19
ಸಿಮೆಯೋನನ ಪಾಲು
1 ಎರಡನೆಯ ಚೀಟು ಬಿದ್ದ ಭಾಗವು ಸಿಮೆಯೋನನ ಗೋತ್ರದವರದಾಗಿತ್ತು. ಸಿಮೆಯೋನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು. ಅವರ ಸೊತ್ತು ಯೆಹೂದ ಗೋತ್ರದ ಸೊತ್ತಿನ ಮಧ್ಯದಲ್ಲಿತ್ತು.
2 ಅವರಿಗೆ ಸೇರಿದ ಪಟ್ಟಣಗಳು ಯಾವುವೆಂದರೆ:
ಬೇರ್ಷೆಬಾ ಅಥವಾ ಶೆಬಾ, ಮೋಲಾದಾ,
3 ಹಚರ್ ಷೂವಾಲ್, ಬಾಲಾ, ಎಚೆಮ್,
4 ಎಲ್ತೋಲದ್, ಬೆತೂಲ್, ಹೊರ್ಮಾ,
5 ಚಿಕ್ಲಗ್, ಬೇತ್ ಮರ್ಕಾಬೋತ್, ಹಚರ್‌ಸೂಸಾ,
6 ಬೇತ್ ಲೆಬಾವೋತ್, ಶಾರೂಹೆನ್ ಎಂಬ ಹದಿಮೂರು ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿದ್ದವು.
7 ಇದಲ್ಲದೆ ಆಯಿನ್, ರಿಮ್ಮೋನ್, ಎತೆರ್, ಆಷಾನ್ ಎಂಬ ನಾಲ್ಕು ಪಟ್ಟಣಗಳು ಅವುಗಳ ಗ್ರಾಮಗಳೂ ಆಗಿದ್ದವು.
8 ಇದರೊಂದಿಗೆ ಬಾಲಾತ್ ಬೇರಿನವರೆಗೂ ಇರುವ ಎಲ್ಲಾ ಪಟ್ಟಣ ಮತ್ತು ಅದರ ಗ್ರಾಮಗಳೂ ಬಾಲತ್ ಬೇರ್ ಎಂಬುದು ದಕ್ಷಿಣದಲ್ಲಿರುವ ನೆಗೇವಿನ ರಾಮದಲ್ಲಿ ಇರುತ್ತದೆ.
ಇದೇ ಸಿಮೆಯೋನನ ಗೋತ್ರದವರ ಕುಟುಂಬಗಳ ಪ್ರಕಾರ ದೊರೆತ ಸೊತ್ತು.
9 ಸಿಮೆಯೋನನ ಗೋತ್ರದವರಿಗೆ ಬಾಧ್ಯತೆ ಯೆಹೂದ ಗೋತ್ರದವರ ಭಾಗದಿಂದ ಸಿಕ್ಕಿತು. ಏಕೆಂದರೆ ಯೆಹೂದ ಗೋತ್ರದ ಭಾಗವು ಅವರಿಗೆ ಹೆಚ್ಚಾಗಿದ್ದ ಕಾರಣ, ಸಿಮೆಯೋನನ ಗೋತ್ರದವರು ಯೆಹೂದ ಗೋತ್ರದವರ ಎಲ್ಲೆಯ ಒಳಗಿಂದಲೇ ತಮ್ಮ ಪಾಲನ್ನು ಹೊಂದಿದರು.
ಜೆಬುಲೂನನ ಪಾಲು
10 ಮೂರನೆಯ ಚೀಟು ಬಿದ್ದ ಭಾಗ ಜೆಬುಲೂನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಬಿದ್ದಿತು.
ಅವರ ಬಾಧ್ಯತೆಯ ಮೇರೆ ಸಾರೀದ್ ವರೆಗೂ ಇತ್ತು.
11 ಅಲ್ಲಿಂದ ಪಶ್ಚಿಮ ಕಡೆಗೆ ಹೋಗಿ, ಮರಾಳಕ್ಕೆ ಏರಿ, ದಬ್ಬೆಷೆತಿಗೆ ಹೋಗಿ, ಯೊಕ್ನೆಯಾಮಿಗೆ ಎದುರಾದ ಹಳ್ಳಕ್ಕೆ ಹೋಗುತ್ತದೆ.
