13
ಇಸ್ರಾಯೇಲಿನ ಮೇಲೆ ಯೆಹೋವ ದೇವರ ರೌದ್ರ
1 “ಪೂರ್ವದಲ್ಲಿ ಎಫ್ರಾಯೀಮು ಮಾತನಾಡುವಾಗ,
ಅವನು ತನ್ನನ್ನು ಇಸ್ರಾಯೇಲಿನಲ್ಲಿ ಹೆಚ್ಚಿಸಿಕೊಂಡನು.
ಆದರೆ ಬಾಳನ ಆರಾಧನೆಯಲ್ಲಿ ಅವನು ಅಪರಾಧಿಯಾಗಿ ಸತ್ತನು.
2 ಈಗ ಅವರು ಹೆಚ್ಚೆಚ್ಚಾಗಿ ಪಾಪವನ್ನು ಮಾಡುತ್ತಾರೆ.
ಸ್ವಂತ ಬುದ್ಧಿಯ ಪ್ರಕಾರ ತಮ್ಮ ಬೆಳ್ಳಿಯಿಂದ ಎರಕದ ವಿಗ್ರಹಗಳನ್ನೂ,
ಮೂರ್ತಿಗಳನ್ನೂ ಮಾಡಿಕೊಂಡಿದ್ದಾರೆ.
ಅದೆಲ್ಲವೂ ಕಮ್ಮಾರರ ಕೈಕೆಲಸವೇ.
ಅವರು ನರಬಲಿಯನ್ನು ಅರ್ಪಿಸುತ್ತಾರೆ,
ಬಸವನ ವಿಗ್ರಹಕ್ಕೆ ಮುದ್ದಿಡುತ್ತಾರೆ,”
ಎಂದು ಜನರು ಅವರ ಬಗ್ಗೆ ಹೇಳುತ್ತಾರೆ.
3 ಆದ್ದರಿಂದ ಅವರು ಪ್ರಾತಃಕಾಲದ ಮಂಜಿನ ಹಾಗೆಯೂ,
ಬೇಗನೆ ಮಾಯವಾಗುವ ಇಬ್ಬನಿಯ ಹಾಗೆಯೂ,
ಸುಳಿಗಾಳಿಯು ಕಣದಿಂದ ಬಡಿದುಕೊಂಡು ಹೋಗುವ ಹೊಟ್ಟಿನ ಹಾಗೆಯೂ,
ಚಿಮಿಣಿಯಿಂದ ಹೊರಡುವ ಹೊಗೆಯ ಹಾಗೆಯೂ ಇರುವರು.
4 ಆದರೂ ನಾನು ಈಜಿಪ್ಟಿನಿಂದ ನಿನ್ನನ್ನು ಬಿಡಿಸಿಕೊಂಡು ಬಂದಾಗಿನಿಂದ,
ನಾನೇ ನಿನ್ನ ದೇವರಾಗಿರುವ ಯೆಹೋವನಾಗಿದ್ದೇನೆ.
ನೀನು ನನ್ನ ಹೊರತು ಯಾವ ದೇವರನ್ನೂ ತಿಳಿದುಕೊಳ್ಳಬಾರದು.
ಏಕೆಂದರೆ ನನ್ನ ಹೊರತು ನಿನಗೆ ಬೇರೆ ರಕ್ಷಕನು ಇಲ್ಲ.
5 ನಾನು ನಿನ್ನನ್ನು ಮರುಭೂಮಿಯಲ್ಲಿಯೂ,
ಬಹು ಬಾಯಾರಿಕೆಯ ದೇಶದಲ್ಲಿಯೂ ತಿಳಿದುಕೊಂಡಿದ್ದೇನೆ.
6 ನಾನು ಅವರಿಗೆ ಆಹಾರ ಕೊಟ್ಟೆನು, ಅವರು ತೃಪ್ತರಾದರು.
ಅವರು ತೃಪ್ತರಾದಾಗ, ಅಹಂಕಾರಿಗಳಾದರು,
ಅನಂತರ ಅವರು ನನ್ನನ್ನು ಮರೆತುಬಿಟ್ಟರು.
7 ಆದ್ದರಿಂದ ನಾನು ಅವರಿಗೆ ಸಿಂಹದ ಹಾಗೆ ಆಗುವೆನು.
ಮಾರ್ಗದಲ್ಲಿ ಚಿರತೆಯ ಹಾಗೆ ಅವರಿಗಾಗಿ ಹೊಂಚುಹಾಕುವೆನು.
8 ನಾನು ಮರಿಯನ್ನು ಕಳೆದುಕೊಂಡ ಕರಡಿಯಂತೆ ಅವರನ್ನು ಎದುರುಗೊಳ್ಳುವೆನು.
