14
ಆಶೀರ್ವಾದಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ
1 ಇಸ್ರಾಯೇಲೇ, ನಿನ್ನ ದೇವರಾದ ಯೆಹೋವ ದೇವರ ಕಡೆಗೆ ತಿರುಗಿಕೋ.
ಏಕೆಂದರೆ ನಿನ್ನ ಪಾಪಗಳೇ, ನಿನ್ನ ಬೀಳುವಿಕೆಗೆ ಕಾರಣ.
2 ಮಾತುಗಳನ್ನು ನಿಮ್ಮ ಸಂಗಡ ತೆಗೆದುಕೊಂಡು,
ಯೆಹೋವ ದೇವರ ಕಡೆಗೆ ತಿರುಗಿಕೊಂಡು,
ಅವರಿಗೆ ಹೇಳಿರಿ:
“ನಮ್ಮ ಪಾಪಗಳನ್ನೆಲ್ಲಾ ಕ್ಷಮಿಸಿ,
ನಮ್ಮಲ್ಲಿ ಒಳ್ಳೆಯದನ್ನು ಸ್ವೀಕರಿಸಿರಿ.
ಆಗ ನಮ್ಮ ಸ್ತೋತ್ರ ಬಲಿಯನ್ನು ನಿಮಗೆ ಅರ್ಪಿಸುವೆವು.
3 ಅಸ್ಸೀರಿಯ ನಮ್ಮನ್ನು ರಕ್ಷಿಸುವುದಿಲ್ಲ.
ನಾವು ಕುದುರೆಗಳ ಮೇಲೆ ಸವಾರಿ ಮಾಡುವುದಿಲ್ಲ.
ನಮ್ಮ ಕೈಗಳಿಂದ ಉಂಟು ಮಾಡಿದವುಗಳಿಗೆ,
‘ನೀವು ನಮ್ಮ ದೇವರುಗಳೇ,’ ಎಂದು ನಾವು ಇನ್ನು ಮುಂದೆ ಹೇಳುವುದೇ ಇಲ್ಲ.
ಏಕೆಂದರೆ ನಿಮ್ಮಲ್ಲಿ ದಿಕ್ಕಿಲ್ಲದವರಿಗೆ ಅನುಕಂಪ ದೊರೆಯುತ್ತದೆ.”
4 “ನಾನು ಅವರ ಹಿಂಜಾರುವಿಕೆಯನ್ನು ಸ್ವಸ್ಥ ಮಾಡುವೆನು.
ನಾನು ಅವರನ್ನು ಮನಃಪೂರ್ವಕವಾಗಿ ಪ್ರೀತಿಸುವೆನು.
ಏಕೆಂದರೆ ನನ್ನ ಕೋಪವು ಅವರ ಕಡೆಯಿಂದ ತಿರುಗಿಕೊಂಡಿದೆ.
5 ಇಸ್ರಾಯೇಲಿಗೆ ನಾನು ಮಂಜಿನ ಹಾಗೆ ಇರುವೆನು.
ಅವನು ತಾವರೆಯ ಹಾಗೆ ಬೆಳೆಯುವನು.
ತನ್ನ ಬೇರುಗಳನ್ನು ಲೆಬನೋನಿನ
ಹಾಗೆ ಆಳಕ್ಕೆ ಹರಡುವನು.
6 ಅವನ ಕೊಂಬೆಗಳು ಹರಡಿಕೊಂಡು,
ಅವನ ಸೌಂದರ್ಯವು ಎಣ್ಣೆಮರಗಳ ಹಾಗೆಯೂ
ಅವನ ಪರಿಮಳವು ಲೆಬನೋನಿನ ದೇವದಾರಿನ ಹಾಗೆಯೂ ಇರುವುದು.
7 ಆತನ ನೆರಳಿನಲ್ಲಿ ಜನರು ವಾಸಿಸುವರು,
ಧಾನ್ಯದ ಹಾಗೆ ಜೀವಿಸುವರು,
ದ್ರಾಕ್ಷಿಬಳ್ಳಿಯ ಹಾಗೆ ಫಲಪ್ರದವಾಗುವರು.
ಇಸ್ರಾಯೇಲಿನ ಕೀರ್ತಿಯು ಲೆಬನೋನಿನ ದ್ರಾಕ್ಷಾರಸದ ಹಾಗೆ ಇರುವುದು.
8 ಎಫ್ರಾಯೀಮೇ, ವಿಗ್ರಹಗಳೊಂದಿಗೆ ಇನ್ನು ಏನು ಮಾಡಬೇಕಾಗಿದೆ?
ನಾನು ಅವನಿಗೆ ಉತ್ತರಿಸಿದ್ದೇನೆ. ನಾನು ಅವನ ಬಗ್ಗೆ ಕಾಳಜಿ ವಹಿಸುತ್ತೇನೆ.
ನಾನು ಹಸಿರಾಗಿ ಬೆಳೆದಿರುವ ತುರಾಯಿ ಮರದಂತಿದ್ದೇನೆ.
ನಿನ್ನ ಫಲವು ನನ್ನಿಂದ ಬರುವುದು.”
9 ಯಾರು ಬುದ್ಧಿವಂತರು? ಅವರು ಈ ಸತ್ಯಗಳನ್ನು ಅರ್ಥಮಾಡಿಕೊಳ್ಳಲಿ.
ಯಾರು ವಿವೇಚನೆಯುಳ್ಳವರು? ಅವರು ಇವುಗಳನ್ನು ತಿಳಿದುಕೊಳ್ಳಲಿ.
ಏಕೆಂದರೆ, ಯೆಹೋವ ದೇವರ ಮಾರ್ಗಗಳು ನ್ಯಾಯವಾಗಿವೆ.
ನೀತಿವಂತರು ಅದರಲ್ಲಿ ನಡೆಯುವರು.
ಆದರೆ ಅಕ್ರಮಗಾರರು ಅವುಗಳಿಂದ ಎಡವಿಬೀಳುವರು.