35
ರೇಕಾಬ್ಯರು
1 ಯೋಷೀಯನ ಮಗನಾದ ಯೆಹೂದದ ಅರಸ ಯೆಹೋಯಾಕೀಮನ ಕಾಲದಲ್ಲಿ ಯೆರೆಮೀಯನಾದ ನನಗೆ ಯೆಹೋವ ದೇವರಿಂದ ಬಂದ ವಾಕ್ಯ ಇದು:
2 “ನೀನು ರೇಕಾಬನ ಮನೆತನದವರ ಬಳಿಗೆ ಹೋಗಿ, ಅವರ ಸಂಗಡ ಮಾತನಾಡು. ಅವರನ್ನು ಯೆಹೋವ ದೇವರ ಆಲಯದ ಒಂದು ಕೋಣೆಯೊಳಕ್ಕೆ ಕರೆದು, ದ್ರಾಕ್ಷಾರಸವನ್ನು ಕುಡಿಯುವುದಕ್ಕೆ ಕೊಡು.”
3 ಆಗ ನಾನು ಹಬಚ್ಚಿನ್ಯನ ಮಗ, ಯೆರೆಮೀಯನ ಮಗನಾದ, ಯಾಜನ್ಯನೂ, ಅವನ ಸಹೋದರರನ್ನೂ, ಅವನ ಪುತ್ರರೆಲ್ಲರನ್ನೂ ರೇಕಾಬನ ಸಮಸ್ತ ಮನೆಯವರನ್ನೂ ಕರೆಯುವುದಕ್ಕೆ ಹೋದೆನು.
4 ಕರೆದುಕೊಂಡು ಯೆಹೋವ ದೇವರ ಆಲಯಕ್ಕೆ ದ್ವಾರಪಾಲಕನಾದ ಶಲ್ಲೂಮನ ಮಗನಾದ ಮಾಸೇಯನ ಕೊಠಡಿಯ ಮೇಲಿರುವ ಪ್ರಧಾನರ ಕೊಠಡಿಯ ಬಳಿಯಲ್ಲಿರುವ ದೇವರ ಮನುಷ್ಯನಾದ ಇಗ್ದಲ್ಯನ ಮಗನಾದ ಹಾನಾನನ ಪುತ್ರರ ಕೊಠಡಿಗೆ ತಂದು,
5 ರೇಕಾಬನ ಮನೆತನದವರ ಮುಂದೆ ದ್ರಾಕ್ಷಾರಸ ತುಂಬಿದ ಹೂಜೆಗಳನ್ನೂ, ಪಂಚ ಪಾತ್ರೆಗಳನ್ನೂ ಇಟ್ಟು ಅವರಿಗೆ, “ದ್ರಾಕ್ಷಾರಸ ಕುಡಿಯಿರಿ,” ಎಂದನು.
6 ಆದರೆ ಅವರು, “ನಾವು ದ್ರಾಕ್ಷಾರಸ ಕುಡಿಯುವುದಿಲ್ಲ; ಏಕೆಂದರೆ ನಮ್ಮ ಪೂರ್ವಜನಾದ ರೇಕಾಬನ ಮಗ ಯೋನಾದಾಬನು ನಮಗೆ ಈ ಆಜ್ಞೆಯನ್ನು ಕೊಟ್ಟನು. ಅದು ಏನೆಂದರೆ ನೀವಾದರೂ, ನಿಮ್ಮ ಮಕ್ಕಳಾದರೂ ಎಂದೆಂದಿಗೂ ದ್ರಾಕ್ಷಾರಸವನ್ನು ಕುಡಿಯಬೇಡಿರಿ;
7 ಮನೆ ಕಟ್ಟಬೇಡಿರಿ, ಬೀಜವನ್ನು ಬಿತ್ತಬೇಡಿರಿ; ದ್ರಾಕ್ಷಿತೋಟವನ್ನು ನೆಡಬೇಡಿರಿ, ಅಂಥದ್ದು ನಿಮಗಿರಬಾರದು. ಆದರೆ ನೀವು ಪರಕೀಯರ ದೇಶದಲ್ಲಿ ನಿಮ್ಮ ದಿನಗಳು ಬಹಳವಾಗಿರುವ ಹಾಗೆ ನಿಮ್ಮ ದಿವಸಗಳಲ್ಲೆಲ್ಲಾ ಗುಡಾರಗಳಲ್ಲಿ ವಾಸಮಾಡಬೇಕು.
