24
ಇಸಾಕನು ಮತ್ತು ರೆಬೆಕ್ಕಳು
1 ಅಬ್ರಹಾಮನು ವೃದ್ಧನಾಗಿದ್ದನು. ಯೆಹೋವ ದೇವರು ಅಬ್ರಹಾಮನನ್ನು ಎಲ್ಲಾದರಲ್ಲಿಯೂ ಆಶೀರ್ವದಿಸಿದ್ದರು.
2 ಅಬ್ರಹಾಮನು ತನಗೆ ಇದ್ದವುಗಳ ಮೇಲೆಲ್ಲಾ ಆಡಳಿತ ಮಾಡುವ ತನ್ನ ಮನೆಯ ಹಿರಿಯ ಸೇವಕನಿಗೆ, “ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಡು,
3 ನೀನು ನನ್ನ ಸುತ್ತಲೂ ವಾಸವಾಗಿರುವ ಕಾನಾನ್ಯರ ಪುತ್ರಿಯರೊಳಗಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬಾರದು.
4 ನನ್ನ ದೇಶಕ್ಕೂ, ಬಂಧುಗಳ ಬಳಿಗೂ ಹೋಗಿ ನನ್ನ ಮಗ ಇಸಾಕನಿಗೆ ಹೆಂಡತಿಯನ್ನು ತೆಗೆದುಕೊಂಡು ಬರುತ್ತೇನೆಂದು ಪರಲೋಕದ ಮತ್ತು ಭೂಲೋಕದ ದೇವರಾಗಿರುವ ಯೆಹೋವ ದೇವರ ಮೇಲೆ ನೀನು ನನಗೆ ಪ್ರಮಾಣಮಾಡಬೇಕು,” ಎಂದನು.
5 ಆ ಸೇವಕನು ಅವನಿಗೆ, “ಒಂದು ವೇಳೆ ನನ್ನನ್ನು ಹಿಂಬಾಲಿಸಿ, ಈ ದೇಶಕ್ಕೆ ಬರಲು ಆ ಸ್ತ್ರೀಗೆ ಮನಸ್ಸಿಲ್ಲದೆ ಹೋದರೆ, ನೀನು ಬಿಟ್ಟುಬಂದ ದೇಶಕ್ಕೆ ನಿನ್ನ ಮಗನನ್ನು ತಿರುಗಿ ಕರೆದುಕೊಂಡು ಹೋಗಬೇಕೋ?” ಎಂದನು.
6 ಅಬ್ರಹಾಮನು ಅವನಿಗೆ, “ನನ್ನ ಮಗನನ್ನು ತಿರುಗಿ ಅಲ್ಲಿಗೆ ಕರೆದುಕೊಂಡು ಹೋಗಬಾರದು,
7 ನನ್ನ ತಂದೆಯ ಮನೆಯಿಂದಲೂ ಬಂಧುಗಳ ದೇಶದೊಳಗಿಂದಲೂ ನನ್ನನ್ನು ಹೊರಗೆ ಕರೆದು, ನನ್ನ ಸಂಗಡ ಮಾತನಾಡಿ, ‘ನಿನ್ನ ಸಂತಾನಕ್ಕೆ ಈ ದೇಶವನ್ನು ಕೊಡುವೆನು,’ ಎಂದು ನನಗೆ ಪ್ರಮಾಣ ಮಾಡಿದ ಪರಲೋಕದ ದೇವರಾದ ಯೆಹೋವ ದೇವರು ಅಲ್ಲಿಂದ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ, ತಮ್ಮ ದೂತನನ್ನು ನಿನ್ನ ಮುಂದೆ ಕಳುಹಿಸುವರು.
8 ಆದರೆ ನಿನ್ನನ್ನು ಹಿಂಬಾಲಿಸಿ ಬರುವುದಕ್ಕೆ ಆ ಸ್ತ್ರೀಗೆ ಮನಸ್ಸಿಲ್ಲದಿದ್ದರೆ, ನನಗೆ ಮಾಡಿದ ಆ ಪ್ರಮಾಣದಿಂದ ನೀನು ಬಿಡುಗಡೆಯಾಗಿರುವೆ. ಆದರೆ ನನ್ನ ಮಗನನ್ನು ಅಲ್ಲಿಗೆ ಮಾತ್ರ ತಿರುಗಿ ಕರೆದುಕೊಂಡು ಹೋಗಬಾರದು,” ಎಂದನು.
