6
ಸೊಲೊಮೋನನು ದೇವಾಲಯವನ್ನು ಕಟ್ಟಿಸಿದ್ದು
1 ಇಸ್ರಾಯೇಲರು ಈಜಿಪ್ಟ್ ದೇಶದಿಂದ ಬಂದ ನಾನೂರ ಎಂಬತ್ತನೆಯ ವರುಷದಲ್ಲಿ ಇಸ್ರಾಯೇಲಿನ ಮೇಲೆ ಸೊಲೊಮೋನನ ಆಳಿಕೆಯ ನಾಲ್ಕನೆಯ ವರ್ಷದ, ಎರಡನೆಯ ತಿಂಗಳಾದ ಜಿವ್ ತಿಂಗಳಲ್ಲಿ ಅವನು ಯೆಹೋವ ದೇವರ ಆಲಯವನ್ನು ಕಟ್ಟಿಸಲು ಪ್ರಾರಂಭಿಸಿದನು.
2 ಅರಸನಾದ ಸೊಲೊಮೋನನು ಯೆಹೋವ ದೇವರಿಗೋಸ್ಕರ ಆಲಯವನ್ನು ಕಟ್ಟಿಸಿದನು, ಅದರ ಉದ್ದ ಸುಮಾರು 27 ಮೀಟರ್, ಅದರ ಅಗಲ 9 ಮೀಟರ್, ಅದರ ಎತ್ತರ 14 ಮೀಟರ್.
3 ಮಂದಿರದ ಮುಂದೆ ಮಂಟಪವಿತ್ತು. ಅದು ಆಲಯದ ಅಗಲದ ಪ್ರಕಾರ ಸುಮಾರು 9 ಮೀಟರ್ ಉದ್ದವಾಗಿತ್ತು. ಆಲಯದ ಮುಂದೆ ಇರುವ ಅದರ ಅಗಲವು 4.5 ಮೀಟರ್.
4 ಅವನು ಸಣ್ಣ ಜಾಲರಿಗಳುಳ್ಳ ಕಿಟಿಕಿಗಳನ್ನು ಆಲಯಕ್ಕೆ ಮಾಡಿಸಿದನು.
5 ಕಟ್ಟಡದ ಹೊರಗಿನ ಗೋಡೆಗಳ ಸುತ್ತಲೂ, ಸೊಲೊಮೋನನು ಅನೇಕ ಕೋಣೆಗಳ ಸಂಕೀರ್ಣವನ್ನು ಎರಡೂ ಬದಿಗಳಲ್ಲಿ ನಿರ್ಮಿಸಿದನು.
6 ಕೆಳಗಿರುವ ಕೊಠಡಿಯು 2.2 ಮೀಟರ್ ಅಗಲ, ಎರಡನೆಯದು 2.7 ಮೀಟರ್ ಅಗಲ, ಮೂರನೆಯದು 3.1 ಮೀಟರ್ ಅಗಲ. ಏಕೆಂದರೆ ತೊಲೆಗಳು ಆಲಯದ ಗೋಡೆಗಳಲ್ಲಿ ತಗಲದ ಹಾಗೆ ಆಲಯದ ಸುತ್ತಲೂ ಹೊರಗಡೆಯಲ್ಲಿ ನಿಲ್ಲುವ ಅಂತಸ್ತುಗಳನ್ನು ಕಟ್ಟಿಸಿದನು.
7 ಆಲಯವನ್ನು ಕಟ್ಟುತ್ತಿರುವಾಗ ಕಲ್ಲುಗಳನ್ನು ಕಲ್ಲುಗಣಿಯಲ್ಲಿಯೇ ಸಿದ್ಧಮಾಡಿಕೊಂಡು ಬಂದು ಕಟ್ಟಿದ್ದರಿಂದ ಆಲಯವನ್ನು ಕಟ್ಟುತ್ತಿರುವಾಗ, ಅದರಲ್ಲಿ ಸುತ್ತಿಗೆ, ಉಳಿ, ಕಬ್ಬಿಣದ ಉಪಕರಣಗಳ ಶಬ್ದವೇ ಕೇಳಲಿಲ್ಲ.
8 ಮಧ್ಯ ಕೊಠಡಿಯ ಬಾಗಿಲು ಆಲಯದ ದಕ್ಷಿಣ ಭಾಗದಲ್ಲಿ ಇತ್ತು. ಅಲ್ಲಿಂದ ಮಧ್ಯ ಕೊಠಡಿಗೂ, ಮಧ್ಯ ಕೊಠಡಿಯಿಂದ ಮೂರನೆಯ ಕೊಠಡಿಗೂ ಹತ್ತಲು ಸುರುಳಿಯಾಕಾರದ ಮೆಟ್ಟಲುಗಳಿದ್ದವು.
