45
ಬಾರೂಕನಿಗೆ ಸಂದೇಶ
1 ಯೆಹೂದದ ಅರಸನಾದ ಯೋಷೀಯನ ಮಗನಾದ ಯೆಹೋಯಾಕೀಮನ ನಾಲ್ಕನೆಯ ವರ್ಷದಲ್ಲಿ ನೇರೀಯನ ಮಗನಾದ ಬಾರೂಕನ ಈ ಮಾತುಗಳನ್ನು ಯೆರೆಮೀಯನ ಬಾಯಿಂದ ಬಂದ ಹಾಗೆ, ಸುರುಳಿಯಲ್ಲಿ ಬರೆದ ಮೇಲೆ ಪ್ರವಾದಿಯಾದ ಯೆರೆಮೀಯನು ಅವನಿಗೆ ಹೇಳಿದ ವಾಕ್ಯವೇನೆಂದರೆ,
2 “ಬಾರೂಕನೇ, ಇಸ್ರಾಯೇಲಿನ ದೇವರಾದ ಯೆಹೋವ ದೇವರು ನಿನ್ನನ್ನು ಕುರಿತು ಹೀಗೆ ಹೇಳುತ್ತಾರೆ.
3 ‘ಈಗ ನನಗೆ ಕಷ್ಟ! ಏಕೆಂದರೆ, ಯೆಹೋವ ದೇವರು ನನ್ನ ನೋವಿಗೆ ಚಿಂತೆಯನ್ನು ಕೂಡಿಸಿದ್ದಾರೆ. ನಿಟ್ಟುಸಿರು ಬಿಡುವುದರಿಂದ ದಣಿದಿದ್ದೇನೆ. ವಿಶ್ರಾಂತಿಯನ್ನು ಕಾಣೆನೆಂದು ನೀನು ಹೇಳಿದಿಯಲ್ಲಾ.’
4 ಆದರೆ ನಿಮಗೆ ಹೇಳಲು ಯೆಹೋವ ದೇವರು ನನಗೆ ಹೇಳಿದ್ದಾರೆ. ‘ಯೆಹೋವ ದೇವರು ಹೀಗೆ ಹೇಳುತ್ತಾರೆ. ಇಗೋ, ನಾನು ಕಟ್ಟಿದ್ದನ್ನು ಕೆಡವಿಬಿಡುತ್ತೇನೆ; ನಾನು ನೆಟ್ಟದ್ದನ್ನು ಕಿತ್ತು ಹಾಕುತ್ತೇನೆ. ಹೌದು, ಈ ಸಮಸ್ತ ದೇಶವನ್ನೇ ನಾಶಮಾಡುತ್ತೇನೆ.
5 ಹಾಗಾದರೆ ನೀನು ನಿನಗೋಸ್ಕರ ದೊಡ್ಡವುಗಳನ್ನು ಹುಡುಕುತ್ತೀಯೋ? ಹುಡುಕಬೇಡ. ನಾನು ಎಲ್ಲಾ ಶರೀರದ ಮೇಲೆ ಕೇಡನ್ನು ತರುತ್ತೇನೆಂದು ಯೆಹೋವ ದೇವರು ಹೇಳುತ್ತಾರೆ. ಆದರೂ ನೀನು ಹೋಗುವ ಎಲ್ಲಾ ಸ್ಥಳಗಳಲ್ಲಿ ನಿನ್ನ ಪ್ರಾಣವನ್ನು ನೀನು ಉಳಿಸಿಕೊಳ್ಳುವಂತೆ ಮಾಡುವೆನು, ಎಂದು ನಿನಗೆ ಹೇಳಿದ್ದಾರೆ,’ ಎಂದನು.”