2
1 ಆಗ ಯೋನನು ಮೀನಿನ ಹೊಟ್ಟೆಯೊಳಗಿಂದ ತನ್ನ ದೇವರಾದ ಯೆಹೋವ ದೇವರಿಗೆ ಪ್ರಾರ್ಥನೆಮಾಡಿದನು.
2 ಅವನು ಹೀಗೆ ಹೇಳಿದನು:
“ನಾನು ನನ್ನ ವ್ಯಥೆಯಲ್ಲಿ ಯೆಹೋವ ದೇವರಿಗೆ ಮೊರೆಯಿಟ್ಟೆನು.
ಅವರು ನನ್ನ ಕೂಗನ್ನು ಕೇಳಿದರು.
ಪಾತಾಳದ ಗರ್ಭದೊಳಗಿಂದ ಸಹಾಯಕ್ಕಾಗಿ ನಾನು ಕೂಗಿದೆನು,
ಆಗ ನನ್ನ ಕರೆಯನ್ನು ನೀವು ಕೇಳಿದಿರಿ.
3 ನನ್ನನ್ನು ನೀವು ಅಗಾಧದಲ್ಲಿಯೂ,
ಸಮುದ್ರಗಳ ಮಧ್ಯದಲ್ಲಿಯೂ ಹಾಕಿದಿರಿ.
ಪ್ರವಾಹಗಳು ನನ್ನನ್ನು ಸುತ್ತಿಕೊಂಡವು.
ನಿಮ್ಮ ಎಲ್ಲಾ ಅಲೆಗಳೂ ನಿಮ್ಮ ತೆರೆಗಳೂ
ನನ್ನ ಮೇಲೆ ದಾಟಿಹೋದವು.
4 ಆಗ ನಾನು ಹೇಳಿದ್ದು,
‘ನಿಮ್ಮ ಕಣ್ಣುಗಳ ಎದುರಿನಿಂದ ಬಹಿಷ್ಕೃತನಾಗಿದ್ದೇನೆ.
ಆದರೂ ನಾನು ನಿಮ್ಮ ಪರಿಶುದ್ಧ
ಮಂದಿರದ ಕಡೆಗೆ ಪುನಃ ನೋಡುವೆನು.’
5 ನನ್ನನ್ನು ಸುತ್ತುತ್ತಿದ್ದ ನೀರು, ನನ್ನನ್ನು ಭಯಪಡಿಸಿತು.
ಅಗಾಧವು ನನ್ನನ್ನು ಸುತ್ತಲೂ ಮುಚ್ಚಿಕೊಂಡಿತು.
ಜಂಬು ಹುಲ್ಲು ನನ್ನ ತಲೆಗೆ ಸುತ್ತಲಾಗಿತ್ತು.
6 ಬೆಟ್ಟಗಳ ಅಡಿಗಳ ಪರ್ಯಂತರ ಇಳಿದು ಹೋದೆನು.
ಕೆಳಗಿನ ಭೂಮಿಯು ನನ್ನನ್ನು ಶಾಶ್ವತವಾಗಿ ನಿರ್ಬಂಧಿಸಿತು.
ಆದರೂ ದೇವರಾದ ನನ್ನ ಯೆಹೋವ ದೇವರೇ,
ನೀವು ನನ್ನ ಪ್ರಾಣವನ್ನು ತಗ್ಗಿನಿಂದ ಮೇಲಕ್ಕೆ ಎಬ್ಬಿಸಿದ್ದೀರಿ.
7 “ನನ್ನ ಪ್ರಾಣವು ನನ್ನಲ್ಲಿ ಕುಂದಿ ಹೋದಾಗ,
ಯೆಹೋವ ದೇವರೇ ನಿಮ್ಮನ್ನು ಜ್ಞಾಪಕಮಾಡಿಕೊಂಡೆನು.
ನನ್ನ ಪ್ರಾರ್ಥನೆಯು ನಿಮ್ಮ ಬಳಿಗೆ
ನಿಮ್ಮ ಪರಿಶುದ್ಧ ಮಂದಿರದೊಳಗೆ ಬಂದಿತು.
8 “ನಿರುಪಯೋಗ ಮೂರ್ತಿಗಳಿಗೆ ಅಂಟಿಕೊಳ್ಳುವವರು,
ಅವರದಾಗುವ ದೇವರ ಪ್ರೀತಿಯನ್ನು ಕಳೆದುಕೊಳ್ಳುವರು.
9 ಆದರೆ ನಾನು ಸ್ತೋತ್ರದ ಗೀತೆಯಿಂದ ನಿಮಗೆ ಬಲಿ ಅರ್ಪಿಸುವೆನು.
ನಾನು ಮಾಡಿದ ಹರಕೆಯನ್ನು ತೀರಿಸುವೆನು.
ಆಗ ನಾನು, ‘ರಕ್ಷಣೆಯು ಯೆಹೋವ ದೇವರಿಂದಲೇ ಬರುವುದು,’ ಎಂದು ಹೇಳಿದನು.”
10 ಆಗ ಯೆಹೋವ ದೇವರು ಮೀನಿಗೆ ಹೇಳಿದ್ದರಿಂದ, ಅದು ಯೋನನನ್ನು ಒಣಭೂಮಿಯ ಮೇಲೆ ಕಾರಿಬಿಟ್ಟಿತು.