14
ಬೇಥಾನ್ಯದಲ್ಲಿ ಯೇಸುವಿನ ಅಭಿಷೇಕ
ಪಸ್ಕದ* ಮತ್ತು ಹುಳಿಯಿಲ್ಲದ ರೊಟ್ಟಿಯ ಹಬ್ಬ ಬರುವುದಕ್ಕೆ ಇನ್ನೂ ಎರಡು ದಿವಸಗಳಿದ್ದಾಗ, ಮುಖ್ಯಯಾಜಕರೂ ನಿಯಮ ಬೋಧಕರೂ ಉಪಾಯದಿಂದ ಯೇಸುವನ್ನು ಹೇಗೆ ಹಿಡಿದು ಕೊಲ್ಲಬೇಕೆಂದು ಮಾರ್ಗ ಹುಡುಕುತ್ತಿದ್ದರು. ಆದರೆ ಅವರು, “ಜನರು ದಂಗೆ ಎದ್ದಾರು, ಹಬ್ಬದಲ್ಲಿ ಬೇಡ,” ಎಂದು ಮಾತನಾಡಿಕೊಂಡರು.
ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ಮೂಲಿಕೆಯ ಸುಗಂಧ ತೈಲದ ಭರಣಿಯನ್ನು ತೆಗೆದುಕೊಂಡು ಬಂದು, ಅದನ್ನು ಒಡೆದು, ಯೇಸುವಿನ ತಲೆಯ ಮೇಲೆ ಸುರಿಸಿದಳು.
ಅಲ್ಲಿದ್ದ ಕೆಲವರು ತಮ್ಮೊಳಗೆ ಕೋಪಗೊಂಡು, “ಈ ತೈಲವನ್ನು ಹೀಗೆ ವ್ಯರ್ಥ ಮಾಡಿದ್ದೇಕೆ? ಇದನ್ನು ಮುನ್ನೂರು ಬೆಳ್ಳಿ ನಾಣ್ಯಗಿಂತ ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದು ಆಕೆಯನ್ನು ನಿಂದಿಸಿದರು.
ಆದರೆ ಯೇಸು, “ಈಕೆಯನ್ನು ಬಿಟ್ಟುಬಿಡಿರಿ, ಈಕೆಗೆ ಏಕೆ ತೊಂದರೆ ಕೊಡುತ್ತೀರಿ? ಈಕೆಯು ನನಗೆ ಒಳ್ಳೆಯ ಕಾರ್ಯವನ್ನೇ ಮಾಡಿದ್ದಾಳೆ. ಬಡವರು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುತ್ತಾರೆ.§ ನಿಮಗೆ ಮನಸ್ಸಿದ್ದರೆ, ನೀವು ಅವರಿಗೆ ಯಾವಾಗಲಾದರೂ ಉಪಕಾರ ಮಾಡಬಹುದು. ಆದರೆ ನಾನು ಯಾವಾಗಲೂ ನಿಮ್ಮ ಬಳಿಯಲ್ಲಿ ಇರುವುದಿಲ್ಲ. ಈಕೆಯು ತನ್ನಿಂದಾದಷ್ಟು ಮಾಡಿದ್ದಾಳೆ. ನನ್ನ ಶವಸಂಸ್ಕಾರಕ್ಕಾಗಿ ಮುಂಚಿತವಾಗಿ ನನ್ನ ದೇಹವನ್ನು ಅಭಿಷೇಕಿಸಿದ್ದಾಳೆ. ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.
10 ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತನು ಯೇಸುವನ್ನು ಮುಖ್ಯಯಾಜಕರಿಗೆ ಹಿಡಿದುಕೊಡಲು ಅವರ ಬಳಿಗೆ ಹೋದನು. 11 ಅವರು ಅದನ್ನು ಕೇಳಿ ಸಂತೋಷಪಟ್ಟು ಅವನಿಗೆ ಹಣ ಕೊಡುವುದಾಗಿ ಮಾತುಕೊಟ್ಟರು. ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭ ಹುಡುಕುತ್ತಿದ್ದನು.