12 ಅದು ಸಾರೀದಿನಿಂದ ಸೂರ್ಯನು ಉದಯಿಸುವ ಪೂರ್ವದಿಕ್ಕಿನ ಕಿಸ್ಲೋತ್ ತಾಬೋರಿನ ಮೇರೆಗೆ ತಿರುಗಿ, ಅಲ್ಲಿಂದ ದಾಬೆರತಿಗೆ ಹೋಗುತ್ತದೆ. ಅಲ್ಲಿಂದ ಏರುತ್ತಾ ಯಾಫೀಯಕ್ಕೆ ಹೋಗುತ್ತದೆ.
13 ಅಲ್ಲಿಂದ ಪೂರ್ವದಿಕ್ಕಿನಲ್ಲಿ ಮುಂದುವರೆದು ಗತ್‌ಹೇಫೆರನ್ನು ಮತ್ತು ಎತ್‌ಕಾಚೀನನ್ನು ದಾಟಿ, ರಿಮ್ಮೋನವರೆಗೂ ಹೋಗಿ ನೇಯಗೆ ತಿರುಗುತ್ತದೆ.
14 ಅಲ್ಲಿಂದ ಆ ಮೇರೆ ಉತ್ತರ ದಿಕ್ಕಿನಲ್ಲಿರುವ ಹನ್ನಾತೋನಿಗೆ ಸುತ್ತಿಕೊಂಡು ಇಫ್ತಯೇಲನ ಹಳ್ಳದ ತಗ್ಗಿಗೆ ಮುಗಿಯುತ್ತದೆ.
15 ಈ ಮೇರೆಯಲ್ಲಿರುವ ಕಟ್ಟಾತ್, ನಹಲಾಲ್, ಶಿಮ್ರೋನ್, ಇದಲಾ, ಬೇತ್ಲೆಹೇಮ್ ಮೊದಲಾದ ಹನ್ನೆರಡು ಪಟ್ಟಣಗಳು, ಅವುಗಳ ಗ್ರಾಮಗಳು ಸಹ ಒಳಪಟ್ಟಿರುತ್ತದೆ
16 ಜೆಬುಲೂನಿನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಆ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರ ಬಾಧ್ಯತೆಯಾಗಿದ್ದವು.
ಇಸ್ಸಾಕಾರನ ಪಾಲು
17 ನಾಲ್ಕನೆಯ ಚೀಟು ಇಸ್ಸಾಕಾರನ ಸಂತತಿಯವರಿಗೆ ಬಿದ್ದಿತು.
18 ಅವರ ಮೇರೆಯು: ಇಜ್ರೆಯೇಲ್
ಕೆಸುಲೋತ್, ಶೂನೇಮ್,
19 ಹಫಾರಯಿಮ್, ಶಿಯೋನ್, ಅನಾಹರತ್,
20 ರಬ್ಬೀತ್, ಕಿಷ್ಯೋನ್, ಎಬೆಜ್,
21 ರೆಮೆತ್, ಏಂಗನ್ನೀಮ್, ಏನ್ ಹದ್ದಾ, ಬೇತ್ ಪಚ್ಚೇಚ್ ಎಂಬ ತೀರಗಳನ್ನು ಒಳಗೊಂಡಿತ್ತು.
22 ಆ ಎಲ್ಲೆಯು ತಾಬೋರ್, ಶಹಚೀಮಾ, ಬೇತ್ ಷೆಮೆಷ್ ಎಂಬ ಊರುಗಳಿಗೆ ಸೇರಿ ಯೊರ್ದನ್ ನದಿ ತೀರದಲ್ಲಿ ಮುಗಿಯುತ್ತದೆ.
ಅಲ್ಲಿ ಹದಿನಾರು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
23 ಇಸ್ಸಾಕಾರನ ಗೋತ್ರದ ಮಕ್ಕಳಿಗೆ ಅವರ ಕುಟುಂಬಗಳ ಪ್ರಕಾರ ಪಟ್ಟಣಗಳೂ, ಅವುಗಳ ಗ್ರಾಮಗಳೂ ಅವರಿಗೆ ದೊರೆತ ಪಾಲು.
