39
ಬಾಬಿಲೋನಿನಿಂದ ದೂತರು
1 ಅದೇ ಕಾಲದಲ್ಲಿ ಬಲದಾನನ ಮಗನೂ, ಬಾಬಿಲೋನಿನ ಅರಸನೂ ಆದ ಮೆರೋದಕ್ ಬಲದಾನ್ ಎಂಬವನು, ಹಿಜ್ಕೀಯನು ಅಸ್ವಸ್ಥನಾಗಿದ್ದು ಗುಣಹೊಂದಿದನು ಎಂದು ಕೇಳಿದ್ದರಿಂದ ಪತ್ರಗಳನ್ನೂ, ಉಡುಗೊರೆಗಳನ್ನೂ ಕಳುಹಿಸಿದನು.
2 ಹಿಜ್ಕೀಯನು ಅದಕ್ಕೆ ಸಂತೋಷಪಟ್ಟು ಅವರಿಗೆ ಬೆಳ್ಳಿ, ಬಂಗಾರ, ಸುಗಂಧದ್ರವ್ಯ, ಪರಿಮಳ ತೈಲ ಮೊದಲಾದ ಅಮೂಲ್ಯ ಪದಾರ್ಥಗಳಿರುವ ಮನೆಯನ್ನೂ, ಆಯುಧ ಶಾಲೆಯನ್ನೂ, ತನ್ನ ಭಂಡಾರದಲ್ಲಿ ಇರುವುದೆಲ್ಲವನ್ನೂ ತೋರಿಸಿದನು. ಹೀಗೆ ಹಿಜ್ಕೀಯನು ತನ್ನ ಅರಮನೆಯಲ್ಲಿಯೂ, ತನ್ನ ಸಮಸ್ತ ರಾಜ್ಯದಲ್ಲಿಯೂ ಅವರಿಗೆ ತೋರಿಸದಿದ್ದ ವಸ್ತುವು ಒಂದೂ ಇರಲಿಲ್ಲ.
3 ಆಗ ಪ್ರವಾದಿಯಾದ ಯೆಶಾಯನು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ, “ಆ ಮನುಷ್ಯರು ಎಲ್ಲಿಂದ ಬಂದವರು ಮತ್ತು ಅವರು ನಿನಗೆ ಏನು ಹೇಳಿದರು?” ಎಂದು ಕೇಳಿದನು.
ಹಿಜ್ಕೀಯನು, “ಅವರು ಬಹುದೂರ ದೇಶವಾದ ಬಾಬಿಲೋನಿನಿಂದ ನನ್ನ ಬಳಿಗೆ ಬಂದವರು,” ಎಂದು ಹೇಳಿದನು.
4 ಅದಕ್ಕೆ ಯೆಶಾಯನು ಪುನಃ ಅವನನ್ನು, “ಅವರು ನಿನ್ನ ಅರಮನೆಯಲ್ಲಿ ಏನನ್ನು ನೋಡಿದರು?” ಎಂದು ಕೇಳಿದನು.
ಹಿಜ್ಕೀಯನು, “ನನ್ನ ಅರಮನೆಯಲ್ಲಿ ಇರುವುದೆಲ್ಲವನ್ನು ಅವರು ನೋಡಿದರು, ನನ್ನ ಭಂಡಾರದಲ್ಲಿ ನಾನು ಅವರಿಗೆ ತೋರಿಸದೆ ಇದ್ದದ್ದು ಏನೂ ಇಲ್ಲ,” ಎಂದು ಉತ್ತರಕೊಟ್ಟನು.
5 ಆಗ ಯೆಶಾಯನು ಹಿಜ್ಕೀಯನಿಗೆ, “ಸೇನಾಧೀಶ್ವರ ಯೆಹೋವ ದೇವರ ವಾಕ್ಯವನ್ನು ಕೇಳು.
6 ಇಗೋ, ನಿನ್ನ ಪೂರ್ವಿಕರ ಕಾಲದಿಂದ ಇಂದಿನವರೆಗೂ ನಿನ್ನ ಅರಮನೆಯಲ್ಲಿ ಸಂಗ್ರಹವಾದದ್ದೆಲ್ಲವೂ ಬಾಬಿಲೋನಿಗೆ ಕೊಂಡೊಯ್ಯುವ ದಿವಸ ಬರುವುದು. ಇಲ್ಲಿ ಏನೂ ಉಳಿಯುವುದಿಲ್ಲ ಎಂದು ಯೆಹೋವ ದೇವರು ಹೇಳಿದರು.
7 ಬಾಬಿಲೋನಿನವರು ನಿನ್ನಿಂದ ಹುಟ್ಟುವಂಥ, ನಿನ್ನ ಮಕ್ಕಳಲ್ಲಿ ಕೆಲವರನ್ನು ತೆಗೆದುಕೊಂಡು ಹೋಗುವರು, ಅವರು ಬಾಬಿಲೋನಿನ ರಾಜನ ಅರಮನೆಯಲ್ಲಿ ಕಂಚುಕಿಗಳಾಗಿರುವರು,” ಎಂದನು.
8 ಆಗ ಹಿಜ್ಕೀಯನು, “ಹೇಗೂ ನನ್ನ ಜೀವಮಾನದಲ್ಲಿ ಸಮಾಧಾನವು, ಭದ್ರತೆಯೂ ಇರುವುವು,” ಎಂದುಕೊಂಡು ಯೆಶಾಯನಿಗೆ, “ನೀನು ಹೇಳಿದ ಯೆಹೋವ ದೇವರ ವಾಕ್ಯವು ಒಳ್ಳೆಯದೇ!” ಎಂದನು.