ಕರ್ತನ ಭೋಜನ
12 ಅಂದು ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನ ಅಂದರೆ ಪಸ್ಕದ ಕುರಿಯನ್ನು ವಧಿಸುವ ದಿನವಾಗಿತ್ತು. ಶಿಷ್ಯರು ಯೇಸುವಿಗೆ, “ನೀವು ಪಸ್ಕದ ಊಟ ಮಾಡಲು ನಾವು ಎಲ್ಲಿಗೆ ಹೋಗಿ ಅದನ್ನು ಸಿದ್ಧಪಡಿಸೋಣ?” ಎಂದು ಕೇಳಿದರು.
13 ಆಗ ಯೇಸು ತಮ್ಮ ಶಿಷ್ಯರಲ್ಲಿ ಇಬ್ಬರನ್ನು ಕಳುಹಿಸಿ ಅವರಿಗೆ, “ನೀವು ಪಟ್ಟಣದೊಳಕ್ಕೆ ಹೋಗಿರಿ. ಅಲ್ಲಿ ನೀರಿನ ಕೊಡವನ್ನು ಹೊತ್ತುಕೊಂಡು ಹೋಗುವ ಒಬ್ಬ ಮನುಷ್ಯನು ನಿಮ್ಮನ್ನು ಸಂಧಿಸುವನು. ಅವನನ್ನು ಹಿಂಬಾಲಿಸಿರಿ. 14 ಅವನು ಯಾವ ಮನೆಯೊಳಗೆ ಹೋಗುತ್ತಾನೋ ಆ ಮನೆಯ ಯಜಮಾನನಿಗೆ, ‘ನಾನು ನನ್ನ ಶಿಷ್ಯರೊಂದಿಗೆ ಪಸ್ಕಭೋಜನ ಮಾಡಲು ಅತಿಥಿಯ ಕೊಠಡಿ ಎಲ್ಲಿದೆ? ಎಂದು ಬೋಧಕರು ನಿನ್ನನ್ನು ಕೇಳುತ್ತಾರೆ,’ ಎಂದು ಹೇಳಿರಿ. 15 ಅವನು ಸಜ್ಜುಗೊಳಿಸಿ ಸಿದ್ಧಮಾಡಿದ ಮೇಲಂತಸ್ತಿನ ವಿಶಾಲವಾದ ಕೊಠಡಿಯನ್ನು ನಿಮಗೆ ತೋರಿಸುವನು. ಅಲ್ಲಿ ನಮಗೆ ಸಿದ್ಧಮಾಡಿರಿ,” ಎಂದರು.
16 ಅವರ ಶಿಷ್ಯರು ಹೊರಟುಹೋಗಿ ಪಟ್ಟಣದೊಳಕ್ಕೆ ಬಂದು ಯೇಸು ತಮಗೆ ಹೇಳಿದಂತೆಯೇ ಕಂಡು ಪಸ್ಕವನ್ನು ಸಿದ್ಧಮಾಡಿದರು.
17 ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರ ಸಂಗಡ ಬಂದರು. 18 ಅವರು ಕುಳಿತುಕೊಂಡು ಊಟಮಾಡುತ್ತಿದ್ದಾಗ ಯೇಸು, “ನನ್ನೊಂದಿಗೆ ಊಟಮಾಡುತ್ತಿರುವ ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಬಗೆಯುವನು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.
19 ಆಗ ಅವರು ದುಃಖಿಸಲಾರಂಭಿಸಿ ಒಬ್ಬೊಬ್ಬರಾಗಿ ಯೇಸುವಿಗೆ, “ಅವನು ನಾನಲ್ಲವಲ್ಲಾ?” ಎಂದು ಕೇಳಿದರು.
