7
ಕ್ರಿಸ್ತ ಯೇಸುವಿನವರು ನಿಯಮಕ್ಕೆ ಅಧೀನರಲ್ಲ
ಪ್ರಿಯರೇ, ನಿಯಮವನ್ನು ತಿಳಿದವರಿಗೆ ನಾನು ಹೇಳುವುದೇನೆಂದರೆ, ಒಬ್ಬ ಮನುಷ್ಯನು ಜೀವದಿಂದಿರುವ ತನಕ ಮಾತ್ರ ನಿಯಮಕ್ಕೆ ಅವನ ಮೇಲೆ ಅಧಿಕಾರ ಇರುತ್ತದೆಂದು ನೀವು ಬಲ್ಲಿರಿ. ಒಬ್ಬ ಮದುವೆಯಾದ ಹೆಣ್ಣು ಮಗಳು ಕಾನೂನಿಗನುಸಾರವಾಗಿ ಅವಳ ಪತಿಯು ಜೀವದಿಂದಿರುವ ತನಕ ಮಾತ್ರ ಅವನಿಗೆ ಬದ್ಧಳಾಗಿರುತ್ತಾಳೆ. ಆದರೆ ಪತಿಯು ಸತ್ತರೆ ಆಕೆಯು ಮದುವೆಯ ಕಾನೂನಿನಿಂದ ಬಿಡುಗಡೆ ಹೊಂದಿದವಳಾಗಿರುತ್ತಾಳೆ. ಹೀಗಿರುವಾಗ, ಅವಳ ಪತಿಯು ಜೀವಂತನಾಗಿರುವಾಗ ಆಕೆಯು ಇನ್ನೊಬ್ಬನನ್ನು ಮದುವೆಯಾದರೆ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವಳು. ಆದರೆ ಪತಿಯು ಸತ್ತರೆ, ಆಕೆಯು ಬೇರೊಬ್ಬನನ್ನು ಮದುವೆಯಾದರೂ ಆ ಕಾನೂನಿನಿಂದ ಅವಳು ಬಿಡುಗಡೆ ಆಗಿರಲಾಗಿ ವ್ಯಭಿಚಾರಿಣಿ ಎಂದು ಎನಿಸಿಕೊಳ್ಳುವುದಿಲ್ಲ.
ಆದ್ದರಿಂದ, ನನ್ನ ಪ್ರಿಯರೇ, ನೀವು ದೇವರಿಗೆ ಫಲಕೊಡುವವರಾಗಬೇಕೆಂದು ಸತ್ತವರೊಳಗಿಂದ ಎದ್ದುಬಂದಾತನಿಗೆ ಸೇರಿದವರಾಗಲು ಕ್ರಿಸ್ತ ಯೇಸುವಿನ ದೇಹದ ಮೂಲಕ ನಿಯಮದ ಪಾಲಿಗೆ ಸತ್ತಿರಿ. ಮಾಂಸಭಾವಕ್ಕನುಸಾರವಾಗಿ ನಾವು ಜೀವಿಸುತ್ತಿದ್ದಾಗ, ನಿಯಮದಿಂದ ಉತ್ತೇಜನಗೊಂಡ ಪಾಪದ ದುರಾಶೆಗಳು ನಮ್ಮ ದೇಹದಲ್ಲಿ ಕಾರ್ಯ ನಡೆಸುತ್ತಿದ್ದವು. ಆದ್ದರಿಂದ ನಾವು ಮರಣಕ್ಕೆ ಫಲಗಳನ್ನು ಹುಟ್ಟಿಸುತ್ತಿದ್ದೆವು. ಈಗಲಾದರೋ ಒಂದು ಕಾಲದಲ್ಲಿ ನಮ್ಮನ್ನು ಯಾವುದು ಬಂಧನದಲ್ಲಿರಿಸಿತ್ತೋ ಅದಕ್ಕೆ ಸತ್ತವರಾಗಿದ್ದು ನಿಯಮದಿಂದ ಬಿಡುಗಡೆ ಹೊಂದಿದವರಾಗಿರುತ್ತೇವೆ. ಹೀಗೆ ನಾವು ಲಿಖಿತವಾದ ಹಳೆಯ ನಿಯಮದಂತೆ ನಡೆಯದೆ ಆತ್ಮದಿಂದ ನವಜೀವನದಲ್ಲಿ ನಡೆಯುವರಾಗಿದ್ದೇವೆ.
