20
ಯೆರೆಮೀಯನು ಮತ್ತು ಪಷ್ಹೂರನು
1 ಯೆರೆಮೀಯನು ಈ ಮಾತುಗಳನ್ನು ಪ್ರವಾದಿಸಲಾಗಿ, ಯೆಹೋವ ದೇವರ ಆಲಯದಲ್ಲಿ ಮುಖ್ಯ ಅಧಿಕಾರಿಯಾಗಿದ್ದ ಯಾಜಕನಾದ ಇಮ್ಮೇರನ ಮಗ ಪಷ್ಹೂರನು ಕೇಳಿದನು.
2 ಆಗ ಪಷ್ಹೂರನು ಪ್ರವಾದಿಯಾದ ಯೆರೆಮೀಯನನ್ನು ಹೊಡೆದು, ಅವನನ್ನು ಯೆಹೋವ ದೇವರ ಆಲಯದ ಬಳಿಯಲ್ಲಿದ್ದ ಬೆನ್ಯಾಮೀನನ ಮೇಲ್ಭಾಗದಲ್ಲಿದ್ದ ಬಾಗಿಲಲ್ಲಿದ್ದ ಮರದ ಉಪಕರಣಕ್ಕೆ ಕಟ್ಟಿದರು.
3 ಮಾರನೆ ದಿವಸದಲ್ಲಿ, ಪಷ್ಹೂರನು ಯೆರೆಮೀಯನನ್ನು ಬಂಧನದಿಂದ ಬಿಡಿಸಿದನು. ಆಗ ಯೆರೆಮೀಯನು ಅವನಿಗೆ, “ಯೆಹೋವ ದೇವರು ನಿನಗೆ ಇನ್ನು ಪಷ್ಹೂರನೆಂಬ ಹೆಸರಿನಿಂದಲ್ಲ ಮಾಗೋರ್ ಮಿಸ್ಸಾಬೀಬ್ ಎಂದು ಕರೆಯುತ್ತಾರೆಂದು ಹೇಳಿದನು.
4 ಏಕೆಂದರೆ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ಇಗೋ, ನಾನು ನಿನ್ನನ್ನು ನಿನ್ನ ಸ್ನೇಹಿತರೆಲ್ಲರೂ ದಿಗಿಲು ಪಡುವಂತೆ ಮಾಡುತ್ತೇನೆ. ಅವರು ತಮ್ಮ ಶತ್ರುಗಳ ಖಡ್ಗದಿಂದ ಬೀಳುವರು. ನಿನ್ನ ಕಣ್ಣುಗಳು ಅದನ್ನು ನೋಡುವುವು. ಯೆಹೂದ್ಯರನ್ನೆಲ್ಲಾ ನಾನು ಬಾಬಿಲೋನಿನ ಅರಸನ ಕೈಗೆ ಒಪ್ಪಿಸುವೆನು. ಅವನು ಅವರನ್ನು ಬಾಬಿಲೋನಿಗೆ ಒಯ್ದು ಖಡ್ಗದಿಂದ ಕೊಲ್ಲುವನು.
5 ಇದಲ್ಲದೆ ಈ ಪಟ್ಟಣದ ಎಲ್ಲಾ ಸಂಪತ್ತನ್ನೂ, ಅದರ ಎಲ್ಲಾ ನಿಧಿನಿಕ್ಷೇಪಗಳನ್ನೂ ಅದರ ಎಲ್ಲಾ ಅಮೂಲ್ಯವಾದವುಗಳನ್ನೂ, ಯೆಹೂದದ ಅರಸರ ಎಲ್ಲಾ ಭಂಡಾರಗಳನ್ನೂ ಅವರ ಶತ್ರುಗಳ ಕೈಗೆ ಒಪ್ಪಿಸುವೆನು. ಅವರು ಅವುಗಳನ್ನು ಸುಲಿದುಕೊಂಡು, ತೆಗೆದುಕೊಂಡು ಬಾಬಿಲೋನಿಗೆ ಒಯ್ಯುವರು.
