32
ಯೆರೆಮೀಯನು ಹೊಲವನ್ನು ಕೊಂಡದ್ದು
1 ನೆಬೂಕದ್ನೆಚ್ಚರನ ಹದಿನೆಂಟನೆಯ ವರ್ಷವಾಗಿದ್ದ, ಯೆಹೂದದ ಅರಸನಾದ ಚಿದ್ಕೀಯನ ಆಳ್ವಿಕೆಯ ಹತ್ತನೆಯ ವರ್ಷದಲ್ಲಿ ಯೆರೆಮೀಯನಿಗೆ ಯೆಹೋವ ದೇವರಿಂದ ಉಂಟಾದ ವಾಕ್ಯವು.
2 ಆಗ ಬಾಬಿಲೋನಿನ ಅರಸನ ಸೈನ್ಯವು ಯೆರೂಸಲೇಮಿಗೆ ಮುತ್ತಿಗೆ ಹಾಕಿತ್ತು. ಪ್ರವಾದಿಯಾದ ಯೆರೆಮೀಯನು ಯೆಹೂದದ ಅರಸನ ಅರಮನೆಯಲ್ಲಿರುವ ಸೆರೆಮನೆಯ ಅಂಗಳದಲ್ಲಿ ಬಂಧಿಸಲಾಗಿದ್ದನು.
3 ಯೆಹೂದದ ಅರಸ ಚಿದ್ಕೀಯನು ಯೆರೆಮೀಯನಿಗೆ, “ನೀನು ಪ್ರವಾದನೆ ಮಾಡುತ್ತಾ, ‘ಯೆಹೋವ ದೇವರೇ ಹೀಗೆಂದಿದ್ದಾರೆ: ನಾನು ಈ ನಗರವನ್ನು ಬಾಬಿಲೋನಿಯದ ಅರಸನ ಕೈಗೆ ಸಿಕ್ಕಿಸುವೆನು. ಅವನು ಇದನ್ನು ವಶಪಡಿಸಿಕೊಳ್ಳುವನು.
4 ಈ ಯೆಹೂದದ ಅರಸ ಚಿದ್ಕೀಯನು ಬಾಬಿಲೋನಿಯರ ಕೈಯಿಂದ ತಪ್ಪಿಸಿಕೊಳ್ಳಲಾಗದೆ, ಅದರ ಅರಸನ ವಶವಾಗುವುದು ಖಂಡಿತ. ಅವನ ಮುಂದೆ ಸಾಕ್ಷಾತ್ತಾಗಿ ನಿಂತು ಮುಖಾಮುಖಿಯಾಗಿ ಮಾತನಾಡುವನು.
5 ಆ ಅರಸನು ಚಿದ್ಕೀಯನನ್ನು ಬಾಬಿಲೋನಿಗೆ ಕೊಂಡು ಒಯ್ಯುವನು. ನಾನು ಅವನಿಗೆ ದಯೆತೋರಿಸುವವರೆಗೂ ಅವನು ಅಲ್ಲಿಯೇ ಇರುವನು. ನೀವು ಬಾಬಿಲೋನಿಯರೊಡನೆ ಯುದ್ಧಮಾಡಿದರೂ ಜಯವಾಗದು. ಇದು ಯೆಹೋವ ದೇವರ ನುಡಿ,’ ಎಂದು ಹೇಳುತ್ತಿರುವೆ, ಏಕೆ?” ಎಂದು ಆಪಾದಿಸಿ ಸೆರೆಯಲ್ಲಿ ಇಟ್ಟಿದ್ದನು.
6 ಆಗ ಯೆರೆಮೀಯನು ತಿಳಿಸಿದ್ದು, “ಯೆಹೋವ ದೇವರ ವಾಕ್ಯವು ನನಗೆ ಬಂತು,
7 ಇಗೋ, ನಿನ್ನ ಚಿಕ್ಕಪ್ಪನಾದ ಶಲ್ಲೂಮನ ಮಗನಾದ ಹನಮೇಲನು ನಿನ್ನ ಬಳಿಗೆ ಬಂದು, ‘ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಏಕೆಂದರೆ ಅದನ್ನು ಕೊಂಡುಕೊಳ್ಳುವ ಹಾಗೆ ವಿಮೋಚಿಸುವ ಅಧಿಕಾರ ನಿನಗುಂಟು,’ ಎಂದು ಹೇಳುವನು.
