16
ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡುವುದು
1 ಅವರು ದೇವರ ಮಂಜೂಷವನ್ನು ಒಳಗೆ ತಂದು, ದಾವೀದನು ಅದಕ್ಕೋಸ್ಕರ ಹಾಕಿದ ಗುಡಾರದೊಳಗೆ ಅದರ ನಿಯಮಿತ ಸ್ಥಳದಲ್ಲಿ ಅದನ್ನು ಇಟ್ಟ ತರುವಾಯ, ಅವರು ದೇವರ ಸನ್ನಿಧಿಯಲ್ಲಿ ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದರು.
2 ದಾವೀದನು ದಹನಬಲಿಗಳನ್ನೂ, ಸಮಾಧಾನದ ಬಲಿಗಳನ್ನೂ ಅರ್ಪಿಸಿದ ತರುವಾಯ, ಅವನು ಯೆಹೋವ ದೇವರ ಹೆಸರಿನಲ್ಲಿ ಜನರನ್ನು ಆಶೀರ್ವದಿಸಿ,
3 ಇಸ್ರಾಯೇಲಿನ ಪ್ರತಿಯೊಬ್ಬ ಪುರುಷನಿಗೂ ಸ್ತ್ರೀಗೂ, ಒಂದು ರೊಟ್ಟಿಯನ್ನೂ, ಖರ್ಜೂರದ ಉಂಡೆಯನ್ನೂ, ದ್ರಾಕ್ಷಿ ಹಣ್ಣಿನ ಉಂಡೆಯನ್ನೂ ಹಂಚಿದನು.
4 ಇದಲ್ಲದೆ ಯೆಹೋವ ದೇವರ ಮಂಜೂಷದ ಮುಂದೆ ಸೇವೆಮಾಡಲೂ, ಇಸ್ರಾಯೇಲಿನ ದೇವರಾದ ಯೆಹೋವ ದೇವರನ್ನು ಸ್ಮರಿಸುವುದಕ್ಕೂ, ಕೊಂಡಾಡುವುದಕ್ಕೂ, ಹೊಗಳುವುದಕ್ಕೂ ಲೇವಿಯರಲ್ಲಿ ಕೆಲವರನ್ನು ನೇಮಿಸಿದನು.
5 ಅವರು ಯಾರೆಂದರೆ: ಮುಖ್ಯಸ್ಥನಾದ ಆಸಾಫನೂ, ಅವನ ತರುವಾಯ ಜೆಕರ್ಯನೂ, ಯೆಜೀಯೇಲನೂ, ಶೆಮೀರಾಮೋತನೂ, ಯೆಹೀಯೇಲನೂ, ಮತ್ತಿತ್ಯನೂ, ಎಲೀಯಾಬನೂ, ಬೆನಾಯನೂ, ಓಬೇದ್ ಏದೋಮನೂ, ಯೆಹಿಯೇಲನೂ ಇವರು ವೀಣೆಗಳನ್ನೂ, ಕಿನ್ನರಿಗಳನ್ನೂ ಬಾರಿಸುತ್ತಿದ್ದರು. ಆದರೆ ಆಸಾಫನು ತಾಳಗಳನ್ನು ಬಾರಿಸುತ್ತಿದ್ದನು.
6 ಇದಲ್ಲದೆ ಯಾಜಕರಾದ ಬೆನಾಯನೂ, ಯಹಜಿಯೇಲನೂ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಯಾವಾಗಲೂ ತುತೂರಿಗಳನ್ನು ಊದುವವರಾಗಿದ್ದರು.
