27
ಯೆಹೂದದವರು ನೆಬೂಕದ್ನೆಚ್ಚರನನ್ನು ಸೇವಿಸಬೇಕು
ಯೆಹೂದದ ಅರಸನಾದ ಯೋಷೀಯನ ಮಗನೂ, ಯೆಹೋಯಾಕೀಮನ* ದೊರೆತನದ ಪ್ರಾರಂಭದಲ್ಲಿ ಈ ವಾಕ್ಯವು ಯೆಹೋವ ದೇವರಿಂದ ಯೆರೆಮೀಯನಿಗೆ ಬಂತು. ಯೆಹೋವ ದೇವರು ನನಗೆ ಹೇಳಿದ್ದೇನೆಂದರೆ: “ಬಂಧನಗಳನ್ನೂ ನೊಗಗಳನ್ನೂ ಮಾಡಿಸಿಕೊಂಡು ನಿನ್ನ ಕುತ್ತಿಗೆಯ ಮೇಲೆ ಇಡು. ಅವುಗಳನ್ನು ಎದೋಮಿನ ಅರಸನಿಗೂ, ಮೋವಾಬಿನ ಅರಸನಿಗೂ, ಅಮ್ಮೋನ್ಯರ ಅರಸನಿಗೂ, ಟೈರಿನ ಅರಸನಿಗೂ, ಸೀದೋನಿನ ಅರಸನಿಗೂ, ಯೆಹೂದದ ಅರಸನಾದ ಚಿದ್ಕೀಯನ ಬಳಿಗೆ ಯೆರೂಸಲೇಮಿನಲ್ಲಿ ಬಂದಿರುವ ರಾಯಭಾರಿಗಳ ಕೈಯಿಂದ ಕಳುಹಿಸು. ‘ಇಸ್ರಾಯೇಲರ ದೇವರೂ ಸೇನಾಧೀಶ್ವರರೂ ಆದ ಯೆಹೋವ ದೇವರು ನಿಮ್ಮ ಯಜಮಾನರಿಗೆ ನೀವು ಹೀಗೆ ಅರಿಕೆಮಾಡುವಂತೆ ಅಪ್ಪಣೆಕೊಟ್ಟಿದ್ದಾರೆ ಎಂಬುದಾಗಿ ಹೇಳಿ ಅವರು, “ತಮ್ಮ ತಮ್ಮ ಯಜಮಾನರಿಗೆ ಹೀಗೆ ಹೇಳಬೇಕು: ನಾನೇ ಭೂಮಿಯನ್ನೂ, ಭೂಮಿಯ ಮೇಲಿರುವ ಮನುಷ್ಯರನ್ನೂ, ಮೃಗಗಳನ್ನೂ ನನ್ನ ಮಹಾ ಬಲದಿಂದಲೂ, ನನ್ನ ಚಾಚಿದ ಕೈಯಿಂದಲೂ ಉಂಟುಮಾಡಿ, ನನಗೆ ಸರಿ ತೋಚಿದವರಿಗೆ ಅದನ್ನು ಕೊಟ್ಟಿದ್ದೇನೆ. ಈಗ ಈ ನಾಡುಗಳನ್ನೆಲ್ಲಾ ಬಾಬಿಲೋನಿಯದ ಅರಸ ಹಾಗು ನನ್ನ ಸೇವಕನಾದ ನೆಬೂಕದ್ನೆಚ್ಚರನ ಕೈವಶ ಮಾಡಿದ್ದೇನೆ. ಅವನ ಸೇವೆಗಾಗಿ ಕಾಡುಮೃಗಗಳನ್ನೂ ಕೊಟ್ಟಿದ್ದೇನೆ. ಅವನ ದೇಶಕ್ಕೆ ನಿಯಮಿತ ಕಾಲ ಬರುವ ತನಕ, ಎಲ್ಲ ರಾಷ್ಟ್ರಗಳು ಅವನಿಗೂ, ಅವನ ಮಗನಿಗೂ, ಮೊಮ್ಮಗನಿಗೂ ಅಡಿಯಾಳಾಗಿ ಇರಬೇಕು. ಆಮೇಲೆ ಅನೇಕ ರಾಷ್ಟ್ರಗಳೂ, ಮಹಾರಾಜರೂ ಅವನನ್ನೇ ಅಡಿಯಾಳನ್ನಾಗಿ ಮಾಡಿಕೊಳ್ಳುವರು,” ಎಂಬುದು.