ನಿಯಮವೂ ಪಾಪವೂ
ಹಾಗಾದರೆ ನಾವು ಏನು ಹೇಳೋಣ? ನಿಯಮವೇ ಪಾಪವಾಗಿದೆಯೋ? ಎಂದಿಗೂ ಇಲ್ಲ. ಆದರೂ ನಿಯಮವನ್ನು ಬಿಟ್ಟು ಬೇರಾವುದರ ಮೂಲಕವೂ ಪಾಪವೆಂದರೆ ಏನೆಂದು ನನಗೆ ತಿಳಿದುಕೊಳ್ಳಲು ಸಾಧ್ಯವಿರಲಿಲ್ಲ. ನಿಯಮವು, “ದುರಾಶೆ ಪಡಬೇಡ,”* ಎಂದು ಹೇಳದೆ ಇರುತ್ತಿದ್ದರೆ ದುರಾಶೆ ಎಂದರೆ ಏನೆಂದು ನಾನು ತಿಳಿಯಲು ಸಾಧ್ಯವಿರಲಿಲ್ಲ. ಆದರೆ ಪಾಪವು, ಆ ಆಜ್ಞೆಯಿಂದ ಅನುಕೂಲ ಹೊಂದಿ ನನ್ನಲ್ಲಿ ಎಲ್ಲಾ ವಿಧದ ಆಶೆಗಳನ್ನು ಉಂಟುಮಾಡಿತು. ಏಕೆಂದರೆ ನಿಯಮವಿಲ್ಲದೆ ಪಾಪವು ಸತ್ತದ್ದಾಗಿರುತ್ತದೆ. ಒಮ್ಮೆ ನಾನು ನಿಯಮವಿಲ್ಲದೆ ಜೀವಿಸುತ್ತಿದ್ದೆನು. ಆದರೆ ಯಾವಾಗ ಆಜ್ಞೆಯು ಬಂದಿತೋ ಆಗ ಪಾಪವು ಜೀವಂತವಾಯಿತು, ನಾನು ಸತ್ತವನಾದೆನು. 10 ಜೀವವನ್ನು ತರಲಿಕ್ಕಾಗಿ ಕೊಟ್ಟಿರುವ ಆಜ್ಞೆಯೇ ಮರಣವನ್ನು ಉಂಟುಮಾಡುವುದಾಯಿತು ಎಂದು ಕಂಡುಕೊಂಡೆನು. 11 ಪಾಪವು ಆಜ್ಞೆಯಿಂದ ಅನುಕೂಲ ಹೊಂದಿ ನನ್ನನ್ನು ವಂಚಿಸಿ, ಅದೇ ನನ್ನನ್ನು ಮರಣಕ್ಕೆ ಒಳಪಡಿಸಿತು. 12 ಹೀಗಿರಲಾಗಿ, ನಿಯಮವು ಪವಿತ್ರವಾದದ್ದು. ಆಜ್ಞೆಯು ಪವಿತ್ರವೂ ನ್ಯಾಯವೂ ಒಳ್ಳೆಯದೂ ಆಗಿರುತ್ತದೆ.
13 ಹಾಗಾದರೆ ಒಳ್ಳೆಯದಾಗಿರುವ ನಿಯಮವೇ ನನಗೆ ಮರಣಕ್ಕೆ ಕಾರಣವಾಯಿತೋ? ಎಂದಿಗೂ ಇಲ್ಲ! ಆದರೂ ಪಾಪವು ಪಾಪವೇ ಎಂದು ಕಾಣುವಂತೆ ಒಳ್ಳೆಯದಾಗಿರುವ ನಿಯಮದ ಮೂಲಕವೇ ಪಾಪವು ನನ್ನಲ್ಲಿ ಮರಣವು ಉಂಟಾಗುವಂತೆ ಮಾಡಿತು. ಈ ರೀತಿಯಾಗಿ ಆಜ್ಞೆಯ ಮೂಲಕ ಪಾಪವು ಘೋರವಾದದ್ದೇ ಎಂದು ಕಂಡುಬರಲು ಸಾಧ್ಯವಾಯಿತು.
