38
ಯೆರೆಮೀಯನನ್ನು ಬಾವಿಯೊಳಗೆ ಹಾಕಿದ್ದು
1 ಮತ್ತಾನನ ಮಗ ಶೆಫಟ್ಯ, ಪಷ್ಹೂರನ ಮಗ ಗೆದಲ್ಯ, ಶೆಲೆಮ್ಯನ ಮಗ ಯೂಕಲ ಹಾಗೂ ಮಲ್ಕೀಯನ ಮಗ ಪಷ್ಹೂರ, ಇವರು ಯೆರೆಮೀಯನು ಜನರೆಲ್ಲರಿಗೆ ಹೇಳುತ್ತಿದ್ದುದನ್ನು ಕೇಳುತ್ತಿದ್ದರು.
2 “ಯೆಹೋವ ದೇವರು ಹೀಗೆನ್ನುತ್ತಾರೆ: ‘ನಗರದಲ್ಲಿ ನಿಲ್ಲುವವರು ಖಡ್ಗ, ಕ್ಷಾಮ, ವ್ಯಾಧಿಗಳಿಂದ ಸಾಯುವರು. ನಗರವನ್ನು ಬಿಟ್ಟು ಹೋಗಿ, ಬಾಬಿಲೋನಿಯರನ್ನು ಮೊರೆಹೋಗುವವರು ಬದುಕುವರು. ತಮ್ಮ ಪ್ರಾಣದೊಂದಿಗೆ ತಪ್ಪಿಸಿಕೊಂಡವರು, ಬದುಕುವರು.
3 ಬಾಬಿಲೋನಿನ ಅರಸನು ಈ ನಗರವನ್ನು ಆಕ್ರಮಿಸುವನು. ಇದು ಅವನ ವಶವಾಗುವುದು ನಿಶ್ಚಯ,’ ಎಂದು ಯೆಹೋವ ದೇವರು ಸಾರುತ್ತಿದ್ದಾರೆ.”
4 ಆಗ ಆ ಪ್ರಧಾನರು ಅರಸನಿಗೆ, “ಈ ಮನುಷ್ಯನು ಸಾಯಬೇಕು; ಇವನು ಅವರ ಸಂಗಡ ಇಂಥಾ ಮಾತುಗಳನ್ನು ಆಡಿ, ಈ ಪಟ್ಟಣದಲ್ಲಿ ಉಳಿದ ಎಲ್ಲಾ ಸೈನಿಕರನ್ನೂ, ಎಲ್ಲಾ ಜನರನ್ನೂ ಎದೆಗುಂದುವಂತೆ ಮಾಡುತ್ತಿದ್ದಾನೆ. ಈ ಮನುಷ್ಯನು ಈ ಜನರ ಕ್ಷೇಮವನ್ನಲ್ಲ, ಅವರ ಹಾನಿಯನ್ನೇ ಹಾರೈಸುತ್ತಾನೆ,” ಎಂದು ಹೇಳಿದರು.
5 ಆಗ ಅರಸನಾದ ಚಿದ್ಕೀಯನು, “ಇಗೋ, ಅವನು ನಿಮ್ಮ ಕೈಯಲ್ಲಿ ಇದ್ದಾನೆ; ನಿಮಗೆ ವಿರೋಧವಾಗಿ ಅರಸನು ಏನು ಮಾಡುವುದಿಲ್ಲ,” ಎಂದನು.
6 ಆಗ ಅವರು ಯೆರೆಮೀಯನನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಸೆರೆಮನೆಯ ಅಂಗಳದಲ್ಲಿದ್ದ ರಾಜವಂಶೀಯನಾದ ಮಲ್ಕೀಯನ ಬಾವಿಯಲ್ಲಿ ನೀರು ಇರಲಿಲ್ಲ. ಕೆಸರು ಮಾತ್ರ ಇತ್ತು. ಯೆರೆಮೀಯನನ್ನು ಕೆಸರಿನಲ್ಲಿ ಹಾಕಿದರು.
