4
ಸೊಲೊಮೋನನ ಅಧಿಕಾರಿಗಳು ಮತ್ತು ರಾಜ್ಯಪಾಲರು
ಹೀಗೆ ಅರಸನಾದ ಸೊಲೊಮೋನನು ಸಮಸ್ತ ಇಸ್ರಾಯೇಲಿನ ಮೇಲೆ ಅರಸನಾಗಿದ್ದನು.
 
ಅವನಿಗೆ ಇದ್ದ ಮುಖ್ಯ ಅಧಿಕಾರಿಗಳು ಯಾರೆಂದರೆ:
 
ಚಾದೋಕನ ಮಗ ಅಜರ್ಯನು ಮುಖ್ಯಯಾಜಕನಾಗಿದ್ದನು.
ಶೀಷನ ಮಕ್ಕಳಾದ ಎಲೀಹೋರೆಫ್ ಹಾಗು ಅಹೀಯಾಹು ಎಂಬವರು ಕಾರ್ಯದರ್ಶಿಗಳು.
ಅಹೀಲೂದನ ಮಗನಾದ ಯೆಹೋಷಾಫಾಟನು ಅವನ ಲೇಖಕ.
ಯೆಹೋಯಾದಾವನ ಮಗ ಬೆನಾಯನು ಸೈನ್ಯದ ಅಧಿಪತಿಯು,
ಚಾದೋಕನೂ, ಅಬಿಯಾತರನೂ ಯಾಜಕರು.
ನಾತಾನನ ಮಗ ಅಜರ್ಯನು ಅಧಿಪತಿಗಳ ಮೇಲ್ವಿಚಾರಕನು.
ನಾತಾನನ ಮಗ ಜಾಬೂದನು ಯಾಜಕನು ಹಾಗು ಅರಸನ ವೈಯಕ್ತಿಕ ಸಲಹೆಗಾರನು.
ಅಹಿಷಾರನು ರಾಜ್ಯ ಗೃಹಾಧಿಪತಿ.
ಅಬ್ದನ ಮಗ ಅದೋನೀರಾಮನು ದಾಸರ ಮೇಲೆ ಉಸ್ತುವಾರಿಮಾಡಿಸುವವನಾಗಿದ್ದನು.
 
ಇದಲ್ಲದೆ ಅರಸನಿಗೂ, ಅವನ ಮನೆಗೂ ಆಹಾರವನ್ನು ಸಿದ್ಧಮಾಡಿಸುವುದಕ್ಕೋಸ್ಕರ ಸೊಲೊಮೋನನಿಗೆ ಸಮಸ್ತ ಇಸ್ರಾಯೇಲಿನ ಮೇಲೆ ಹನ್ನೆರಡು ಜಿಲ್ಲಾಧಿಕಾರಿಗಳು ಇದ್ದರು. ಪ್ರತಿಯೊಬ್ಬನೂ ತನಗೆ ವರುಷದಲ್ಲಿ ನೇಮಕವಾದ ತಿಂಗಳು ಬಂದಾಗ, ದವಸಧಾನ್ಯಗಳನ್ನು ಒದಗಿಸುತ್ತಿದ್ದನು.
 
ಅವರ ಹೆಸರುಗಳು, ಅವರ ಜಿಲ್ಲೆಗಳು:
 
ಬೆನ್ ಹೂರ್ ಎಫ್ರಾಯೀಮ್ ಪರ್ವತ ಪ್ರದೇಶದ ಅಧಿಕಾರಿ.
ಬೆನ್ ಡೆಕೆರ್ ಮಾಕಾಚ್, ಶಾಲ್ಬೀಮ್, ಬೇತ್ ಷೆಮೆಷ್, ಏಲೋನ್ ಹಾಗು ಬೇತ್ ಹಾನಾನ್‌ಗಳಲ್ಲಿ ಅಧಿಕಾರಿ.
10 ಬೆನ್ ಹೆಸೆದ್ ಅರುಬ್ಬೋತದಲ್ಲಿ ಅಧಿಕಾರಿ. ಸೋಕೋ ಮತ್ತು ಹೇಫೆರಿನ ಎಲ್ಲಾ ಪ್ರದೇಶಗಳು ಅವನವಾಗಿದ್ದವು.
11 ಬೆನ್ ಅಬೀನಾದಾಬ್ ನಾಫೋತ್ ದೋರ್‌ದಲ್ಲಿ ಅಧಿಕಾರಿ. ಅವನು ಸೊಲೊಮೋನನ ಮಗಳಾದ ಟಾಫತಳನ್ನು ಮದುವೆಯಾಗಿದ್ದನು.
