5
ನೆಹೆಮೀಯನು ಬಡವರಿಗೆ ಸಹಾಯಮಾಡಿದನು
1 ತರುವಾಯ ಜನರೂ, ಅವರ ಹೆಂಡತಿಯರೂ ತಮ್ಮ ಸಹೋದರರಾದ ಯೆಹೂದ್ಯರ ವಿರುದ್ಧ ಬಹಳ ಗೋಳಾಡ ತೊಡಗಿದರು.
2 ಅವರಲ್ಲಿ ಕೆಲವರು, “ನಾವೂ, ನಮ್ಮ ಪುತ್ರರೂ, ನಮ್ಮ ಪುತ್ರಿಯರೂ ಅನೇಕರಾದುದರಿಂದ ನಾವು ಬದುಕುವ ಹಾಗೆ ಧಾನ್ಯವನ್ನು ತೆಗೆದುಕೊಳ್ಳೋಣ,” ಎಂದರು.
3 ಕೆಲವರು, “ಈ ಬರಗಾಲದಲ್ಲಿ ನಾವು ಧಾನ್ಯ ಕೊಂಡುಕೊಳ್ಳುವ ಹಾಗೆ ನಮ್ಮ ಹೊಲಗಳನ್ನೂ, ದ್ರಾಕ್ಷಿತೋಟಗಳನ್ನೂ, ಮನೆಗಳನ್ನೂ ಒತ್ತೆ ಇಟ್ಟೆವು,” ಎಂದರು.
4 ಇನ್ನು ಕೆಲವರು, “ಅರಸನಿಗೆ ತೆರಿಗೆಯನ್ನು ಕೊಡಲು ನಾವು ನಮ್ಮ ಹೊಲಗಳ ಮೇಲೆಯೂ, ನಮ್ಮ ದ್ರಾಕ್ಷಿತೋಟಗಳ ಮೇಲೆಯೂ ಸಾಲವನ್ನು ತೆಗೆದುಕೊಳ್ಳಬೇಕಾಯಿತು.
5 ನಾವು ನಮ್ಮ ಸಹೋದರರ ಹಾಗೆಯೇ ಒಂದೇ ರಕ್ತಮಾಂಸದವರಾಗಿದ್ದೇವೆ; ನಮ್ಮ ಮಕ್ಕಳು ಅವರ ಮಕ್ಕಳ ಹಾಗೆಯೇ ಕ್ಷೇಮವಾಗಿದ್ದಾರೆ; ಆದರೂ ನಮ್ಮ ಪುತ್ರಪುತ್ರಿಯರನ್ನೂ ಗುಲಾಮರಾಗುವುದಕ್ಕೆ ತಂದಿದ್ದೇವೆ. ನಮ್ಮ ಪುತ್ರಿಯರಲ್ಲಿ ಕೆಲವರು ಆಗಲೇ ಗುಲಾಮರಾಗಿದ್ದಾರೆ. ಅವರನ್ನು ಬಿಡಿಸಲು ನಮಗೆ ಶಕ್ತಿ ಇಲ್ಲ. ಏಕೆಂದರೆ ನಮ್ಮ ಹೊಲಗಳೂ, ದ್ರಾಕ್ಷಿ ತೋಟಗಳೂ ಪರರ ಪಾಲಾಗಿವೆ,” ಎಂದರು.
6 ಅವರ ಕೂಗನ್ನೂ, ಈ ಆರೋಪಗಳನ್ನೂ ನಾನು ಕೇಳಿ ಬಹಳವಾಗಿ ಕೋಪಿಸಿಕೊಂಡೆನು.
7 ನಾನು ತುಸು ಆಲೋಚಿಸಿ ನೋಡಿದೆ. ಬಳಿಕ ಶ್ರೇಷ್ಠರನ್ನೂ, ಅಧಿಕಾರಿಗಳನ್ನೂ ಖಂಡಿಸಿ, “ನೀವು ನಿಮ್ಮ ಸಹೋದರರಿಂದ ಬಡ್ಡಿ ತೆಗೆದುಕೊಳ್ಳುವುದು ಸರಿಯೇ?” ಎಂದು ಹೇಳಿ ಅವರೊಡನೆ ಬಹಳವಾಗಿ ವಾಗ್ವಾದಿಸಿ, ಅವರಿಗೆ ವಿರೋಧವಾಗಿ ಮಹಾ ಸಭೆಯನ್ನು ಕೂಡಿಸಿದೆ.