7 ಆಗ ಅರಸನು ಮನೆಯಲ್ಲಿರುವ ಕಂಚುಕಿಯಾದ ಕೂಷ್ಯನಾದ ಎಬೆದ್ಮೆಲೆಕನು ಅವರು ಯೆರೆಮೀಯನನ್ನು ಬಾವಿಯಲ್ಲಿ ಹಾಕಿದರೆಂದು ಕೇಳಿದಾಗ, ಅರಸನು ಬೆನ್ಯಾಮೀನನ ಬಾಗಿಲಲ್ಲಿ ಕೂತಿರಲಾಗಿ,
8 ಎಬೆದ್ಮೆಲೆಕನು ಅರಸನ ಅರಮನೆಯನ್ನು ಬಿಟ್ಟು, ಹೊರಟು ಅರಸನ ಸಂಗಡ ಮಾತನಾಡಿ,
9 “ನನ್ನ ಒಡೆಯನಾದ ಅರಸನೇ, ಈ ಮನುಷ್ಯರು ಬಾವಿಯಲ್ಲಿ ಹಾಕಿದ ಪ್ರವಾದಿಯಾದ ಯೆರೆಮೀಯನಿಗೆ ಮಾಡಿದ್ದೆಲ್ಲಾ ಕೇಡಿಗಾಗಿ ಮಾಡಿದ್ದಾರೆ; ಅವನು ಇರುವಲ್ಲಿ ಹಸಿವೆಯಿಂದ ಸಾಯುವವನಾಗಿದ್ದಾನೆ; ಏಕೆಂದರೆ ಪಟ್ಟಣದಲ್ಲಿ ಇನ್ನು ಮೇಲೆ ರೊಟ್ಟಿ ಇಲ್ಲ,” ಎಂದನು.
10 ಆಗ ಅರಸನು ಕೂಷ್ಯನಾದ ಎಬೆದ್ಮೆಲೆಕನಿಗೆ, “ನೀನು ಇಲ್ಲಿಂದ ಮೂವತ್ತು ಮಂದಿಯನ್ನು ಕರೆದುಕೊಂಡು ಹೋಗಿ, ಪ್ರವಾದಿಯಾದ ಯೆರೆಮೀಯನನ್ನು ಅವನು ಸಾಯುವುದಕ್ಕಿಂತ ಮುಂಚೆ ಬಾವಿಯೊಳಗಿಂದ ಮೇಲಕ್ಕೆತ್ತು,” ಎಂದು ಆಜ್ಞಾಪಿಸಿದನು.
11 ಆಗ ಎಬೆದ್ಮೆಲೆಕನು ಆ ಮನುಷ್ಯರನ್ನು ಕರೆದುಕೊಂಡು, ಖಜಾನೆ ಕೆಳಗಿರುವ ಅರಮನೆಗೆ ಹೋಗಿ, ಅಲ್ಲಿಂದ ಹರಿದುಹೋದ ಹಳೆಯ ಬಟ್ಟೆಗಳನ್ನೂ, ಸವೆದು ಹೋದ ಹಳೆಯ ವಸ್ತ್ರಗಳನ್ನೂ ತೆಗೆದುಕೊಂಡು, ಅವುಗಳನ್ನು ಹಗ್ಗಗಳಂತೆ ಯೆರೆಮೀಯನ ಬಳಿಗೆ ಬಾವಿಯೊಳಗೆ ಇಳಿಸಿದನು.
12 ಕೂಷ್ಯನಾದ ಎಬೆದ್ಮೆಲೆಕನು ಯೆರೆಮೀಯನಿಗೆ, “ಈ ಹರಿದು ಸವೆದು ಹೋದ ಹಳೆಯ ಬಟ್ಟೆಗಳನ್ನು ಹಗ್ಗಗಳ ಕೆಳಗೆ ನಿನ್ನ ಕಂಕಳುಗಳಲ್ಲಿ ಇಟ್ಟುಕೋ,” ಎಂದನು. ಯೆರೆಮೀಯನು ಹಾಗೆ ಮಾಡಿದನು.
13 ಹೀಗೆ ಹಗ್ಗಗಳಿಂದ ಯೆರೆಮೀಯನನ್ನು ಎಳೆದು, ಅವನನ್ನು ಬಾವಿಯೊಳಗಿಂದ ಎತ್ತಿದನು. ಆಮೇಲೆ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ಉಳಿದನು.
ಚಿದ್ಕೀಯನು ಯೆರೆಮೀಯನನ್ನು ಮತ್ತೆ ಪ್ರಶ್ನಿಸಿದ್ದು
14 ಆಗ ಅರಸನಾದ ಚಿದ್ಕೀಯನು ಪ್ರವಾದಿಯಾದ ಯೆರೆಮೀಯನನ್ನು ತನ್ನ ಬಳಿಗೆ ಕರೆಯಿಸಿ, ಯೆಹೋವ ದೇವರ ಆಲಯದಲ್ಲಿರುವ ಮೂರನೆಯ ದ್ವಾರಕ್ಕೆ ಕರೆದುಕೊಂಡು ಹೋದನು. ಆಗ ಅರಸನು ಯೆರೆಮೀಯನಿಗೆ, “ನಾನು ನಿನ್ನಿಂದ ಒಂದು ಕೇಳುತ್ತೇನೆ, ನನಗೆ ಯಾವುದನ್ನಾದರೂ ಬಚ್ಚಿಡಬೇಡ,” ಎಂದನು.