9 ಹೀಗೆಯೇ ಅವನು ಆಲಯವನ್ನು ಕಟ್ಟಿ, ತೀರಿಸಿದ ತರುವಾಯ, ಆಲಯವನ್ನು ದೇವದಾರುಗಳ ತೊಲೆಗಳಿಂದಲೂ, ಹಲಗೆಗಳಿಂದಲೂ ಮುಚ್ಚಿಸಿದನು.
10 ಅವನು 2.2 ಮೀಟರ್ ಎತ್ತರವಾದ ಕೊಠಡಿಗಳನ್ನು ಆಲಯದ ಬಳಿಯಲ್ಲಿ ಸುತ್ತಲು ಕಟ್ಟಿಸಿದನು. ಅವು ಆಲಯದ ಮೇಲೆ ಇರಿಸಿದ ದೇವದಾರು ತೊಲೆಗಳ ಮೇಲೆ ನಿಂತಿದ್ದವು.
11 ಆಗ ಯೆಹೋವ ದೇವರ ವಾಕ್ಯವು ಸೊಲೊಮೋನನಿಗೆ ಬಂದಿತು,
12 “ನೀನು ಕಟ್ಟಿಸುವ ಈ ಆಲಯವನ್ನು ಕುರಿತು ನನ್ನ ಕಟ್ಟಳೆಗಳಲ್ಲಿ ನಡೆದು, ನನ್ನ ನ್ಯಾಯಗಳ ಪ್ರಕಾರಮಾಡಿ, ನನ್ನ ಸಕಲ ಆಜ್ಞೆಗಳಲ್ಲಿ ನಡೆದುಕೊಳ್ಳುವ ಹಾಗೆ ಅವುಗಳನ್ನು ಕೈಗೊಂಡರೆ, ನಾನು ನಿನ್ನ ತಂದೆ ದಾವೀದನಿಗೆ ಹೇಳಿದ ನನ್ನ ವಾಕ್ಯವನ್ನು ನಿನಗೆ ಸ್ಥಿರಮಾಡಿ,
13 ನನ್ನ ಜನವಾದ ಇಸ್ರಾಯೇಲರ ಕೈಬಿಡದೆ, ಇಸ್ರಾಯೇಲರ ಮಧ್ಯದಲ್ಲಿ ವಾಸವಾಗಿರುವೆನು,” ಎಂದರು.
14 ಸೊಲೊಮೋನನು ಆಲಯವನ್ನು ಕಟ್ಟಿಸಿ, ತೀರಿಸಿದನು.
15 ಆಲಯದ ಗೋಡೆಗಳ ಒಳಭಾಗಕ್ಕೆ ಮಂದಿರದ ನೆಲ ಮೊದಲುಗೊಂಡು ಗೋಡೆಗಳ ಮೇಲೆ ಮಾಳಿಗೆಯವರೆಗೂ ದೇವದಾರು ಹಲಗೆಗಳಿಂದ ಕಟ್ಟಿಸಿದನು. ಒಳಭಾಗದಲ್ಲಿ ಮರದಿಂದ ಮುಚ್ಚಿ, ಆಲಯದ ನೆಲವನ್ನು ತುರಾಯಿ ಮರಗಳ ಹಲಗೆಗಳಿಂದ ಮುಚ್ಚಿದನು.
16 ಅವನು ಆಲಯದ ಕಡೆಗಳಲ್ಲಿ 9 ಮೀಟರ್ ನೆಲವನ್ನೂ, ಗೋಡೆಗಳನ್ನೂ, ದೇವದಾರುಗಳ ಹಲಗೆಗಳಿಂದ ಒಂದು ಗೋಡೆಯನ್ನು ಮಾಡಿಸಿ ಅದರ ಹಿಂದಿನ ಭಾಗವನ್ನು ಅತಿ ಪರಿಶುದ್ಧಸ್ಥಳದ ಅಂಗನ ಅಥವಾ ಮಹಾಪರಿಶುದ್ಧ ಸ್ಥಳವೆಂದು ಕಟ್ಟಿಸಿದನು.
17 ಅದರ ಮುಂದಿರುವ ಮಂದಿರವಾಗಿರುವ ಆಲಯ 18 ಮೀಟರ್ ಉದ್ದವಾಗಿತ್ತು.
18 ಆಲಯದ ಒಳಗಿರುವ ದೇವದಾರು ಮೊಗ್ಗುಗಳೂ, ಅರಳಿದ ಹೂವುಗಳೂ ಕೆತ್ತಿದ ಕೆಲಸಗಳಾಗಿದ್ದವು. ಒಂದು ಕಲ್ಲಾದರೂ ಕಾಣಿಸದ ಹಾಗೆ ಎಲ್ಲಾ ದೇವದಾರದ್ದಾಗಿತ್ತು.