7 ಆಸಾಫನಿಗೂ, ಅವನ ಜೊತೆ ಲೇವಿಯರಿಗೂ ಯೆಹೋವ ದೇವರ ಸ್ತೋತ್ರಗೀತೆ ಹಾಡಲು ದಾವೀದನು ಪ್ರಥಮವಾಗಿ ಆ ದಿನದಲ್ಲೇ ನೇಮಿಸಿದನು. ಅವರು ಹೀಗೆಂದು ಹಾಡಿದರು:
8 ಯೆಹೋವ ದೇವರಿಗೆ ಉಪಕಾರಸ್ತುತಿ ಮಾಡಿರಿ, ಅವರ ಹೆಸರನ್ನು ಸಾರಿ ಹೇಳಿರಿ,
ಜನರಲ್ಲಿ ದೇವರ ಕ್ರಿಯೆಗಳನ್ನು ತಿಳಿಯಪಡಿಸಿರಿ.
9 ದೇವರಿಗೆ ಹಾಡಿರಿ, ದೇವರಿಗೆ ಕೀರ್ತನೆ ಹಾಡಿರಿ,
ದೇವರ ಅದ್ಭುತ ಕ್ರಿಯೆಗಳ ವಿಷಯವಾಗಿ ಮಾತನಾಡಿರಿ.
10 ದೇವರ ಪರಿಶುದ್ಧ ನಾಮವನ್ನು ಹೊಗಳಿರಿ,
ಯೆಹೋವ ದೇವರನ್ನು ಹುಡುಕುವವರ ಹೃದಯವು ಸಂತೋಷಿಸಲಿ.
11 ಯೆಹೋವ ದೇವರನ್ನೂ, ಅವರ ಬಲವನ್ನೂ ಆಶ್ರಯಿಸಿರಿ,
ಅವರ ಮುಖವನ್ನು ಯಾವಾಗಲೂ ಹುಡುಕಿರಿ.
12 ದೇವರು ಮಾಡಿದ ಆಶ್ಚರ್ಯಕಾರ್ಯಗಳನ್ನೂ, ಅವರ ಅದ್ಭುತಗಳನ್ನೂ,
ಅವರ ಬಾಯಿಂದ ಹೊರಟ ನ್ಯಾಯ ನಿರ್ಣಯಗಳನ್ನೂ ಜ್ಞಾಪಕಮಾಡಿಕೊಳ್ಳಿರಿ.
13 ಅವರ ಸೇವಕನಾದ ಇಸ್ರಾಯೇಲಿನ ಸಂತತಿಯೇ,
ಅವರು ಆಯ್ದುಕೊಂಡ ಯಾಕೋಬನ ಮಕ್ಕಳೇ,
14 ಅವರೇ ನಮ್ಮ ದೇವರಾದ ಯೆಹೋವ ಆಗಿದ್ದಾರೆ.
ಅವರ ನ್ಯಾಯಗಳು ಸಮಸ್ತ ಭೂಮಿಯಲ್ಲಿ ಇವೆ.
15 ದೇವರು ತಮ್ಮ ಒಡಂಬಡಿಕೆಯನ್ನೂ,
ಸಾವಿರ ತಲಾಂತರಗಳಿಗೆ ಆಜ್ಞಾಪಿಸಿದ ತಮ್ಮ ಮಾತನ್ನೂ,
16 ಅಬ್ರಹಾಮನ ಸಂಗಡ ಮಾಡಿದ ಒಡಂಬಡಿಕೆಯನ್ನೂ,
ಇಸಾಕನಿಗೆ ಇಟ್ಟ ಆಣೆಯನ್ನೂ ಯುಗಯುಗಕ್ಕೂ ಜ್ಞಾಪಕಮಾಡಿಕೊಳ್ಳಿರಿ.
17 ದೇವರು ಅದನ್ನು ಯಾಕೋಬನಿಗೆ ತೀರ್ಪನ್ನಾಗಿ ದೃಢಪಡಿಸಿದರು,
ಅವರು ಇಸ್ರಾಯೇಲರಿಗೆ ನಿತ್ಯ ಒಡಂಬಡಿಕೆಯಾಗಿ ಸ್ಥಾಪಿಸಿ ಹೇಳಿದ್ದೇನೆಂದರೆ:
18 “ನಾನು ನಿಮಗೆ ಕಾನಾನ್ ದೇಶವನ್ನು
ನಿಮ್ಮ ಬಾಧ್ಯತೆಯ ಪಾಲಾಗಿ ಕೊಡುವೆನು.”