15 ಆಗ ಯೆರೆಮೀಯನು ಚಿದ್ಕೀಯನಿಗೆ, “ನಾನು ನಿನಗೆ ತಿಳಿಸಿದರೆ, ನೀನು ನನ್ನನ್ನು ನಿಶ್ಚಯವಾಗಿ ಕೊಂದು ಹಾಕುವುದಿಲ್ಲವೋ? ನಾನು ನಿನಗೆ ಆಲೋಚನೆ ಹೇಳಿದರೆ, ನೀನು ನನ್ನನ್ನು ಕೇಳುವುದಿಲ್ಲ,” ಎಂದು ಹೇಳಿದನು.
16 ಹೀಗೆ ಅರಸನಾದ ಚಿದ್ಕೀಯನು ಯೆರೆಮೀಯನಿಗೆ ಅಂತರಂಗದಲ್ಲಿ ಪ್ರಮಾಣಮಾಡಿ, “ನಮಗೆ ಈ ಪ್ರಾಣವನ್ನು ಉಂಟುಮಾಡಿದ ಯೆಹೋವ ದೇವರ ಜೀವದಾಣೆ, ನಾನು ನಿನ್ನನ್ನು ಕೊಂದುಹಾಕುವುದಿಲ್ಲ; ನಿನ್ನ ಪ್ರಾಣವನ್ನು ಹುಡುಕುವ ಈ ಮನುಷ್ಯರ ಕೈಯಲ್ಲಿ ಒಪ್ಪಿಸುವುದಿಲ್ಲ,” ಎಂದನು.
17 ಆಗ ಯೆರೆಮೀಯನು ಚಿದ್ಕೀಯನಿಗೆ ಹೇಳಿದ್ದೇನೆಂದರೆ, “ಇಸ್ರಾಯೇಲಿನ ದೇವರಾಗಿರುವ ಸೈನ್ಯಗಳ ದೇವರಾದ ಯೆಹೋವ ದೇವರು ಹೀಗೆ ಹೇಳುತ್ತಾರೆ: ‘ನೀನು ನಿಶ್ಚಯವಾಗಿ ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋದರೆ, ನಿನ್ನ ಪ್ರಾಣವು ಬದುಕುವುದು. ಈ ಪಟ್ಟಣವು ಬೆಂಕಿಯಿಂದ ಸುಡಲಾಗುವುದಿಲ್ಲ. ನೀನೂ, ನಿನ್ನ ಮನೆಯವರೂ ಬದುಕುವಿರಿ.
18 ಆದರೆ ನೀನು ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಹೋಗದಿದ್ದರೆ, ಈ ಪಟ್ಟಣವು ಕಸ್ದೀಯರ ಕೈಯಲ್ಲಿ ಒಪ್ಪಿಸಲಾಗುವುದು. ಅವರು ಅದನ್ನು ಬೆಂಕಿಯಿಂದ ಸುಡುವರು. ನೀನು ಅವರ ಕೈಯಿಂದ ತಪ್ಪಿಸಿಕೊಳ್ಳುವುದಿಲ್ಲ,’ ” ಎಂದನು.
19 ಆಗ ಅರಸನಾದ ಚಿದ್ಕೀಯನು ಯೆರೆಮೀಯನಿಗೆ, “ನಾನು ಕಸ್ದೀಯರಿಗೆ ಒಳಗಾಗಿರುವ ಯೆಹೂದ್ಯರ ವಿಷಯ ಅಂಜುತ್ತೇನೆ. ಒಂದು ವೇಳೆ ಅವರು ನನ್ನನ್ನು ಅವರ ಕೈಯಲ್ಲಿ ಒಪ್ಪಿಸಿಯಾರು. ಆಗ ಅವರು ನನ್ನನ್ನು ಹಿಂಸಿಸಬಹುದು,” ಎಂದನು.
20 ಆದರೆ ಯೆರೆಮೀಯನು, “ಅವರು ನಿನ್ನನ್ನು ಒಪ್ಪಿಸುವುದಿಲ್ಲ” ನಾನು ನಿನಗೆ ಹೇಳುವ ಯೆಹೋವ ದೇವರ ವಾಕ್ಯವನ್ನು ಮಾತ್ರ ಕೇಳು; ಆಗ ನಿನಗೆ ಒಳ್ಳೆಯದಾಗುವುದು. ನಿನ್ನ ಪ್ರಾಣ ಬದುಕುವುದು.