ಆಶೇರನ ಪಾಲು
24 ಚೀಟು ಬಿದ್ದ ಐದನೆಯ ಭಾಗವು ಆಶೇರನ ಗೋತ್ರಕ್ಕೆ ಅವರ ಕುಟುಂಬದ ಪ್ರಕಾರ ದೊರೆಯಿತು.
25 ಅವರ ಮೇರೆ:
ಹೆಲ್ಕತ್, ಹಲೀ, ಬೆಟೆನ್, ಅಕ್ಷಾಫ್,
26 ಅಲಮ್ಮೆಲೆಕ್, ಅಮಾದ್, ಮಿಷಾಲ್ ಎಂಬ ಪಟ್ಟಣಗಳನ್ನು ಸುತ್ತಿಕೊಂಡು ಅದು ಪಶ್ಚಿಮಕ್ಕೆ ಕರ್ಮೆಲ್, ಶೀಹೋರ್ ಲಿಬ್ನತ್ ಕಡೆ ಹೋಗಿ,
27 ಅಲ್ಲಿಂದ ಪೂರ್ವದ ಕಡೆಯಾಗಿ ಬೇತ್‌ದಾಗೋನಿಗೆ ತಿರುಗುತ್ತದೆ. ಅನಂತರ ಜೆಬುಲೂನಿಗೂ ಬೇತ್ ಏಮೆಕಿಗೆ ಉತ್ತರ ದಿಕ್ಕಿನಲ್ಲಿ ಇರುವ ಇಫ್ತಯೇಲ್ ತಗ್ಗಿಗೂ ನೆಗೀಯೇಲ್ ಕಡೆ ಹಾದು, ಎಡಭಾಗದಲ್ಲಿರುವ ಕಾಬೂಲ್ ಕಡೆ ಮುಂದುವರೆಯುತ್ತದೆ.
28 ಅಲ್ಲಿಂದ ಅಬ್ದೋನ್, ರೆಹೋಬ್, ಹಮ್ಮೋನ್, ಕಾನಾ ಹಾಗೂ ಸೀದೋನ್ ಎಂಬ ಮಹಾನಗರಕ್ಕೆ ಹೋಗುತ್ತದೆ.
29 ಅಲ್ಲಿಂದ ರಾಮಾ, ಟೈರ್ ಎಂಬ ಕೋಟೆಪಟ್ಟಣದವರೆಗೂ ಹೋಗುತ್ತದೆ. ಅಲ್ಲಿಂದ ಹೋಸಾ ಕಡೆ ಹೊರಟು ಮೆಡಿಟೆರಿಯನ್ ಸಮುದ್ರದ ಬಳಿ ಅಕ್ಜೀಬ್ ಮೇರೆಯ ಅಂಚಿಗೆ ಮುಗಿಯುತ್ತದೆ.
30 ಅದಕ್ಕೆ ಉಮ್ಮಾ, ಅಫೇಕ್ ಮತ್ತು ರೆಹೋಬ್
ಒಟ್ಟು ಇಪ್ಪತ್ತೆರಡು ಪಟ್ಟಣಗಳೂ ಅವುಗಳ ಗ್ರಾಮಗಳೂ ಇದ್ದವು.
31 ಇದೇ ಆಶೇರನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆತ ಪಟ್ಟಣಗಳೂ, ಅವುಗಳ ಗ್ರಾಮಗಳೂ ಆಗಿರುತ್ತವೆ.
ನಫ್ತಾಲಿಗೆ ದೊರೆತ ಭಾಗ
32 ಆರನೆಯ ಚೀಟು ಬಿದ್ದ ಭಾಗವು ನಫ್ತಾಲಿಯ ಗೋತ್ರದ್ದಾಗಿತ್ತು. ನಫ್ತಾಲಿಯ ಗೋತ್ರದ ಅವರ ಕುಟುಂಬಗಳ ಪ್ರಕಾರ ಪಾಲು ದೊರೆಯಿತು.
