4
ದೇವರಿಗೆ ಅಧೀನರಾಗಿರಿ
ನಿಮ್ಮಲ್ಲಿ ಯುದ್ಧಗಳೂ ಕಾದಾಟಗಳೂ ಬರಲು ಕಾರಣಗಳೇನು? ನಿಮ್ಮಲ್ಲಿ ಹೋರಾಡುವ ದುರಾಶೆಗಳಿಂದ ಅಲ್ಲವೇ? ನೀವು ಬಯಸಿದರೂ ಪಡೆಯದೆ ಇದ್ದುದರಿಂದ ನೀವು ಕೊಲ್ಲುತ್ತೀರಿ. ದುರಾಶೆಯಿಂದ ಅಪೇಕ್ಷಿಸುತ್ತೀರಿ, ಆದರೆ ಪಡೆಯಲಾರಿರಿ. ನೀವು ಕಾದಾಡುತ್ತೀರಿ ಮತ್ತು ಯುದ್ಧ ಮಾಡುತ್ತೀರಿ, ಆದರೂ ನೀವು ದೇವರನ್ನು ಬೇಡಿಕೊಳ್ಳದ ಕಾರಣ ನಿಮಗೇನೂ ದೊರೆಯಲಿಲ್ಲ. ನೀವು ಬೇಡಿದರೂ ಬೇಡಿದ್ದನ್ನು ಪಡೆದುಕೊಳ್ಳುವುದಿಲ್ಲ. ಏಕೆಂದರೆ, ನಿಮ್ಮ ಭೋಗಗಳಿಗಾಗಿ ಉಪಯೋಗಿಸಬೇಕೆಂದು ದುರುದ್ದೇಶಕ್ಕಾಗಿ ಬೇಡಿಕೊಳ್ಳುವುದರಿಂದ ನಿಮಗೆ ದೊರೆಯುವುದಿಲ್ಲ.
ವ್ಯಭಿಚಾರಿಗಳೇ, ಇಹಲೋಕ ಸ್ನೇಹವು ದೇವರೊಂದಿಗಿರುವ ಶತ್ರುತ್ವ ಎಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಿರಬೇಕೆಂಬುವವನು ದೇವರಿಗೆ ಶತ್ರುವಾಗಿದ್ದಾನೆ. ಅಥವಾ ದೇವರು ನಮ್ಮಲ್ಲಿ ವಾಸವಾಗಿರಲು ನಮಗೆ ಕೊಟ್ಟಿರುವ ಪವಿತ್ರಾತ್ಮ ದೇವರು, ನಾವು ಅವರಿಗೆ ಮಾತ್ರ ಸೇರಿದವರಾಗಿರಬೇಕೆಂದು ಬಲವಾದ ಬಯಕೆ ಉಳ್ಳವರಾಗಿದ್ದಾರೆಂದು ಪವಿತ್ರ ವೇದವು ವ್ಯರ್ಥವಾಗಿ ಹೇಳುತ್ತದೆ ಎಂದು ನೀವು ಭಾವಿಸುತ್ತೀರೋ? ಆದರೆ ದೇವರು ನಮಗೆ ಹೆಚ್ಚಾದ ಕೃಪೆಯನ್ನು ಕೊಡುತ್ತಾರೆ. ಆದ್ದರಿಂದ ಈ ಕಾರಣಕ್ಕಾಗಿ, ಪವಿತ್ರ ವೇದವು:
“ದೇವರು ಅಹಂಕಾರಿಗಳನ್ನು ಎದುರಿಸುತ್ತಾರೆ.
ದೀನರಿಗಾದರೋ ಕೃಪೆಯನ್ನು ಕೊಡುತ್ತಾರೆ,”*
ಎಂದು ಹೇಳುತ್ತದೆ.
ಹೀಗಿರಲಾಗಿ ದೇವರಿಗೆ ಅಧೀನವಾಗಿರಿ. ಸೈತಾನನನ್ನು ಎದುರಿಸಿರಿ, ಆಗ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು. ದೇವರ ಸಮೀಪಕ್ಕೆ ಬನ್ನಿರಿ. ಆಗ ನಿಮ್ಮ ಸಮೀಪಕ್ಕೆ ದೇವರು ಬರುವರು. ಪಾಪಿಗಳೇ, ನಿಮ್ಮ ಕೈಗಳನ್ನು ಶುಚಿಮಾಡಿಕೊಳ್ಳಿರಿ. ಎರಡು ಮನಸ್ಸುಳ್ಳವರೇ, ನಿಮ್ಮ ಹೃದಯಗಳನ್ನು ನಿರ್ಮಲ ಮಾಡಿಕೊಳ್ಳಿರಿ. ದುಃಖಿಸಿರಿ, ಗೋಳಾಡಿರಿ, ಕಣ್ಣೀರಿಡಿರಿ, ನಿಮ್ಮ ನಗೆಯು ದುಃಖಕ್ಕೂ ನಿಮ್ಮ ಸಂತೋಷವು ವ್ಯಥೆಗೂ ತಿರುಗಿಕೊಳ್ಳಲಿ. 10 ಕರ್ತದೇವರ ಮುಂದೆ ನಿಮ್ಮನ್ನು ತಗ್ಗಿಸಿಕೊಳ್ಳಿರಿ. ಆಗ ಅವರು ನಿಮ್ಮನ್ನು ಮೇಲಕ್ಕೆತ್ತುವರು.