9 ಆಗ ಆ ಸೇವಕನು ತನ್ನ ಕೈಯನ್ನು ತನ್ನ ಯಜಮಾನನಾದ ಅಬ್ರಹಾಮನ ತೊಡೆಯ ಕೆಳಗೆ ಇಟ್ಟು, ಆ ವಿಷಯ ಬಗ್ಗೆ ಅವನಿಗೆ ಪ್ರಮಾಣ ಮಾಡಿದನು.
10 ಆಗ ಆ ಸೇವಕನು ತನ್ನ ಯಜಮಾನನ ಒಂಟೆಗಳಲ್ಲಿ ಹತ್ತು ಒಂಟೆಗಳನ್ನೂ, ತನ್ನ ಯಜಮಾನನಿಂದ ಎಲ್ಲಾ ತರಹದ ವಸ್ತ್ರಗಳನ್ನೂ ತೆಗೆದುಕೊಂಡು ಅರಾಮ್ ನಹರೈಮಿಗೆ ಹೊರಟು, ನಾಹೋರನು ವಾಸವಾಗಿದ್ದ ಊರನ್ನು ಸೇರಿದನು.
11 ಆಗ ಸ್ತ್ರೀಯರು ನೀರು ತರಲು ಬರುವ ಸಂಜೆಯ ಸಮಯವಾಗಿತ್ತು. ಅವನು ಪಟ್ಟಣದ ಹೊರಗೆ ನೀರಿನ ಬಾವಿಯ ಬಳಿಯಲ್ಲಿ ಒಂಟೆಗಳನ್ನು ಮಲಗಿಸಿದನು.
12 ಆಗ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರೇ, ಈ ಹೊತ್ತು ನನಗೆ ಅನುಕೂಲವನ್ನು ಉಂಟುಮಾಡಿ, ನನ್ನ ಯಜಮಾನನಾದ ಅಬ್ರಹಾಮನಿಗೆ ದಯೆ ತೋರಿಸಿರಿ.
13 ನಾನು ನೀರಿನ ಬಾವಿಯ ಬಳಿಯಲ್ಲಿ ನಿಂತುಕೊಂಡಿದ್ದೇನೆ. ಊರಿನ ಜನರ ಪುತ್ರಿಯರು ನೀರು ಸೇದುವುದಕ್ಕೆ ಹೊರಗೆ ಬರುತ್ತಾರೆ.
14 ನಾನು ಯಾವ ಹುಡುಗಿಗೆ, ‘ನೀರು ಕುಡಿಯುವ ಹಾಗೆ ನಿನ್ನ ಕೊಡವನ್ನು ಇಳಿಸು,’ ಎಂದು ಕೇಳಿಕೊಂಡಾಗ, ‘ನೀನೂ ಕುಡಿ, ನಿನ್ನ ಒಂಟೆಗಳಿಗೆ ಸಹ ಕುಡಿಯುವುದಕ್ಕೆ ಕೊಡುತ್ತೇನೆ,’ ಎಂದು ಹೇಳುವಳೋ, ಆಕೆಯನ್ನೇ ನೀವು ನಿಮ್ಮ ಸೇವಕನಾದ ಇಸಾಕನಿಗೆ ನೇಮಕ ಮಾಡಿದ್ದೀರಿ ಮತ್ತು ಯಜಮಾನನಿಗೆ ದಯೆ ತೋರಿಸಿದ್ದೀರಿ, ಎಂದು ಇದರಿಂದ ನಾನು ತಿಳಿದುಕೊಳ್ಳುವೆನು,” ಎಂದು ಬೇಡಿಕೊಂಡನು.
15 ಅವನು ಹಾಗೆ ಹೇಳುವುದನ್ನು ಮುಗಿಸುವುದಕ್ಕಿಂತ ಮುಂಚೆ ಅಬ್ರಹಾಮನ ಸಹೋದರನಾದ ನಾಹೋರನ ಹೆಂಡತಿಯಾಗಿರುವ ಮಿಲ್ಕಾಳ ಮಗ ಬೆತೂಯೇಲನಿಗೆ ಹುಟ್ಟಿದ ರೆಬೆಕ್ಕಳು ತನ್ನ ಕೊಡವನ್ನು ಹೆಗಲಿನ ಮೇಲೆ ಇಟ್ಟುಕೊಂಡು ಹೊರಗೆ ಬಂದಳು.
16 ಆ ಹುಡುಗಿಯು ನೋಡುವುದಕ್ಕೆ ಬಹು ಸುಂದರಿಯಾಗಿದ್ದಳು, ಮದುವೆಯಾಗದ ಕನ್ನಿಕೆಯಾಗಿದ್ದಳು. ಆಕೆಯು ಬಾವಿಯ ಬಳಿಗೆ ಹೋಗಿ, ತನ್ನ ಕೊಡವನ್ನು ತುಂಬಿಕೊಂಡು ಬಂದಳು.
