18
ಬಾಬಿಲೋನಿನ ನಾಶನ
ಇದಾದನಂತರ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಕೆಳಗೆ ಇಳಿದು ಬರುವುದನ್ನು ಕಂಡೆನು. ಅವನ ತೇಜಸ್ಸಿನಿಂದ ಭೂಮಿಯು ಬೆಳಗಿತು. ಅವನು ಮಹಾಧ್ವನಿಯಿಂದ:
“ ‘ಬಿದ್ದಳು! ಬಾಬಿಲೋನ್ ಮಹಾನಗರಿಯು ಬಿದ್ದಳು!’*
ಆಕೆಯು ದೆವ್ವಗಳಿಗೆ ವಾಸಸ್ಥಾನವೂ
ಎಲ್ಲಾ ದುರಾತ್ಮಗಳಿಗೂ
ಅಶುದ್ಧವಾದ ಹಾಗೂ ಅಸಹ್ಯವಾದ
ಪ್ರತಿಯೊಂದು ಪ್ರಾಣಿಪಕ್ಷಿಗಳಿಗೂ ನಿವಾಸವಾಗಿದ್ದಾಳೆ.
ಏಕೆಂದರೆ ಎಲ್ಲಾ ದೇಶಗಳೂ
ಆಕೆಯ ಜಾರತ್ವಗಳೆಂಬ ಅತ್ಯಾಸಕ್ತಿಯ ದ್ರಾಕ್ಷಾರಸವನ್ನು ಕುಡಿದಿವೆ.
ಭೂಲೋಕದ ಅರಸರು ಆಕೆಯೊಂದಿಗೆ ವ್ಯಭಿಚಾರ ಮಾಡಿದರು,
ಭೂಲೋಕದ ವರ್ತಕರು ಆಕೆಯ ಭೋಗ ವಸ್ತುಗಳಿಂದ ಸಿರಿವಂತರಾದರು,”
ಎಂದು ಕೂಗಿದನು.
ಬಾಬಿಲೋನ್ ತೀರ್ಪಿನಿಂದ ತಪ್ಪಿಸಿಕೊಳ್ಳಲು ಎಚ್ಚರಿಕೆ
ಅನಂತರ ಪರಲೋಕದಿಂದ ಇನ್ನೊಂದು ಧ್ವನಿಯು:
“ ‘ನನ್ನ ಜನರೇ, ಆಕೆಯನ್ನು ಬಿಟ್ಟು ಬನ್ನಿರಿ,
ನೀವು ಆಕೆಯ ಪಾಪಗಳಲ್ಲಿ ಪಾಲುಗಾರರಾಗಬಾರದು,
ಆಕೆಯ ಉಪದ್ರವಗಳಿಗೆ ಗುರಿಯಾಗಬಾರದು.’
ಏಕೆಂದರೆ ಆಕೆಯ ಪಾಪಗಳು ಒಂದಕ್ಕೊಂದು ಸೇರಿ ಆಕಾಶದಷ್ಟಾಗಿವೆ.
ದೇವರು ಆಕೆಯ ಅಪರಾಧಗಳನ್ನು ಜ್ಞಾಪಿಸಿಕೊಂಡಿದ್ದಾರೆ.
ಆಕೆಯು ನಿಮಗೆ ಕೊಟ್ಟಿದ್ದಕ್ಕೆ ಸರಿಯಾಗಿ ಹಿಂದಕ್ಕೆ ಕೊಡಿರಿ.
ಕೃತ್ಯಗಳಿಗೆ ಸರಿಯಾಗಿ ಎರಡರಷ್ಟು ಅವಳಿಗೆ ಕೊಡಿರಿ.
ಆಕೆಯ ಬಟ್ಟಲಿನಿಂದಲೇ ಎರಡರಷ್ಟು ಆಕೆಗೆ ಕಲಸಿ ಕೊಡಿರಿ.
ಆಕೆಯು ಯಾವುದರಿಂದ ತನ್ನನ್ನು ಘನಪಡಿಸಿಕೊಂಡು ಭೋಗಿನಿಯಾಗಿದ್ದಳೋ ಅದಕ್ಕೆ
ತಕ್ಕಂತೆ ನೀವು ಆಕೆಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ.