12 ಅಹೀಲೂದನ ಮಗ ಬಾಣಾ ಎಂಬವನು ತಾನಕ್, ಮೆಗಿದ್ದೋ, ಬೇತ್ ಷೆಯಾನಿನ ಎಲ್ಲಾ ಕಡೆಗಳಲ್ಲಿಯೂ ಆಳಿಕೆಮಾಡುತ್ತಿದ್ದನು. ಬೇತ್ ಶಾನ್ ಚಾರೆತಾನಿನ ಪಕ್ಕದಲ್ಲಿದ್ದ ಇಜ್ರೆಯೇಲ್ ಎಂಬ ಪಟ್ಟಣದ ಕೆಳಗಿತ್ತು. ಅವನ ಪ್ರಾಂತವು ಬೇತ್ ಷೆಯಾನಿನಿಂದ ಆಬೇಲ್ ಮೆಹೋಲದವರೆಗೆ ಯೊಕ್ಮೆಯಾಮಿನಲ್ಲಿ ಅಂತ್ಯಗೊಂಡಿತ್ತು.
13 ಬೆನ್ ಗೆಬೆರ್ ಗಿಲ್ಯಾದಿನ ರಾಮೋತ್ ಎಂಬ ಊರಿಗೆ ಅಧಿಕಾರಿಯಾಗಿದ್ದನು. ಈ ಗಿಲ್ಯಾದಿನ ಪ್ರಾಂತದಲ್ಲಿ ಮನಸ್ಸೆಯ ಮಗ ಯಾಯೀರನ ಗ್ರಾಮಗಳಿಗೂ, ಬಾಷಾನಿನಲ್ಲಿ ಪೌಳಿ ಗೋಡೆಗಳಿಂದಲೂ, ಕಬ್ಬಿಣದ ಅಗುಳಿಗಳಿಂದಲೂ ಭದ್ರಮಾಡಲಾಗಿದ್ದ ಅರವತ್ತು ಪಟ್ಟಣಗಳಲ್ಲಿದ್ದ ಅರ್ಗೋಬ್ ಪ್ರದೇಶಕ್ಕೂ ಅಧಿಕಾರಿಯಾಗಿದ್ದನು.
14 ಇದ್ದೋ ಎಂಬವನ ಮಗನಾದ ಅಹೀನಾದಾಬ್ ಮಹನಯಿಮ್ ಎಂಬ ಸ್ಥಳಕ್ಕೆ ಅಧಿಕಾರಿ.
15 ಅಹೀಮಾಚ್ ನಫ್ತಾಲಿಯಲ್ಲಿ ಅಧಿಕಾರಿ. ಅವನಿಗೆ ಸೊಲೊಮೋನನ ಮಗಳಾದ ಬಾಸೆಮತ್ ಹೆಂಡತಿಯಾಗಿದ್ದಳು.
16 ಹೂಷೈಯ ಮಗ ಬಾಣಾ ಆಶೇರದಲ್ಲಿ ಮತ್ತು ಆಲೋತಿನಲ್ಲಿ ಅಧಿಕಾರಿ.
17 ಫಾರೂಹನ ಮಗ ಯೆಹೋಷಾಫಾಟನು ಇಸ್ಸಾಕಾರ್ ಪ್ರಾಂತದಲ್ಲಿ ಅಧಿಕಾರಿ.
18 ಏಲನ ಮಗ ಶಿಮ್ಮಿಯು ಬೆನ್ಯಾಮೀನ್ ಪ್ರಾಂತದಲ್ಲಿ ಅಧಿಕಾರಿ.
19 ಊರಿಯನ ಮಗ ಗೆಬೆರನು ಗಿಲ್ಯಾದಿನಲ್ಲಿ ಅಧಿಕಾರಿ. ಅಮೋರಿಯರ ಅರಸನಾದ ಸೀಹೋನನ ದೇಶಕ್ಕೂ ಬಾಷಾನಿನ ಅರಸನಾದ ಓಗನ ದೇಶಕ್ಕೂ ಅವನೊಬ್ಬನೇ ಅಧಿಪತಿಯಾಗಿದ್ದನು.