8 “ಹಾಗೆಯೇ ನನ್ನ ಚಿಕ್ಕಪ್ಪನ ಮಗನಾದ ಹನಮೇಲನು, ಯೆಹೋವ ದೇವರ ವಾಕ್ಯದ ಪ್ರಕಾರ ನನ್ನ ಬಳಿಗೆ ಸೆರೆಮನೆಯ ಅಂಗಳಕ್ಕೆ ಬಂದು, ‘ಬೆನ್ಯಾಮೀನಿನ ದೇಶದಲ್ಲಿರುವ ಅನಾತೋತಿನಲ್ಲಿರುವ ನನ್ನ ಹೊಲವನ್ನು ನಿನಗೋಸ್ಕರ ಕೊಂಡುಕೋ. ಏಕೆಂದರೆ ಬಾಧ್ಯದ ಅಧಿಕಾರವೂ ನಿನ್ನದು; ವಿಮೋಚನೆಯೂ ನಿನ್ನದು; ಅದನ್ನು ನಿನಗೋಸ್ಕರ ಕೊಂಡುಕೋ,’ ಎಂದು ಬೇಡಿಕೊಂಡು ಹೇಳಿದನು.
“ಆಗ ಅದು ಯೆಹೋವ ದೇವರ ವಾಕ್ಯವೆಂದು ನಾನು ತಿಳಿದುಕೊಂಡೆನು.
9 ಹಾಗೆ ನಾನು ನನ್ನ ಚಿಕ್ಕಪ್ಪನ ಮಗನಾದ ಹನಮೇಲನಿಂದ ಅನಾತೋತಿನಲ್ಲಿದ್ದ ಹೊಲವನ್ನು ಕೊಂಡುಕೊಂಡು, ಅವನಿಗೆ ಹದಿನೇಳು ಬೆಳ್ಳಿನಾಣ್ಯ ತೂಕಮಾಡಿ ಕ್ರಯಕೊಟ್ಟೆನು.
10 ನಾನು ಪತ್ರದಲ್ಲಿ ಬರೆದು, ಅದಕ್ಕೆ ಮುದ್ರೆಹಾಕಿ, ಸಾಕ್ಷಿಗಳನ್ನಿಟ್ಟು, ಬೆಳ್ಳಿಯನ್ನು ತ್ರಾಸಿನಲ್ಲಿ ತೂಕಮಾಡಿದೆನು.
11 ಮೇಲೆ ನಾನು ಕ್ರಯಪತ್ರವನ್ನು, ಅಂದರೆ ಚಕ್ಕು ಬಂದಿ ಷರತ್ತುಗಳಿಂದ ಕೂಡಿ ಮುದ್ರಿತವಾದ ಪತ್ರವನ್ನೂ, ಮುಚ್ಚಿದ್ದ ಪತ್ರವನ್ನೂ ತೆಗೆದುಕೊಂಡು,
12 ಮಹ್ಸೇಯನ ಮೊಮ್ಮಗನೂ, ನೇರೀಯನ ಮಗನೂ ಆದ ಬಾರೂಕನ ಕೈಗೆ ಕೊಟ್ಟೆ. ನನ್ನ ಚಿಕ್ಕಪ್ಪನ ಮಗ ಹನಮೇಲನ ಮುಂದೆ ಕ್ರಯಪತ್ರಕ್ಕೆ ರುಜುಮಾಡಿದ ಸಾಕ್ಷಿಗಳ ಸಮಕ್ಷಮದಲ್ಲಿ ಕಾರಾಗೃಹದ ಅಂಗಳದಲ್ಲಿ ಕುಳಿತಿದ್ದ ಎಲ್ಲ ಯೆಹೂದ್ಯರ ಎದುರಿನಲ್ಲಿ ಈ ಕ್ರಯಪತ್ರವನ್ನು ಕೊಟ್ಟೆ.
