21
ಯೆಹೂದ್ಯರ ಅರಸನಾದ ಮನಸ್ಸೆಯು
1 ಮನಸ್ಸೆಯು ಅರಸನಾದಾಗ ಹನ್ನೆರಡು ವರ್ಷದವನಾಗಿದ್ದನು. ಅವನು ಐವತ್ತೈದು ವರ್ಷ ಯೆರೂಸಲೇಮಿನಲ್ಲಿ ಆಳಿದನು. ಅವನ ತಾಯಿಯ ಹೆಸರು ಹೆಫ್ಚಿಬಾ.
2 ಆದರೆ ಯೆಹೋವ ದೇವರು ಇಸ್ರಾಯೇಲರ ಮುಂದೆ ಹೊರಡಿಸಿಬಿಟ್ಟ ಜನಾಂಗಗಳ ಅಸಹ್ಯವಾದವುಗಳನ್ನು ಅವನು ಅನುಸರಿಸಿ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿದನು.
3 ಅವನು ತನ್ನ ತಂದೆಯಾದ ಹಿಜ್ಕೀಯನು ನಾಶಮಾಡಿದ ಉನ್ನತ ಪೂಜಾಸ್ಥಳಗಳನ್ನು ಮತ್ತೆ ಸ್ಥಾಪಿಸಿ, ಬಾಳನಿಗೆ ಬಲಿಪೀಠಗಳನ್ನು ಕಟ್ಟಿಸಿ, ಇಸ್ರಾಯೇಲಿನ ಅರಸನಾದ ಅಹಾಬನು ಮಾಡಿದ ಅಶೇರ ವಿಗ್ರಹಸ್ತಂಭಗಳನ್ನು ನಿಲ್ಲಿಸಿ, ಸಮಸ್ತ ನಕ್ಷತ್ರಮಂಡಲಕ್ಕೆ ಅಡ್ಡಬಿದ್ದು ಅವುಗಳನ್ನು ಪೂಜಿಸಿದನು.
4 ಇದಲ್ಲದೆ, “ಯೆರೂಸಲೇಮಿನಲ್ಲಿ ನನ್ನ ಹೆಸರನ್ನು ಸ್ಥಾಪಿಸುವೆನು,” ಎಂದು ಯೆಹೋವ ದೇವರು ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ಅವನು ಬಲಿಪೀಠಗಳನ್ನು ಕಟ್ಟಿಸಿದನು.
5 ಯೆಹೋವ ದೇವರ ಆಲಯದ ಎರಡು ಅಂಗಳಗಳಲ್ಲಿ ಆಕಾಶದ ಸಮಸ್ತ ನಕ್ಷತ್ರಮಂಡಲಕ್ಕಾಗಿ ಬಲಿಪೀಠಗಳನ್ನು ಕಟ್ಟಿಸಿದನು.
6 ಇದಲ್ಲದೆ ಮನಸ್ಸೆಯು ತನ್ನ ಸ್ವಂತ ಮಗನನ್ನು ಬೆಂಕಿಯಲ್ಲಿ ಬಲಿಯಾಗಿ ಅರ್ಪಿಸಿದನು. ಮೇಘ ಮಂತ್ರಗಳನ್ನೂ, ಸರ್ಪಮಂತ್ರಗಳನ್ನು ಮಾಡಿದನು. ಕಣಿಹೇಳುವವರನ್ನೂ, ಮಾಂತ್ರಿಕರನ್ನೂ ವಿಚಾರಿಸಿದನು. ಯೆಹೋವ ದೇವರ ದೃಷ್ಟಿಯಲ್ಲಿ ಅತ್ಯಂತ ಕೆಟ್ಟತನವನ್ನು ಮಾಡಿ ಅವರಿಗೆ ಕೋಪವನ್ನು ಎಬ್ಬಿಸಿದನು.