19 ಯೆಹೋವ ದೇವರ ಒಡಂಬಡಿಕೆಯ ಮಂಜೂಷವನ್ನು ಅಲ್ಲಿ ಇರಿಸುವುದಕ್ಕೆ ಆಲಯದ ಒಳಗೆ ದೈವೋಕ್ತಿಯ ಸ್ಥಾನವನ್ನು ಸಿದ್ಧಮಾಡಿಸಿದನು.
20 ದೈವೋಕ್ತಿಯ ಸ್ಥಾನದ ಮುಂಭಾಗದ ಪ್ರಮಾಣವು, 9 ಮೀಟರ್ ಉದ್ದ, 9 ಮೀಟರ್ ಅಗಲ, 9 ಮೀಟರ್ ಎತ್ತರ ಇತ್ತು. ಅದನ್ನು ಶುದ್ಧ ಬಂಗಾರದಿಂದ ಹೊದಿಸಿದನು. ದೇವದಾರು ಮರದ ಪೀಠವನ್ನು ಹಾಗೆಯೇ ಹೊದಿಸಿದನು.
21 ಸೊಲೊಮೋನನು ಆಲಯದ ಒಳಭಾಗವನ್ನು ಶುದ್ಧ ಬಂಗಾರದಿಂದ ಹೊದಿಸಿ, ದೈವೋಕ್ತಿಯ ಸ್ಥಾನದ ಮುಂದೆ ಬಂಗಾರದ ಸರಪಣಿಗಳಿಂದ ವಿಭಾಗವನ್ನು ಮಾಡಿ, ಅದನ್ನು ಬಂಗಾರದಿಂದ ಹೊದಿಸಿದನು.
22 ಅವನು ಆಲಯವನ್ನೆಲ್ಲಾ ಬಂಗಾರದಿಂದ ಹೊದಿಸಿ, ಸ್ಥಾನದ ಮುಂಭಾಗದಲ್ಲಿರುವ ಪೀಠವನ್ನೂ ಬಂಗಾರದಿಂದ ಹೊದಿಸಿದನು.
23 ಅವನು ದೈವೋಕ್ತಿಯ ಸ್ಥಾನದಲ್ಲಿ ಹಿಪ್ಪೇಮರಗಳಿಂದ ಎರಡು ಕೆರೂಬಿಗಳನ್ನು ಮಾಡಿಸಿದನು. ಒಂದೊಂದು 4.4 ಮೀಟರ್ ಎತ್ತರವಾಗಿತ್ತು.
24 ಕೆರೂಬಿಗೆ ಇರುವ ಒಂದೊಂದು ರೆಕ್ಕೆ 2.2 ಮೀಟರ್ ಆಗಿತ್ತು. ಒಂದು ರೆಕ್ಕೆಯ ಕೊನೆ ಮೊದಲುಗೊಂಡು, ಮತ್ತೊಂದು ರೆಕ್ಕೆಯ ಕೊನೆಯವರೆಗೂ 4.4 ಮೀಟರ್ ಆಗಿತ್ತು.
25 ಎರಡನೆಯ ಕೆರೂಬಿಯು 4.4 ಮೀಟರ್. ಎರಡು ಕೆರೂಬಿಗಳಿಗೂ ಒಂದೇ ಅಳತೆಯೂ, ಒಂದೇ ಪ್ರಮಾಣವೂ ಇತ್ತು.
26 ಒಂದು ಕೆರೂಬಿಯು 4.4 ಮೀಟರ್ ಎತ್ತರವಾಗಿತ್ತು. ಎರಡನೆಯ ಕೆರೂಬಿಯು ಅದರ ಹಾಗೆಯೇ ಇತ್ತು.
27 ಆ ಕೆರೂಬಿಗಳನ್ನು ದೇವಾಲಯದ ಒಳ ಮನೆಯೊಳಗೆ ಇಟ್ಟನು. ಆ ಕೆರೂಬಿಗಳು ರೆಕ್ಕೆಗಳನ್ನು ಚಾಚಿರುವುದರಿಂದ ಒಂದು ರೆಕ್ಕೆಯ ಈ ಭಾಗದ ಗೋಡೆಯನ್ನೂ, ಮತ್ತೊಂದು ಕೆರೂಬಿಯ ರೆಕ್ಕೆಯು ಆ ಭಾಗದ ಗೋಡೆಯನ್ನೂ ಮುಟ್ಟಿತು. ಆಲಯದ ಮಧ್ಯದಲ್ಲಿ ಒಂದರ ರೆಕ್ಕೆ ಮತ್ತೊಂದರ ರೆಕ್ಕೆಯನ್ನು ಮುಟ್ಟಿತು.
