರುವ ಸಮಾಧಿಯಲ್ಲಿ, ಕೆಲಸವೂ ಯೋಜನೆಯೂ ತಿಳುವಳಿಕೆಯೂ ಜ್ಞಾನವೂ ಇರುವುದಿಲ್ಲ.
11 ನಾನು ಮತ್ತೆ ಸೂರ್ಯನ ಕೆಳಗೆ ನೋಡಿದ್ದೇನೆಂದರೆ,
ವೇಗಿಗಳಿಗೆ ಓಟವೂ
ಪರಾಕ್ರಮಶಾಲಿಗಳಿಗೆ ಯುದ್ಧವೂ
ಜ್ಞಾನಿಗಳಿಗೆ ಆಹಾರವೂ
ವಿವೇಕಿಗಳಿಗೆ ಐಶ್ವರ್ಯವೂ
ಪ್ರವೀಣರಿಗೆ ದಯೆಯೂ ಸಿಗುವುದು ಎಂಬ ನಿಶ್ಚಯ ಇಲ್ಲ.
ಏಕೆಂದರೆ ಕಾಲವೂ ಅವಕಾಶವೂ ಅವರೆಲ್ಲರಿಗೆ ಒಳಪಟ್ಟಿರುತ್ತವೆ.
12 ಇದಲ್ಲದೆ, ಅವರವರ ಸಮಯ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿಯದು.
ಕ್ರೂರ ಬಲೆಯಿಂದ ಹಿಡಿಯುವ ಮೀನಿನಂತೆಯೂ
ಉರುಲಿನಲ್ಲಿ ಸಿಕ್ಕುವ ಪಕ್ಷಿಗಳಂತೆಯೂ
ಕೇಡಿನ ಕಾಲವು ತಟ್ಟನೆ ಬೀಳುವಾಗ
ಜನರು ಸಿಕ್ಕಿಕೊಳ್ಳುತ್ತಾರೆ.
ದಡ್ಡತನಕ್ಕಿಂತ ಜ್ಞಾನ ವಾಸಿ
13 ಸೂರ್ಯನ ಕೆಳಗೆ ನಾನು ಜ್ಞಾನವನ್ನು ಈ ವಿಧವಾಗಿ ನೋಡಿದ್ದೇನೆ. ಇದು ನನ್ನ ದೃಷ್ಟಿಗೆ ದೊಡ್ಡದಾಗಿ ಕಾಣಿಸಿತು.
14 ಒಂದು ಕಾಲದಲ್ಲಿ ಒಂದು ಸಣ್ಣ ನಗರವಿತ್ತು, ಅದರಲ್ಲಿ ಕೆಲವೇ ಜನರಿದ್ದರು. ಆಗ ಅಲ್ಲಿ ಒಬ್ಬ ಮಹಾ ಅರಸನು ಬಂದು ಅದನ್ನು ಮುತ್ತಿಗೆ ಹಾಕಿ, ಅದಕ್ಕೆ ಎದುರಾಗಿ ದೊಡ್ಡ ಕೊತ್ತಲುಗಳನ್ನು ಕಟ್ಟಿಸಿದನು.
15 ಆಗ ಅದರಲ್ಲಿ ಒಬ್ಬ ಜ್ಞಾನಿಯಾದ ಬಡ ಮನುಷ್ಯನು ಬಂದು, ತನ್ನ ಜ್ಞಾನದಿಂದ ಆ ಪಟ್ಟಣವನ್ನು ರಕ್ಷಿಸಿದನು. ಆದರೂ ಆ ಬಡ ಮನುಷ್ಯನನ್ನು ಯಾರೂ ಜ್ಞಾಪಕ ಮಾಡಿಕೊಳ್ಳಲಿಲ್ಲ.
16 ಇದನ್ನು ನೋಡಿ ನಾನು, “ಬಲಕ್ಕಿಂತ ಜ್ಞಾನವು ಉತ್ತಮ; ಆದರೆ ಜನರು ಬಡವನ ಜ್ಞಾನವನ್ನು ತಿರಸ್ಕಾರ ಮಾಡುತ್ತಾರೆ, ಅವನ ಮಾತುಗಳನ್ನು ಯಾರೂ ಲಕ್ಷಿಸುವುದಿಲ್ಲ,” ಎಂದುಕೊಂಡೆನು.
17 ಹುಚ್ಚರನ್ನು ಆಳುವವನ ಕೂಗಾಟಕ್ಕಿಂತಲೂ
ಜ್ಞಾನಿಯ ಸಮಾಧಾನದ ಮಾತಿಗೆ ಮಹತ್ವ ಇದೆ.
18 ಯುದ್ಧದ ಆಯುಧಗಳಿಗಿಂತಲೂ ಜ್ಞಾನವು ಲೇಸು.
ಆದರೆ ಒಬ್ಬ ಪಾಪಿಯು ಬಹು ಶುಭವನ್ನು ಹಾಳುಮಾಡುವನು.