13 “ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇನೆಂದರೆ:
14 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ. ಈ ಪತ್ರಗಳನ್ನೂ, ಮುದ್ರೆ ಹಾಕಿದ ಈ ಕ್ರಯ ಪತ್ರವನ್ನೂ, ತೆರೆದಿರುವ ಈ ಪತ್ರವನ್ನೂ ತೆಗೆದು, ಅವು ಬಹು ದಿವಸವಿರುವ ಹಾಗೆ ಅವುಗಳನ್ನು ಒಂದು ಮಣ್ಣಿನ ಪಾತ್ರೆಯಲ್ಲಿ ಇಡು.
15 ಇಸ್ರಾಯೇಲಿನ ದೇವರೂ ಸರ್ವಶಕ್ತರೂ ಆದ ಯೆಹೋವ ದೇವರು ಈ ದೇಶದಲ್ಲಿ ತಿರುಗಿ ಮನೆಗಳೂ, ಹೊಲಗಳೂ, ದ್ರಾಕ್ಷಿಯ ತೋಟಗಳೂ ಸ್ವಾಧೀನವಾಗುವುವೆಂದು ಹೇಳುತ್ತಾರೆ.’
16 “ನಾನು ಆ ಕ್ರಯಪತ್ರವನ್ನು ನೇರೀಯನ ಮಗನಾದ ಬಾರೂಕನಿಗೆ ಕೊಟ್ಟ ಮೇಲೆ, ಯೆಹೋವ ದೇವರಿಗೆ ಪ್ರಾರ್ಥನೆ ಮಾಡಿದೆನು:
17 “ಸಾರ್ವಭೌಮ ಯೆಹೋವ ದೇವರೇ, ಇಗೋ, ನೀವು ನಿಮ್ಮ ಮಹಾ ಬಲದಿಂದಲೂ, ನಿಮ್ಮ ಚಾಚಿದ ಕೈಯಿಂದಲೂ ಆಕಾಶವನ್ನೂ, ಭೂಮಿಯನ್ನೂ ಉಂಟುಮಾಡಿದ್ದೀರಿ. ನಿಮಗೆ ಅಸಾಧ್ಯವಾದ ಕಾರ್ಯ ಯಾವುದೂ ಇಲ್ಲ.
18 ನೀವು ಸಾವಿರಾರು ತಲೆಗಳವರೆಗೆ ಪ್ರೀತಿ, ದಯೆತೋರಿಸಿ, ತಂದೆಗಳ ಅಕ್ರಮಗಳನ್ನು ಅವರ ತರುವಾಯ ಇರುವ ಅವರ ಮಕ್ಕಳ ಎದೆಯಲ್ಲಿ ಸುರಿಸುವವರಾಗಿದ್ದೀರಿ. ಮಹತ್ವವುಳ್ಳವರೂ, ಪರಾಕ್ರಮವುಳ್ಳ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಎಂಬುದು ನಿಮ್ಮ ಹೆಸರು.
19 ನೀವು ನಿಮ್ಮ ಯೋಜನೆಯಲ್ಲಿ ದೊಡ್ಡವರು, ಕ್ರಿಯೆಯಲ್ಲಿ ಬಲಿಷ್ಠರು. ನಿಮ್ಮ ಕಣ್ಣುಗಳು ಮನುಷ್ಯರ ಎಲ್ಲಾ ಮಾರ್ಗಗಳ ಮೇಲೆ ಒಬ್ಬೊಬ್ಬನಿಗೆ ಅವನವನ ಮಾರ್ಗದ ಪ್ರಕಾರವಾಗಿಯೂ ಕೊಡುವ ಹಾಗೆ ತೆರೆದಿವೆ.