7 “ಈ ಆಲಯದಲ್ಲಿಯೂ, ಇಸ್ರಾಯೇಲಿನ ಸಕಲ ಗೋತ್ರಗಳಲ್ಲಿಯೂ, ನಾನು ಆಯ್ದುಕೊಂಡ ಯೆರೂಸಲೇಮಿನಲ್ಲಿಯೂ, ನನ್ನ ನಾಮವನ್ನು ಯುಗಯುಗಕ್ಕೂ ಇರುವಂತೆ ಮಾಡುವೆನು,” ಎಂದು ಯೆಹೋವ ದೇವರು ದಾವೀದನಿಗೂ, ಅವನ ಮಗನಾದ ಸೊಲೊಮೋನನಿಗೂ ಯಾವುದನ್ನು ಕುರಿತು ಹೇಳಿದ್ದರೋ, ಆ ಆಲಯದಲ್ಲಿ ತಾನು ಮಾಡಿದ ಅಶೇರ ವಿಗ್ರಹಸ್ತಂಭವನ್ನು ಇಟ್ಟನು.
8 ಯೆಹೋವ ದೇವರು, “ನಾನು ಅವರಿಗೆ ಆಜ್ಞಾಪಿಸಿದ ಎಲ್ಲದರ ಪ್ರಕಾರ ಮತ್ತು ನನ್ನ ಸೇವಕನಾದ ಮೋಶೆಯು ಅವರಿಗೆ ಆಜ್ಞಾಪಿಸಿದ ಸಮಸ್ತ ನಿಯಮದ ಪ್ರಕಾರ ಕೈಗೊಂಡು ನಡೆಯುವುದರಲ್ಲಿ ಅವರು ಜಾಗರೂಕರಾಗಿದ್ದರೆ, ನಾನು ಅವರ ಪಿತೃಗಳಿಗೆ ಕೊಟ್ಟ ದೇಶದಿಂದ ಪುನಃ ಇಸ್ರಾಯೇಲರು ಅಲೆದಾಡುವಂತೆ ಮಾಡುವುದಿಲ್ಲ,” ಎಂದು ಹೇಳಿದ್ದರು.
9 ಆದರೆ ಜನರು ಕೇಳದೆ ಹೋದರು. ಇಸ್ರಾಯೇಲರ ಮುಂದೆಯೇ ಯೆಹೋವ ದೇವರಿಂದ ನಾಶಹೊಂದಿದ ಇತರ ಜನಾಂಗಗಳಿಗಿಂತ ಅಧಿಕವಾಗಿ ಕೆಟ್ಟದ್ದನ್ನು ಮಾಡಲು ಮನಸ್ಸೆಯು ಅವರನ್ನು ಪ್ರೇರೇಪಿಸಿದನು.
10 ಯೆಹೋವ ದೇವರು ಪ್ರವಾದಿಗಳಾದ ತನ್ನ ಸೇವಕರ ಮುಖಾಂತರ ಹೇಳಿದ್ದೇನೆಂದರೆ,
11 “ಯೆಹೂದದ ಅರಸನಾದ ಮನಸ್ಸೆಯು ತನ್ನ ಮುಂದೆ ಇದ್ದ ಅಮೋರಿಯರು ಮಾಡಿದ ಕೆಟ್ಟವುಗಳಿಗಿಂತಲೂ ಅಸಹ್ಯವಾದವುಗಳನ್ನು ಮಾಡಿದ್ದರಿಂದಲೂ, ಯೆಹೂದವನ್ನು ತನ್ನ ವಿಗ್ರಹಗಳಿಂದ ಪಾಪಕ್ಕೆ ಪ್ರೇರೇಪಿಸಿದ್ದರಿಂದಲೂ,
12 ಇಸ್ರಾಯೇಲಿನ ಯೆಹೋವ ದೇವರಾದ ನಾನು ಯೆರೂಸಲೇಮಿನ ಮೇಲೆಯೂ, ಯೆಹೂದದ ಮೇಲೆಯೂ ಕೇಡನ್ನು ಬರಮಾಡುವೆನು. ಅದನ್ನು ಕೇಳುವವನ ಎರಡು ಕಿವಿಗಳು ಕಿರಗುಟ್ಟುವುವು.