20 ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಅವನು ಹನ್ನೆರಡು ಮಂದಿಯಲ್ಲಿ ಒಬ್ಬನು. ಎಂದರೆ, ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದುವವನೇ. 21 ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೇ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದು ಹೇಳಿದರು.
22 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು, ಅವರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ಇದು ನನ್ನ ದೇಹ,” ಎಂದರು.
23 ತರುವಾಯ ಯೇಸು ಪಾತ್ರೆಯನ್ನು ತೆಗೆದುಕೊಂಡು ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟರು. ಅವರೆಲ್ಲರೂ ಅದರಲ್ಲಿ ಕುಡಿದರು.
24 ಯೇಸು ಅವರಿಗೆ, “ಇದು ಬಹುಜನರಿಗೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ. 25 ನಾನು ದೇವರ ರಾಜ್ಯದಲ್ಲಿ ಇದನ್ನು ಹೊಸದಾಗಿ ಕುಡಿಯುವ ಆ ದಿನದವರೆಗೆ ಇನ್ನು ಮೇಲೆ ನಾನು ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲವೆಂದು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದು ಹೇಳಿದರು.
26 ಬಳಿಕ ಅವರೆಲ್ಲರು ಒಂದು ಕೀರ್ತನೆ ಹಾಡಿ ಓಲಿವ್ ಗುಡ್ಡಕ್ಕೆ ಹೊರಟು ಹೋದರು.
ಯೇಸು ಪೇತ್ರನ ನಿರಾಕರಿಸುವಿಕೆಯನ್ನು ಮುಂತಿಳಿಸಿದ್ದು
27 ಆಗ ಯೇಸು, “ನೀವೆಲ್ಲರೂ ಓಡಿಹೋಗುವಿರಿ. ಏಕೆಂದರೆ ಪವಿತ್ರ ವೇದದಲ್ಲಿ ಹೀಗೆ ಬರೆದಿದೆ:
“ ‘ನಾನು ಕುರುಬನನ್ನು ಹೊಡೆಯುವೆನು,
ಕುರಿಗಳು ಚದರಿಹೋಗುವುವು.’*
28 ಆದರೆ ನಾನು ಎದ್ದ ಮೇಲೆ ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು,” ಎಂದು ಹೇಳಿದರು.
29 ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದು ಹೇಳಿದನು.
30 ಆದರೆ ಯೇಸು ಅವನಿಗೆ, “ಈ ದಿವಸ, ಈ ರಾತ್ರಿಯೇ ಎರಡು ಸಾರಿ ಹುಂಜ ಕೂಗುವುದಕ್ಕಿಂತ ಮೊದಲು ಮೂರು ಸಾರಿ ನೀನು ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ನಿಜವಾಗಿ ಹೇಳುತ್ತೇನೆ,” ಎಂದರು.
31 ಅದಕ್ಕೆ ಪೇತ್ರನು, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದು ಬಹು ಆವೇಶದಿಂದ ಹೇಳಿದನು. ಅದರಂತೆಯೇ ಶಿಷ್ಯರೆಲ್ಲರೂ ಹೇಳಿದರು.
ಗೆತ್ಸೇಮನೆ
32 ಅವರು ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದರು. ಅಲ್ಲಿ ಯೇಸು ತಮ್ಮ ಶಿಷ್ಯರಿಗೆ, “ನಾನು ಪ್ರಾರ್ಥನೆಮಾಡಿ ಬರುವವರೆಗೆ ನೀವು ಇಲ್ಲಿ ಕುಳಿತುಕೊಂಡಿರಿ,” ಎಂದರು. 33 ಯೇಸು ಪೇತ್ರ, ಯಾಕೋಬ, ಯೋಹಾನರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿ, ಬಹು ಬೆರಗಾಗಿ ವ್ಯಥೆಗೊಳ್ಳಲಾರಂಭಿಸಿ, 34 “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲಿಯೇ ಕಾದುಕೊಂಡಿದ್ದು ಎಚ್ಚರವಾಗಿರಿ,” ಎಂದರು.