ಏಕೆಂದರೆ ಆಕೆ ತನ್ನ ಹೃದಯದಲ್ಲಿ,
‘ನಾನು ರಾಣಿಯಾಗಿ ಕುಳಿತುಕೊಂಡಿದ್ದೇನೆ.
ನಾನು ವಿಧವೆಯಲ್ಲ,
ಎಂದೆಂದಿಗೂ ದುಃಖಿಸುವುದಿಲ್ಲ!’ ಎಂದುಕೊಳ್ಳುತ್ತಾಳೆ.
ಆದ್ದರಿಂದ ಒಂದೇ ದಿನದಲ್ಲಿ ಆಕೆಯ ಉಪದ್ರವಗಳಾಗಿರುವ
ಮರಣ, ಗೋಳಾಟ ಮತ್ತು ಕ್ಷಾಮವು ಬರುವುವು.
ಆಕೆಯನ್ನು ತೀರ್ಪುಮಾಡುವ ಕರ್ತದೇವರು ಶಕ್ತರಾಗಿರುವುದರಿಂದ
ಆಕೆಯು ಬೆಂಕಿಯಿಂದ ನಾಶವಾಗುವಳು.”
ಭೂಮಿಯ ಮೇಲೆ ಬಾಬಿಲೋನಿಗಾಗಿ ಪ್ರಲಾಪ
“ಆಕೆಯೊಂದಿಗೆ ಜಾರತ್ವ ಮಾಡಿರುವ ಭೂರಾಜರು, ಆಕೆಯ ದಹನದಿಂದ ಏರುವ ಹೊಗೆಯನ್ನು ಕಂಡಾಗೆಲ್ಲಾ ಆಕೆಗಾಗಿ ಅಳುತ್ತಾ ಗೋಳಾಡುವರು. 10 ಆಕೆಯ ಯಾತನೆಯ ದೆಸೆಯಿಂದ ಹೆದರಿ, ದೂರದಲ್ಲಿ ನಿಂತು:
“ ‘ಅಯ್ಯೋ! ಅಯ್ಯೋ! ಮಹಾನಗರಿಯೇ,
ಬಲಿಷ್ಠನಗರಿ ಬಾಬಿಲೋನೇ!
ಒಂದೇ ತಾಸಿನಲ್ಲಿ ನಿನಗೆ ತೀರ್ಪಾಯಿತಲ್ಲಾ?’
ಎಂದು ಶೋಕಿಸುವರು.
11 “ಭೂಮಿಯ ವರ್ತಕರು ಆಕೆಗಾಗಿ ದುಃಖಿಸಿ ಗೋಳಾಡುತ್ತಾ ತಮ್ಮ ಸರಕು ಸಾಮಗ್ರಿಗಳನ್ನು ಕೊಂಡುಕೊಳ್ಳುವವರು ಯಾರೂ ಇಲ್ಲವಲ್ಲಾ ಎಂದು ದುಃಖಿಸುವರು. 12 ಅವರ ಸರಕುಗಳಾದ ಚಿನ್ನ, ಬೆಳ್ಳಿ, ಬೆಲೆಬಾಳುವ ಕಲ್ಲು ಹಾಗೂ ಮುತ್ತುಗಳು, ನಯವಾದ ನಾರುಮಡಿ, ಕಡುಗೆಂಪು ವಸ್ತ್ರ, ರೇಷ್ಮೆ, ಊದಾವರ್ಣದ ವಸ್ತ್ರ, ಅಗಿಲು ಮರ ಮತ್ತು ದಂತ ಪಾತ್ರೆಗಳು, ಬೆಲೆಬಾಳುವ ಮರ, ತಾಮ್ರ, ಕಬ್ಬಿಣ ಮತ್ತು ಚಂದ್ರಕಾಂತ ಶಿಲೆ, 13 ಸರಕುಗಳಾದ ದಾಲ್ಚಿನ್ನಿ ಮತ್ತು ಮಸಾಲೆ, ಧೂಪ, ಸುಗಂಧ ತೈಲ, ರಕ್ತಬೋಳ, ದ್ರಾಕ್ಷಾರಸ ಮತ್ತು ಓಲಿವ್ ಎಣ್ಣೆ, ನಯವಾದ ಹಿಟ್ಟು, ಗೋಧಿ, ದನಕರು ಮತ್ತು ಕುರಿಗಳು, ಕುದುರೆಗಳು, ವಾಹನಗಳು, ಗುಲಾಮರು ಹಾಗೂ ಮನುಷ್ಯರು ಇವುಗಳನ್ನೆಲ್ಲಾ ಆ ವರ್ತಕರು ಅವಳಿಗೆ ಮಾರುತ್ತಿದ್ದರು.