6 ಪಷ್ಹೂರನೇ, ನೀನೂ, ನಿನ್ನ ಮನೆಯ ನಿವಾಸಿಗಳೆಲ್ಲರೂ ಸೆರೆಗೆ ಹೋಗುವಿರಿ. ಬಾಬಿಲೋನಿಗೆ ಹೋಗಿ ಅಲ್ಲಿಯೇ ಸಾಯುವೆ. ಅಲ್ಲಿಯೇ ಸಮಾಧಿಯಾಗುವೆ. ನಿನಗೂ, ನಿನ್ನಿಂದ ಸುಳ್ಳು ಪ್ರವಾದನೆ ಕೇಳಿದ ನಿನ್ನ ಸ್ನೇಹಿತರೆಲ್ಲರಿಗೂ ಹಾಗೆಯೇ ಆಗುವುದು.’ ”
ಯೆರೆಮೀಯನ ದೂರು
7 ಓ ಯೆಹೋವ ದೇವರೇ, ನೀವು ನನ್ನನ್ನು ಮರುಳಾಗಿಸಿದಿರಿ. ನಾನು ಮರುಳಾದೆನು.
ನೀವು ನನಗಿಂತ ಬಲಿಷ್ಠನಾಗಿದ್ದು ಜಯಿಸಿದಿರಿ.
ನಾನು ಪ್ರತಿದಿನ ಪರಿಹಾಸ್ಯಕ್ಕೆ ಗುರಿಯಾಗಿದ್ದೇನೆ.
ಪ್ರತಿಯೊಬ್ಬನು ನನ್ನನ್ನು ಹಾಸ್ಯಮಾಡುತ್ತಾನೆ.
8 ಏಕೆಂದರೆ, ನಾನು ಮಾತನಾಡುವವನಾದ್ದರಿಂದ
ಬಲತ್ಕಾರವೂ, ಕೊಳ್ಳೆಯೂ ಎಂದು ಗಟ್ಟಿಯಾಗಿ ಕೂಗುತ್ತೇನೆ.
ಆದ್ದರಿಂದ ಯೆಹೋವ ದೇವರ ವಾಕ್ಯವು ನನಗೆ
ಪ್ರತಿದಿನ ಪರಿಹಾಸ್ಯಕ್ಕೂ, ಗೇಲಿಗೂ ಗುರಿಮಾಡಿತು.
9 “ಆಗ ನಾನು ಆತನನ್ನು ಕುರಿತು ಏನೂ ಹೇಳುವುದಿಲ್ಲ.
ಆತನ ಹೆಸರಿನಲ್ಲಿ ಇನ್ನು ಮಾತನಾಡುವುದೇ ಇಲ್ಲ,”
ಎಂದು ಅಂದುಕೊಂಡೆನು.
ಆದರೆ ಆತನ ವಾಕ್ಯವು ನನ್ನ ಎಲುಬುಗಳಲ್ಲಿ ಮುಚ್ಚಲಾಗಿರುವ
ಸುಡುವ ಬೆಂಕಿಯ ಹಾಗೆ ನನ್ನ ಹೃದಯದಲ್ಲಿ ಇತ್ತು.
ಬಿಗಿ ಹಿಡಿದು ದಣಿದೆನು.
ನನ್ನಿಂದ ಆಗದೆ ಹೋಯಿತು.
10 ಏಕೆಂದರೆ ಅನೇಕರ ಚಾಡಿಯನ್ನು ಕೇಳಿದೆನು.
“ಸುತ್ತಲೂ ಭಯವಿದೆ.
ಅವನನ್ನು ಖಂಡಿಸಿರಿ! ಅವನನ್ನು ಖಂಡಿಸೋಣ!”
ನನ್ನ ಆಪ್ತರೆಲ್ಲರೂ ನಾನು ಕುಂಟುವುದನ್ನು ನೋಡಿಕೊಳ್ಳುತ್ತಾ
ಒಂದು ವೇಳೆ ಅವನು ಮೋಸಗೊಂಡಾನು.
“ಆಗ ನಾವು ಅವನನ್ನು ಗೆದ್ದು,
ಅವನಲ್ಲಿ ಮುಯ್ಯಿಗೆ ಮುಯ್ಯಿ
ತೀರಿಸಿಕೊಳ್ಳುವೆವು ಅನ್ನುತ್ತಾರೆ.”
11 ಆದರೆ ಯೆಹೋವ ದೇವರು ಭಯಂಕರವಾದ ಪರಾಕ್ರಮಶಾಲಿಯ ಹಾಗೆ ನನ್ನ ಸಂಗಡ ಇದ್ದಾರೆ.