8 “ಇತರ ಜನರಿಗೆ ಗುಲಾಮರಾಗಿ ಮಾರಟವಾಗಿರುವ ಯೆಹೂದ್ಯರಾದ ನಮ್ಮ ಸಹೋದರರನ್ನು ನಾವು ನಮಗೆ ಶಕ್ತಿಯಿದ್ದಷ್ಟು ಬಿಡಿಸುತ್ತಿದ್ದೆವು. ಆದರೆ ಈಗ ನೀವು ನಿಮ್ಮ ಸಹೋದರರನ್ನೇ ಮಾರಿಬಿಡುತ್ತಿದ್ದೀರಿ. ಆಮೇಲೆ ಅವರನ್ನು ನಾವು ಕೊಂಡುಕೊಳ್ಳಬೇಕೇನು?” ಎಂದೆನು. ಆಗ ಅವರು ಹೇಳಲು ಏನೂ ಸಿಗದ ಕಾರಣ ಅವರು ಮೌನವಾಗಿದ್ದರು.
9 ನಾನು ಅವರಿಗೆ, “ನೀವು ಮಾಡುವುದು ಒಳ್ಳೆಯದಲ್ಲ. ಇತರ ದೇಶದವರಾದ ನಮ್ಮ ಶತ್ರುಗಳ ನಿಂದೆಗೆ ಗುರಿಯಾಗದಂತೆ ನೀವು ನಮ್ಮ ದೇವರ ಭಯದಲ್ಲಿ ನಡೆಯಬೇಕಲ್ಲವೇ.
10 ನಾನು, ನನ್ನ ಸಹೋದರರು, ಸೇವಕರು ಸಹ ಅವರಿಗೆ ಹಣವನ್ನೂ, ಧಾನ್ಯವನ್ನೂ ಸಾಲವಾಗಿ ಕೊಟ್ಟಿದ್ದೇವೆ. ಬಡ್ಡಿ ತೆಗೆದುಕೊಳ್ಳುವ ಪದ್ಧತಿಯನ್ನು ಬಿಟ್ಟುಬಿಡೋಣ.
11 ಅವರ ಹೊಲ, ದ್ರಾಕ್ಷಿತೋಟ, ಓಲಿವ್ ಎಣ್ಣೆಮರಗಳ ತೋಪು, ಮನೆ ಇವುಗಳನ್ನು ಹಿಂದಕ್ಕೆ ಕೊಟ್ಟು ಬಿಡಿ; ನೀವು ಕೊಟ್ಟ ಹಣ, ಧಾನ್ಯ, ದ್ರಾಕ್ಷಾರಸ, ಎಣ್ಣೆ ಇವುಗಳಿಗೆ ಶೇಕಡಾ ಇಷ್ಟೆಂದು ವಸೂಲಿ ಮಾಡುವ ಹಕ್ಕನ್ನೂ ಕೂಡ ದಯವಿಟ್ಟು ಈ ದಿನವೇ ರದ್ದುಗೊಳಿಸಿ,” ಎಂದು ಹೇಳಿದೆ.
12 ಅದಕ್ಕವರು, “ನಾವು ಹಿಂದಕ್ಕೆ ಕೊಡುತ್ತೇವೆ. ಅವರಿಂದ ಏನೂ ಕೇಳುವುದಿಲ್ಲ. ನೀನು ಹೇಳಿದ ಹಾಗೆ ಮಾಡುತ್ತೇವೆ,” ಎಂದರು.
ಆಗ ನಾನು ಯಾಜಕರನ್ನು ಕರೆದು, ಅವರು ಈ ಮಾತಿನ ಪ್ರಕಾರ ಮಾಡುವ ಹಾಗೆ ಅವರಿಂದ ಪ್ರಮಾಣವನ್ನು ತೆಗೆದುಕೊಂಡೆನು.
13 ನಾನು ನನ್ನ ಬಟ್ಟೆಯನ್ನು ಝಾಡಿಸಿ, “ಈ ಮಾತಿನ ಪ್ರಕಾರ ಮಾಡದೆ ಇರುವ ಪ್ರತಿಯೊಬ್ಬನನ್ನು ದೇವರು ಅವನ ಮನೆಯಿಂದಲೂ, ಅವನ ಆಸ್ತಿಪಾಸ್ತಿಯಿಂದಲೂ ಝಾಡಿಸಲಿ. ಅವನು ಇದೇ ಪ್ರಕಾರ ಝಾಡಿಸಿ, ಬರಿದಾಗಲಿ,” ಎಂದೆನು.
ಅದಕ್ಕೆ ಸಭೆಯವರೆಲ್ಲರೂ, “ಆಮೆನ್” ಎಂದು ಹೇಳಿ ಯೆಹೋವ ದೇವರನ್ನು ಸ್ತುತಿಸಿದರು. ಜನರು ತಾವು ಕೊಟ್ಟ ಮಾತಿನ ಪ್ರಕಾರ ನಡೆದುಕೊಂಡರು.