35 ಯೇಸು ಸ್ವಲ್ಪ ಮುಂದೆ ಹೋಗಿ ನೆಲದ ಮೇಲೆ ಬಿದ್ದು ಸಾಧ್ಯವಾದರೆ ಆ ಗಳಿಗೆಯು ತನ್ನಿಂದ ದಾಟಿ ಹೋಗುವಂತೆ ಪ್ರಾರ್ಥಿಸಿ, 36 “ಅಪ್ಪಾ, ತಂದೆಯೇ, ಎಲ್ಲವೂ ನಿಮಗೆ ಸಾಧ್ಯ, ಈ ಪಾತ್ರೆಯನ್ನು ನನ್ನಿಂದ ತೆಗೆದುಬಿಡು. ಆದರೂ ನನ್ನ ಚಿತ್ತದಂತಲ್ಲ, ನಿಮ್ಮ ಚಿತ್ತದಂತೆಯೇ ಆಗಲಿ,” ಎಂದರು.
37 ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಸೀಮೋನನೇ, ನೀನು ನಿದ್ರೆ ಮಾಡುತ್ತೀಯಾ? ಒಂದು ಘಂಟೆಯಾದರೂ ಎಚ್ಚರವಾಗಿರಲಾರೆಯಾ? 38 ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ; ಆದರೆ ಶರೀರವು ಬಲಹೀನವಾಗಿದೆ,” ಎಂದು ಹೇಳಿದರು.
39 ಯೇಸು ತಿರುಗಿ ಹೊರಟುಹೋಗಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು. 40 ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು. ಯೇಸುವಿಗೆ ಏನು ಉತ್ತರಕೊಡಬೇಕೆಂದು ಅವರಿಗೆ ತಿಳಿಯಲಿಲ್ಲ.
41 ಯೇಸು ಮೂರನೆಯ ಸಾರಿ ಬಂದು ಅವರಿಗೆ, “ಇನ್ನೂ ವಿಶ್ರಮಿಸುತ್ತಿದ್ದೀರಾ? ಸಾಕು! ಸಮಯವು ಸಮೀಪಿಸಿದೆ; ಮನುಷ್ಯಪುತ್ರನಾದ ನಾನು ಪಾಪಿಗಳ ಕೈವಶವಾಗಲಿದ್ದೇನೆ. 42 ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ,” ಎಂದು ಹೇಳಿದರು.
ಯೇಸುವನ್ನು ಬಂಧಿಸಿದ್ದು
43 ಯೇಸು ಇನ್ನೂ ಮಾತನಾಡುತ್ತಿರುವಾಗಲೇ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ, ನಿಯಮ ಬೋಧಕರ ಮತ್ತು ಹಿರಿಯರ ಕಡೆಯಿಂದ ಬಂದಿದ್ದ ಜನರ ಸಮೂಹವು ಖಡ್ಗ ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗಿತ್ತು.