ಆದ್ದರಿಂದ ನನ್ನನ್ನು ಹಿಂಸಿಸುವವರು ಎಡವುವರು, ಗೆಲ್ಲುವುದಿಲ್ಲ.
ಅನುಕೂಲವಾಗದೆ ಇದ್ದುದರಿಂದ ಅವರು ಬಹಳವಾಗಿ ನಾಚಿಕೆಪಡುವರು.
ಅವರ ಅವಮಾನವು ಎಂದಿಗೂ ಮರೆಯದ ಅವಮಾನವಾಗಿರುವುದು.
12 ಓ ಸೇನಾಧೀಶ್ವರ ಯೆಹೋವ ದೇವರೇ, ನೀತಿವಂತರನ್ನು ಪರಿಶೋಧಿಸುವವರೇ,
ಅಂತರಿಂದ್ರಿಯಗಳನ್ನೂ, ಹೃದಯವನ್ನೂ ನೋಡುವವರೇ,
ನೀವು ಅವರಿಗೆ ಪ್ರತಿದಂಡನೆ ಮಾಡುವುದನ್ನು ನಾನು ನೋಡುವಂತೆ ಮಾಡಿ.
ಏಕೆಂದರೆ, ನಿಮಗೆ ನನ್ನ ವ್ಯಾಜ್ಯವನ್ನು ತಿಳಿಯಮಾಡಿದ್ದೇನೆ.
13 ಯೆಹೋವ ದೇವರಿಗೆ ಹಾಡಿರಿ, ಯೆಹೋವ ದೇವರನ್ನು ಸ್ತುತಿಸಿರಿ.
ಏಕೆಂದರೆ, ಅವರು ಬಡವನ ಪ್ರಾಣವನ್ನು ಕೇಡು ಮಾಡುವವರ ಕೈಯಿಂದ ತಪ್ಪಿಸಿದ್ದಾರೆ.
14 ನಾನು ಹುಟ್ಟಿದ ದಿವಸವು ಶಾಪಗ್ರಸ್ತವಾಗಲಿ.
ನನ್ನ ತಾಯಿ ನನ್ನನ್ನು ಹೆತ್ತ ದಿವಸವು ಶುಭವೆನಿಸಿಕೊಳ್ಳದಿರಲಿ.
15 ನನ್ನ ತಂದೆಗೆ, “ನಿನಗೆ ಗಂಡು ಕೂಸು ಹುಟ್ಟಿದೆ,”
ಎಂಬ ಸಮಾಚಾರವನ್ನು ಹೇಳಿ ಬಹಳ
ಸಂತೋಷ ಉಂಟುಮಾಡಿದವನು ಶಾಪಗ್ರಸ್ತನಾಗಲಿ!
16 ಆ ಮನುಷ್ಯನು, ಯೆಹೋವ ದೇವರು ಕನಿಕರಪಡದೆ ಕೆಡವಿಬಿಟ್ಟ
ಪಟ್ಟಣಗಳ ಗತಿಯು ಅವನಿಗೆ ಬರಲಿ.
ಅವನು ಬೆಳಿಗ್ಗೆ ಕೂಗನ್ನೂ,
ಮಧ್ಯಾಹ್ನದಲ್ಲಿ ಆರ್ಭಟವನ್ನೂ ಕೇಳಲಿ.
17 ನಾನು ಗರ್ಭ ಬಿಟ್ಟಾಗಲೇ ಅವರು ನನ್ನನ್ನು ಕೊಲ್ಲದೆ ಹೋದದ್ದರಿಂದ,
ಇಲ್ಲವೆ ನನ್ನ ತಾಯಿ ನನಗೆ ಸಮಾಧಿಯಾಗಿದ್ದು,
ಅವಳ ಗರ್ಭವು ನಿತ್ಯವಾಗಿ ಬಸುರಾಗಿಯೇ ಇದ್ದರೆ ಒಳ್ಳೆಯದಾಗಿತ್ತು.
18 ನಾನು ಕಷ್ಟವನ್ನೂ, ಚಿಂತೆಯನ್ನೂ ನೋಡುವುದಕ್ಕೂ,
ನನ್ನ ದಿವಸಗಳು ನಾಚಿಕೆಯಲ್ಲಿ ಕಳೆದುಹೋಗುವುದಕ್ಕೂ ಗರ್ಭದಿಂದ ಹೊರಗೆ ಬಂದದ್ದು ಏಕೆ?