13 ನಾನು ಯೆರೂಸಲೇಮಿನ ಮೇಲೆ ಸಮಾರ್ಯದ ವಿರುದ್ಧ ಬಳಸಿದ ನೂಲನ್ನೂ, ಅಹಾಬನ ಮನೆಯ ವಿರುದ್ಧ ಬಳಸಿದ ಮಟ್ಟಗೋಲನ್ನೂ ಚಾಚಿ, ಒಬ್ಬನು ತಟ್ಟೆಯನ್ನು ಒರೆಸಿದಂತೆ ಅದನ್ನು ಒರೆಸಿ ತಲೆಕೆಳಗಾಗಿ ಹಾಕುವ ಹಾಗೆ ನಾನು ಯೆರೂಸಲೇಮನ್ನು ಅಳಿಸಿಬಿಡುವೆನು.
14 ಇದಲ್ಲದೆ ನಾನು ನನ್ನ ಬಾಧ್ಯತೆಗೆ ಉಳಿದಿರುವುದನ್ನು ಬಿಟ್ಟುಬಿಟ್ಟು, ಅವರನ್ನು ಅವರ ಶತ್ರುಗಳ ಕೈಗೆ ಒಪ್ಪಿಸಿಬಿಡುವೆನು. ಅವರು ತಮ್ಮ ಶತ್ರುಗಳಿಗೆ ಕೊಳ್ಳೆಯೂ, ಸೂರೆಯೂ ಆಗಿ ಹೋಗುವರು.
15 ಏಕೆಂದರೆ ಅವರ ತಂದೆಗಳು ಈಜಿಪ್ಟಿನಿಂದ ಹೊರಟ ದಿವಸ ಮೊದಲುಗೊಂಡು, ಇಂದಿನವರೆಗೂ ನನ್ನ ದೃಷ್ಟಿಯಲ್ಲಿ ಕೆಟ್ಟದ್ದನ್ನು ಮಾಡಿ ನನಗೆ ಕೋಪವನ್ನು ಎಬ್ಬಿಸಿದ್ದಾರೆ, ಎಂದು ಹೇಳುತ್ತಾರೆ,” ಎಂಬುದೇ.
16 ಇದಲ್ಲದೆ ಮನಸ್ಸೆಯು ಯೆಹೋವ ದೇವರ ದೃಷ್ಟಿಯಲ್ಲಿ ಕೇಡನ್ನು ಮಾಡಿದ್ದರಲ್ಲಿ ಯೆಹೂದವು ಪಾಪವನ್ನು ಮಾಡಲು ಪ್ರೇರೇಪಿಸಿದ ತನ್ನ ಪಾಪದ ಹೊರತು ಅವನು ಯೆರೂಸಲೇಮನ್ನು ಒಂದು ಕೊನೆಯಿಂದ ಮತ್ತೊಂದು ಕೊನೆಯವರೆಗೂ ತಾನು ಬಹು ಹೆಚ್ಚಾಗಿ ಚೆಲ್ಲಿದ ನಿರಪರಾಧದ ರಕ್ತದಿಂದ ತುಂಬಿಸಿದನು.
17 ಮನಸ್ಸೆಯ ಇತರ ಕ್ರಿಯೆಗಳೂ, ಅವನು ಮಾಡಿದ ಸಮಸ್ತವೂ, ಅವನು ಮಾಡಿದ ಪಾಪವೂ ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
18 ಮನಸ್ಸೆಯು ಮೃತನಾಗಿ ತನ್ನ ಪಿತೃಗಳ ಸಂಗಡ ಸೇರಿದನು, ಅವನ ಅರಮನೆಯ ತೋಟವಾದ ಉಜ್ಜನ ತೋಟದಲ್ಲಿ ಅವನ ಶವವನ್ನು ಸಮಾಧಿಮಾಡಿದರು. ಅವನ ಮಗ ಆಮೋನನು ಅವನಿಗೆ ಬದಲಾಗಿ ಅರಸನಾದನು.