20 ನೀವು ಈ ದಿನದವರೆಗೂ ಈಜಿಪ್ಟ್ ದೇಶದಲ್ಲಿಯೂ ಇಸ್ರಾಯೇಲಿನಲ್ಲಿಯೂ ಜನಾಂಗಗಳೊಳಗೂ ಗುರುತುಗಳನ್ನೂ, ಲಕ್ಷಣಗಳನ್ನೂ ಇಟ್ಟಿದ್ದೀರಿ. ಇಂದಿನವರೆಗೂ ನಿಮಗೆ ಹೆಸರನ್ನು ಸ್ಥಿರಪಡಿಸಿಕೊಂಡಿದ್ದೀರಿ.
21 ನಿಮ್ಮ ಜನರಾದ ಇಸ್ರಾಯೇಲನ್ನು ಗುರುತುಗಳಿಂದಲೂ, ಲಕ್ಷಣಗಳಿಂದಲೂ, ಬಲವಾದ ಕೈಯಿಂದಲೂ, ಚಾಚಿದ ತೋಳಿನಿಂದಲೂ, ಮಹಾಭಯದಿಂದಲೂ ಈಜಿಪ್ಟ್ ದೇಶದೊಳಗಿಂದ ಹೊರಗೆ ತಂದಿದ್ದೀರಿ.
22 ಅವರ ಪಿತೃಗಳಿಗೆ ಕೊಡುತ್ತೇನೆಂದು ಪ್ರಮಾಣ ಮಾಡಿದ ಹಾಲೂ ಜೇನೂ ಹರಿಯುವ ದೇಶವಾದ ಈ ದೇಶವನ್ನು ಅವರಿಗೆ ಕೊಟ್ಟಿದ್ದೀರಿ.
23 ಅವರು ಅದರಲ್ಲಿ ಸೇರಿ ಅದನ್ನು ಸ್ವಾಧೀನಪಡಿಸಿಕೊಂಡರು. ಆದರೆ ಅವರು ನಿಮ್ಮ ಮಾತಿಗೆ ಕಿವಿಗೊಡಲಿಲ್ಲ. ನಿಮ್ಮ ನಿಯಮದಲ್ಲಿ ನಡೆದುಕೊಳ್ಳಲಿಲ್ಲ. ಮಾಡಬೇಕೆಂದು ನೀವು ಅವರಿಗೆ ಆಜ್ಞಾಪಿಸಿದ್ದನ್ನೆಲ್ಲಾ ಮಾಡಲಿಲ್ಲ. ಆದ್ದರಿಂದ ಈ ಕೇಡನ್ನೆಲ್ಲಾ ಅವರಿಗೆ ಸಂಭವಿಸುವಂತೆ ಮಾಡಿದ್ದೀರಿ.
24 “ಇಗೋ, ಪರ್ವತಗಳು ಪಟ್ಟಣದ ಬಳಿಗೆ ಅದನ್ನು ಹಿಡಿಯುವ ಹಾಗೆ ಬಂದಿವೆ. ಪಟ್ಟಣವು ಅದಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರ ಕೈಯಲ್ಲಿ ಖಡ್ಗ, ಕ್ಷಾಮ, ವ್ಯಾಧಿಗಳ ಮೂಲಕವಾಗಿ ಒಪ್ಪಿಸಲಾಗಿದೆ. ನೀನು ಹೇಳಿದ್ದು ಉಂಟಾಯಿತು. ಇಗೋ, ನೀನು ಅದನ್ನು ನೋಡುತ್ತೀ.
25 ಆದರೂ ಓ ಸಾರ್ವಭೌಮ ಯೆಹೋವ ದೇವರೇ, ನೀನು ನನಗೆ, ‘ಹೊಲವನ್ನು ಹಣಕ್ಕೆ ಕೊಂಡುಕೋ, ಸಾಕ್ಷಿಗಳನ್ನು ಇಡು,’ ಎಂದು ಹೇಳಿದ್ದೀ. ಆದರೂ ಪಟ್ಟಣವು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಲಾಗಿದೆಯಲ್ಲಾ?”
