27
ಚಲ್ಪಹಾದನ ಪುತ್ರಿಯರು
1 ಯೋಸೇಫನ ಮಗನಾದ ಮನಸ್ಸೆಯ ಕುಟುಂಬಗಳಿಗೆ ಸೇರಿದ ಚಲ್ಪಹಾದ ಎಂಬುವನು. ಇವನು ಮಾಕೀರನ ಮರಿಮಗ, ಗಿಲ್ಯಾದನ ಮೊಮ್ಮಗ ಹಾಗು ಹೇಫೆರನ ಮಗ. ಈ ಚಲ್ಪಹಾದನಿಗೆ ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ ಎಂಬ ಪುತ್ರಿಯರಿದ್ದರು.
2 ಇವರು ಸಭೆಯ ಗುಡಾರದ ಬಾಗಿಲಿನ ಹತ್ತಿರದಲ್ಲಿದ್ದ ಮೋಶೆ, ಯಾಜಕನಾದ ಎಲಿಯಾಜರ್, ಪ್ರಧಾನರು ಮತ್ತು ಸಮಸ್ತ ಸಭೆಯವರ ಮುಂದೆ ಬಂದು ನಿಂತು ಅವರಿಗೆ,
3 “ನಮ್ಮ ತಂದೆಯು ಮರುಭೂಮಿಯಲ್ಲಿ ಸತ್ತನು. ಅವನು ಕೋರಹನ ಗುಂಪಿನಲ್ಲಿ ಯೆಹೋವ ದೇವರಿಗೆ ವಿರೋಧವಾಗಿ ಕೂಡಿಕೊಂಡವರ ಗುಂಪಿನೊಳಗಿರದೆ, ತನ್ನ ಪಾಪದಲ್ಲಿಯೇ ಸತ್ತನು. ಅವನಿಗೆ ಪುತ್ರರು ಇರಲಿಲ್ಲ.
4 ಹಾಗಾದರೆ ನಮ್ಮ ತಂದೆಗೆ ಮಗನಿಲ್ಲದಿರುವುದರಿಂದ, ಅವನ ಹೆಸರನ್ನು ತನ್ನ ಕುಟುಂಬದಿಂದ ಏಕೆ ತೆಗೆಯಬೇಕು? ನೀನು ನಮ್ಮ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಮಗೆ ಕೊಡು,” ಎಂದರು.
5 ಮೋಶೆಯು ಅವರ ವ್ಯಾಜ್ಯವನ್ನು ಯೆಹೋವ ದೇವರ ಮುಂದೆ ತಂದನು.
6 ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
7 ಚಲ್ಪಹಾದನ ಪುತ್ರಿಯರು ಹೇಳಿದ್ದು ಸರಿ, ನೀನು ಅವರಿಗೆ ಅವರ ತಂದೆಯ ಸಹೋದರರ ಮಧ್ಯದಲ್ಲಿ ಒಂದು ಸೊತ್ತನ್ನು ನಿಶ್ಚಯವಾಗಿ ಕೊಡಬೇಕು, ಅವರ ತಂದೆಯ ಸೊತ್ತನ್ನು ಅವರಿಗೆ ಸೇರಿಸಬೇಕು.
8 “ಇಸ್ರಾಯೇಲರ ಸಂಗಡ ಮಾಡನಾಡಿ ನೀನು ಹೇಳಬೇಕಾದದ್ದೇನೆಂದರೆ: ‘ಒಬ್ಬನು ಮಗನಿಲ್ಲದೆ ಸತ್ತರೆ, ನೀವು ಅವನ ಸೊತ್ತನ್ನು ಅವನ ಮಗಳಿಗೆ ಸೇರಿಸಬೇಕು.
9 ಅವನಿಗೆ ಸಹೋದರರು ಇಲ್ಲದಿದ್ದರೆ, ನೀವು ಅವನ ಸೊತ್ತನ್ನು ಅವನ ತಂದೆಯ ಸಹೋದರರಿಗೆ ಕೊಡಬೇಕು.
10 ಆದರೆ ಅವನ ತಂದೆಗೆ ಸಹೋದರರು ಇಲ್ಲದಿದ್ದರೆ,
11 ಅವನ ಕುಟುಂಬದೊಳಗೆ ಅವನಿಗೆ ಹೆಚ್ಚಾಗಿ ಸಮೀಪವಾದ ಬಂಧುವಿಗೆ ಅವನ ಸೊತ್ತನ್ನು ಕೊಡಬೇಕು. ಅವನೇ ಅದನ್ನು ಪಡೆದುಕೊಳ್ಳಲಿ. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ, ಇದು ಇಸ್ರಾಯೇಲರಿಗೆ ನ್ಯಾಯದ ಕಟ್ಟಳೆಯಾಗಿರಬೇಕು,’ ” ಎಂದು ಹೇಳಿದರು.
ಮೋಶೆ ಯೆಹೋಶುವನನ್ನು ನೇಮಿಸಿದ್ದು
12 ಆಗ ಯೆಹೋವ ದೇವರು ಮೋಶೆಗೆ, “ನೀನು ಈ ಅಬಾರೀಮ್ ಪರ್ವತದ ಮೇಲೆ ಏರಿ, ನಾನು ಇಸ್ರಾಯೇಲರಿಗೆ ಕೊಟ್ಟ ದೇಶವನ್ನು ನೋಡು.