ಅವರ ಹೃದಯದ ಪೊರೆಯನ್ನು ಹರಿದುಬಿಡುವೆನು.
ನಾನು ಸಿಂಹದ ಹಾಗೆ ಅವರನ್ನು ನುಂಗುವೆನು.
ಕಾಡುಮೃಗವು ಅವರನ್ನು ಸೀಳಿ ಹಾಕುವುದು.
9 “ಇಸ್ರಾಯೇಲೇ, ನೀನು ನಿನ್ನ ಬೆಂಬಲವಾದ ನನಗೆ
ತಿರುಗಿಬಿದ್ದದರಿಂದ ನಾಶವಾಗಿದ್ದೀ.
10 ಈಗ ನಿನ್ನ ಅರಸನು ಎಲ್ಲಿ?
ನಿನ್ನ ಪಟ್ಟಣಗಳೆಲ್ಲಾ ನಿನ್ನವರನ್ನು ಉದ್ಧರಿಸುವನೋ?
ನನಗೆ ರಾಜ್ಯವನ್ನೂ ರಾಜ್ಯಾಧಿಕಾರಿಗಳನ್ನೂ ದಯಪಾಲಿಸು
ಎಂದು ನನ್ನನ್ನು ಕೇಳಿಕೊಂಡಿಯಷ್ಟೆ.
ಆ ನ್ಯಾಯಾಧಿಪತಿಗಳು ಎಲ್ಲಿ?
11 ನನ್ನ ಕೋಪದಲ್ಲಿ ನಿನಗೆ ಅರಸನನ್ನು ಕೊಟ್ಟೆನು
ಮತ್ತು ನನ್ನ ರೌದ್ರದಲ್ಲಿ ಅವನನ್ನು ತೆಗೆದುಹಾಕಿದೆನು.
12 ಎಫ್ರಾಯೀಮಿನ ದುಷ್ಕೃತ್ಯವು ಸಂಗ್ರಹವಾಗಿದೆ.
ಅವನ ಪಾಪವು ದಾಖಲೆಯಾಗಿದೆ.
13 ಎಫ್ರಾಯೀಮಿಗೆ ಪ್ರಸವವೇದನೆ ಬಂದಿದೆ.
ಅಷ್ಟೇ ಅಲ್ಲ.
ಅದೊಂದು ಮಂಕು ಮಗುವಿನಂತಿದೆ.
ಹುಟ್ಟಿ, ಹೊರಗೆ ಬರಬಹುದಾದರೂ,
ಅವನು ಬಾರದೆ ಇದ್ದಾನೆ.
14 “ಸಮಾಧಿಯ ಶಕ್ತಿಯಿಂದ ಅವರನ್ನು ಕ್ರಯಕೊಟ್ಟು ವಿಮೋಚಿಸುವೆನು.
ಮರಣದಿಂದ ಅವರನ್ನು ಬಿಡಿಸುವೆನು.
ಮರಣವೇ ನಿನ್ನ ಉಪದ್ರವ ಎಲ್ಲಿ?
ಪಾತಾಳವೇ ನಿನ್ನ ವಿನಾಶವೆಲ್ಲಿ?
“ಅನುಕಂಪವು ನನ್ನಿಂದ ದೂರವಾಗಿದೆ.
15 ಎಫ್ರಾಯೀಮು ತನ್ನ ಸಹೋದರರಲ್ಲಿ ಫಲ ಸಮೃದ್ಧವಾಗಿದ್ದರೂ,
ಕಾಡಿನಿಂದ ಯೆಹೋವ ದೇವರು ಬೀಸಮಾಡುವ
ಪೂರ್ವ ಗಾಳಿಯು ಬರಲು,
ಅವನ ಬುಗ್ಗೆಯು ಬತ್ತುವುದು.
ಅವನ ಒರತೆಯು ಒಣಗುವುದು.
ಅವನ ಬೊಕ್ಕಸಗಳ ನಿಧಿಯನ್ನು
ಶತ್ರುಗಳು ಸೂರೆಮಾಡುವರು.
16 ಸಮಾರ್ಯವು ತನ್ನ ದೇವರಿಗೆ ತಿರುಗಿಬಿದ್ದದರಿಂದ,
ತನ್ನ ದೋಷಫಲವನ್ನು ಅನುಭವಿಸಲೇಬೇಕು.
ಅದರ ಜನರು ಖಡ್ಗದಿಂದ ಹತರಾಗುವರು,
ವೈರಿಗಳು ಅವಳ ಮಕ್ಕಳನ್ನು ಬಂಡೆಗೆ ಅಪ್ಪಳಿಸುವರು.
ಗರ್ಭಿಣಿಯರ ಹೊಟ್ಟೆಯನ್ನು ಸೀಳುವರು.”