17 ಆಗ ಸೇವಕನು ಅವಳೆದುರಿಗೆ ಓಡಿಹೋಗಿ, “ನಿನ್ನ ಕೊಡದೊಳಗಿಂದ ಸ್ವಲ್ಪ ನೀರು ನನಗೆ ಕುಡಿಯುವುದಕ್ಕೆ ಕೊಡು,” ಎಂದು ಕೇಳಿಕೊಂಡನು.
18 ಅದಕ್ಕವಳು, “ನನ್ನ ಒಡೆಯನೇ, ಕುಡಿ,” ಎಂದು ಹೇಳಿ, ತ್ವರೆಯಾಗಿ ತನ್ನ ಕೊಡವನ್ನು ಕೈಯಿಂದ ಇಳಿಸಿ, ಅವನಿಗೆ ಕುಡಿಯಲು ಕೊಟ್ಟಳು.
19 ಅವನಿಗೆ ಕುಡಿಯುವುದಕ್ಕೆ ಕೊಟ್ಟನಂತರ ಆಕೆಯು, “ನಿನ್ನ ಒಂಟೆಗಳಿಗೂ ಸಾಕಾಗುವಷ್ಟು ನೀರನ್ನು ಸೇದುತ್ತೇನೆ,” ಎಂದು ಹೇಳಿದಳು.
20 ಆಕೆಯು ತ್ವರೆಪಟ್ಟು ತನ್ನ ಕೊಡದಲ್ಲಿದ್ದ ನೀರನ್ನು ತೊಟ್ಟಿಯಲ್ಲಿ ಹೊಯ್ದು, ತಿರುಗಿ ಸೇದುವುದಕ್ಕೆ ಬಾವಿಯ ಬಳಿಗೆ ಓಡಿ, ಅವನ ಎಲ್ಲಾ ಒಂಟೆಗಳಿಗೋಸ್ಕರ ನೀರನ್ನು ಸೇದಿದಳು.
21 ಆಗ ಯೆಹೋವ ದೇವರು ತನ್ನ ಪ್ರಯಾಣನ್ನು ಸಫಲ ಮಾಡಿದರೋ ಏನೋ, ಎಂದು ತಿಳಿದುಕೊಳ್ಳುವುದಕ್ಕೆ ಆ ಮನುಷ್ಯನು ಆಕೆಯನ್ನು ಗಮನಿಸುತ್ತಾ, ಆಶ್ಚರ್ಯಪಟ್ಟು ಮೌನವಾಗಿದ್ದನು.
22 ಒಂಟೆಗಳು ನೀರು ಕುಡಿದಾದ ಮೇಲೆ, ಆ ಮನುಷ್ಯನು ಅರ್ಧ ತೊಲೆಯ ತೂಕದ ಚಿನ್ನದ ಮೂಗುತಿಯನ್ನು, ಹತ್ತು ತೊಲೆ ತೂಕದ ಎರಡು ಬಳೆಗಳನ್ನು ಆಕೆಗೆ ಕೊಟ್ಟನು.
23 ಅನಂತರ, “ನೀನು ಯಾರ ಮಗಳು? ನನಗೆ ಹೇಳು. ನಿನ್ನ ತಂದೆಯ ಮನೆಯಲ್ಲಿ ಒಂದು ರಾತ್ರಿ ಕಳೆಯುವುದಕ್ಕೆ ನಮಗೆ ಸ್ಥಳವಿದೆಯೋ?” ಕೇಳಿದನು.
24 ಅದಕ್ಕೆ ಆಕೆಯು, “ನಾಹೋರನಿಗೆ ಮಿಲ್ಕಾಳು ಹೆತ್ತ ಬೆತೂಯೇಲನ ಮಗಳು,” ಎಂದಳು.
25 ಇದಲ್ಲದೆ ಆಕೆಯು ಅವನಿಗೆ, “ಹುಲ್ಲೂ, ಮೇವೂ ನಮ್ಮಲ್ಲಿ ಸಾಕಷ್ಟು ಇವೆ, ನೀವು ಒಂದು ರಾತ್ರಿ ಕಳೆಯುವುದಕ್ಕೆ ಸ್ಥಳವಿದೆ,” ಎಂದು ಅವನಿಗೆ ಹೇಳಿದಳು.
26 ಆಗ ಆ ಮನುಷ್ಯನು ತಲೆಬಾಗಿ ಯೆಹೋವ ದೇವರಿಗೆ ಅಡ್ಡಬಿದ್ದು ಆರಾಧಿಸಿದನು.
