24
ಒಡಂಬಡಿಕೆಯ ದೃಢೀಕರಣ
1 ತರುವಾಯ ಯೆಹೋವ ದೇವರು ಮೋಶೆಗೆ, “ನೀನು, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಈ ಬೆಟ್ಟವನ್ನು ಹತ್ತಿ ಯೆಹೋವ ದೇವರಾದ ನನ್ನ ಬಳಿಗೆ ಬಂದು ದೂರದಲ್ಲಿ ಆರಾಧಿಸಿರಿ.
2 ಮೋಶೆ ಒಬ್ಬನೇ ಯೆಹೋವ ದೇವರ ಸಮೀಪಕ್ಕೆ ಬರಲಿ. ಬೇರೆ ಯಾರೂ ಸಮೀಪಕ್ಕೆ ಬರಬಾರದು. ಜನರೂ ಅವನ ಸಂಗಡ ಮೇಲೇರಿ ಬರಬಾರದು,” ಎಂದು ಹೇಳಿದರು.
3 ಮೋಶೆಯು ಬಂದು ಯೆಹೋವ ದೇವರ ಎಲ್ಲಾ ಮಾತುಗಳನ್ನೂ ಎಲ್ಲಾ ನ್ಯಾಯವಿಧಿಗಳನ್ನು ಜನರಿಗೆ ತಿಳಿಸಿದನು. ಆಗ ಜನರೆಲ್ಲಾ ಒಂದೇ ಸ್ವರದಿಂದ, “ಯೆಹೋವ ದೇವರು ಹೇಳಿದ ಎಲ್ಲಾ ಮಾತುಗಳ ಪ್ರಕಾರ ಮಾಡುತ್ತೇವೆ,” ಎಂದು ಉತ್ತರಕೊಟ್ಟರು.
4 ಮೋಶೆಯು ಯೆಹೋವ ದೇವರು ಪ್ರಕಟಪಡಿಸಿದ ಮಾತುಗಳನ್ನೆಲ್ಲಾ ಬರೆದಿಟ್ಟನು.
ಅವನು ಮರುದಿನ ಬೆಳಿಗ್ಗೆ ಎದ್ದು ಬೆಟ್ಟದ ಕೆಳಗೆ ಬಲಿಪೀಠವನ್ನು ಕಟ್ಟಿಸಿ, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗನುಸಾರವಾಗಿ ಹನ್ನೆರಡು ಸ್ತಂಭಗಳನ್ನು ನಿಲ್ಲಿಸಿದನು.
5 ಅವನು ಯೆಹೋವ ದೇವರಿಗೆ ದಹನಬಲಿಗಳನ್ನೂ ಸಮಾಧಾನದ ಬಲಿಗಾಗಿ ಹೋರಿಗಳನ್ನೂ ಅರ್ಪಿಸುವುದಕ್ಕಾಗಿ ಇಸ್ರಾಯೇಲರ ಯೌವನಸ್ಥರನ್ನು ಕಳುಹಿಸಲು ಅವರು ಅದನ್ನು ಅರ್ಪಿಸಿದರು.
6 ಮೋಶೆಯು ರಕ್ತದಲ್ಲಿ ಅರ್ಧವನ್ನು ತೆಗೆದುಕೊಂಡು ಬೋಗುಣಿಗಳಲ್ಲಿ ಹಾಕಿದನು ಮತ್ತು ರಕ್ತದಲ್ಲಿ ಮಿಕ್ಕ ಅರ್ಧವನ್ನು ಬಲಿಪೀಠದ ಮೇಲೆ ಚಿಮುಕಿಸಿದನು.
7 ಒಡಂಬಡಿಕೆಯ ಗ್ರಂಥವನ್ನು ತೆಗೆದುಕೊಂಡು ಜನರ ಸಭೆಯಲ್ಲಿ ಓದಿದನು. ಆಗ ಅವರು, “ಯೆಹೋವ ದೇವರ ಆಜ್ಞೆಗಳನ್ನೆಲ್ಲಾ ನಾವು ಅನುಸರಿಸಿ ಅವುಗಳಿಗೆ ವಿಧೇಯರಾಗುವೆವು,” ಎಂದರು.
8 ತರುವಾಯ ಮೋಶೆಯು ರಕ್ತವನ್ನು ತೆಗೆದುಕೊಂಡು ಜನರ ಮೇಲೆ ಚಿಮುಕಿಸಿ, “ಈ ಎಲ್ಲಾ ಮಾತುಗಳ ವಿಷಯದಲ್ಲಿ ಯೆಹೋವ ದೇವರು ನಿಮ್ಮೊಂದಿಗೆ ಮಾಡಿದ ಒಡಂಬಡಿಕೆಯ ರಕ್ತ,” ಎಂದನು.