11 ಪ್ರಿಯರೇ, ಒಬ್ಬರ ವಿಷಯದಲ್ಲಿ ಒಬ್ಬರು ಕೆಟ್ಟದ್ದನ್ನು ಮಾತನಾಡಬೇಡಿರಿ. ಯಾವನಾದರೂ ತನ್ನ ಸಹೋದರನ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿದರೆ ಅಥವಾ ತೀರ್ಪುಮಾಡಿದರೆ ಅವನು ದೇವರ ನಿಯಮದ ವಿಷಯದಲ್ಲಿ ಕೆಟ್ಟದ್ದಾಗಿ ಮಾತನಾಡಿ, ನಿಯಮವನ್ನೇ ತೀರ್ಪುಮಾಡಿದ ಹಾಗಾಗುವುದು. ಆದರೆ ನೀನು ದೇವರ ನಿಯಮವನ್ನೇ ತೀರ್ಪುಮಾಡಿದರೆ ನೀನು ಅನುಸರಿಸುವವನಾಗಿರದೆ ನ್ಯಾಯಾಧಿಪತಿಯೆನಿಸಿಕೊಳ್ಳುವಿ. 12 ನಿಯಮವನ್ನು ಕೊಟ್ಟವರೂ ನ್ಯಾಯಾಧಿಪತಿಯೂ ದೇವರೊಬ್ಬರೇ ಆಗಿರುತ್ತಾರೆ. ಅವರು ಉಳಿಸುವುದಕ್ಕೂ ನಾಶಮಾಡುವುದಕ್ಕೂ ಶಕ್ತರಾಗಿದ್ದಾರೆ. ಹೀಗಿರುವಾಗ ನೆರೆಯವನ ವಿಷಯದಲ್ಲಿ ತೀರ್ಪುಮಾಡುವುದಕ್ಕೆ ನೀನು ಯಾರು?
ನಾಳೆಯನ್ನು ಕುರಿತು ಕೊಚ್ಚಿಕೊಳ್ಳುವುದು
13 “ಈ ಹೊತ್ತು ಇಲ್ಲವೆ ನಾಳೆ ನಾವು ಇಂಥ ಪಟ್ಟಣಕ್ಕೆ ಹೋಗಿ ಅಲ್ಲಿ ಒಂದು ವರ್ಷವಿದ್ದು, ವ್ಯಾಪಾರವನ್ನು ಮಾಡಿ ಲಾಭವನ್ನು ಸಂಪಾದಿಸುತ್ತೇವೆ,” ಎನ್ನುವವರೇ ಕೇಳಿರಿ. 14 ನಾಳೆ ಏನಾಗುವುದೋ ನಿಮಗೆ ತಿಳಿಯದು. ನಿಮ್ಮ ಜೀವಮಾನವು ಎಂಥದ್ದು? ಅದು ಸ್ವಲ್ಪ ಹೊತ್ತು ಕಾಣಿಸಿಕೊಂಡು ಆಮೇಲೆ ಕಾಣದೆ ಹೋಗುವ ಹಬೆಯಂತಿದೆ. 15 ಆದ್ದರಿಂದ, “ಕರ್ತದೇವರ ಚಿತ್ತವಾದರೆ ನಾವು ಬದುಕಿ ಈ ಕೆಲಸವನ್ನಾಗಲಿ, ಆ ಕೆಲಸವನ್ನಾಗಲಿ ಮಾಡುವೆವು!” ಎಂದು ನೀವು ಹೇಳುವುದೇ ಸರಿ. 16 ಆದರೆ ನೀವು ನಿಮ್ಮ ಹೊಗಳಿಕೆಯ ಯೋಜನೆಗಳಲ್ಲಿ ಹೆಮ್ಮೆಪಡುತ್ತೀರಿ. ಅಂಥಾ ಅಹಂಭಾವವೆಲ್ಲಾ ಕೆಟ್ಟದ್ದೆ. 17 ಹೀಗಿರುವುದರಿಂದ ಒಳ್ಳೆಯದನ್ನು ಮಾಡಬೇಕೆಂದು ತಿಳಿದು ಅದನ್ನು ಮಾಡದೆ ಇರುವವನಿಗೆ ಅದು ಪಾಪವಾಗಿದೆ.
* 4:6 ಜ್ಞಾನೋಕ್ತಿ 3:34