27 ಇದಲ್ಲದೆ ಅವನು, “ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರು ಸ್ತುತಿಹೊಂದಲಿ. ಅವರು ನನ್ನ ಯಜಮಾನನನ್ನು ಕೈಬಿಡದೆ, ತಮ್ಮ ದಯೆಯನ್ನೂ, ನಂಬಿಗಸ್ತಿಕೆಯನ್ನೂ ತೋರಿಸಿದ್ದಾರೆ. ನಾನು ಮಾರ್ಗದಲ್ಲಿರುವಾಗ ಯೆಹೋವ ದೇವರು ನನ್ನನ್ನು ನನ್ನ ಯಜಮಾನನ ಸಹೋದರನ ಮನೆಗೇ ನಡೆಸಿದ್ದಾರೆ,” ಎಂದನು.
28 ಆಗ ಆ ಹುಡುಗಿಯು ಓಡಿಹೋಗಿ ಈ ವಿಷಯಗಳನ್ನು ತನ್ನ ತಾಯಿಯ ಮನೆಯಲ್ಲಿದ್ದವರಿಗೆ ತಿಳಿಸಿದಳು.
29 ರೆಬೆಕ್ಕಳಿಗೆ ಲಾಬಾನನೆಂಬ ಸಹೋದರನಿದ್ದನು. ಬಾವಿಯ ಬಳಿಯಲ್ಲಿದ್ದ ಆ ಮನುಷ್ಯನ ಬಳಿಗೆ ಲಾಬಾನನು ಓಡಿದನು.
30 ಅವನು ಮೂಗುತಿಯನ್ನೂ, ತನ್ನ ಸಹೋದರಿಯ ಕೈಗಳಲ್ಲಿದ್ದ ಬಳೆಗಳನ್ನೂ ಕಂಡು, ಆ ಮನುಷ್ಯನು ತನ್ನ ಬಳಿ ಹೀಗೆ ಮಾತನಾಡಿದನೆಂದು ಹೇಳಿದ ತನ್ನ ಸಹೋದರಿ ರೆಬೆಕ್ಕಳ ಮಾತುಗಳನ್ನು ಕೇಳಿ, ಆ ಮನುಷ್ಯನ ಬಳಿಗೆ ಬಂದನು. ಅವನು ಇನ್ನೂ ಬಾವಿಯ ಬಳಿಯಲ್ಲಿ ಒಂಟೆಗಳ ಹತ್ತಿರ ನಿಂತಿದ್ದನು.
31 ಲಾಬಾನನು ಅವನಿಗೆ, “ಯೆಹೋವ ದೇವರಿಂದ ಆಶೀರ್ವಾದ ಪಡೆದವನೇ, ಒಳಗೆ ಬಾ, ಏಕೆ ಹೊರಗೆ ನಿಂತಿರುವೆ? ನಾನು ಮನೆಯನ್ನೂ, ಒಂಟೆಗಳಿಗೆ ಸ್ಥಳವನ್ನೂ ಸಿದ್ಧಮಾಡಿದ್ದೇನೆ,” ಎಂದನು.
32 ಆಗ ಆ ಮನುಷ್ಯನು ಮನೆಗೆ ಬಂದನು. ಅವನು ಒಂಟೆಗಳನ್ನು ಬಿಚ್ಚಿ, ಅವುಗಳಿಗೆ ಹುಲ್ಲನ್ನೂ, ಮೇವನ್ನೂ ಕೊಟ್ಟನು. ಅವನ ಕಾಲುಗಳನ್ನೂ, ಅವನ ಸಂಗಡ ಇದ್ದ ಮನುಷ್ಯರ ಕಾಲುಗಳನ್ನೂ ತೊಳೆಯುವುದಕ್ಕೆ ನೀರನ್ನು ಕೊಟ್ಟನು.
33 ಅವನಿಗೆ ಊಟಕ್ಕೆ ಬಡಿಸಿದಾಗ, ಅವನು, “ನಾನು ಬಂದ ಕೆಲಸದ ವಿಷಯ ಹೇಳದೆ ಊಟಮಾಡುವುದಿಲ್ಲ,” ಎಂದನು.
ಅದಕ್ಕೆ ಲಾಬಾನನು, “ಹೇಳು,” ಎಂದನು.
34 ಅವನು, “ನಾನು ಅಬ್ರಹಾಮನ ಸೇವಕನು.