“ ‘ “ಆದರೆ ಯಾವುದೇ ರಾಷ್ಟ್ರ ಅಥವಾ ರಾಜ್ಯ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಅಡಿಯಾಳಾಗಲು, ಅದರ ಅರಸನ ನೊಗಕ್ಕೆ ಹೆಗಲು ಕೊಡಲು ಒಪ್ಪದೆ ಹೋದರೆ, ಆ ರಾಷ್ಟ್ರವನ್ನು ನಾನು ಖಡ್ಗ, ಕ್ಷಾಮ, ವ್ಯಾಧಿಗಳಿಂದ ದಂಡಿಸುತ್ತಾ ಬರುವೆನು. ಕೊನೆಗೆ ಆ ಅರಸನ ಕೈಯಿಂದಲೇ ಅದನ್ನು ನಿರ್ಮೂಲ ಮಾಡಿಸುವೆನು, ಇದು ಯೆಹೋವ ದೇವರಾದ ನನ್ನ ನುಡಿ. ‘ನೀವು ಬಾಬಿಲೋನಿನ ಅರಸನಿಗೆ ಅಡಿಯಾಳುಗಳು ಆಗುವುದಿಲ್ಲ,’ ಎಂದು ನಿಮಗೆ ನುಡಿಯುವ ನಿಮ್ಮ ಪ್ರವಾದಿಗಳು, ಶಕುನದವರು, ಕನಸಿಗರು, ಕಣಿಯವರು, ಮಾಟಗಾರರು. ಅವರಿಗೆ ಕಿವಿಗೊಡಲೇಬೇಡಿ. 10 ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಹೊರದೂಡಬೇಕಾಗುವುದು, ನೀವು ದೇಶ ಭ್ರಷ್ಟರಾಗಿ ನಾಶವಾಗುವಿರಿ. 11 ಯಾವ ರಾಷ್ಟ್ರ ಬಾಬಿಲೋನಿಯದ ಅರಸನ ನೊಗಕ್ಕೆ ಹೆಗಲು ಕೊಟ್ಟು, ಅವನ ಅಡಿಯಾಳಾಗುವುದೋ; ಆ ರಾಷ್ಟ್ರದವರನ್ನು ನಾನು ಅವರ ಸ್ವಂತ ನಾಡಿನಲ್ಲೇ ನೆಲೆಗೊಳಿಸುವೆನು. ಅವರು ಅಲ್ಲೇ ಉತ್ತು, ಬಿತ್ತು ವಾಸಮಾಡುವರು. ಯೆಹೋವ ದೇವರಾದ ನಾನೇ ಇದನ್ನು ನುಡಿದಿದ್ದೇನೆ.” ’ ”
12 ಯೆಹೂದದ ಅರಸ ಚಿದ್ಕೀಯನಿಗೂ ನಾನು ಅದೇ ಮಾತುಗಳನ್ನು ಹೇಳಿದೆ: “ನೀವು ಬಾಬಿಲೋನಿನ ಅರಸನ ನೊಗಕ್ಕೆ ಹೆಗಲು ಕೊಟ್ಟು, ಅವನಿಗೂ, ಅವನ ಜನರಿಗೂ ಅಡಿಯಾಳಾಗಬೇಕು. ಆಗ ಬದುಕುವಿರಿ. 13 ಬಾಬಿಲೋನಿಯದ ಅರಸನ ಅಡಿಯಾಳಾಗಲು ನಿರಾಕರಿಸಿದ ರಾಷ್ಟ್ರವು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯಬೇಕಾಗುವುದೆಂದು ಯೆಹೋವ ದೇವರೇ ನುಡಿದಿದ್ದಾರೆ. ಅಂಥ ಗತಿ ನಿಮಗೂ, ನಿಮ್ಮ ಪ್ರಜೆಗೂ ಏಕೆ ಬರಬೇಕು? 14 ‘ನೀವು ಬಾಬಿಲೋನಿಯದ ಅರಸನ ಅಡಿಯಾಳಾಗುವುದಿಲ್ಲ,’ ಎಂದು ನಿಮಗೆ ನುಡಿಯುವ ಪ್ರವಾದಿಗಳ ಮಾತುಗಳಿಗೆ ಕಿವಿಗೊಡಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. 15 ಅವರನ್ನು ನಾನು ಕಳುಹಿಸಲಿಲ್ಲ, ನನ್ನ ಹೆಸರೆತ್ತಿ ಸುಳ್ಳನ್ನು ಸಾರುತ್ತಾ ಇದ್ದಾರೆ. ಅವರ ದುರ್ಬೋಧನೆಯ ನಿಮಿತ್ತ ನಾನು ನಿಮ್ಮನ್ನು ಮತ್ತು ನಿಮಗೆ ಪ್ರವಾದಿಸುವ ಪ್ರವಾದಿಗಳನ್ನು ಹೊರದೂಡಬೇಕಾಗುವುದು, ನೀವು ನಾಶವಾಗುವಿರಿ, ಎಂದು ಯೆಹೋವ ದೇವರೇ ನುಡಿದಿದ್ದಾರೆ.”