14 “ನೀನು ಬಯಸಿದ ನಿನ್ನ ಪ್ರಾಣ ಫಲವು ನಿನ್ನಿಂದ ತೊಲಗಿಹೋಗಿದೆ. ನಿನ್ನ ಎಲ್ಲಾ ವೈಭವವು ಹಾಗೂ ನಿನ್ನ ಶೋಭೆಯ ಸೊಗಸುಗಳೆಲ್ಲಾ ನಿನ್ನಿಂದ ನಾಶವಾದವು. ಅವರು ಅವುಗಳನ್ನು ಇನ್ನೆಂದೂ ಕಾಣಲಾರರು. 15 ಆಕೆಯಿಂದ ಸಿರಿವಂತರಾದ ಆ ಸರಕುಗಳ ವರ್ತಕರು ದೂರದಲ್ಲಿ ನಿಂತು ಆಕೆಯ ಯಾತನೆಯ ದೆಸೆಯಿಂದ ಭಯಪಟ್ಟು, ದುಃಖಿಸಿ,
16 “ ‘ಅಯ್ಯೋ! ಅಯ್ಯೋ! ಶೋಕಭರಿತ ಮಹಾನಗರಿಯೇ,
ನೀನು ನೇರಳೆ, ಕಡುಗೆಂಪು ನಾರುಮಡಿಯನ್ನು ಧರಿಸಿ,
ಚಿನ್ನ, ಬೆಲೆಬಾಳುವ ಕಲ್ಲು ಮತ್ತು ಮುತ್ತುಗಳಿಂದ ಬೆಳಗುತ್ತಿದ್ದೆ.
17 ಒಂದೇ ತಾಸಿನಲ್ಲಿ ಅಂಥ ಮಹಾ ಐಶ್ವರ್ಯವು ನಾಶವಾಗಿ ಹೋಯಿತಲ್ಲಾ?’ ”
ಎಂದು ಗೋಳಾಡುವರು.
“ಪ್ರತಿಯೊಂದು ಹಡಗಿನ ಮಾಲೀಕರು ಮತ್ತು ಹಡಗು ಪಯಣಿಗರು, ನಾವಿಕರು ಮತ್ತು ಸಮುದ್ರದಿಂದ ತಮ್ಮ ಜೀವನೋಪಾಯ ಮಾಡುವವರೆಲ್ಲರೂ ದೂರದಲ್ಲಿ ನಿಂತು 18 ಆಕೆಯ ದಹನದ ಹೊಗೆಯನ್ನು ನೋಡಿ, ‘ಈ ಮಹಾಪಟ್ಟಣಕ್ಕೆ ಸಮಾನವಾದದ್ದು ಯಾವುದು?’ ಎಂದು ಕೂಗುವರು. 19 ಆಗ ಅವರು ತಮ್ಮ ತಲೆಯ ಮೇಲೆ ಧೂಳನ್ನು ಸುರಿದುಕೊಂಡು ಅಳುತ್ತಾ ದುಃಖಿಸುತ್ತಾ ಹೀಗೆ ಕೂಗುವರು:
“ ‘ಅಯ್ಯೋ! ಅಯ್ಯೋ! ದುಃಖಭರಿತ ಮಹಾನಗರಿಯೇ,
ಸಮುದ್ರದ ಮೇಲೆ ಹಡಗುಗಳನ್ನು ಹೊಂದಿದವರೆಲ್ಲರೂ
ಆಕೆಯ ವೈಭವದಿಂದಲೇ ಐಶ್ವರ್ಯವಂತರಾದರಲ್ಲಾ!