35 ಯೆಹೋವ ದೇವರು ನನ್ನ ಯಜಮಾನನನ್ನು ಬಹಳವಾಗಿ ಆಶೀರ್ವದಿಸಿದ್ದರಿಂದ ಅವನು ಧನವಂತನಾದನು. ದೇವರು ಅವನಿಗೆ ಕುರಿದನ, ಬೆಳ್ಳಿಬಂಗಾರ, ದಾಸದಾಸಿ, ಒಂಟೆಗಳು ಮತ್ತು ಕತ್ತೆಗಳನ್ನು ಕೊಟ್ಟಿದ್ದಾರೆ.
36 ಇದಲ್ಲದೆ ನನ್ನ ಯಜಮಾನನ ಹೆಂಡತಿ ಸಾರಳು ಮುದಿಪ್ರಾಯದಲ್ಲಿ ನನ್ನ ಯಜಮಾನನಿಗೆ ಮಗನನ್ನು ಹೆತ್ತಿದ್ದಾಳೆ. ಇವನು ತನಗಿದ್ದದ್ದನ್ನೆಲ್ಲಾ ಅವನಿಗೆ ಕೊಟ್ಟಿದ್ದಾನೆ.
37 ನನ್ನ ಯಜಮಾನನು, ‘ನಾನು ಯಾರ ದೇಶದಲ್ಲಿ ವಾಸಮಾಡುತ್ತೇನೋ, ಆ ಕಾನಾನ್ಯರ ಪುತ್ರಿಯರಲ್ಲಿ ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಡ.
38 ಆದರೆ ನೀನು ನನ್ನ ತಂದೆಯ ಮನೆಗೂ, ನನ್ನ ಬಂಧುಗಳ ಬಳಿಗೂ ಹೋಗಿ, ನನ್ನ ಮಗನಿಗೆ ಹೆಂಡತಿಯನ್ನು ತೆಗೆದುಕೊಳ್ಳಬೇಕೆಂದು,’ ನನ್ನಿಂದ ಪ್ರಮಾಣ ಮಾಡಿಸಿಕೊಂಡಿದ್ದಾನೆ.
39 “ನಾನು ನನ್ನ ಯಜಮಾನನಿಗೆ, ‘ಒಂದು ವೇಳೆ ಆ ಸ್ತ್ರೀ ನನ್ನನ್ನು ಹಿಂಬಾಲಿಸದೆ ಹೋದಾಳು,’ ಹೇಳಿದೆ.
40 “ಅವನು ನನಗೆ, ‘ನಾನು ಯಾರ ಮುಂದೆ ನಂಬಿಗಸ್ತಿಕೆಯಿಂದ ನಡೆದುಕೊಳ್ಳುತ್ತೇನೋ, ಆ ಯೆಹೋವ ದೇವರು ತಮ್ಮ ದೂತನನ್ನು ನಿನ್ನ ಸಂಗಡ ಕಳುಹಿಸಿ, ನೀನು ನನ್ನ ಬಂಧುಗಳಿಂದಲೂ ನನ್ನ ತಂದೆಯ ಮನೆಯೊಳಗಿಂದಲೂ ನನ್ನ ಮಗನಿಗೋಸ್ಕರ ಹೆಂಡತಿಯನ್ನು ತೆಗೆದುಕೊಳ್ಳುವ ಹಾಗೆ ನಿನ್ನ ಪ್ರಯತ್ನವನ್ನು ಸಫಲಮಾಡುವರು.
41 ನೀನು ನನ್ನ ಬಂಧುಗಳ ಬಳಿಗೆ ಬಂದಾಗ, ಅವರು ನಿನಗೆ ಆ ಹುಡುಗಿಯನ್ನು ಕೊಡದೆ ಹೋದರೆ, ನಾನು ಮಾಡಿಸಿದ ಪ್ರಮಾಣದಿಂದ ಬಿಡುಗಡೆಯಾಗಿರುವೆ,’ ” ಎಂದನು.