28 ಆ ಕೆರೂಬಿಗಳನ್ನು ಬಂಗಾರದ ತಗಡುಗಳಿಂದ ಹೊದಿಸಿದನು.
29 ಅವನು ಆಲಯದ ಗೋಡೆಗಳ ಸುತ್ತಲೂ ಒಳ ಹೊರ ಭಾಗಗಳಲ್ಲಿ ಕೆರೂಬಿಗಳನ್ನೂ, ಖರ್ಜೂರದ ಗಿಡಗಳನ್ನೂ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು.
30 ಆಲಯದ ಒಳಗಿನ ಮತ್ತು ಹೊರಗಿನ ನೆಲವನ್ನು ಬಂಗಾರ ತಗಡುಗಳಿಂದ ಹೊದಿಸಿದನು.
31 ಅವನು ದೈವೋಕ್ತಿಯ ಸ್ಥಾನದ ಬಾಗಿಲಿಗೆ ಹಿಪ್ಪೇಮರಗಳಿಂದ ಜೋಡು ಬಾಗಿಲುಗಳನ್ನು ಮಾಡಿಸಿದನು. ಚೌಕಟ್ಟು ಪಂಚಕೋನಗಳುಳ್ಳದ್ದಾಗಿತ್ತು.
32 ಹಿಪ್ಪೇಮರದ ಆ ಜೋಡು ಬಾಗಿಲುಗಳ ಮೇಲೆ ಅವನು ಕೆರೂಬಿ, ಖರ್ಜೂರದ ವೃಕ್ಷ, ಅರಳಿದ ಹೂವು ಇವುಗಳ ಚಿತ್ರಗಳನ್ನು ಕೆತ್ತಿಸಿ, ಆ ಕೆರೂಬಿಗಳನ್ನೂ, ಖರ್ಜೂರ ಗಿಡಗಳನ್ನೂ, ಬಂಗಾರದ ತಗಡಿನಿಂದ ಹೊದಿಸಿದನು.
33 ಅದೇ ರೀತಿಯಲ್ಲಿ, ಪರಿಶುದ್ಧಸ್ಥಳದ ಬಾಗಲಿಗೆ ಎಣ್ಣೇಮರದಿಂದ ಚತುಷ್ಕೋನದ ಚೌಕಟ್ಟನ್ನು ಮಾಡಿಸಿದನು.
34 ಅದಕ್ಕೆ ತುರಾಯಿ ಮರದ ಎರಡು ಬಾಗಿಲುಗಳನ್ನು ಇಡಿಸಿದನು. ಪ್ರತಿಯೊಂದು ಬಾಗಿಲು ಎರಡು ಭಾಗವುಳ್ಳದ್ದಾಗಿ ಮಡಚಬಹುದಾಗಿತ್ತು.
35 ಅದರ ಮೇಲೆ ಕೆರೂಬಿಗಳ, ಖರ್ಜೂರ ಗಿಡಗಳ, ಅರಳಿದ ಹೂವುಗಳ ಚಿತ್ರಗಳನ್ನು ಕೆತ್ತಿಸಿದನು. ಈ ಕೆತ್ತನೆಗಳ ಮೇಲೆ ಸಮವಾಗಿ ಬಂಗಾರದ ತಗಡನ್ನು ಹೊದಿಸಿದನು.
36 ಅವನು ಒಳಗಿನ ಅಂಗಳವನ್ನು ಕೆತ್ತಿದ ಕಲ್ಲುಗಳಿಂದ ಮೂರು ಸಾಲುಗಳಾಗಿಯೂ ದೇವದಾರಿನ ಸ್ತಂಭಗಳಿಂದ ಒಂದು ಸಾಲಾಗಿಯೂ ಕಟ್ಟಿಸಿದನು.
37 ನಾಲ್ಕನೆಯ ವರ್ಷದ ಜಿವ್ ತಿಂಗಳಲ್ಲಿ ಯೆಹೋವ ದೇವರ ಆಲಯದ ಅಸ್ತಿವಾರವು ಹಾಕಲಾಯಿತು.
38 ಹನ್ನೊಂದನೆಯ ವರ್ಷದ, ಎಂಟನೆಯ ತಿಂಗಳಾದ ಬೂಲ್ ಎಂಬ ಕಾರ್ತಿಕ ತಿಂಗಳಲ್ಲಿ ಆ ದೇವಾಲಯದ ಎಲ್ಲಾ ಭಾಗಗಳೂ ಯೋಜನೆಯ ಪ್ರಕಾರ ಕಟ್ಟಲಾಯಿತು. ಹೀಗೆ ಅವನು ಏಳು ವರುಷಗಳಲ್ಲಿ ಅದನ್ನು ಕಟ್ಟಿಸಿದನು.