44 ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು, ಆತನನ್ನು ಹಿಡಿದು, ಭದ್ರವಾಗಿ ತೆಗೆದುಕೊಂಡು ಹೋಗಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು. 45 ಯೂದನು ಬಂದ ಕೂಡಲೇ ನೇರವಾಗಿ ಯೇಸುವಿನ ಕಡೆಗೆ ಹೋಗಿ, “ಗುರುವೇ,” ಎಂದು ಹೇಳಿ ಅವರಿಗೆ ಮುದ್ದಿಟ್ಟನು. 46 ಅವರು ಯೇಸುವಿನ ಮೇಲೆ ಕೈಹಾಕಿ ಅವರನ್ನು ಬಂಧಿಸಿದರು. 47 ಆದರೆ ಹತ್ತಿರ ನಿಂತಿದ್ದವರಲ್ಲಿ ಒಬ್ಬನು ಖಡ್ಗವನ್ನು ಹಿರಿದು ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
48 ಯೇಸು ಅವರಿಗೆ, “ಖಡ್ಗಗಳನ್ನು ಮತ್ತು ದೊಣ್ಣೆಗಳನ್ನು ತೆಗೆದುಕೊಂಡು ದಂಗೆಗಾರನನ್ನು ಹಿಡಿಯುವುದಕ್ಕಾಗಿ ಬರುವಂತೆ ನನ್ನನ್ನು ಹಿಡಿಯುವುದಕ್ಕಾಗಿ ಬಂದಿರಾ? 49 ನಾನು ಪ್ರತಿದಿನವೂ ದೇವಾಲಯದಲ್ಲಿ ಬೋಧಿಸುತ್ತಾ ನಿಮ್ಮ ಸಂಗಡ ಇದ್ದೆನು. ಆಗ ನೀವು ನನ್ನನ್ನು ಬಂಧಿಸಲಿಲ್ಲ. ಆದರೆ ಪವಿತ್ರ ವೇದಗಳಲ್ಲಿ ಬರೆದಿದ್ದು ನೆರವೇರಲೇಬೇಕು,” ಎಂದರು. 50 ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.
51 ಅಲ್ಲಿ ಮೈಮೇಲೆ ದುಪ್ಪಟಿಯನ್ನು ಸುತ್ತಿಕೊಂಡ ಯುವಕನೊಬ್ಬನು ಯೇಸುವನ್ನು ಹಿಂಬಾಲಿಸುತ್ತಿದ್ದನು. ಜನರ ಗುಂಪು ಅವನನ್ನು ಹಿಡಿಯಲು, 52 ಅವನು ಆ ದುಪ್ಪಟಿಯನ್ನು ಬಿಟ್ಟು, ಬರೀ ಮೈಯಲ್ಲಿ ಓಡಿಹೋದನು.
ಆಲೋಚನಾ ಸಭೆಯವರು
53 ಅವರು ಯೇಸುವನ್ನು ಮಹಾಯಾಜಕನ ಬಳಿಗೆ ತೆಗೆದುಕೊಂಡು ಹೋದರು. ಯೇಸುವಿನ ಸಂಗಡ ಮುಖ್ಯಯಾಜಕರೂ ಹಿರಿಯರೂ ನಿಯಮ ಬೋಧಕರೂ ಅವನ ಬಳಿಗೆ ಸಭೆ ಕೂಡಿಬಂದರು. 54 ಪೇತ್ರನು ಮಹಾಯಾಜಕನ ಅಂಗಳದವರೆಗೂ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ ಆಳುಗಳ ಸಂಗಡ ಕೂತುಕೊಂಡು ಬೆಂಕಿಯ ಹತ್ತಿರ ಚಳಿ ಕಾಯಿಸಿಕೊಳ್ಳುತ್ತಿದ್ದನು.
55 ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವನ್ನು ಕೊಲ್ಲಿಸಬೇಕೆಂದು ಅವರ ವಿರೋಧವಾಗಿ ಸಾಕ್ಷಿಯನ್ನು ಹುಡುಕಿದರು. ಆದರೆ ಒಂದು ಸಾಕ್ಷಿಯೂ ಸಿಗಲಿಲ್ಲ. 56 ಅನೇಕರು ಯೇಸುವಿಗೆ ವಿರೋಧವಾಗಿ ಸುಳ್ಳುಸಾಕ್ಷಿ ಹೇಳಿದರೂ ಅವರ ಸಾಕ್ಷಿಯು ಒಂದಕ್ಕೊಂದು ಒಪ್ಪಲಿಲ್ಲ.