ಸೊಲೊಮೋನನ ದಿನದ ದವಸ ಧಾನ್ಯಗಳು
20 ಯೆಹೂದ ಮತ್ತು ಇಸ್ರಾಯೇಲಿನ ಜನರು ಸಮುದ್ರದ ಮರಳಿನ ಹಾಗೆ ಅಸಂಖ್ಯಾತರಾದರು. ಅವರು ಉಂಡು ಕುಡಿದು ಸುಖದಿಂದ ಇದ್ದರು. 21 ಇದಲ್ಲದೆ ಸೊಲೊಮೋನನು ಯೂಫ್ರೇಟೀಸ್ ಮೊದಲುಗೊಂಡು ಫಿಲಿಷ್ಟಿಯರ ದೇಶ ಮತ್ತು ಈಜಿಪ್ಟಿನ ಮೇರೆಯವರೆಗೂ ಇರುವ ಸಮಸ್ತ ರಾಜ್ಯಗಳನ್ನು ಆಳುತ್ತಿದ್ದನು. ಆ ರಾಜ್ಯಗಳವರು ಸೊಲೊಮೋನನು ಜೀವಿಸಿರುವ ದಿವಸಗಳೆಲ್ಲಾ ಕಪ್ಪಗಳನ್ನು ಕೊಡುವವರಾಗಿ ಅವನಿಗೆ ಅಧೀನರಾಗಿದ್ದರು.
22 ಸೊಲೊಮೋನನು ಒಂದು ದಿನದ ಭೋಜನಕ್ಕೆ ಕೊಡುತ್ತಿದ್ದ ಆಹಾರ ಪದಾರ್ಥಗಳು 5,000 ಕಿಲೋಗ್ರಾಂ* ನಯವಾದ ಗೋಧಿಯ ಹಿಟ್ಟು, 10,000 ಕಿಲೋಗ್ರಾಂ ಜವೆಗೋಧಿ, 23 ಕೊಬ್ಬಿದ ಎತ್ತುಗಳು ಹತ್ತು, ಮೇಯುವ ಎತ್ತುಗಳು ಇಪ್ಪತ್ತು, ಕುರಿಗಳು ನೂರು. ಇವುಗಳ ಹೊರತಾಗಿ ದುಪ್ಪಿಗಳೂ, ಜಿಂಕೆಗಳೂ, ಕೆಂದ ಜಿಂಕೆಗಳೂ, ಕೊಬ್ಬಿದ ಕೋಳಿಗಳೂ ಆಗಿದ್ದವು. 24 ಯೂಫ್ರೇಟೀಸ್ ನದಿಯ ಈಚೆಯಲ್ಲಿ ತಿಪ್ಸಹು ಮೊದಲುಗೊಂಡು ಗಾಜದವರೆಗೂ, ನದಿಯ ಈಚೆಯಲ್ಲಿರುವ ಸಮಸ್ತ ಅರಸರ ಮೇಲೆ ಅವನು ಅಧಿಕಾರಿಯಾಗಿದ್ದನು. ಇದಲ್ಲದೆ ಅವನಿಗೆ ಸುತ್ತಲಿರುವ ಸಮಸ್ತ ದಿಕ್ಕಿನಲ್ಲಿ ಅವನಿಗೆ ಸಮಾಧಾನವಿತ್ತು. 25 ಹೀಗೆಯೇ ದಾನ್ ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ, ಸೊಲೊಮೋನನ ಸಮಸ್ತ ದಿವಸಗಳಲ್ಲಿ ಯೆಹೂದ ಮತ್ತು ಇಸ್ರಾಯೇಲಿನಲ್ಲಿರುವ ಪ್ರತಿಯೊಬ್ಬ ಮನುಷ್ಯನು ತನ್ನ ದ್ರಾಕ್ಷಿಬಳ್ಳಿಯ ಕೆಳಗೂ, ತನ್ನ ಅಂಜೂರದ ಮರದ ಕೆಳಗೂ ಸುರಕ್ಷಿತವಾಗಿ ವಾಸವಾಗಿದ್ದರು.
26 ಸೊಲೊಮೋನನಿಗೆ ತನ್ನ ರಥಗಳಿಗೋಸ್ಕರ ನಲವತ್ತು ಸಾವಿರ ಕುದುರೆಗಳಿಗೆ ಸ್ಥಳವಿತ್ತು, ಹನ್ನೆರಡು ಸಾವಿರ ರಾಹುತರೂ ಇದ್ದರು.