19 ಆಗ ಅವರು ಅಲ್ಪಸಂಖ್ಯಾತರೂ, ಬಹು ಸ್ವಲ್ಪ ಮಂದಿಯಾಗಿಯೂ,
ಪರದೇಶಸ್ಥರಾಗಿಯೂ ನಾಡಿನಲ್ಲಿ ಇದ್ದರು.
20 ಅವರು ಜನಾಂಗದಿಂದ ಜನಾಂಗಕ್ಕೂ,
ಒಂದು ರಾಜ್ಯದಿಂದ ಬೇರೊಂದು ರಾಜ್ಯಕ್ಕೂ ಹೋಗುತ್ತಿದ್ದರು.
21 ಜನರು ಅವರಿಗೆ ಕೇಡು ಮಾಡದಂತೆ ದೇವರು ತಡೆದರು.
ಹೌದು, ಅವರಿಗೋಸ್ಕರ ದೇವರು ಅರಸರನ್ನು ಗದರಿಸಿ:
22 ನನ್ನ ಅಭಿಷಿಕ್ತರನ್ನು ಮುಟ್ಟಬೇಡಿರಿ.
ನನ್ನ ಪ್ರವಾದಿಗಳಿಗೆ ಕೇಡು ಮಾಡಬೇಡಿರಿ.
23 ಸಮಸ್ತ ಭೂನಿವಾಸಿಗಳೇ, ಯೆಹೋವ ದೇವರಿಗೆ ಹಾಡಿರಿ.
ಅವರ ರಕ್ಷಣೆಯನ್ನು ದಿನಂಪ್ರತಿ ಸಾರಿ ಹೇಳಿರಿ.
24 ಜನಾಂಗಗಳಲ್ಲಿ ಅವರ ಘನತೆಯನ್ನೂ,
ಎಲ್ಲಾ ಜನಾಂಗಗಳಲ್ಲಿ ಅವರ ಅದ್ಭುತಗಳನ್ನೂ ವಿವರಿಸಿರಿ.
25 ಯೆಹೋವ ದೇವರು ಮಹೋನ್ನತರಾಗಿದ್ದಾರೆ, ಬಹು ಸ್ತುತಿಗೆ ಪಾತ್ರರೂ ಆಗಿದ್ದಾರೆ;
ಅವರು ಎಲ್ಲಾ ದೇವರುಗಳಿಗಿಂತ ಬಹುಭಯಭಕ್ತಿಗೆ ಪಾತ್ರರಾಗಿದ್ದಾರೆ.
26 ಏಕೆಂದರೆ ಜನಾಂಗಗಳ ದೇವರುಗಳೆಲ್ಲಾ ವಿಗ್ರಹಗಳಾಗಿವೆ;
ಆದರೆ ಯೆಹೋವ ದೇವರು ಆಕಾಶಮಂಡಲವನ್ನು ನಿರ್ಮಿಸಿದವರು.
27 ಅವರ ಸನ್ನಿಧಿಯಲ್ಲಿ ಘನತೆಯೂ ಪ್ರಭೆಯೂ;
ಅವರ ಪರಿಶುದ್ಧ ಸ್ಥಳದಲ್ಲಿ ಬಲವೂ ಸಂತೋಷವೂ ಇವೆ.
28 ಜನಾಂಗದ ಕುಟುಂಬಗಳೇ, ಯೆಹೋವ ದೇವರ ಮುಂದೆ,
ನೀವು ಮಹಿಮೆಯನ್ನೂ ಬಲವನ್ನೂ ಅರ್ಪಿಸಿರಿ.