57 ತರುವಾಯ ಕೆಲವರು ಎದ್ದು ಯೇಸುವಿಗೆ ವಿರೋಧವಾಗಿ ಸಾಕ್ಷಿ ಹೇಳುತ್ತಾ, 58 “ ‘ಕೈಯಿಂದ ಕಟ್ಟಿರುವ ಈ ದೇವಾಲಯವನ್ನು ನಾನು ಕೆಡವಿಬಿಟ್ಟು ಕೈಯಿಂದ ಕಟ್ಟದಿರುವ ಮತ್ತೊಂದನ್ನು ಮೂರು ದಿನಗಳಲ್ಲಿ ಕಟ್ಟುವೆನು,’ ಎಂದು ಈತನು ಹೇಳಿದ್ದನ್ನು ನಾವು ಕೇಳಿಸಿಕೊಂಡಿದ್ದೇವೆ,” ಎಂದರು. 59 ಹೀಗಿದ್ದರೂ ಅವರ ಸಾಕ್ಷಿ ಒಂದಕ್ಕೊಂದು ಒಪ್ಪಿಗೆಯಾಗಲಿಲ್ಲ.
60 ಆಗ ಮಹಾಯಾಜಕನು ಎದ್ದು ಮುಂದೆ ನಿಂತು ಯೇಸುವಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಹೇಳುವ ಈ ಸಾಕ್ಷಿ ಏನು?” ಎಂದು ಕೇಳಿದನು. 61 ಆದರೆ ಯೇಸು ಏನೂ ಉತ್ತರ ಕೊಡದೆ ಮೌನವಾಗಿದ್ದರು.
ತಿರುಗಿ ಮಹಾಯಾಜಕನು, “ನೀನು ಭಾಗ್ಯವಂತನ ದೇವರ ಪುತ್ರನಾಗಿರುವ ಕ್ರಿಸ್ತನೋ?” ಎಂದು ಯೇಸುವನ್ನು ಕೇಳಿದನು.
62 ಅದಕ್ಕೆ ಯೇಸು, “ಹೌದು ನಾನೇ, ಇದಲ್ಲದೆ ಮನುಷ್ಯಪುತ್ರನಾದ ನಾನು ಸರ್ವಶಕ್ತರ ಬಲಗಡೆಯಲ್ಲಿ ಆಸೀನನಾಗಿರುವುದನ್ನೂ ಆಕಾಶದ ಮೇಘಗಳಲ್ಲಿ ಬರುವುದನ್ನೂ ನೀವು ಕಾಣುವಿರಿ,” ಎಂದರು.
63 ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇನ್ನು ನಮಗೆ ಸಾಕ್ಷಿಗಳ ಅವಶ್ಯಕತೆ ಏತಕ್ಕೆ? 64 ನೀವು ದೇವದೂಷಣೆಯನ್ನು ಕೇಳಿದ್ದೀರಲ್ಲಾ ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಲು ಅವರೆಲ್ಲರೂ,
“ಈತನಿಗೆ ಮರಣದಂಡನೆ ಆಗಬೇಕು,” ಎಂದು ತೀರ್ಪುಕೊಟ್ಟರು. 65 ತರುವಾಯ ಕೆಲವರು ಯೇಸುವಿನ ಮೇಲೆ ಉಗುಳಿ ಅವರ ಕಣ್ಣಿಗೆ ಬಟ್ಟೆ ಕಟ್ಟಿ ಅವರನ್ನು ಗುದ್ದುವುದಕ್ಕೆ ಆರಂಭಿಸಿ ಯೇಸುವಿಗೆ, “ಪ್ರವಾದನೆ ಹೇಳು,” ಎಂದರು. ಕಾವಲಾಳುಗಳು ಯೇಸುವನ್ನು ಹಿಡಿದುಕೊಂಡುಹೋಗಿ ಅವರನ್ನು ಹೊಡೆದರು.
ಪೇತ್ರನು ಯೇಸುವನ್ನು ಅಲ್ಲಗಳೆದದ್ದು
66 ಪೇತ್ರನು ಅಂಗಳದ ಕೆಳಭಾಗದಲ್ಲಿದ್ದಾಗ ಮಹಾಯಾಜಕನ ದಾಸಿಯರಲ್ಲಿ ಒಬ್ಬಳು ಅಲ್ಲಿಗೆ ಬಂದಳು. 67 ಪೇತ್ರನು ಚಳಿ ಕಾಯಿಸಿಕೊಳ್ಳುತ್ತಿರುವುದನ್ನು ಆಕೆಯು ಕಂಡು ಅವನನ್ನು ದೃಷ್ಟಿಸಿ ನೋಡಿ,
“ನೀನು ಸಹ ಆ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.