ಯೆಹೂದ್ಯರ ಅರಸನಾದ ಆಮೋನನು
19 ಆಮೋನನು ಅರಸನಾದಾಗ ಇಪ್ಪತ್ತೆರಡು ವರ್ಷದವನಾಗಿದ್ದನು, ಅವನು ಯೆರೂಸಲೇಮಿನಲ್ಲಿ ಎರಡು ವರ್ಷ ಆಳಿದನು. ಅವನ ತಾಯಿಯು ಯೋತ್ಬಾ ಊರಿನ ಹಾರೂಚನ ಮಗಳಾದ ಮೆಷುಲ್ಲೇಮೆತಳು.
20 ಅವನು ತನ್ನ ತಂದೆ ಮನಸ್ಸೆಯು ಮಾಡಿದ ಹಾಗೆ ಯೆಹೋವ ದೇವರ ದೃಷ್ಟಿಯಲ್ಲಿ ಕೆಟ್ಟದ್ದನ್ನೇ ಮಾಡಿದನು.
21 ಅವನು ತನ್ನ ಪಿತೃಗಳ ದೇವರಾದ ಯೆಹೋವ ದೇವರ ಮಾರ್ಗವನ್ನು ಬಿಟ್ಟುಬಿಟ್ಟು,
22 ತನ್ನ ತಂದೆಯು ನಡೆದ ಸಮಸ್ತ ಮಾರ್ಗದಲ್ಲಿ ನಡೆದು, ತನ್ನ ತಂದೆಯು ಸೇವಿಸಿದ ವಿಗ್ರಹಗಳನ್ನು ಸೇವಿಸಿ, ಅವುಗಳಿಗೆ ಅಡ್ಡಬಿದ್ದನು.
23 ಆಮೋನನ ಸೇವಕರು ಅವನ ವಿರುದ್ಧ ಒಳಸಂಚುಮಾಡಿ, ಅರಮನೆಯಲ್ಲಿಯೇ ಅವನನ್ನು ಕೊಂದುಹಾಕಿದರು.
24 ಆದರೆ ದೇಶದ ಜನರು ಅರಸನಾದ ಆಮೋನನ ವಿರುದ್ಧ ಒಳಸಂಚು ಮಾಡಿದವರನ್ನೆಲ್ಲಾ ಕೊಂದುಹಾಕಿ, ಅವನ ಮಗ ಯೋಷೀಯನನ್ನು ಅವನಿಗೆ ಬದಲಾಗಿ ಅರಸನನ್ನಾಗಿ ಮಾಡಿದರು.
25 ಆಮೋನನು ಮಾಡಿದ ಅವನ ಇತರ ಕ್ರಿಯೆಗಳು ಯೆಹೂದದ ಅರಸರ ಇತಿಹಾಸಗಳ ಪುಸ್ತಕದಲ್ಲಿ ಬರೆದಿರುತ್ತವೆ.
26 ಅವನ ಶವವನ್ನು, ಉಜ್ಜನ ತೋಟದಲ್ಲಿ ಅವನು ಮೊದಲೇ ತನಗೋಸ್ಕರ ಸಿದ್ದಪಡಿಸಿಟ್ಟಿದ್ದ ಸಮಾಧಿಯಲ್ಲಿ ಹೂಣಿಟ್ಟರು. ಅವನ ಮಗ ಯೋಷೀಯನು ಅವನಿಗೆ ಬದಲಾಗಿ ಅರಸನಾದನು.