26 ಆಗ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,
27 “ಇಗೋ, ನಾನೇ ಯೆಹೋವ ದೇವರು, ಸಮಸ್ತ ಜನರ ದೇವರು, ನನಗೆ ಯಾವುದಾದರೂ ಅಸಾಧ್ಯವಾದ ಕಾರ್ಯ ಉಂಟೋ?
28 ಆದ್ದರಿಂದ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಈ ಪಟ್ಟಣವನ್ನು ಬಾಬಿಲೋನಿಯರ ಕೈಯಲ್ಲಿಯೂ, ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನ ಕೈಯಲ್ಲಿಯೂ ಒಪ್ಪಿಸುತ್ತೇನೆ. ಅವನು ಅದನ್ನು ವಶಪಡಿಸಿಕೊಳ್ಳುವನು.
29 ಈ ಪಟ್ಟಣಕ್ಕೆ ವಿರೋಧವಾಗಿ ಯುದ್ಧಮಾಡುವ ಬಾಬಿಲೋನಿಯರು ಬಂದು, ಈ ಪಟ್ಟಣಕ್ಕೆ ಬೆಂಕಿ ಹಚ್ಚಿ; ಅದನ್ನೂ ಮತ್ತು ಯಾವ ಮನೆಗಳ ಮಾಳಿಗೆಗಳ ಮೇಲೆ ಬಾಳನಿಗೆ ಧೂಪವನ್ನರ್ಪಿಸಿ, ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ, ಬೇರೆ ದೇವರುಗಳಿಗೆ ಪಾನದ ಅರ್ಪಣೆಗಳನ್ನು ಹೊಯ್ದಿದ್ದಾರೋ ಅವುಗಳನ್ನೂ ಸುಟ್ಟುಬಿಡುವರು.
30 “ಏಕೆಂದರೆ ಇಸ್ರಾಯೇಲರೂ, ಯೆಹೂದದ ಮಕ್ಕಳೂ ತಮ್ಮ ಚಿಕ್ಕಂದಿನಿಂದ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾತ್ರ ಮಾಡಿದ್ದಾರೆ. ಇಸ್ರಾಯೇಲರೂ ತಮ್ಮ ಕೈಕೆಲಸಗಳಿಂದ ನನಗೆ ಕೋಪೋದ್ರೇಕವನ್ನೂ ಎಬ್ಬಿಸಿದ್ದಾರೆ, ಎಂದು ಯೆಹೋವ ದೇವರು ಹೇಳುತ್ತಾರೆ.
31 ಈ ಪಟ್ಟಣವು ಕಟ್ಟಿದ ದಿನದಿಂದ ಈ ದಿನದವರೆಗೂ ನನ್ನ ಕೋಪಕ್ಕೂ, ನನ್ನ ಉಗ್ರಕ್ಕೂ ಗುರಿಯಾಗಿತ್ತು. ನಾನು ಆ ಪಟ್ಟಣವನ್ನು ನನ್ನ ಸನ್ನಿಧಿಯಿಂದ ತೆಗೆದುಹಾಕಬೇಕು.
32 ಇಸ್ರಾಯೇಲರೂ, ಯೆಹೂದದ ಮಕ್ಕಳೂ, ಅವರೂ, ಅವರ ಅರಸರೂ, ಅವರ ಪ್ರಧಾನರೂ, ಅವರ ಯಾಜಕರೂ, ಅವರ ಪ್ರವಾದಿಗಳೂ, ಯೆಹೂದದ ಜನರೂ, ಯೆರೂಸಲೇಮಿನ ನಿವಾಸಿಗಳೂ ಸಹಿತವಾಗಿ ನನಗೆ ಕೋಪೋದ್ರೇಕ ಎಬ್ಬಿಸುವ ಹಾಗೆ ಮಾಡಿದರು
33 ಅವರು ನನಗೆ ಮುಖವನ್ನಲ್ಲ ಬೆನ್ನನ್ನು ತಿರುಗಿಸಿದ್ದಾರೆ. ಆದರೂ ನಾನು ಅವರಿಗೆ ಬೋಧಿಸಿದೆನು. ಪುನಃ ಬೋಧಿಸಿದೆನು. ಆದರೂ ಉಪದೇಶ ಹೊಂದುವುದಕ್ಕೆ ಅವರು ಕಿವಿಗೊಡಲಿಲ್ಲ ಅಥವಾ ಪ್ರತಿಕ್ರಿಯಿಸುವುದಿಲ್ಲ.
