ಕೀರ್ತನೆ 8
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಗಿತ್ತೀ ರಾಗದಲ್ಲಿ ಹಾಡತಕ್ಕದ್ದು. ದಾವೀದನ ಕೀರ್ತನೆ.
ನಮ್ಮ ಕರ್ತ ಆಗಿರುವ ಯೆಹೋವ ದೇವರೇ,
ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ವೈಭವವುಳ್ಳದ್ದಾಗಿದೆ!
 
ನೀವು ನಿಮ್ಮ ಮಹಿಮೆಯನ್ನು
ಆಕಾಶಗಳಲ್ಲಿ ಸ್ಥಾಪಿಸಿದ್ದೀರಿ.
ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಸ್ತೋತ್ರದ ಮೂಲಕ
ನಿಮ್ಮ ಶತ್ರುಗಳ ವಿರೋಧವಾಗಿ ಭದ್ರಕೋಟೆಯನ್ನು ಸ್ಥಾಪಿಸಿ,
ನಿಮ್ಮ ವೈರಿಗಳನ್ನೂ ಮುಯ್ಯಿ ತೀರಿಸುವವರನ್ನೂ ನೀವು ಸುಮ್ಮಗಿರಿಸಿದ್ದೀರಿ.
ನಿಮ್ಮ ಬೆರಳಿನ ಸೃಷ್ಟಿಯಾದ ಆಕಾಶಮಂಡಲವನ್ನೂ
ನೀವು ಉಂಟುಮಾಡಿದ ಚಂದ್ರನಕ್ಷತ್ರಗಳನ್ನೂ
ನಾನು ನೋಡಿದಾಗ,
ನೀವು ಮಾನವರನ್ನು ನೆನಸಲು ಅವರು ಎಷ್ಟರವರು?
ಮನುಷ್ಯಪುತ್ರನನ್ನು ಲಕ್ಷ್ಯವಿಡಲು ಅವನು ಯಾರು?
 
ನೀವು ಮನುಷ್ಯಪುತ್ರನನ್ನು ದೇವರಿಗಿಂತಲೂ* ಸ್ವಲ್ಪ ಕಡಿಮೆ ಮಾಡಿ,
ಮಹಿಮೆಯನ್ನೂ ಮಾನವನ್ನೂ ಅವನಿಗೆ ಕಿರೀಟವಾಗಿಟ್ಟಿದ್ದೀರಿ.
ನೀವು ನಿಮ್ಮ ಕೈಕೃತಿಗಳ ಮೇಲೆ ಅವನನ್ನು ಅಧಿಕಾರಿಯನ್ನಾಗಿ ಮಾಡಿ,
ಸಮಸ್ತವನ್ನೂ ಅವನ ಪಾದಗಳ ಕೆಳಗೆ ಹಾಕಿದ್ದೀರಿ:
ಎಲ್ಲಾ ಕುರಿದನಗಳನ್ನೂ
ಅಡವಿಯ ಮೃಗಗಳನ್ನೂ
ಆಕಾಶದ ಪಕ್ಷಿಗಳನ್ನೂ
ಸಮುದ್ರದ ಮೀನುಗಳನ್ನೂ ಸಮುದ್ರದ ಹಾದಿಗಳಲ್ಲಿ ಸಂಚರಿಸುವ ಎಲ್ಲ ವಿಧವಾದ ಜೀವಜಂತುಗಳನ್ನೂ
ಅವನ ಪಾದಗಳ ಕೆಳಗೆ ಹಾಕಿದ್ದೀರಿ.
 
ನಮ್ಮ ಕರ್ತ ಆಗಿರುವ ಯೆಹೋವ ದೇವರೇ,
ನಿಮ್ಮ ಹೆಸರು ಭೂಮಿಯಲ್ಲೆಲ್ಲಾ ಎಷ್ಟೋ ಮಹಿಮೆಯುಳ್ಳದ್ದಾಗಿದೆ!
* ಕೀರ್ತನೆ 8:5 ದೇವರಿಗಿಂತಲೂ ಅಥವಾ ದೇವದೂತರಿಗಿಂತಲೂ