14 ಇದಲ್ಲದೆ ನಾನು ಯೆಹೂದ ದೇಶದಲ್ಲಿ ಅವರ ರಾಜ್ಯಪಾಲನಾದ ಕಾಲ ಮೊದಲ್ಗೊಂಡು ಅರಸನಾದ ಅರ್ತಷಸ್ತನ ಇಪ್ಪತ್ತನೆಯ ವರ್ಷ ಮೊದಲ್ಗೊಂಡು ಮೂವತ್ತೆರಡನೆಯ ವರ್ಷದವರೆಗೆ ಹನ್ನೆರಡು ವರ್ಷವಾಗಿ ನಾನೂ, ನನ್ನ ಸಹೋದರರೂ ರಾಜ್ಯಪಾಲನಿಗೆ ಸಲ್ಲತಕ್ಕ ಆಹಾರವನ್ನು ತಿನ್ನಲಿಲ್ಲ.
15 ಆದರೆ ನನಗಿಂತ ಮುಂಚೆ ಇದ್ದ ಅಧಿಪತಿಗಳು ಜನರಿಗೆ ಭಾರವಾಗಿದ್ದು, ನಾಲ್ವತ್ತು ಬೆಳ್ಳಿನಾಣ್ಯ ಮೌಲ್ಯದ ರೊಟ್ಟಿಯನ್ನೂ, ದ್ರಾಕ್ಷಾರಸವನ್ನೂ ತೆಗೆದುಕೊಳ್ಳುತ್ತಿದ್ದರು. ಅವರ ಸೇವಕರು ಸಹ ಜನರ ಮೇಲೆ ದೊರೆತನ ನಡೆಸುತ್ತಾ ಇದ್ದರು. ಆದರೆ ದೇವರ ಭಯದ ನಿಮಿತ್ತ ನಾನು ಹಾಗೆ ಮಾಡಲಿಲ್ಲ.
16 ಆ ಗೋಡೆ ಕಟ್ಟುವುದರಲ್ಲೇ ನಿರತನಾಗಿದ್ದೆ ಮತ್ತು ನನ್ನ ಎಲ್ಲಾ ಸೇವಕರು ಪ್ರತಿದಿನ ಆ ಕೆಲಸಕ್ಕೆ ಬರುವಂತೆ ನೋಡುತ್ತಿದ್ದೆ. ನಾವು ಅಲ್ಲಿ ಭೂಮಿಯನ್ನು ಸಂಪಾದಿಸಿಕೊಂಡಿರಲಿಲ್ಲ.
17 ನಮ್ಮ ಸುತ್ತಲೂ ಇರುವ ಜನಾಂಗಗಳಿಂದ ಬಂದವರೂ, ಯೆಹೂದ್ಯರೂ, ಅಧಿಕಾರಿಗಳೂ ನೂರ ಐವತ್ತು ಮಂದಿ ನನ್ನ ಪಂಕ್ತಿಯಲ್ಲೇ ಊಟಮಾಡುತ್ತಿದ್ದರು.
18 ಪ್ರತಿದಿನಕ್ಕೆ ಒಂದು ಎತ್ತು, ಉತ್ತಮವಾದ ಆರು ಕುರಿಗಳು, ಕೋಳಿಗಳು, ಹತ್ತು ದಿವಸಕ್ಕೆ ಒಂದು ಸಾರಿ ಸಕಲ ವಿಧವಾದ ದ್ರಾಕ್ಷಾರಸವು ನನಗೋಸ್ಕರ ಸಿದ್ಧವಾಗುತ್ತಿದ್ದವು. ಆದರೆ ಈ ಜನರ ಮೇಲೆ ಇದ್ದ ದಾಸತ್ವ ಭಾರವಾಗಿದ್ದುದರಿಂದ ನಾನು ರಾಜ್ಯಪಾಲನಿಗೆ ಸಲ್ಲತಕ್ಕ ಆಹಾರವನ್ನು ಬೇಡಲಿಲ್ಲ.
19 “ನನ್ನ ದೇವರೇ, ನಾನು ಈ ಜನರಿಗೆ ಮಾಡಿದ ಎಲ್ಲವನ್ನು ನೆನಪು ಮಾಡಿಕೊಂಡು ನನಗೆ ಒಳಿತನ್ನು ಮಾಡಿರಿ,” ಎಂದು ಪ್ರಾರ್ಥಿಸಿದೆ.