42 “ಈ ದಿನ ನಾನು ಆ ಬಾವಿಯ ಬಳಿಗೆ ಬಂದಾಗ, ‘ನನ್ನ ಯಜಮಾನನಾದ ಅಬ್ರಹಾಮನ ದೇವರಾದ ಯೆಹೋವ ದೇವರೇ, ನೀವು ಬಯಸಿದರೆ, ದಯವಿಟ್ಟು ನಾನು ಬಂದ ಪ್ರಯಾಣಕ್ಕೆ ನೀವು ಸಫಲ ಮಾಡಿದ್ದಾದರೆ,
43 ಇಗೋ, ನಾನು ಈಗ ಬಾವಿಯ ಬಳಿಯಲ್ಲಿ ನಿಂತಿದ್ದೇನೆ. ಯಾವ ಹುಡುಗಿ ನೀರು ಸೇದುವುದಕ್ಕೆ ಹೊರಗೆ ಬರುತ್ತಾಳೋ, ನಾನು ಆಕೆಗೆ, “ನಿನ್ನ ಕೊಡದೊಳಗಿಂದ ನನಗೆ ಕುಡಿಯುವುದಕ್ಕೆ ಸ್ವಲ್ಪ ನೀರು ಕೊಡು,” ಎಂದು ಕೇಳಿದಾಗ,
44 ಆಕೆಯು ನನಗೆ, “ನೀನೂ ಕುಡಿ, ನಿನ್ನ ಒಂಟೆಗಳಿಗೂ ಸೇದಿ ಹಾಕುತ್ತೇನೆ,” ಎಂದು ನನಗೆ ಹೇಳಿದರೆ, ಆಕೆಯೇ ಯೆಹೋವ ದೇವರಿಂದ ನನ್ನ ಯಜಮಾನನ ಮಗನಿಗೆ ನೇಮಕವಾದ ಹೆಂಡತಿಯಾಗಿರಲಿ,’ ಎಂದುಕೊಂಡೆನು.
45 “ನಾನು ನನ್ನ ಹೃದಯದಲ್ಲಿ ಹಾಗೆ ಅಂದುಕೊಂಡು ಮುಗಿಸುವುದರೊಳಗಾಗಿ, ರೆಬೆಕ್ಕಳು ತನ್ನ ಹೆಗಲಿನ ಮೇಲೆ ಕೊಡವನ್ನಿಟ್ಟುಕೊಂಡು ಹೊರಗೆ ಬಂದಳು. ಆಕೆಯು ಬಾವಿಯಿಂದ ನೀರನ್ನು ಸೇದಿದಳು. ಆಗ ನಾನು, ‘ನನಗೆ ಕುಡಿಯುವುದಕ್ಕೆ ಕೊಡು,’ ಎಂದು ಆಕೆಯನ್ನು ಕೇಳಿದೆನು.
46 “ಅದಕ್ಕೆ ಆಕೆಯು ತ್ವರೆಪಟ್ಟು, ತನ್ನ ಹೆಗಲಿನ ಮೇಲಿನಿಂದ ಕೊಡವನ್ನು ಇಳಿಸಿ, ‘ನೀನು ಕುಡಿ ಮತ್ತು ನಿನ್ನ ಒಂಟೆಗಳಿಗೂ ನೀರು ತಂದುಕೊಡುತ್ತೇನೆ,’ ಎಂದಳು. ಆಗ ನಾನು ಕುಡಿದೆನು, ಆಕೆಯು ಒಂಟೆಗಳಿಗೂ ನೀರನ್ನು ತಂದುಕೊಟ್ಟಳು.
47 “ನಾನು ಆಕೆಗೆ, ‘ನೀನು ಯಾರ ಮಗಳು?’ ಎಂದು ಕೇಳಿದೆನು.
“ಅದಕ್ಕವಳು, ‘ನಾಹೋರನಿಗೆ ಮಿಲ್ಕಾಳು ಹೆತ್ತ ಮಗನಾದ ಬೆತೂಯೇಲನ ಮಗಳು,’ ಎಂದಳು.
“ಆಗ ನಾನು ಆಕೆಗೆ ಮೂಗುತಿಯನ್ನೂ, ಆಕೆಯ ಕೈಗಳಿಗೆ ಬಳೆಗಳನ್ನೂ ಕೊಟ್ಟು,
48 ತಲೆಬಾಗಿ ಯೆಹೋವ ದೇವರನ್ನು ಆರಾಧಿಸಿ, ನನ್ನ ಯಜಮಾನನ ಸಹೋದರನ ಮಗಳನ್ನು ಅವನ ಮಗನಿಗೆ ಹೆಂಡತಿಯಾಗಿ ತೆಗೆದುಕೊಳ್ಳುವುದಕ್ಕೆ ನನ್ನನ್ನು ಸರಿಯಾದ ಮಾರ್ಗದಲ್ಲಿ ನಡೆಸಿದ ನನ್ನ ಯಜಮಾನನಾದ ಅಬ್ರಹಾಮನ ದೇವರಾಗಿರುವ ಯೆಹೋವ ದೇವರನ್ನು ಕೊಂಡಾಡಿದೆ.
