81
ರಚನೆಗಾರ: ಆಸಾಫ.
ನಮಗೆ ಬಲಪ್ರದನಾಗಿರುವ ದೇವರಿಗೆ ಸಂತಸದಿಂದ ಹಾಡಿರಿ.
ಇಸ್ರೇಲಿನ ದೇವರಿಗೆ ಆನಂದಘೋಷ ಮಾಡಿರಿ.
ವಾದ್ಯವನ್ನು ನುಡಿಸಲಾರಂಭಿಸಿರಿ;
ದಮ್ಮಡಿಯನ್ನು ಬಡಿಯಿರಿ.
ಇಂಪಾದ ಹಾರ್ಪ್ ಮತ್ತು ಲೈರ್ ವಾದ್ಯಗಳನ್ನು ಬಾರಿಸಿರಿ.
ಅಮಾವಾಸ್ಯೆಯಲ್ಲಿಯೂ ನಮ್ಮ ರಜಾಕಾಲವಾದ
ಪೂರ್ಣಿಮೆಯಲ್ಲಿಯೂ ತುತ್ತೂರಿಯನ್ನು ಊದಿರಿ.
ಇದು ಇಸ್ರೇಲರಿಗೆ ಕಟ್ಟಳೆಯಾಗಿದೆ.
ಯಾಕೋಬ್ಯರ ದೇವರು ಈ ಆಜ್ಞೆಯನ್ನು ಕೊಟ್ಟನು.
ಆತನು ಯೋಸೇಫನನ್ನು*ಯೋಸೇಫ್ ಇಲ್ಲಿ ಇದರ ಅರ್ಥ: ಯೋಸೇಫನ ಕುಟುಂಬ, ಇಸ್ರೇಲಿನ ಜನರು. ಈಜಿಪ್ಟಿನಿಂದ ಬಿಡಿಸಿಕೊಂಡು ಬಂದಾಗ
ಅವನೊಂದಿಗೆ ಈ ಒಡಂಬಡಿಕೆಯನ್ನು ಮಾಡಿಕೊಂಡನು.
ಈಜಿಪ್ಟಿನಲ್ಲಿ ನಾವು ಕೇಳಿದ್ದು ನಮಗೆ ಅರ್ಥವಾಗದ ಭಾಷೆಯನ್ನೇ!
ಆತನು ಹೀಗೆನ್ನುತ್ತಾನೆ: “ನಿಮ್ಮ ಹೆಗಲಿನಿಂದ ಹೊರೆಯನ್ನು ತೆಗೆದುಹಾಕಿದೆನು.
ಕೆಲಸಗಾರರ ಬುಟ್ಟಿಯನ್ನು ನೀವು ಬಿಸಾಕುವಂತೆ ಮಾಡಿದೆನು.
ನೀವು ಆಪತ್ತಿನಲ್ಲಿದ್ದಾಗ ಸಹಾಯಕ್ಕಾಗಿ ಮೊರೆಯಿಟ್ಟಿರಿ.
ಆಗ ನಾನು ನಿಮ್ಮನ್ನು ಬಿಡಿಸಿದೆನು.
ನಾನು ಕಾರ್ಮೋಡದಲ್ಲಿ ಮರೆಯಾಗಿದ್ದರೂ ನಿಮಗೆ ಉತ್ತರಿಸಿದೆನು.
ನಾನು ನಿಮ್ಮನ್ನು ಮೆರೀಬಾದ ನೀರಿನಿಂದ ಪರೀಕ್ಷಿಸಿದೆನು.”
 
“ನನ್ನ ಜನರೇ, ನನಗೆ ಕಿವಿಗೊಡಿರಿ, ನಾನು ನಿಮಗೆ ಒಡಂಬಡಿಕೆಯನ್ನು ಕೊಡುತ್ತಿರುವೆ.
ಇಸ್ರೇಲೇ, ದಯವಿಟ್ಟು ಕಿವಿಗೊಡು!
ಪರದೇಶದವರು ಆರಾಧಿಸುವ
ಯಾವ ಸುಳ್ಳು ದೇವರುಗಳನ್ನೂ ಪೂಜಿಸಬೇಡ.
10 ಯೆಹೋವನಾದ ನಾನೇ ನಿನ್ನ ದೇವರು.
ನಿನ್ನನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ನಾನೇ.
ಇಸ್ರೇಲೇ, ನಿನ್ನ ಬಾಯನ್ನು ತೆರೆ,
ಆಗ ನಾನು ನಿನಗೆ ತಿನ್ನಿಸುವೆನು.
 
11 “ಆದರೆ ನನ್ನ ಜನರು ನನಗೆ ಕಿವಿಗೊಡಲಿಲ್ಲ.
ಇಸ್ರೇಲರು ನನಗೆ ವಿಧೇಯರಾಗಲಿಲ್ಲ.
12 ಆದ್ದರಿಂದ ತಮ್ಮ ಇಷ್ಟಾನುಸಾರ ಮಾಡಲೆಂದು ಅವರನ್ನು ಬಿಟ್ಟುಕೊಟ್ಟೆ.
ಇಸ್ರೇಲ್ ತನ್ನ ಇಷ್ಟಾನುಸಾರ ಮಾಡಿತು.
13 ನನ್ನ ಜನರು ನನಗೆ ಕಿವಿಗೊಟ್ಟು ನನ್ನ ಚಿತ್ತಾನುಸಾರವಾಗಿ ಜೀವಿಸಿದರೆ,
14 ಅವರ ಶತ್ರುಗಳನ್ನು ಸೋಲಿಸುವೆನು;
ಇಸ್ರೇಲಿಗೆ ಕೇಡುಮಾಡುವವರನ್ನು ದಂಡಿಸುವೆನು.
15 ಯೆಹೋವನ ಶತ್ರುಗಳು ಭಯದಿಂದ ನಡುಗುವರು.
ಅವರು ಶಾಶ್ವತವಾಗಿ ದಂಡಿಸಲ್ಪಡುವರು.
16 ದೇವರು ತನ್ನ ಜನರಿಗೆ ಉತ್ತಮವಾದ ಗೋಧಿಯನ್ನು ಒದಗಿಸುವನು.
ಬಂಡೆಯಾಗಿರುವ ಆತನು ತನ್ನ ಜನರಿಗೆ ಜೇನುತುಪ್ಪವನ್ನು ಸಂತೃಪ್ತಿಯಾಗುವ ತನಕ ಕೊಡುವನು.”
 

*81:5: ಯೋಸೇಫ್ ಇಲ್ಲಿ ಇದರ ಅರ್ಥ: ಯೋಸೇಫನ ಕುಟುಂಬ, ಇಸ್ರೇಲಿನ ಜನರು.