29 ಯೆಹೋವ ದೇವರ ಹೆಸರಿಗೆ ಸಲ್ಲತಕ್ಕ ಗೌರವವನ್ನು ಸಲ್ಲಿಸಿರಿ;
ಕಾಣಿಕೆಯನ್ನು ತೆಗೆದುಕೊಂಡು ದೇವರ ಸನ್ನಿಧಿಗೆ ಬನ್ನಿರಿ.
ಪರಿಶುದ್ಧತೆ ಎಂಬ ಭೂಷಣದೊಡನೆ ಯೆಹೋವ ದೇವರನ್ನು ಆರಾಧಿಸಿರಿ.
30 ಸಮಸ್ತ ಭೂನಿವಾಸಿಗಳೇ, ಅವರ ಮುಂದೆ ಭಯಪಡಿರಿ.
ಲೋಕವು ಸ್ಥಿರವಾಗಿರುವುದು, ಕದಲುವುದಿಲ್ಲ.
31 ಆಕಾಶವು ಸಂತೋಷಿಸಲಿ, ಭೂಮಿಯು ಉಲ್ಲಾಸಪಡಲಿ.
ಯೆಹೋವ ದೇವರು ಆಳುತ್ತಾರೆಂದು ಜನಾಂಗಗಳಲ್ಲಿ ಹೇಳಲಿ.
32 ಸಮುದ್ರವೂ ಅದರಲ್ಲಿರುವುದೆಲ್ಲವೂ ಘೋಷಿಸಲಿ.
ಹೊಲಗಳೂ ಅವುಗಳಲ್ಲಿರುವ ಸಮಸ್ತವೂ ಉತ್ಸಾಹಪಡಲಿ.
33 ಆಗ ಅಡವಿಯ ಮರಗಳೆಲ್ಲಾ ಯೆಹೋವ ದೇವರ ಮುಂದೆಯೇ
ಉತ್ಸಾಹಧ್ವನಿ ಮಾಡಲಿ.
ದೇವರು ಭೂಮಿಗೆ ನ್ಯಾಯತೀರಿಸಲು ಬರುತ್ತಾರೆ.
34 ಯೆಹೋವ ದೇವರಿಗೆ ಕೃತಜ್ಞತಾ ಸ್ತುತಿಮಾಡಿರಿ.
ಅವರು ಒಳ್ಳೆಯವರು; ಅವರ ಪ್ರೀತಿ ಶಾಶ್ವತವಾಗಿರುವುದು.
35 ನಮ್ಮ ರಕ್ಷಣೆಯ ದೇವರೇ,
“ನಾವು ನಿಮ್ಮ ಪರಿಶುದ್ಧ ಹೆಸರಿಗೆ ಉಪಕಾರಸ್ತುತಿ ಮಾಡಿ,
ನಿಮ್ಮ ಸ್ತೋತ್ರದಲ್ಲಿ ಜಯಘೋಷ ಮಾಡುವ ಹಾಗೆ ನಮ್ಮನ್ನು ರಕ್ಷಿಸಿರಿ,
ಜನಾಂಗಗಳೊಳಗಿಂದ ನಮ್ಮನ್ನು ಬಿಡುಗಡೆ ಮಾಡಿ ಒಂದುಗೂಡಿಸಿರಿ.”
36 ಇಸ್ರಾಯೇಲ್ ದೇವರಾದ ಯೆಹೋವ ದೇವರಿಗೆ
ಯುಗಯುಗಕ್ಕೂ ಸ್ತುತಿಯುಂಟಾಗಲಿ,
ಜನರೆಲ್ಲರೂ, “ಆಮೆನ್,” ಎಂದು ಹೇಳಲಿ. ನೀವು, “ಯೆಹೋವ ದೇವರನ್ನು ಸ್ತುತಿಸಿರಿ,” ಎಂದು ಹೇಳಿದರು.