21 ಆದರೆ ನೀನು ಶರಣಾಗತಿಯನ್ನು ನಿರಾಕರಿಸಿದರೆ, ಯೆಹೋವ ದೇವರು ನನಗೆ ತೋರಿಸಿದ ಮಾತು ಇದೇ:
22 ಇಗೋ, ಯೆಹೂದದ ಅರಸನ ಅರಮನೆಯಲ್ಲಿ ಉಳಿದ ಹೆಂಗಸರೆಲ್ಲರು ಬಾಬಿಲೋನಿನ ಅರಸನ ಪ್ರಧಾನರ ಬಳಿಗೆ ಹೊರಗೆ ಕರೆತರಲಾಗಿ ಹೇಳುವುದೇನೆಂದರೆ,
“ನಿನ್ನ ಸ್ನೇಹಿತರು ನಿನ್ನನ್ನು ಪ್ರೇರೇಪಿಸಿ,
ನಿನ್ನನ್ನು ಗೆದ್ದಿದ್ದಾರೆ.
ನಿನ್ನ ಕಾಲುಗಳು ಕೆಸರಿನಲ್ಲಿ ಹೂತಿರುವುದನ್ನು ನೋಡಿ,
ಹಿಂದಿರುಗಿದ್ದಾರೆಂದು ನಿಂದಿಸುವರು.
23 “ಹಾಗೆ ನಿನ್ನ ಹೆಂಡತಿಯರನ್ನೂ, ನಿನ್ನ ಮಕ್ಕಳನ್ನೂ ಕಸ್ದೀಯರ ಬಳಿಗೆ ಹೊರಗೆ ತರುವರು. ನೀನು ಅವರ ಕೈಗೆ ತಪ್ಪಿಸಿಕೊಳ್ಳುವುದಿಲ್ಲ. ಬಾಬಿಲೋನಿನ ಅರಸನ ಕೈಯಿಂದ ಸೆರೆಯಾಗುವೆ. ಈ ಪಟ್ಟಣವು ಬೆಂಕಿಯಿಂದ ಸುಟ್ಟುಹೋಗುವುದು,” ಎಂದನು.
24 ಆಗ ಚಿದ್ಕೀಯನು ಯೆರೆಮೀಯನಿಗೆ, “ನೀನು ಸಾಯದ ಹಾಗೆ ಈ ಮಾತುಗಳನ್ನು ಯಾರಿಗೂ ತಿಳಿಸಬಾರದು.
25 ಆದರೆ ಪ್ರಧಾನರು ನಾನು ನಿನ್ನ ಸಂಗಡ ಮಾತಾಡಿದ್ದೇನೆಂದು ಕೇಳಿ, ‘ನಿನ್ನ ಬಳಿಗೆ ಬಂದು, ನೀನು ಅರಸನಿಗೆ ಹೇಳಿದ್ದನ್ನು ನಮಗೆ ಮರೆಮಾಡದೆ ತಿಳಿಸು. ನಾವು ನಿನ್ನನ್ನು ಕೊಂದುಹಾಕುವುದಿಲ್ಲ. ಅರಸನು ನಿನ್ನ ಸಂಗಡ ಮಾತಾಡಿದ್ದನ್ನು ಸಹ ತಿಳಿಸು,’ ಎಂದು ಹೇಳಿದರೆ,
26 ನೀನು ಅವರಿಗೆ, ‘ನನ್ನನ್ನು ತಿರುಗಿ ಯೋನಾತಾನನ ಮನೆಗೆ ನಾನು ಅಲ್ಲಿ ಸಾಯುವ ಹಾಗೆ ತೆಗೆದುಕೊಂಡು ಹೋಗಬೇಡವೆಂದು ಅರಸನ ಮುಂದೆ ಬಿನ್ನಹ ಮಾಡಿದೆನೆಂದು ಹೇಳು,’ ಎಂದು ಹೇಳಿದನು.”
27 ಆಗ ಪ್ರಧಾನರೆಲ್ಲರೂ ಯೆರೆಮೀಯನ ಬಳಿಗೆ ಬಂದು ಅವನನ್ನು ಕೇಳಿದರು. ಅವನು ಅರಸನು ಆಜ್ಞಾಪಿಸಿದ ಈ ಮಾತುಗಳನ್ನೆಲ್ಲಾ ಅವರಿಗೆ ತಿಳಿಸಿದನು. ಆಗ ಅವರು ಸುಮ್ಮನಾದರು. ಏಕೆಂದರೆ ಆ ಕಾರ್ಯದ ವಿಷಯವನ್ನು ಅವರು ಗ್ರಹಿಸಲಿಲ್ಲ.
28 ಈ ಪ್ರಕಾರ ಯೆರೂಸಲೇಮು ಸೆರೆಯಾಗುವ ದಿವಸದವರೆಗೆ ಯೆರೆಮೀಯನು ಸೆರೆಮನೆಯ ಅಂಗಳದಲ್ಲಿ ವಾಸವಾಗಿದ್ದನು.
ಯೆರೂಸಲೇಮಿನ ಪತನ
ಯೆರೂಸಲೇಮು ಹಿಡಿಯಲಾಗುವಾಗ ಅಲ್ಲೇ ಇದ್ದನು.