49 ಆದ್ದರಿಂದ ನೀವು ನನ್ನ ಯಜಮಾನನಿಗೆ ದಯೆಯಿಂದಲೂ ನಂಬಿಗಸ್ತಿಕೆಯಿಂದಲೂ ವರ್ತಿಸುವುದಾದರೆ ನನಗೆ ತಿಳಿಸಿರಿ. ಇಲ್ಲದಿದ್ದರೂ ನನಗೆ ತಿಳಿಸಿರಿ. ಆಗ ನಾನು ಬಲಗಡೆಯಾದರೂ, ಎಡಗಡೆಯಾದರೂ ತಿರುಗಿಕೊಂಡುಹೋಗುವೆನು,” ಎಂದನು.
50 ಅದಕ್ಕೆ ಲಾಬಾನನು ಮತ್ತು ಬೆತೂಯೇಲನು, “ಈ ಕಾರ್ಯವು ಯೆಹೋವ ದೇವರಿಂದಲೇ ಉಂಟಾಯಿತು. ನಾವಂತೂ ಹೌದೆಂದೂ ಅಲ್ಲವೆಂದೂ ಹೇಳಲಾರೆವು
51 ರೆಬೆಕ್ಕಳನ್ನು ನಿನ್ನ ವಶಕ್ಕೆ ಕೊಡುತ್ತೇವೆ; ಕರೆದುಕೊಂಡು ಹೋಗಬಹುದು; ಯೆಹೋವ ದೇವರು ಹೇಳಿದಂತೆಯೇ ಆಕೆ ನಿನ್ನೊಡೆಯನ ಮಗನಿಗೆ ಹೆಂಡತಿಯಾಗಲಿ,” ಎಂದರು.
52 ಅಬ್ರಹಾಮನ ಸೇವಕನು ಅವರ ಮಾತನ್ನು ಕೇಳಿದಾಗ ಯೆಹೋವ ದೇವರ ಮುಂದೆ ಅಡ್ಡಬಿದ್ದು, ಆರಾಧಿಸಿದನು.
53 ಅವನು ಬೆಳ್ಳಿಯ ಒಡವೆ, ಬಂಗಾರದ ಒಡವೆ, ವಸ್ತ್ರಗಳನ್ನೂ ತಂದು, ರೆಬೆಕ್ಕಳಿಗೆ ಕೊಟ್ಟನು. ಆಕೆಯ ಸಹೋದರನಿಗೂ, ಆಕೆಯ ತಾಯಿಗೂ ಅಮೂಲ್ಯವಾದ ಉಡುಗೊರೆಗಳನ್ನು ಕೊಟ್ಟನು.
54 ತರುವಾಯ ಅವನೂ, ಅವನ ಸಂಗಡ ಇದ್ದ ಜನರೂ ಊಟಮಾಡಿ, ಕುಡಿದು, ರಾತ್ರಿಯನ್ನು ಅಲ್ಲೇ ಕಳೆದರು.
ಬೆಳಿಗ್ಗೆ ಎದ್ದ ಮೇಲೆ ಅವನು, “ನನ್ನನ್ನು ನನ್ನ ಯಜಮಾನನ ಬಳಿಗೆ ಕಳುಹಿಸಿರಿ,” ಎಂದನು.
55 ಅದಕ್ಕೆ ಆಕೆಯ ಸಹೋದರನೂ, ತಾಯಿಯೂ, “ಹುಡುಗಿಯು ಕೆಲವು ದಿನ ಇರಲಿ. ಹತ್ತು ದಿನಗಳಾದರೂ ನಮ್ಮ ಬಳಿಯಲ್ಲಿ ಇದ್ದು ತರುವಾಯ ಹೋಗಲಿ,” ಎಂದರು.
56 ಆಗ ಅವನು ಅವರಿಗೆ, “ನನ್ನನ್ನು ತಡೆಯಬೇಡಿರಿ, ಯೆಹೋವ ದೇವರು ನನ್ನ ಮಾರ್ಗವನ್ನು ಸಫಲ ಮಾಡಿದ್ದಾರಲ್ಲಾ. ನನ್ನ ಯಜಮಾನನ ಬಳಿಗೆ ಹೋಗುವಂತೆ ನನ್ನನ್ನು ಕಳುಹಿಸಿರಿ,” ಎಂದನು.
57 ಆಗ ಅವರು, “ನಾವು ಹುಡುಗಿಯನ್ನು ಕರೆದು, ಆಕೆಯ ಅಭಿಪ್ರಾಯವನ್ನು ವಿಚಾರಿಸೋಣ,” ಎಂದರು.
58 ಅವರು ರೆಬೆಕ್ಕಳನ್ನು ಕರೆದು ಆಕೆಗೆ, “ಈ ಮನುಷ್ಯನ ಸಂಗಡ ಹೋಗುತ್ತೀಯಾ?” ಎಂದು ಕೇಳಿದರು.