34 ಆದರೆ ನನ್ನ ಹೆಸರಿನಿಂದ ಕರೆಯಲಾಗಿರುವ ಮನೆಯಲ್ಲಿ ಅದನ್ನು ಅಪವಿತ್ರ ಮಾಡುವ ಹಾಗೆ ತಮ್ಮ ಅಸಹ್ಯ ವಸ್ತುಗಳನ್ನು ಇಟ್ಟಿದ್ದಾರೆ.
35 ತಮ್ಮ ಗಂಡು ಹೆಣ್ಣು ಮಕ್ಕಳನ್ನು ಮೋಲೆಕ್ ದೇವತೆಗೆ ಆಹುತಿ ಕೊಡುವುದಕ್ಕಾಗಿ ಬೆನ್ ಹಿನ್ನೋಮ್ ತಗ್ಗಿನಲ್ಲಿ ಬಾಳ್ ದೇವತೆಗೆ ಪೂಜಾಸ್ಥಳಗಳನ್ನು ಕಟ್ಟಿಸಿದ್ದಾರೆ. ಹೀಗೆ ಯೆಹೂದ ಕುಲವನ್ನೇ ಪಾಪಕ್ಕೆ ಸಿಕ್ಕಿಸಿದ್ದಾರೆ. ನಾನು ಇಂಥ ಅಸಹ್ಯ ಕಾರ್ಯವನ್ನು ವಿಧಿಸಲಿಲ್ಲ. ಅದರ ಯೋಚನೆ ಕೂಡ ನನ್ನ ಮನಸ್ಸಿನಲ್ಲಿ ಸುಳಿಯಲಿಲ್ಲ.
36 “ ‘ಹೀಗಾದರೂ ಈಗ ಅದು ಖಡ್ಗದಿಂದಲೂ ಬರದಿಂದಲೂ ವ್ಯಾಧಿಯಿಂದಲೂ ಬಾಬಿಲೋನಿನ ಅರಸನ ಕೈವಶವಾಗಿದೆ,’ ಎಂದು ನೀವು ಹೇಳುವ ಈ ಪಟ್ಟಣದ ವಿಷಯ ಇಸ್ರಾಯೇಲಿನ ದೇವರಾದ ಯೆಹೋವ ದೇವರು ಹೇಳುವುದೇನೆಂದರೆ:
37 ನಾನು ನನ್ನ ಕೋಪದಲ್ಲಿಯೂ, ನನ್ನ ಉಗ್ರದಲ್ಲಿಯೂ, ಮಹಾ ರೌದ್ರದಲ್ಲಿಯೂ ಅವರನ್ನು ಓಡಿಸಿಬಿಟ್ಟ ಸಮಸ್ತ ದೇಶದೊಳಗಿಂದ ಅವರನ್ನು ಕೂಡಿಸಿ, ಈ ಸ್ಥಳಕ್ಕೆ ತಿರುಗಿ ತಂದು ಭದ್ರವಾಗಿ ವಾಸಿಸುವಂತೆ ಮಾಡುವೆನು.
38 ಅವರು ನನ್ನ ಜನರಾಗಿರುವರು. ನಾನು ಅವರಿಗೆ ದೇವರಾಗಿರುವೆನು.
