43
1 ಯೆರೆಮೀಯನು ಜನರೆಲ್ಲರಿಗೆ ಅವರ ದೇವರಾದ ಯೆಹೋವ ದೇವರು ಯಾವ ವಿಷಯವಾಗಿ ಅವನನ್ನು ಅವರ ಬಳಿಗೆ ಕಳುಹಿಸಿದ್ದರೋ, ಆ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದಾಗ,
2 ಹೋಷಾಯನ ಮಗನಾದ ಅಜರ್ಯನೂ, ಕಾರೇಹನ ಮಗನಾದ ಯೋಹಾನಾನನೂ, ಗರ್ವಿಷ್ಠ ಮನುಷ್ಯರೆಲ್ಲರೂ ಮಾತನಾಡಿ ಯೆರೆಮೀಯನಿಗೆ, “ನೀನು ಸುಳ್ಳು ಹೇಳುತ್ತೀ, ಅಲ್ಲಿ ಪ್ರವಾಸಿಯಾಗಿರುವುದಕ್ಕೆ ಈಜಿಪ್ಟಿಗೆ ಹೋಗಬಾರದೆಂದು ಹೇಳುವುದಕ್ಕೆ ನಮ್ಮ ದೇವರಾದ ಯೆಹೋವ ದೇವರು ನಿನ್ನನ್ನು ಕಳುಹಿಸಲಿಲ್ಲ.
3 ಆದರೆ ಅವರು ನಮ್ಮನ್ನು ಕೊಂದುಹಾಕುವ ಹಾಗೆಯೂ, ನಮ್ಮನ್ನು ಬಾಬಿಲೋನಿಗೆ ಸೆರೆ ಒಯ್ಯುವ ಹಾಗೆಯೂ, ನಮ್ಮನ್ನು ಬಾಬಿಲೋನಿಯರ ಕೈಯಲ್ಲಿ ಒಪ್ಪಿಸಬೇಕೆಂದು ನೇರೀಯನ ಮಗನಾದ ಬಾರೂಕನು ನಿನ್ನನ್ನು ನಮಗೆ ವಿರೋಧವಾಗಿ ಪ್ರೇರೇಪಿಸಿದ್ದಾನೆ,” ಎಂದರು.
4 ಈ ಪ್ರಕಾರ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ, ಜನರೆಲ್ಲರೂ ಯೆಹೂದ ದೇಶದಲ್ಲಿ ವಾಸಮಾಡುವ ಹಾಗೆ, ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ.
5 ಆದರೆ ಕಾರೇಹನ ಮಗ ಯೋಹಾನಾನನೂ, ಸೈನ್ಯಾಧಿಪತಿಗಳೆಲ್ಲರೂ ತಾವು ಅಟ್ಟಿಬಿಟ್ಟಿದ್ದ ಎಲ್ಲಾ ಜನಾಂಗಗಳಿಂದ ಯೆಹೂದ ದೇಶದಲ್ಲಿ ವಾಸಮಾಡುವುದಕ್ಕೆ ತಿರುಗಿ ಬಂದ ಯೆಹೂದದಲ್ಲಿ ಉಳಿದವರನ್ನು,
6 ಅಂದರೆ ಗಂಡಸರನ್ನೂ, ಹೆಂಗಸರನ್ನೂ, ಮಕ್ಕಳನ್ನೂ, ಅರಸನ ಪುತ್ರಿಯರನ್ನೂ, ಕಾವಲಿನವರ ಅಧಿಪತಿಯಾದ ನೆಬೂಜರದಾನನು ಶಾಫಾನನ ಮೊಮ್ಮಗ ಅಹೀಕಾಮನ ಮಗ ಗೆದಲ್ಯನ ಸಂಗಡ ಬಿಟ್ಟವರೆಲ್ಲರನ್ನೂ, ಪ್ರವಾದಿಯಾದ ಯೆರೆಮೀಯನನ್ನೂ, ನೇರೀಯನ ಮಗ ಬಾರೂಕನನ್ನೂ ತೆಗೆದುಕೊಂಡು ಈಜಿಪ್ಟ್ ದೇಶಕ್ಕೆ ಹೋದರು.