8 ಈ ಪ್ರಕಾರ ನಾವು ನಮ್ಮ ಪೂರ್ವಜನಾದ ರೇಕಾಬನ ಮಗ ಯೆಹೋನಾದಾಬನ ಮಾತನ್ನು, ಅವನು ನಮಗೆ ಆಜ್ಞಾಪಿಸಿದ್ದೆಲ್ಲದರಲ್ಲಿ ನಾವೂ, ನಮ್ಮ ಹೆಂಡತಿಯರೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ನಮ್ಮ ದಿವಸಗಳಲ್ಲೆಲ್ಲಾ ದ್ರಾಕ್ಷಾರಸ ಕುಡಿಯದ ಹಾಗೆಯೂ,
9 ವಾಸಮಾಡುವುದಕ್ಕೆ ಮನೆಗಳನ್ನು ಕಟ್ಟದ ಹಾಗೆಯೂ ಇದ್ದೇವೆ. ನಮಗೆ ದ್ರಾಕ್ಷಿ ತೋಟಗಳೂ, ಹೊಲಗಳೂ, ಬೀಜವೂ ಇಲ್ಲ.
10 ಗುಡಾರಗಳಲ್ಲಿ ವಾಸಮಾಡುತ್ತೇವೆ. ನಮ್ಮ ಪೂರ್ವಜನಾದ ಯೋನಾದಾಬನು ನಮಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಕೇಳಿ ನಡೆದಿದ್ದೇವೆ.
11 ಆದರೆ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನು ದೇಶದಲ್ಲಿ ಬಂದಾಗ, ‘ನಾವು ಬನ್ನಿ, ಕಸ್ದೀಯರ ದಂಡಿಗೂ, ಅರಾಮಿನ ದಂಡಿಗೂ ತಪ್ಪಿಸಿಕೊಂಡು, ಯೆರೂಸಲೇಮಿಗೆ ಹೋಗೋಣ,’ ಎಂದೆವು. ಹೀಗೆ ಯೆರೂಸಲೇಮಿನಲ್ಲಿಯೇ ಉಳಿದುಕೊಂಡಿದ್ದೇವೆ,” ಎಂದರು.
12 ಆದ್ದರಿಂದ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಉಂಟಾಗಿ,
13 “ಇಸ್ರಾಯೇಲರ ದೇವರೂ, ಸೇನಾಧೀಶ್ವರ ಯೆಹೋವ ದೇವರೂ ಆದ ನಾನು ಹೇಳುವುದು ಇದು: ನೀನು ಹೋಗಿ ಯೆಹೂದ್ಯರಿಗೂ, ಯೆರೂಸಲೇಮಿನ ನಿವಾಸಿಗಳಿಗೂ ಹೀಗೆಂದು ತಿಳಿಸು: ‘ನೀವು ಬುದ್ಧಿ ತಂದುಕೊಂಡು ನನ್ನ ಮಾತುಗಳನ್ನು ಕೇಳುವುದಿಲ್ಲವೇ?’ ಎಂದು ಯೆಹೋವ ದೇವರು ಕೇಳುತ್ತಾರೆ.
14 ರೇಕಾಬನ ಮಗ ಯೆಹೋನಾದಾಬನು ತನ್ನ ಸಂತಾನದವರಿಗೆ ದ್ರಾಕ್ಷಾರಸವನ್ನು ಕುಡಿಯಬಾರದೆಂದು ಕೊಟ್ಟ ಅಪ್ಪಣೆ ನೆರವೇರಿದೆ. ಅವರು ಇಂದಿನವರೆಗೂ ಕುಡಿಯಲಿಲ್ಲ. ತಮ್ಮ ಪೂರ್ವಜನ ಆಜ್ಞೆಯನ್ನು ಕೈಗೊಂಡಿದ್ದಾರೆ. ನೀವೋ, ನಾನು ನಿಮಗೆ ಪದೇಪದೇ ಹೇಳುತ್ತಾ ಬಂದರೂ ನನ್ನ ಮಾತಿಗೆ ಕಿವಿಗೊಡಲಿಲ್ಲ.”