27 ಆ ಅಧಿಪತಿಗಳು ತಮಗೆ ನೇಮಕವಾದ ತಿಂಗಳಲ್ಲಿ ಅರಸನಾದ ಸೊಲೊಮೋನನಿಗೋಸ್ಕರವೂ, ಅರಸನ ಮೇಜಿಗೆ ಬರುವವರೆಲ್ಲರಿಗೋಸ್ಕರವೂ ಸಿದ್ಧಮಾಡಿದ್ದರು. ಅವರಿಗೆ ಕೊರತೆಯಾದದ್ದು ಒಂದೂ ಇರಲಿಲ್ಲ. 28 ಹೀಗೆಯೇ ಪ್ರತಿಯೊಬ್ಬನು ತನ್ನ ನೇಮಕದ ಪ್ರಕಾರ ಕುದುರೆಗಳಿಗೋಸ್ಕರವೂ, ಸವಾರಿ ಒಂಟೆಗಳಿಗೋಸ್ಕರವೂ, ಅವುಗಳ ಸ್ಥಳಕ್ಕೆ ಜವೆಗೋಧಿಯನ್ನೂ, ಹುಲ್ಲನ್ನೂ ತಂದರು.
ಸೊಲೊಮೋನನ ಜ್ಞಾನ
29 ದೇವರು ಸೊಲೊಮೋನನಿಗೆ ಅತ್ಯಧಿಕವಾಗಿ ಜ್ಞಾನವನ್ನೂ, ಗ್ರಹಿಕೆಯನ್ನೂ, ಸಮುದ್ರ ತೀರದಲ್ಲಿಯ ಮರಳಿನ ಹಾಗೆಯೇ ವಿವೇಕವನ್ನೂ ಕೊಟ್ಟರು. 30 ಸೊಲೊಮೋನನ ಜ್ಞಾನವು ಮೂಡಣ ದೇಶದ ಸಮಸ್ತರ ಜ್ಞಾನಕ್ಕಿಂತಲೂ, ಈಜಿಪ್ಟಿನ ಸಮಸ್ತರ ಜ್ಞಾನಕ್ಕಿಂತಲೂ ಅಧಿಕವಾಗಿತ್ತು. 31 ಜೇರಹನ ಮಗನಾದ ಏತಾನನು, ಮಹೋಲನ ಮಕ್ಕಳಾದ ಹೇಮಾನನು, ಕಲ್ಕೋಲನು, ದರ್ದನು ಮೊದಲಾದ ಸಮಸ್ತ ಮನುಷ್ಯರಿಗಿಂತಲೂ ಅವನು ಜ್ಞಾನಿಯಾಗಿದ್ದನು. ಸುತ್ತಲಿರುವ ಸಕಲ ದೇಶಗಳಲ್ಲಿ ಅವನ ಕೀರ್ತಿ ಇತ್ತು. 32 ಅವನು ಮೂರು ಸಾವಿರ ಜ್ಞಾನೋಕ್ತಿಗಳನ್ನು ಹೇಳಿದನು. ಅವನ ಹಾಡುಗಳು ಸಾವಿರದ ಐದು. 33 ಅವನು ಮರಗಳನ್ನು ಕುರಿತು ಲೆಬನೋನಿನಲ್ಲಿರುವ ದೇವದಾರು ಮರ ಮೊದಲುಗೊಂಡು ಗೋಡೆಯ ಮೇಲೆ ಬೆಳೆಯುವ ಹಿಸ್ಸೋಪಿನವರೆಗೂ ಹೇಳಿದನು. ಇದಲ್ಲದೆ ಮೃಗಗಳನ್ನು ಕುರಿತೂ, ಪಕ್ಷಿಗಳನ್ನು ಕುರಿತೂ, ಕ್ರಿಮಿಗಳನ್ನು ಕುರಿತೂ, ಮೀನುಗಳನ್ನು ಕುರಿತೂ ಪ್ರಸ್ತಾಪಿಸಬಲ್ಲವನಾಗಿದ್ದನು. 34 ಸೊಲೊಮೋನನ ಜ್ಞಾನವನ್ನು ಕುರಿತು ಕೇಳಿದ ಭೂಮಿಯ ಮೇಲಿರುವ ಸಮಸ್ತ ಅರಸರ ಬಳಿಯಿಂದ ಎಲ್ಲಾ ಜನಗಳು ಅವನ ಜ್ಞಾನವನ್ನು ಕೇಳಲು ಬಂದರು.
* 4:22 ಸುಮಾರು ಮೂವತ್ತು ಕೋರ್ 4:22 ಸುಮಾರು ಅರವತ್ತು ಕೋರ್ 4:31 ದರ್ದನು ಹೀಬ್ರೂ ಭಾಷೆಯಲ್ಲಿ ದಾರಾ