33 ಅವರ ಮೇರೆಯು ಹೆಲೇಫ್ ಮತ್ತು ಚಾನನ್ನೀಮ್ ಎಂಬ ಕಡೆಯಲ್ಲಿ ಇರುವ ಅಲ್ಲೋನ್ ಮರದಿಂದ, ಆದಾಮಿ ನೆಕೆಬ್, ಯಬ್ನೆಯೇಲ್, ಇವುಗಳ ಮೇಲೆ ಹಾದು ಲಕ್ಕೂಮ್ ತನಕ ಹೋಗಿ ಯೊರ್ದನ್ ನದಿಯ ತೀರದಲ್ಲಿ ಮುಗಿಯುತ್ತದೆ.
34 ಆ ಮೇರೆಯು ಪಶ್ಚಿಮಕ್ಕೆ ಅಜ್ನೋತ್ ತಾಬೋರ್ ಕಡೆಗೆ ತಿರುಗಿ, ಅಲ್ಲಿಂದ ಹುಕ್ಕೋಕ್ ಹೊರಟು, ದಕ್ಷಿಣಕ್ಕೆ ಜೆಬುಲೂನನನ್ನೂ ಪಶ್ಚಿಮಕ್ಕೆ ಆಶೇರನ್ನೂ ಮತ್ತು ಯೆಹೂದಿಯರ ಮೇರೆಗೂ ಪೂರ್ವದಿಕ್ಕಿನಲ್ಲಿ ಯೊರ್ದನ್ ನದಿಯನ್ನು ಮುಟ್ಟಿ ಬರುವುದು.
35 ಇದರಲ್ಲಿರುವ ಕೋಟೆಗಳುಳ್ಳ ಪಟ್ಟಣಗಳು ಯಾವುವೆಂದರೆ: ಜಿದ್ದೀಮ್, ಚೇರ್, ಹಮ್ಮತ್, ರಕ್ಕತ್, ಕಿನ್ನೆರೆತ್,
36 ಅದಾಮಾ, ರಾಮಾ, ಹಾಚೋರ್,
37 ಕೆದೆಷ್, ಎದ್ರೈ, ಎನ್ ಹಾಚೋರ್,
38 ಇರೋನ್, ಮಿಗ್ದಲ್ ಎಲ್, ಹೊರೇಮ್, ಬೇತ್ ಅನಾತ್ ಹಾಗೂ ಬೇತ್ ಷೆಮೆಷ್.
ಮೊದಲಾದ ಹತ್ತೊಂಬತ್ತು ಕೋಟೆಪಟ್ಟಣಗಳೂ, ಅವುಗಳ ಗ್ರಾಮಗಳು.
39 ಇದೇ ನಫ್ತಾಲಿಯ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ಸೊತ್ತಾಗಿ ಸಿಕ್ಕಿದ ಪಟ್ಟಣಗಳೂ ಅವುಗಳ ಗ್ರಾಮಗಳು.
ದಾನ್ ಗೋತ್ರಕ್ಕೆ ದೊರೆತ ಭಾಗ
40 ಇದಲ್ಲದೆ ಏಳನೆಯ ಚೀಟು ಬಿದ್ದ ಭಾಗವು ದಾನನ ಗೋತ್ರದವರಿಗೆ ಅವರ ಕುಟುಂಬಗಳ ಪ್ರಕಾರ ದೊರೆಯಿತು.
41 ಅವರಿಗೆ ದೊರೆತ ಸೊತ್ತಿನ ವಿವರ:
ಚೊರ್ಗಾ, ಎಷ್ಟಾವೋಲ್, ಈರ್ ಷೆಮೆಷ್,
42 ಶಾಲಬ್ಬೀನ್, ಅಯ್ಯಾಲೋನ್, ಇತ್ಲಾ,
43 ಏಲೋನ್, ತಿಮ್ನಾ, ಎಕ್ರೋನ್,
44 ಎಲ್ತೆಕೇ, ಗಿಬ್ಬೆತೋನ್, ಬಾಲಾತ್,
45 ಯೆಹುದ್, ಬೆನೇ ಬೆರಕ್, ಗತ್ ರಿಮ್ಮೋನ್,
46 ಮೇಯರ್ಕೋನ್, ರಕ್ಕೋನ್ ಎಂಬ ಪಟ್ಟಣಗಳು. ಯೊಪ್ಪ ಊರಿಗೆ ಎದುರಾದ ಮೇರೆಯು ಸಹ ದೊರಕಿತು.