37 ಪ್ರತಿದಿನದ ಅವಶ್ಯಕತೆಗಳಿಗೆ ಅನುಗುಣವಾಗಿ ನಿಯಮಿತವಾಗಿ ಯೆಹೋವ ದೇವರ ಒಡಂಬಡಿಕೆಯ ಮಂಜೂಷದ ಮುಂದೆ ಸೇವೆ ಸಲ್ಲಿಸಲು ದಾವೀದನು ಆಸಾಫ್ ಮತ್ತು ಅವನ ಸಹಚರರನ್ನು ನೇಮಿಸಿದನು.
38 ಓಬೇದ್ ಏದೋಮ್ ಮತ್ತು ಅವನ ಸಹಚರರಾದ ಅರವತ್ತೆಂಟು ಮಂದಿಯೂ, ದ್ವಾರಪಾಲಕರಾದ ಯೆದುತೂನನ ಮಗ ಓಬೇದ್ ಎದೋಮ್ ಮತ್ತು ಹೋಸ ನೇಮಕವಾಗಿದ್ದರು.
39 ಗಿಬ್ಯೋನಿನಲ್ಲಿರುವ ಉನ್ನತ ಸ್ಥಳದಲ್ಲಿ ಯೆಹೋವ ದೇವರ ಗುಡಾರದ ಮುಂದೆ ಸೇವೆಮಾಡುವದಕ್ಕೆ ದಾವೀದನು ಯಾಜಕನಾದ ಚಾದೋಕನನ್ನೂ ಮತ್ತು ಅವನ ಸಹೋದರರನ್ನು ನೇಮಿಸಿದನು.
40 ಯೆಹೋವ ದೇವರು ಇಸ್ರಾಯೇಲಿಗೆ ಆಜ್ಞಾಪಿಸಿದ ಮೋಶೆಯ ನಿಯಮದಲ್ಲಿ ಬರೆದಿದ್ದ ಎಲ್ಲಾದರ ಪ್ರಕಾರ ಮಾಡಲೂ ಅವರು ಪ್ರತಿದಿನವೂ ಉದಯಕಾಲದಲ್ಲಿ ಮತ್ತು ಸಾಯಂಕಾಲದಲ್ಲಿ ದಹನಬಲಿಪೀಠದ ಮೇಲೆ ಯೆಹೋವ ದೇವರಿಗೆ ದಹನಬಲಿಗಳನ್ನು ಅರ್ಪಿಸುತ್ತಿದ್ದರು.
41 “ದೇವರ ಪ್ರೀತಿ ನಿತ್ಯವಾಗಿ ನೆಲೆಗೊಂಡಿರುವುದು,” ಎಂದು ಯೆಹೋವ ದೇವರನ್ನು ಕೊಂಡಾಡುವುದಕ್ಕೆ ಹೇಮಾನನೂ, ಯೆದುತೂನನೂ ಹೆಸರು ಹೆಸರಾಗಿ ಆಯ್ಕೆಗೊಂಡು, ನೇಮಕರಾಗಿದ್ದರು.
42 ಅದರ ಸಂಗಡ ತುತೂರಿ ಊದಲು, ತಾಳ ಬಾರಿಸಲು, ದೇವರ ಗೀತವಾದ್ಯಗಳೂ ಸಹಿತವಾಗಿ ಹೇಮಾನನೂ, ಯೆದುತೂನನೂ ಮೇಲ್ವಿಚಾರಕರಾಗಿದ್ದರು. ಯೆದುತೂನನ ಪುತ್ರರು ದ್ವಾರಪಾಲಕರಾಗಿದ್ದರು.
43 ತರುವಾಯ ಜನರೆಲ್ಲರು ತಮ್ಮ ತಮ್ಮ ಮನೆಗೆ ಹೋದರು. ದಾವೀದನು ತನ್ನ ಕುಟುಂಬವನ್ನು ಆಶೀರ್ವದಿಸುವುದಕ್ಕೆ ಹೋದನು.