68 ಆದರೆ ಅವನು ನಿರಾಕರಿಸಿ, “ನೀನು ಏನು ಹೇಳುತ್ತೀಯೋ ಅದು ನನಗೆ ಗೊತ್ತಿಲ್ಲ ಅರ್ಥವಾಗುತ್ತಲೂ ಇಲ್ಲ,” ಎಂದು ಹೇಳಿ ಹೊರಗೆ ಮುಖ್ಯ ದ್ವಾರದೊಳಗೆ ಹೋದನು. ಆಗ ಹುಂಜವು ಕೂಗಿತು.
69 ಆ ದಾಸಿಯು ಅವನನ್ನು ತಿರುಗಿ ಕಂಡು ಪಕ್ಕದಲ್ಲಿ ನಿಂತಿದ್ದವರಿಗೆ, “ಇವನು ಅವರಲ್ಲಿ ಒಬ್ಬನು,” ಎಂದು ಹೇಳಲಾರಂಭಿಸಿದಳು. 70 ಆಗ ಪೇತ್ರನು ಅದನ್ನು ಮತ್ತೆ ನಿರಾಕರಿಸಿದನು.
ಸ್ವಲ್ಪ ಹೊತ್ತಾದ ಮೇಲೆ ಪಕ್ಕದಲ್ಲಿ ನಿಂತಿದ್ದವರು ತಿರುಗಿ ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು, ನೀನು ಗಲಿಲಾಯದವನೇ,” ಎಂದರು.
71 ಅವನು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಆರಂಭಿಸಿ, “ನೀವು ಮಾತನಾಡುತ್ತಿರುವ ಈ ಮನುಷ್ಯನನ್ನು ನಾನರಿಯೆ,” ಎಂದನು.
72 ಕೂಡಲೇ ಎರಡನೆಯ ಸಾರಿ ಹುಂಜ ಕೂಗಿತು. ಹೀಗೆ, “ಎರಡು ಸಾರಿ ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವೆ,” ಎಂದು ಯೇಸು ತನಗೆ ಹೇಳಿದ ಮಾತನ್ನು ಪೇತ್ರನು ಜ್ಞಾಪಕಮಾಡಿಕೊಂಡು ವ್ಯಥೆಪಟ್ಟು ಅತ್ತನು.
* 14:1 ಅಥವಾ ವಿಮೋಚನೆಯ ಹಬ್ಬ. ದೇವರು ಇಸ್ರಾಯೇಲರನ್ನು ಈಜಿಪ್ಟಿನಿಂದ ಹೇಗೆ ವಿಮೋಚಿಸಿದರು ಎನ್ನುವುದರ ನೆನಪಿಗಾಗಿ ಆಚರಿಸುವ ಹಬ್ಬ 14:1 ಏಳು ದಿನವು ಅವರು ಹುಳಿಯಿಲ್ಲದ ರೊಟ್ಟಿಯನ್ನು ತಿನ್ನುವ ಆಜ್ಞೆ ಇದೆ. ವಿಮೋ 12:17-18 14:5 ಗ್ರೀಕ್ ಭಾಷೆಯಲ್ಲಿ ಮುನ್ನೂರು ದಿನಾರಿ. ಇದು ಒಂದು ವರ್ಷದ ವೇತನಗಿಂತ ಹೆಚ್ಚು § 14:7 ಧರ್ಮೋ 15:11 * 14:27 ಜೆಕರ್ಯ 13:7 14:45 ಗ್ರೀಕ್ ಭಾಷೆಯಲ್ಲಿ ರಬ್ಬೀ