13 ಅದನ್ನು ನೋಡಿದ ಮೇಲೆ, ನಿನ್ನ ಸಹೋದರನಾದ ಆರೋನನ ಪ್ರಕಾರ ನೀನೂ ಸಹ ನಿನ್ನ ಜನರ ಬಳಿಗೆ ಸೇರುತ್ತೀ.
14 ಏಕೆಂದರೆ ನೀವು ಚಿನ್ ಎಂಬ ಮರುಭೂಮಿಯಲ್ಲಿ, ಇಸ್ರಾಯೇಲ್ ಜನಸಮೂಹದವರು ನನ್ನೊಡನೆ ವಾಗ್ವಾದ ಮಾಡಿದಾಗ ಅವರ ಮುಂದೆ ನೀರಿನ ಬಳಿಯಲ್ಲಿ ನನ್ನನ್ನು ಗೌರವಿಸದೆ, ನನ್ನ ಆಜ್ಞೆಯನ್ನು ಮೀರಿದಿರಿ. ಆ ನೀರು ಎಂದರೆ ಚಿನ್ ಎಂಬ ಮರುಭೂಮಿಯ ಕಾದೇಶಿನಲ್ಲಿರುವ ಮೆರೀಬಾದ ನೀರು,” ಎಂದರು.
15 ಮೋಶೆಯು ಯೆಹೋವ ದೇವರ ಸಂಗಡ ಮಾತನಾಡಿ,
16 “ಎಲ್ಲಾ ಮನುಷ್ಯರ ಆತ್ಮಗಳ ದೇವರಾದ ಯೆಹೋವ ದೇವರು ಈ ಜನಸಮೂಹದ ಮೇಲೆ ಒಬ್ಬ ಮನುಷ್ಯನನ್ನು ನೇಮಿಸಿ ಇಡಲಿ.
17 ಅವನು ಅವರ ಮುಂದಾಗಿ ಹೋಗಲಿ, ಅವರ ಮುಂದಾಗಿ ಬರಲಿ. ಅವರನ್ನು ಕರೆದುಕೊಂಡು ಹೋಗಲಿ, ಕರೆದುಕೊಂಡು ಬರಲಿ. ಯೆಹೋವ ದೇವರ ಈ ಜನಸಮೂಹವು ಕುರುಬನಿಲ್ಲದ ಕುರಿಗಳ ಹಾಗೆ ಇರಬಾರದು,” ಎಂದನು.
18 ಆಗ ಯೆಹೋವ ದೇವರು ಮೋಶೆಗೆ, “ಪವಿತ್ರಾತ್ಮವುಳ್ಳವನಾಗಿರುವ ನೂನನ ಮಗ ಯೆಹೋಶುವನನ್ನು ತೆಗೆದುಕೊಂಡು, ನಿನ್ನ ಕೈಯನ್ನು ಅವನ ಮೇಲೆ ಇಟ್ಟು,
19 ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ, ಅವರಿಗೆದುರಾಗಿ ಅವನನ್ನು ನೇಮಿಸು.
20 ಇಸ್ರಾಯೇಲರ ಸಮಸ್ತ ಸಭೆಯು ಅವನಿಗೆ ವಿಧೇಯರಾಗುವಂತೆ, ನಿನಗಿರುವ ಗೌರವವನ್ನು ಅವನಿಗೆ ಕೊಡಬೇಕು.
21 ಅವನು ಯಾಜಕನಾದ ಎಲಿಯಾಜರನ ಮುಂದೆ ನಿಲ್ಲಬೇಕು. ಎಲಿಯಾಜರನು ಯೆಹೋವ ದೇವರ ಮುಂದೆ ಊರೀಮ್ ನ್ಯಾಯದ ಪ್ರಕಾರ ಅವನಿಗೋಸ್ಕರ ವಿಚಾರಣೆಯನ್ನು ಮಾಡಬೇಕು. ಯೆಹೋಶುವನ ಆಜ್ಞೆಯ ಪ್ರಕಾರವೇ ಅವನು ಮತ್ತು ಅವನ ಸಂಗಡ ಇರುವ ಸಮಸ್ತ ಇಸ್ರಾಯೇಲರ ಸಮೂಹವೂ ಹೊರಡಬೇಕು ಹಾಗು ಹಿಂದಿರುಗಬೇಕು,” ಎಂದರು.
22 ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನು ಮಾಡಿ, ಯೆಹೋಶುವನನ್ನು ತೆಗೆದುಕೊಂಡು, ಅವನನ್ನು ಯಾಜಕನಾದ ಎಲಿಯಾಜರನ ಮುಂದೆಯೂ, ಸಮಸ್ತ ಸಭೆಯ ಮುಂದೆಯೂ ನಿಲ್ಲಿಸಿ,
23 ಅವನ ಮೇಲೆ ತನ್ನ ಕೈಗಳನ್ನು ಇಟ್ಟು, ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಪ್ರಕಾರ ಅವನನ್ನು ನೇಮಿಸಿದನು.