ಅದಕ್ಕೆ ಆಕೆಯು, “ನಾನು ಹೋಗುತ್ತೇನೆ,” ಎಂದಳು.
59 ಆಗ ಅವರು ತಮ್ಮ ಸಹೋದರಿಯಾದ ರೆಬೆಕ್ಕಳನ್ನೂ ಅವಳ ದಾದಿಯನ್ನೂ ಅಬ್ರಹಾಮನ ಸೇವಕನನ್ನೂ ಅವನ ಜೊತೆಯಲ್ಲಿದ್ದ ಮನುಷ್ಯರನ್ನೂ ಸಾಗಕಳುಹಿಸಿದರು.
60 ಇದಲ್ಲದೆ ಅವರು ರೆಬೆಕ್ಕಳನ್ನು ಹೀಗೆಂದು ಆಶೀರ್ವದಿಸಿದರು:
“ನಮ್ಮ ಸಹೋದರಿಯೇ,
ನೀನು ಸಹಸ್ರ ಸಹಸ್ರ ಮಕ್ಕಳಿಗೆ ತಾಯಿಯಾಗು.
ನಿನ್ನ ಸಂತಾನದವರು ತಮ್ಮ
ವೈರಿಗಳ ಪ್ರದೇಶಗಳನ್ನು ಸ್ವಾಧೀನಮಾಡಿಕೊಳ್ಳಲಿ.”
61 ಆಗ ರೆಬೆಕ್ಕಳೂ, ಆಕೆಯ ದಾಸಿಯರೂ ಒಂಟೆಗಳ ಮೇಲೆ ಹತ್ತಿ, ಆ ಮನುಷ್ಯನ ಹಿಂದೆ ಹೋದರು. ಆ ಸೇವಕನು ರೆಬೆಕ್ಕಳನ್ನು ಕರಕೊಂಡು ಹೋದನು.
62 ಇಸಾಕನು ಬೇರ್ ಲಹೈರೋಯಿ ಬಾವಿಗೆ ಹೋಗಿ ಬಂದನು. ಅವನು ದೇಶದ ನೆಗೆವನಲ್ಲಿ ವಾಸವಾಗಿದ್ದನು.
63 ಇಸಾಕನು ಸಾಯಂಕಾಲ ಹೊಲದಲ್ಲಿ ಧ್ಯಾನಮಾಡುವುದಕ್ಕೆ ಹೋದಾಗ, ಕಣ್ಣೆತ್ತಿ ನೋಡಲು, ಒಂಟೆಗಳು ಬರುವುದನ್ನು ಕಂಡನು.
64 ರೆಬೆಕ್ಕಳು ಸಹ ಕಣ್ಣೆತ್ತಿ ಇಸಾಕನನ್ನು ನೋಡಿ, ಒಂಟೆಗಳಿಂದ ಇಳಿದಳು.
65 ಆಕೆಯು ಆ ಸೇವಕನಿಗೆ, “ಹೊಲದಲ್ಲಿ ನಮಗೆ ಎದುರಾಗಿ ಬರುವ ಆ ಮನುಷ್ಯನು ಯಾರು?” ಎಂದಳು.
ಅದಕ್ಕೆ ಸೇವಕನು, “ಅವನೇ ನನ್ನ ಯಜಮಾನನು,” ಎಂದಾಗ, ಆಕೆಯು ಮುಸುಕು ಹಾಕಿಕೊಂಡಳು.
66 ಆಗ ಸೇವಕನು ಇಸಾಕನಿಗೆ ತಾನು ಮಾಡಿದ ಕಾರ್ಯಗಳನ್ನೆಲ್ಲಾ ತಿಳಿಸಿದನು.
67 ಇಸಾಕನು ಆಕೆಯನ್ನು ತನ್ನ ತಾಯಿಯಾದ ಸಾರಳ ಗುಡಾರಕ್ಕೆ ಕರೆದುಕೊಂಡು ಹೋದನು. ಅವನು ರೆಬೆಕ್ಕಳನ್ನು ಸ್ವೀಕರಿಸಿದನು. ಆಕೆಯು ಅವನ ಹೆಂಡತಿಯಾದಳು, ಅವನು ಆಕೆಯನ್ನು ಪ್ರೀತಿಸಿದನು. ಹೀಗೆ ಇಸಾಕನು ತನ್ನ ತಾಯಿಯ ಮರಣದ ದುಃಖ ಶಮನ ಮಾಡಿಕೊಂಡನು.