31
ಸೌಲನ ಅಂತ್ಯ
1 ಫಿಲಿಷ್ಟಿಯರು ಇಸ್ರಾಯೇಲರ ವಿರುದ್ಧ ಯುದ್ಧಮಾಡಿದರು. ಆಗ ಇಸ್ರಾಯೇಲರು ಫಿಲಿಷ್ಟಿಯರಿಂದ ಸೋತು ಓಡಿಹೋಗಿ, ಗಿಲ್ಬೋವ ಬೆಟ್ಟದಲ್ಲಿ ಹತರಾದರು.
2 ಫಿಲಿಷ್ಟಿಯರು ಸೌಲನನ್ನೂ, ಅವನ ಪುತ್ರರನ್ನೂ ಬಿಡದೆ ಬೆನ್ನಟ್ಟಿ, ಸೌಲನ ಪುತ್ರರಾದ ಯೋನಾತಾನನನ್ನೂ, ಅಬೀನಾದಾಬನನ್ನೂ, ಮಲ್ಕೀಷೂವನನ್ನೂ ಕೊಂದುಬಿಟ್ಟರು.
3 ಇದಲ್ಲದೆ ಯುದ್ಧವು ಸೌಲನಿದ್ದ ಕಡೆಯಲ್ಲಿ ಬಹುಘೋರವಾಗಿತ್ತು. ಬಿಲ್ಲುಗಾರರು ಅವನನ್ನು ಬಾಣಗಳಿಂದ ಹೊಡೆದಾಗ ಅವನು ತೀವ್ರವಾಗಿ ಗಾಯಗೊಂಡನು.
4 ಆದಕಾರಣ ಅವನು ತನ್ನ ಆಯುಧಗಳನ್ನು ಹೊರುವವನಿಗೆ, “ಈ ಸುನ್ನತಿ ಇಲ್ಲದವರು ಬಂದು ನನ್ನನ್ನು ಅವಮಾನ ಮಾಡದ ಹಾಗೆ ನೀನು ನಿನ್ನ ಖಡ್ಗವನ್ನು ಹಿರಿದು, ನನ್ನನ್ನು ತಿವಿ,” ಎಂದನು.
ಆದರೆ ಅವನ ಆಯುಧ ಹೊರುವವನು ಬಹು ಭಯಪಟ್ಟದ್ದರಿಂದ ಹಾಗೆ ಮಾಡದೆ ಹೋದನು. ಆಗ ಸೌಲನು ತನ್ನ ಖಡ್ಗವನ್ನು ತೆಗೆದುಕೊಂಡು ಅದರ ಮೇಲೆ ಬಿದ್ದನು.
5 ಸೌಲನು ಸತ್ತು ಹೋದದ್ದನ್ನು ಅವನ ಆಯುಧ ಹೊರುವವನು ಕಂಡಾಗ, ಅವನೂ ತನ್ನ ಖಡ್ಗದ ಮೇಲೆ ಬಿದ್ದು, ಅವನ ಸಂಗಡ ಸತ್ತನು.
6 ಹೀಗೆ ಸೌಲನೂ, ಅವನ ಮೂರು ಮಂದಿ ಪುತ್ರರೂ, ಅವನ ಆಯುಧ ಹೊರುವವನೂ, ಅವನ ಸಮಸ್ತ ಜನರೂ ಅದೇ ದಿನ ಸತ್ತರು.
7 ಇಸ್ರಾಯೇಲರ ಸೈನಿಕರು ಸೋತು ಹೋದರೆಂದೂ, ಸೌಲನೂ, ಅವನ ಪುತ್ರರೂ ಸತ್ತರೆಂದೂ, ತಗ್ಗಿನ ಆಚೆಯಲ್ಲಿಯೂ ಯೊರ್ದನಿನ ಆಚೆಯಲ್ಲಿಯೂ ವಾಸವಾಗಿದ್ದ ಇಸ್ರಾಯೇಲರು ಕಂಡಾಗ, ಅವರು ತಮ್ಮ ಪಟ್ಟಣಗಳನ್ನು ಬಿಟ್ಟು ಓಡಿಹೋದರು. ಆಗ ಫಿಲಿಷ್ಟಿಯರು ಬಂದು ಅವುಗಳಲ್ಲಿ ವಾಸಿಸಿದರು.
8 ಮಾರನೆಯ ದಿವಸದಲ್ಲಿ ಫಿಲಿಷ್ಟಿಯರು ಸತ್ತವರ ಒಡವೆಗಳನ್ನು ಸುಲಿದುಕೊಳ್ಳಲು ಬಂದಾಗ, ಗಿಲ್ಬೋವ ಬೆಟ್ಟದಲ್ಲಿ ಸತ್ತುಬಿದ್ದಿರುವ ಸೌಲನನ್ನೂ, ಅವನ ಮೂವರು ಪುತ್ರರನ್ನೂ ಕಂಡರು.
9 ಅವರು ಅವನ ತಲೆಯನ್ನು ಕಡಿದು, ಅವನ ಆಯುಧಗಳನ್ನು ತೆಗೆದುಕೊಂಡು, ತಮ್ಮ ವಿಗ್ರಹಗಳ ಮಂದಿರಗಳಿಗೂ, ಜನರಿಗೂ ಜಯವಾರ್ತೆಯನ್ನು ಸಾರುವ ಹಾಗೆ ಫಿಲಿಷ್ಟಿಯರ ದೇಶದ ಸುತ್ತಲೂ ಕಳುಹಿಸಿದರು.
10 ಸೌಲನ ಆಯುಧಗಳನ್ನು ಅಷ್ಟೋರೆತ್ ಮಂದಿರದಲ್ಲಿ ಇಟ್ಟು, ಅವನ ಶವವನ್ನು ಬೇತ್ ಷೆಯಾನಿನ ಕೋಟೆಯ ಗೋಡೆಗೆ ನೇತುಹಾಕಿದರು.
11 ಫಿಲಿಷ್ಟಿಯರು ಸೌಲನಿಗೆ ಮಾಡಿದ್ದನ್ನೆಲ್ಲಾ ಯಾಬೇಷ್ ಗಿಲ್ಯಾದಿನವರೆಲ್ಲರು ಕೇಳಿದಾಗ,
12 ಅವರಲ್ಲಿರುವ ಸಮಸ್ತ ಪರಾಕ್ರಮಶಾಲಿಗಳು ಎದ್ದು, ರಾತ್ರಿಯೆಲ್ಲಾ ನಡೆದುಹೋಗಿ, ಬೇತ್ ಷೆಯಾನಿನ ಗೋಡೆಗೆ ಜಡಿದಿದ್ದ ಸೌಲನ ಶವವನ್ನೂ, ಅವನ ಪುತ್ರರ ಶವಗಳನ್ನೂ ತೆಗೆದುಕೊಂಡು ಯಾಬೇಷಿಗೆ ಬಂದು, ಅವುಗಳನ್ನು ಅಲ್ಲಿ ದಹಿಸಿದರು.
13 ಅವರ ಎಲುಬುಗಳನ್ನು ತೆಗೆದುಕೊಂಡು, ಅವುಗಳನ್ನು ಯಾಬೇಷಿನಲ್ಲಿರುವ ಪಿಚುಲ ವೃಕ್ಷದ ಕೆಳಗೆ ಸಮಾಧಿಮಾಡಿ, ಏಳು ದಿವಸ ಉಪವಾಸ ಮಾಡಿದರು.