ಒಂದು ತಾಸಿನಲ್ಲಿ ಆಕೆ ಹಾಳಾದಳಲ್ಲಾ?’
 
20 “ಪರಲೋಕವೇ ಸಂಭ್ರಮಿಸಿರಿ,
ಪರಿಶುದ್ಧರೇ, ಅಪೊಸ್ತಲರೇ ಹಾಗೂ ಪ್ರವಾದಿಗಳೇ
ಆಕೆಯ ನಿಮಿತ್ತ ಹರ್ಷಗೊಳ್ಳಿರಿ!
ಏಕೆಂದರೆ ಆಕೆ ನಿಮಗೆ ತೀರ್ಪುಮಾಡಿದ್ದಕ್ಕೆ ಸರಿಯಾಗಿ
ದೇವರು ಆಕೆಗೆ ತೀರ್ಪುಮಾಡಿದ್ದಾರೆ!”
ಬಾಬಿಲೋನಿನ ನಾಶ
21 ಅನಂತರ ಒಬ್ಬ ಬಲಿಷ್ಠನಾದ ದೂತನು, ಬೀಸುವ ಕಲ್ಲಿನಷ್ಟಿರುವ ದೊಡ್ಡ ಕಲ್ಲೊಂದನ್ನು ತೆಗೆದುಕೊಂಡು ಅದನ್ನು ಸಮುದ್ರದೊಳಗೆ ಬಿಸಾಡಿ:
“ಮಹಾನಗರಿಯಾದ ಬಾಬಿಲೋನ್
ಹೀಗೆಯೇ ಬಲಾತ್ಕಾರದಿಂದ ಕೆಡವಲಾಗಿ
ಎಂದಿಗೂ ಕಾಣಿಸದು.
22 ಬಾಬಿಲೋನೇ, ನಿನ್ನಲ್ಲಿ ಮತ್ತೆ ತಂತಿವಾದ್ಯ ನುಡಿಸುವವರು,
ಸಂಗೀತಗಾರರು, ಕೊಳಲೂದುವವರು, ತುತೂರಿಯವರು,
ಮಾಡುವ ಧ್ವನಿ ಎಂದೂ ಕೇಳಿಸದು.
ಯಾವುದೇ ವಿಧವಾದ ಕಸಬುಗಾರನೂ
ನಿನ್ನಲ್ಲಿ ಎಂದೂ ಕಂಡುಬಾರನು.
ಬೀಸುವ ಕಲ್ಲಿನ ಶಬ್ದವು,
ನಿನ್ನಲ್ಲಿ ಎಂದೂ ಕೇಳಿಸದು.
23 ದೀಪದ ಬೆಳಕು
ನಿನ್ನಲ್ಲಿ ಎಂದೂ ಪ್ರಕಾಶಿಸದು.
ವಧೂವರರ ಸ್ವರವು
ಮತ್ತೆ ನಿನ್ನಲ್ಲಿ ಎಂದೂ ಕೇಳಿಬರದು.
ಏಕೆಂದರೆ ನಿನ್ನ ವರ್ತಕರು ಭೂಮಿಯ ಮಹಾ ಪುರುಷರಾಗಿದ್ದು,
ನಿನ್ನ ಮಾಂತ್ರಿಕ ಶಕ್ತಿಯ ದೆಸೆಯಿಂದ ಎಲ್ಲಾ ದೇಶಗಳವರು ವಂಚಿತರಾದರು.
24 ಆಕೆಯಲ್ಲಿ ಪ್ರವಾದಿಗಳ ಮತ್ತು ಪರಿಶುದ್ಧರ ರಕ್ತವೂ
ಮತ್ತು ಭೂಮಿಯ ಮೇಲೆ ಕೊಲೆಯಾದವರ ರಕ್ತವೂ ಸಿಕ್ಕಿತು,”
ಎಂದು ಹೇಳಿದನು.
* 18:2 ಯೆಶಾಯ 21:9 18:4 ಯೆರೆ 51:45 18:7 ಯೆಶಾಯ 47:7,8