39 ಅವರಿಗೂ, ಅವರ ತರುವಾಯ ಅವರ ಮಕ್ಕಳಿಗೂ ಹಿತವಾಗುವ ಹಾಗೆಯೂ; ಅವರು ಯಾವಾಗಲೂ ನನಗೆ ಭಯಪಡುವ ಹಾಗೆಯೂ ಅವರಿಗೆ ಒಂದೇ ಹೃದಯವನ್ನೂ, ಒಂದೇ ಮಾರ್ಗವನ್ನೂ ಕೊಡುವೆನು.
40 ಅವರಿಗೆ ಒಳ್ಳೆಯದನ್ನು ಮಾಡುವ ಹಾಗೆ ನಾನು ತಿರುಗಿಸಿಬಿಡೆನೆಂದು ನಿತ್ಯವಾದ ಒಡಂಬಡಿಕೆಯನ್ನು ಅವರ ಸಂಗಡ ಮಾಡುತ್ತೇನೆ. ಅವರು ನನ್ನನ್ನು ಬಿಡದ ಹಾಗೆ ಭಯವನ್ನು ಅವರ ಹೃದಯದಲ್ಲಿ ಇಡುತ್ತೇನೆ.
41 ಹೌದು, ಅವರಿಗೆ ಒಳ್ಳೆಯದನ್ನು ಮಾಡುವುದಕ್ಕೆ ಅವರೊಂದಿಗೆ ಆನಂದಪಡುವೆನು. ನಿಜವಾಗಿ ನನ್ನ ಪೂರ್ಣಹೃದಯದಿಂದಲೂ, ನನ್ನ ಪೂರ್ಣಪ್ರಾಣದಿಂದಲೂ ಅವರನ್ನು ಈ ದೇಶದಲ್ಲಿ ನೆಡುತ್ತೇನೆ.
42 “ಯೆಹೋವ ದೇವರು ಹೀಗೆ ಹೇಳುತ್ತಾರೆ: ನಾನು ಹೇಗೆ ಈ ಜನರ ಮೇಲೆ ದೊಡ್ಡ ಕೇಡನ್ನು ಬರಮಾಡಿದೆನೋ, ಹಾಗೆಯೇ ನಾನು ವಾಗ್ದಾನ ಮಾಡಿದ ಸಮೃದ್ಧಿಯನ್ನೆಲ್ಲಾ ಅವರ ಮೇಲೆ ಬರಮಾಡುವೆನು.
43 ‘ಜನಪಶುಗಳಿಲ್ಲದೆ ಹಾಳಾಗಿ ಕಸ್ದೀಯರ ಕೈವಶವಾಗಿದೆ,’ ಎಂದು ನೀವು ಹೇಳುವ ಈ ದೇಶದಲ್ಲಿ ಹೊಲಗದ್ದೆಗಳನ್ನು ಕೊಳ್ಳುವರು, ಕೊಡುವರು.
44 ಬೆನ್ಯಾಮೀನನ ದೇಶದಲ್ಲಿಯೂ, ಯೆರೂಸಲೇಮಿನ ಪ್ರದೇಶಗಳಲ್ಲಿಯೂ, ಯೆಹೂದದ ಪಟ್ಟಣಗಳಲ್ಲಿಯೂ, ದಕ್ಷಿಣ ಪಟ್ಟಣಗಳಲ್ಲಿಯೂ ಹೊಲಗಳನ್ನು ಹಣಕ್ಕೆ ಕೊಂಡುಕೊಂಡು, ಪತ್ರಗಳನ್ನು ಬರೆದು ಮುದ್ರೆಹಾಕಿ, ಸಾಕ್ಷಿಗಳನ್ನು ಇಟ್ಟುಕೊಳ್ಳುವರು. ಏಕೆಂದರೆ ನಾನು ಅವರ ಸೆರೆಯಿಂದ ಹಿಂದಿರುಗುವಂತೆ ಮಾಡುವೆನು,” ಎಂದು ಯೆಹೋವ ದೇವರು ನುಡಿಯುತ್ತಾರೆ.