14 ನಿಯಮವು ಆತ್ಮಿಕವಾದದ್ದೆಂದು ಬಲ್ಲೆವು. ಆದರೆ ನರಮಾನವನಾದ ನಾನು ಪಾಪಕ್ಕೆ ಗುಲಾಮನಂತೆ ಮಾರಿಕೊಂಡವನಾಗಿದ್ದೇನೆ. 15 ನಾನು ಏನು ಮಾಡುತ್ತೇನೆ ಎಂಬುದನ್ನು ತಿಳಿಯದವನಾಗಿದ್ದೇನೆ. ಏಕೆಂದರೆ ನಾನು ಮಾಡಬೇಕೆಂದು ಬಯಸುವುದನ್ನು ಮಾಡದೆ, ಯಾವುದನ್ನು ದ್ವೇಷಿಸುತ್ತೇನೋ ಅದನ್ನೇ ಮಾಡುವವನಾಗಿದ್ದೇನೆ. 16 ನಾನು ಮಾಡಲು ಬಯಸದಿರುವುದನ್ನು ಮಾಡುವುದಾದರೆ, ನಿಯಮವು ಒಳ್ಳೆಯದೆಂದು ಒಪ್ಪುತ್ತೇನೆ. 17 ಹೀಗಿರಲಾಗಿ ನಾನು ಬಯಸದಿರುವುದನ್ನು ಮಾಡುವವನು ಇನ್ನು ನಾನಲ್ಲ, ನನ್ನಲ್ಲಿ ನೆಲೆಸಿರುವ ಪಾಪವೇ ಅದನ್ನು ಮಾಡುತ್ತದೆ. 18 ನನ್ನಲ್ಲಿ, ಅಂದರೆ ನನ್ನ ಶಾರೀರಿಕ ಸ್ವಭಾವದಲ್ಲಿ ಒಳ್ಳೆಯದೇನೂ ವಾಸವಾಗಿಲ್ಲ ಎಂದು ಬಲ್ಲೆನು. ಏಕೆಂದರೆ ಒಳ್ಳೆಯದನ್ನು ಮಾಡಬೇಕೆಂಬ ಮನಸ್ಸೇನೋ ನನ್ನಲ್ಲಿ ಇದೆ, ಆದರೆ ಅದನ್ನು ಮಾಡುವುದಕ್ಕೆ ನನ್ನಿಂದಾಗದು. 19 ನಾನು ಬಯಸುವ ಒಳ್ಳೆಯದನ್ನು ಮಾಡದೆ, ನಾನು ಮಾಡಲು ಬಯಸದೆ ಇರುವ ಕೆಟ್ಟದ್ದನ್ನೇ ಮಾಡುತ್ತಿದ್ದೇನೆ. 20 ಮಾಡಬಾರದೆನ್ನುವ ಕೆಲಸವನ್ನು ನಾನು ಮಾಡುತ್ತಿರುವುದಾದರೆ ಅದನ್ನು ಮಾಡಿದವನು ನಾನಲ್ಲ. ನನ್ನಲ್ಲಿ ನೆಲೆಗೊಂಡಿರುವ ಪಾಪವೇ ಅದನ್ನು ಮಾಡುತ್ತಿದೆ.
21 ಒಳ್ಳೆಯದನ್ನು ಮಾಡಲು ಬಯಸುತ್ತಿರುವ ನನ್ನಲ್ಲಿ ಕೆಟ್ಟದ್ದು ಇರುವ ನಿಯಮವನ್ನು ಕಾಣುತ್ತಿದ್ದೇನೆ. 22 ಏಕೆಂದರೆ ನಾನು ಹೃದಯಪೂರ್ವಕವಾಗಿ ದೇವರ ನಿಯಮದಲ್ಲಿ ಹರ್ಷಗೊಳ್ಳುವವನಾಗಿದ್ದೇನೆ. 23 ಆದರೆ ನನ್ನ ಅವಯವಗಳಲ್ಲಿ ಬೇರೊಂದು ನಿಯಮವನ್ನು ಕಾಣುತ್ತಿದ್ದೇನೆ. ಅದು ನನ್ನ ಮನಸ್ಸಿನಲ್ಲಿರುವ ನಿಯಮಕ್ಕೆ ವಿರೋಧವಾಗಿ ಹೋರಾಡುತ್ತಾ ನನ್ನ ಅವಯವಗಳಲ್ಲಿ ಸೇರಿಕೊಂಡಿರುವ ಪಾಪದ ನಿಯಮಕ್ಕೆ ಸೆರೆಯವನನ್ನಾಗಿ ಮಾಡುತ್ತಿದೆ. 24 ನಾನು ಎಂಥಾ ದುರವಸ್ಥೆಯುಳ್ಳ ಮನುಷ್ಯನು! ನನ್ನನ್ನು ಈ ಮರಣಕರವಾದ ದೇಹದಿಂದ ಯಾರು ಬಿಡಿಸಬಲ್ಲರು? 25 ನಮ್ಮ ಕರ್ತ ಆಗಿರುವ ಯೇಸುಕ್ರಿಸ್ತರ ಮೂಲಕ ದೇವರಿಗೆ ಸ್ತೋತ್ರ!
ಏಕೆಂದರೆ ನನ್ನಷ್ಟಕ್ಕೆ ನಾನೇ ನನ್ನ ಮನಸ್ಸಿನಲ್ಲಿ ದೇವರ ನಿಯಮಕ್ಕೆ ಗುಲಾಮನಾಗಿಯೂ ನನ್ನ ಮಾಂಸಭಾವದ ದೇಹದಲ್ಲಿ ಪಾಪದ ನಿಯಮಕ್ಕೆ ಗುಲಾಮನಾಗಿಯೂ ಇದ್ದೇನೆ.
* 7:7 ವಿಮೋ 20:17; ಧರ್ಮೋ 5:21