15 ಇದಲ್ಲದೆ, ನಾನು ನನ್ನ ದಾಸರಾದ ಪ್ರವಾದಿಗಳನ್ನೆಲ್ಲಾ ನಿಮ್ಮ ಬಳಿಗೆ ನಿರಂತರವಾಗಿ ಕಳುಹಿಸುತ್ತಾ ಬಂದೆ. “ನೀವೆಲ್ಲರೂ ನಿಮ್ಮ ನಿಮ್ಮ ದುರ್ಮಾರ್ಗಗಳಿಂದ ಹಿಂದಿರುಗಿ, ನಿಮ್ಮ ನಡತೆಗಳನ್ನು ಸರಿಪಡಿಸಿಕೊಳ್ಳಿರಿ. ಅನ್ಯದೇವತೆಗಳನ್ನು ಹಿಂಬಾಲಿಸಿ ಪೂಜಿಸದಿರಿ. ಹಾಗೆ ಮಾಡಿದರೆ ನಾನು ನಿಮಗೂ, ನಿಮ್ಮ ಪೂರ್ವಜರಿಗೂ ಅನುಗ್ರಹಿಸಿದ ನಾಡಿನಲ್ಲಿ ವಾಸಿಸುವಿರಿ ಎಂದು ಅವರ ಮುಖಾಂತರ ಎಚ್ಚರಿಸಿದೆ.” ಆದರೆ ನೀವು ಕೇಳಲಿಲ್ಲ. ಕಿವಿಗೊಡಲೂ ಇಲ್ಲ.
16 ರೇಕಾಬನ ಮಗ ಯೆಹೋನಾದಾಬನ ಸಂತಾನದವರು ತಮ್ಮ ಪೂರ್ವಜನು ತಮಗೆ ವಿಧಿಸಿದ್ದನ್ನು ಕೇಳಿ ಅನುಸರಿಸಿದರು. ಆದರೆ ಈ ಜನರು ನನ್ನ ಮಾತನ್ನು ಕೇಳದೆ ಹೋದರು.
17 “ಆದ್ದರಿಂದ ಸರ್ವಶಕ್ತರಾದ ಯೆಹೋವ ದೇವರೂ, ಇಸ್ರಾಯೇಲಿನ ದೇವರೂ ಆದ ನಾನು ಹೇಳುವುದನ್ನು ಗಮನಿಸು: ‘ಯೆಹೂದ್ಯರಿಗೂ, ಯೆರೂಸಲೇಮಿನವರೆಲ್ಲರಿಗೂ ನಾನು ಕೊಟ್ಟ ಶಾಪದ ಕೇಡುಗಳನ್ನೆಲ್ಲಾ ಅವರ ಮೇಲೆ ಬರಮಾಡುವೆನು. ನಾನು ಹೇಳಿದರೂ, ಅವರು ಕೇಳಲಿಲ್ಲ; ಕೂಗಿದರೂ ಉತ್ತರ ಕೊಡಲಿಲ್ಲ.’ ”
18 ಯೆರೆಮೀಯನು ರೇಕಾಬ್ಯರಿಗೆ, “ಇಸ್ರಾಯೇಲರ ದೇವರೂ, ಸರ್ವಶಕ್ತರೂ ಆದ ಯೆಹೋವ ದೇವರು ಹೀಗೆನ್ನುತ್ತಾರೆ: ನೀವು ನಿಮ್ಮ ಪೂರ್ವಜನಾದ ಯೆಹೋನಾದಾಬನ ಅಪ್ಪಣೆಯನ್ನು ಕೇಳಿ, ಅವನ ಎಲ್ಲ ವಿಧಿಗಳನ್ನು ಅನುಸರಿಸಿ, ಅವನು ಆಜ್ಞಾಪಿಸಿದ್ದನ್ನೆಲ್ಲಾ ನೆರವೇರಿಸಿದ ಕಾರಣ
19 ರೇಕಾಬನ ಮಗ ಯೋನಾದಾಬನ ಸಂತಾನದವರಲ್ಲಿ ನನ್ನ ಸಮ್ಮುಖ ಸೇವೆ ಮಾಡತಕ್ಕವರು ತಲತಲಾಂತರಕ್ಕೂ ಇದ್ದೇ ಇರುವರು, ಇಸ್ರಾಯೇಲರ ದೇವರೂ ಸರ್ವಶಕ್ತರೂ ಆದ ಯೆಹೋವ ದೇವರು ಇದನ್ನು ನುಡಿದಿದ್ದಾರೆ,” ಎಂದನು.