7 ಏಕೆಂದರೆ ಅವರು ಯೆಹೋವ ದೇವರ ಮಾತಿಗೆ ಕಿವಿಗೊಡಲಿಲ್ಲ. ಹೀಗೆ ಅವರು ಈಜಿಪ್ಟಿಗೆ ಹೋಗಿ ತಹಪನೇಸಿಗೆ ಬಂದರು.
8 ಆಗ ತಹಪನೇಸಿನಲ್ಲಿ ಯೆಹೋವ ದೇವರ ವಾಕ್ಯವು ಯೆರೆಮೀಯನಿಗೆ ಬಂದಿತು.
9 “ನಿನ್ನ ಕೈಯಲ್ಲಿ ದೊಡ್ಡ ಕಲ್ಲುಗಳನ್ನು ತೆಗೆದು ತಹಪನೇಸಿನಲ್ಲಿರುವ ಫರೋಹನ ಮನೆಯ ಪ್ರವೇಶದಲ್ಲಿರುವ ಇಟ್ಟಿಗೆ ಭಟ್ಟಿಯ ಮಣ್ಣಿನಲ್ಲಿ ಯೆಹೂದ್ಯರ ಮುಂದೆ ಬಚ್ಚಿಟ್ಟು, ಅವರಿಗೆ ಹೇಳತಕ್ಕದ್ದೇನೆಂದರೆ:
10 ‘ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ: ಇಗೋ, ನಾನು ಕಳುಹಿಸಿ ನನ್ನ ಸೇವಕನಾದ ಬಾಬಿಲೋನಿನ ಅರಸನಾದ ನೆಬೂಕದ್ನೆಚ್ಚರನನ್ನು ಕರೆಯಿಸಿ, ನಾನು ಬಚ್ಚಿಟ್ಟಿರುವ ಈ ಕಲ್ಲುಗಳ ಮೇಲೆ ಅವನ ಸಿಂಹಾಸನವನ್ನು ಇಡುವೆನು. ಅವನು ತನ್ನ ಮೇಲ್ಕಟ್ಟನ್ನು ಅವುಗಳ ಮೇಲೆ ಹಾಸುವನು.
11 ಅವನು ಬಂದು ಈಜಿಪ್ಟ್ ದೇಶವನ್ನು ಹೊಡೆದು, ಮರಣಕ್ಕೆ ಇರುವವರನ್ನು ಮರಣಕ್ಕೂ, ಸೆರೆಗೆ ಇರುವವರನ್ನು ಸೆರೆಗೂ, ಖಡ್ಗಕ್ಕೆ ಇರುವವರನ್ನು ಖಡ್ಗಕ್ಕೂ ಒಪ್ಪಿಸುವನು.
12 ನಾನು ಈಜಿಪ್ಟ್ ದೇವರುಗಳ ಆಲಯಗಳಲ್ಲಿ ಬೆಂಕಿ ಹಚ್ಚುವೆನು. ಅವನು ಅವರನ್ನು ಸುಟ್ಟುಬಿಟ್ಟು, ಸೆರೆಯಾಗಿ ಒಯ್ಯುವನು. ಕುರುಬನು ತನ್ನ ಉಡುಪನ್ನು ಹೇನುಗಳಿಂದ ಶುದ್ಧೀಕರಿಸುವಂತೆ ಅವನು ಈಜಿಪ್ಟ್ ದೇಶವನ್ನು ಶುದ್ಧವಾಗಿಸಿಕೊಂಡು ಅಲ್ಲಿಂದ ಸಮಾಧಾನವಾಗಿ ಹೊರಟು ಹೋಗುತ್ತಾನೆ.
13 ಇದಲ್ಲದೆ ಈಜಿಪ್ಟಿನ ದೇಶದಲ್ಲಿರುವ ಸೂರ್ಯ ದೇವಾಲಯವನ್ನು ಒಡೆದುಹಾಕಿ, ಈಜಿಪ್ಟ್ ದೇವರುಗಳ ಆಲಯಗಳನ್ನು ಬೆಂಕಿಯಿಂದ ಸುಡುವನು.’ ”