9 ಆಗ ಮೋಶೆ, ಆರೋನ್, ನಾದಾಬ್, ಅಬೀಹೂ ಮತ್ತು ಇಸ್ರಾಯೇಲಿನ ಹಿರಿಯರಲ್ಲಿ ಎಪ್ಪತ್ತು ಮಂದಿಯೂ ಮೇಲಕ್ಕೆ ಹೋದರು.
10 ಅವರು ಇಸ್ರಾಯೇಲಿನ ದೇವರನ್ನು ನೋಡಿದರು. ಆತನ ಪಾದಗಳ ಕೆಳಗೆ ನೀಲ ವರ್ಣದ ಕಲ್ಲಿನ ಕೆಲಸಕ್ಕೆ ಸಮಾನವಾದದ್ದೂ, ಆಕಾಶದ ಹಾಗೆ ನಿರ್ಮಲವಾದದ್ದೂ ಇತ್ತು.
11 ಆದರೆ ದೇವರು ಇಸ್ರಾಯೇಲರ ಶ್ರೇಷ್ಠರನ್ನು ತಳ್ಳಿಬಿಡಲಿಲ್ಲ. ಅವರು ಸಹ ದೇವರನ್ನು ನೋಡಿ, ಊಟಮಾಡಿ, ಪಾನಮಾಡಿದರು.
12 ಯೆಹೋವ ದೇವರು ಮೋಶೆಗೆ, “ಬೆಟ್ಟವನ್ನೇರಿ, ನನ್ನ ಬಳಿಗೆ ಬಂದು ಇಲ್ಲೇ ಇರು. ನಿಯಮವನ್ನು ಹಾಗು ಆಜ್ಞೆಗಳನ್ನು ನೀನು ಜನರಿಗೆ ಬೋಧನೆಮಾಡುವಂತೆ ಬರೆದಿರುವ ಕಲ್ಲಿನ ಹಲಗೆಗಳನ್ನು ನಾನು ನಿನಗೆ ಕೊಡುತ್ತೇನೆ,” ಎಂದು ಹೇಳಿದರು.
13 ಆಗ ಮೋಶೆಯೂ ಅವನ ಸಹಾಯಕನಾದ ಯೆಹೋಶುವನೂ ದೇವರ ಬೆಟ್ಟದ ಮೇಲೆ ಹೊರಟರು.
14 ಆಗ ಮೋಶೆ ಹಿರಿಯರಿಗೆ, “ನಾವು ನಿಮ್ಮ ಬಳಿಗೆ ತಿರುಗಿ ಬರುವವರೆಗೆ ಇಲ್ಲಿ ನಮಗಾಗಿ ಕಾದುಕೊಂಡಿರಿ. ಆರೋನನೂ ಹೂರನೂ ನಿಮ್ಮ ಸಂಗಡ ಇರುತ್ತಾರೆ. ಯಾರಿಗಾದರೂ ವ್ಯಾಜ್ಯವಿದ್ದರೆ ಅವರ ಬಳಿಗೆ ಹೋಗಲಿ,” ಎಂದನು.
15 ಮೋಶೆ ಬೆಟ್ಟವನ್ನೇರಿ ಹೋದಾಗ ಮೇಘವು ಬೆಟ್ಟವನ್ನು ಮುಚ್ಚಿಕೊಂಡಿತು.
16 ಇದಲ್ಲದೆ ಯೆಹೋವ ದೇವರ ಮಹಿಮೆಯು ಸೀನಾಯಿ ಬೆಟ್ಟದ ಮೇಲೆ ನೆಲೆಯಾಗಿದ್ದುದರಿಂದ ಮೇಘವು ಅದನ್ನು ಆರು ದಿನಗಳವರೆಗೆ ಮುಚ್ಚಿಕೊಂಡಿತು. ಏಳನೆಯ ದಿನದಲ್ಲಿ ಆತನು ಮೇಘದೊಳಗಿಂದ ಮೋಶೆಯನ್ನು ಕರೆದರು.
17 ಯೆಹೋವ ದೇವರ ಮಹಿಮೆಯ ದೃಶ್ಯವು ಇಸ್ರಾಯೇಲರ ಕಣ್ಣುಗಳ ಮುಂದೆ ಬೆಟ್ಟದ ತುದಿಯಲ್ಲಿ ದಹಿಸುವ ಅಗ್ನಿಯಂತಿತ್ತು.
18 ಆಗ ಮೋಶೆಯು ಮೇಘದ ಮಧ್ಯಕ್ಕೆ ಬಂದು ಬೆಟ್ಟವನ್ನೇರಿದನು. ಅವನು ಹಗಲಿರುಳು ನಲವತ್ತು ದಿವಸ ಪರ್ವತದ ಮೇಲಿದ್ದನು.