16 ಬಳಿಕ ನಾನು ಯಾಜಕರಿಗೂ, ಈ ಜನರೆಲ್ಲರಿಗೂ ಹೀಗೆಂದು ಸಾರಿದೆ: “ಇಗೋ, ಕೇಳಿ ಯೆಹೋವ ದೇವರ ನುಡಿ: ‘ದೇವಾಲಯದ ಉಪಕರಣಗಳನ್ನು ಬೇಗನೆ ಬಾಬಿಲೋನಿನಿಂದ ಹಿಂದಕ್ಕೆ ತರಲಾಗುವುದು,’ ಎಂಬುದಾಗಿ ನಿಮಗೆ ಪ್ರವಾದಿಸುವವರ ಮಾತುಗಳನ್ನು ಕೇಳಬೇಡಿ, ಅವರು ನಿಮಗೆ ಸುಳ್ಳನ್ನು ಸಾರುತ್ತಾರೆ. 17 ಅವರಿಗೆ ನೀವು ಕಿವಿಗೊಡಲೇಬಾರದು. ಬಾಬಿಲೋನಿಯದ ಅರಸನಿಗೆ ಅಡಿಯಾಳಾಗಿರಿ. ಆಗ ಬದುಕುವಿರಿ. ಈ ನಗರವೇಕೆ ನಾಶವಾಗಬೇಕು? 18 ಅವರು ನಿಜವಾದ ಪ್ರವಾದಿಗಳಾಗಿದ್ದರೆ, ಯೆಹೋವ ದೇವರ ವಾಕ್ಯ ಅವರಲ್ಲಿ ನೆಲಸಿದ್ದರೆ, ದೇವಾಲಯದಲ್ಲೂ, ಯೆಹೂದದ ಅರಸನ ಅರಮನೆಯಲ್ಲೂ, ಯೆರೂಸಲೇಮಿನಲ್ಲೂ, ಇನ್ನು ಉಳಿದಿರುವ ಉಪಕರಣಗಳು ಬಾಬಿಲೋನಿಗೆ ಹೋಗದಂತೆ ಸೇನಾಧೀಶ್ವರ ಯೆಹೋವ ದೇವರಿಗೆ ವಿಜ್ಞಾಪನೆಮಾಡಿ ಬೇಡಿಕೊಳ್ಳಲಿ. 19-20 ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ಯೆಹೋಯಾಕೀಮನ ಮಗನೂ, ಯೆಹೂದದ ಅರಸನೂ ಆದ ಯೆಕೊನ್ಯನನ್ನು ಮತ್ತು ಯೆಹೂದದ ಹಾಗೂ ಯೆರೂಸಲೇಮಿನ ಎಲ್ಲ ಮಂತ್ರಿಗಳನ್ನು ಯೆರೂಸಲೇಮಿನಿಂದ ಬಾಬಿಲೋನಿಗೆ ಸೆರೆ ಒಯ್ದಾಗ, ಕೆಲವು ವಸ್ತುಗಳನ್ನು ಅಂದರೆ ಕಂಬಗಳು, ಕಂಚಿನ ಕಡಲು, ಪೀಠಗಳು, ನಗರದಲ್ಲಿ ಉಳಿದಿರುವ ಮತ್ತಿತರ ಉಪಕರಣಗಳು ಇವನ್ನು ತೆಗೆದುಕೊಂಡು ಹೋಗಲಿಲ್ಲ. 21 ದೇವಾಲಯದಲ್ಲೂ, ಯೆಹೂದದ ಅರಸನ ಅರಮನೆಯಲ್ಲೂ, ಯೆರೂಸಲೇಮಿನಲ್ಲೂ ಉಳಿದಿರುವ ಈ ಉಪಕರಣಗಳ ವಿಷಯವಾಗಿ ಇಸ್ರಾಯೇಲರ ದೇವರೂ ಸೇನಾಧೀಶ್ವರ ಯೆಹೋವ ದೇವರು ಇಂತೆನ್ನುತ್ತಾರೆ: 22 ‘ಅವುಗಳನ್ನು ಬಾಬಿಲೋನಿಗೆ ಒಯ್ಯಲಾಗುವುದು. ನಾನು ಬಿಡಿಸುವತನಕ ಅವು ಅಲ್ಲೇ ಇರುವುವು. ಬಳಿಕ ನಾನು ಅವುಗಳನ್ನು ತಂದು ಈ ಸ್ಥಳಕ್ಕೆ ಸೇರಿಸುವೆನು.’ ಇದು ಯೆಹೋವ ದೇವರಾದ ನನ್ನ ನುಡಿ.”
* 27:1 ಯೆಹೋಯಾಕೀಮ ಇನ್ನೊಂದು ಹೆಸರು ಜೆದಕಿಯಾ