47 ಇದಲ್ಲದೆ ದಾನನ ಗೋತ್ರದ ಮೇರೆಯು ಅವರಿಗೆ ಸಾಲದ್ದರಿಂದ ಅವರು ಹೊರಟುಹೋಗಿ ಲೆಷೆಮಿನ ಮೇಲೆ ಖಡ್ಗದಿಂದ ಯುದ್ಧಮಾಡಿ, ಅದನ್ನು ಸೋಲಿಸಿ, ಸ್ವಾಧೀನಮಾಡಿಕೊಂಡರು. ಅವರು ಅದರಲ್ಲಿ ವಾಸವಾಗಿದ್ದು ಲೆಷೆಮಿಗೆ ತಮ್ಮ ತಂದೆಯಾದ ದಾನನ ಹೆಸರಿನ ಪ್ರಕಾರ ದಾನ್ ಎಂದು ಹೆಸರಿಟ್ಟರು.
48 ಈ ಪಟ್ಟಣಗಳೂ, ಅವುಗಳ ಗ್ರಾಮಗಳೂ, ದಾನ್ ಗೋತ್ರಕ್ಕೆ ಅವರ ಕುಟುಂಬಗಳ ಪ್ರಕಾರ ದೊರೆತ ಬಾಧ್ಯತೆಯು ಇದೇ.
ಯೆಹೋಶುವನಿಗೆ ಕೊಟ್ಟ ಭಾಗ
49 ಅವರು ದೇಶವನ್ನು ಅದರ ಮೇರೆಗಳ ಪ್ರಕಾರ ಬಾಧ್ಯತೆಯಾಗಿ ಹಂಚಿಕೊಂಡ ಮೇಲೆ ಇಸ್ರಾಯೇಲರು ನೂನನ ಮಗನಾದ ಯೆಹೋಶುವನಿಗೆ ತಮ್ಮ ಮಧ್ಯದಲ್ಲಿ ಪಾಲನ್ನು ಕೊಟ್ಟರು.
50 ಅವನು ಕೇಳಿದ ಎಫ್ರಾಯೀಮ್ ಬೆಟ್ಟದಲ್ಲಿರುವ ತಿಮ್ನತ್ ಸೆರಹ ಎಂಬ ಪಟ್ಟಣವನ್ನು ಯೆಹೋವ ದೇವರ ಆಜ್ಞೆಯ ಪ್ರಕಾರ ಕೊಟ್ಟರು. ಅವನು ಪಟ್ಟಣವನ್ನು ಕಟ್ಟಿಕೊಂಡು ಅಲ್ಲಿಯೇ ನೆಲೆಸಿದನು.
51 ಯಾಜಕನಾದ ಎಲಿಯಾಜರನೂ ನೂನನ ಮಗ ಯೆಹೋಶುವನೂ ಇಸ್ರಾಯೇಲರ ಗೋತ್ರಗಳ ಪಿತೃಗಳ ಹಿರಿಯರೂ ಶೀಲೋವಿನಲ್ಲಿ ದೇವದರ್ಶನ ಗುಡಾರದ ಬಾಗಿಲ ಬಳಿಯಲ್ಲಿ ಯೆಹೋವ ದೇವರ ಸಮ್ಮುಖದಲ್ಲಿ ಚೀಟುಹಾಕಿ ಹಂಚಿಕೊಟ್ಟ ಬಾಧ್ಯತೆಗಳು ಇವೇ. ಹೀಗೆ ಅವರು ದೇಶವನ್ನು ಹಂಚಿಕೊಳ್ಳುವ ಕೆಲಸವನ್ನು ಪೂರೈಸಿದರು.