10
ಸತ್ತ ನೊಣಗಳಿಂದ ಗಂಧದತೈಲವು ಕೊಳೆತು ನಾರುವುದು.
ಹಾಗೆಯೇ ಸ್ವಲ್ಪ ಹುಚ್ಚುತನವು ಜ್ಞಾನ ಮತ್ತು ಘನತೆಗಳನ್ನು ಕೆಡಿಸುತ್ತದೆ.
ಜ್ಞಾನಿಯ ಬುದ್ಧಿಯು ಅವನ ಬಲಗಡೆಯಿರುವುದು.
ಅಜ್ಞಾನಿಯ ಬುದ್ಧಿಯು ಅವನ ಎಡಗಡೆಯಿರುವುದು.
ಇದಲ್ಲದೆ ಹುಚ್ಚನು ಬುದ್ಧಿತಪ್ಪಿ ತಿರುಗುವ
ದಾರಿಯಲ್ಲಿ ತನ್ನ ಹುಚ್ಚುತನವನ್ನು
ಎಲ್ಲರಿಗೆ ಪ್ರಕಟಮಾಡುವನು.
ದೊರೆಯು ನಿನ್ನ ಮೇಲೆ ಸಿಟ್ಟುಗೊಂಡರೆ ಉದ್ಯೋಗವನ್ನು ಬಿಡಬೇಡ.
ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ.*ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ ಅಥವಾ ನೀನು ಶಾಂತನಾಗಿರುವಾಗ ದೊಡ್ಡ ದೋಷಗಳು ಕ್ಷಮಿಸಲ್ಪಡುತ್ತವೆ ಅಥವಾ ನಿನ್ನ ದೋಷಗಳನ್ನು ಅವನಿಗೆ ಒಪ್ಪಿಸಿಕೊಡು.
ಲೋಕದಲ್ಲಿ ಒಂದು ಸಂಕಟವನ್ನು ಕಂಡಿದ್ದೇನೆ.
ಅದು ಆಳುವವನ ಸಮ್ಮುಖದಿಂದ ಹೊರಟುಬರುವ ಹಾಗೆಯೇ ತೋರುತ್ತದೆ.
ಮೂಢರಿಗೆ ಮಹಾ ಪದವಿ ದೊರೆಯುವುದು.
ಘನವಂತರೂ ಹೀನಸ್ಥಿತಿಯಲ್ಲಿರುವರು.
ಆಳುಗಳು ಕುದುರೆ ಸವಾರಿ ಮಾಡುವುದನ್ನೂ,
ಪ್ರಭುಗಳು ಆಳುಗಳಂತೆ ನೆಲದ ಮೇಲೆ ನಡೆಯುವುದನ್ನೂ ನೋಡಿದ್ದೇನೆ.
ಗುಂಡಿಯನ್ನು ತೋಡುವವನು
ತಾನೇ ಅದರಲ್ಲಿ ಬೀಳುವನು, ಗೋಡೆಯನ್ನು ಒಡೆಯುವವನಿಗೆ,
ಹಾವು ಕಚ್ಚುವುದು.
ಯಾವನು ಕಲ್ಲುಗಳನ್ನು ಕೀಳುವನೋ
ಅವನಿಗೆ ಹಾನಿ ಆಗುವುದು.
ಮರವನ್ನು ಕಡೆಯುವವನಿಗೆ
ಅಪಾಯವಿದೆ.
10 ಮೊಂಡು ಕೊಡಲಿಯ ಬಾಯಿಯನ್ನು ಮಸೆಯದಿದ್ದರೆ ಅವನು ಹೆಚ್ಚು ಬಲವನ್ನು ಪ್ರಯೋಗಿಸಬೇಕು. ಕಾರ್ಯಸಿದ್ಧಿಗೆ ಜ್ಞಾನವೇ ಸಾಧನ.
11 ಹಾವಾಡಿಸುವುದರೊಳಗೆ ಹಾವು ಕಚ್ಚಿದರೆ,
ಹಾವಾಡಿಗನಿಗೆ ಯಾವ ಪ್ರಯೋಜನವೂ ಇಲ್ಲ.
12 ಜ್ಞಾನಿಯ ಮಾತು ಹಿತ.
ಅಜ್ಞಾನಿಯ ಬಾಯಿ ತನ್ನನ್ನೇ ನುಂಗಿಬಿಡುವುದು.
13 ಅಜ್ಞಾನಿಯ ಮಾತುಗಳು ಆರಂಭದಲ್ಲಿ ಬುದ್ಧಿಹೀನತೆ,
ಅಂತ್ಯದಲ್ಲಿ ಅಪಾಯದ ಮರಳುತನ.
14 ಮನುಷ್ಯನು ಮುಂದೆ ಆಗುವುದನ್ನು ತಿಳಿಯನು.
ತಾನು ಕಾಲವಾದ ಮೇಲೆ ಹೀಗೆಯೇ ಆಗುವುದೆಂದು ಅವನು ಯಾರಿಂದ ತಿಳಿದುಕೊಂಡಾನು?
ಅಜ್ಞಾನಿಯ ಮಾತುಗಳೋ ಬಹಳ.
15 ಪಟ್ಟಣದ ದಾರಿ ತಿಳಿಯದವನಿಗೆ ಮೂಢರು ತಿಳಿಸಲು,
ಪಡುವ ಪ್ರಯಾಸದಿಂದ ಆಯಾಸವೇ.
16 ದೇಶದ ಅರಸನು ಯುವಕನಾಗಿದ್ದರೆ,ಯುವಕನಾಗಿದ್ದರೆ, ಅಥವಾ ಸೇವಕನಾಗಿದ್ದರೆ.
ಪ್ರಭುಗಳು ಹೊತ್ತಾರೆ ಔತಣಕ್ಕೆ ಕುಳಿತುಕೊಂಡರೆ ನಿನಗೆ ದೌರ್ಭಾಗ್ಯವೇ!
17 ದೇಶದ ಅರಸನು ಕುಲೀನನಾಗಿದ್ದರೆ,
ಪ್ರಭುಗಳು ಅಮಲಿಗಾಗಿ ಅಲ್ಲ,
ಆದರೆ ಶಕ್ತಿಗಾಗಿ ಸಕಾಲದಲ್ಲಿ ಊಟಕ್ಕೆ ಕುಳಿತರೆ
ನಿನಗೆ ಭಾಗ್ಯವೇ!
18 ಸೋಮಾರಿತನದಿಂದ ತೊಲೆಗಳು ಬೊಗ್ಗುವವು.
ಜೋಲುಗೈಯಿಂದ ಮನೆ ಸೋರುವುದು.
19 ನಗುವಿಗಾಗಿ ಔತಣವು,
ದ್ರಾಕ್ಷಾರಸದಿಂದ ಜೀವನಕ್ಕೆ ಆನಂದವು,
ಧನವು ಎಲ್ಲವನ್ನೂ ಒದಗಿಸಿಕೊಡುವುದು.
20 ಮನಸ್ಸಿನಲ್ಲಿಯೂ ಅರಸನನ್ನು ದೂಷಿಸದಿರು.
ಮಲಗುವ ಕೋಣೆಯಲ್ಲಿಯೂ ಧನಿಕನನ್ನು ಬಯ್ಯದಿರು.
ಆಕಾಶದ ಹಕ್ಕಿಯು ಆ ಶಬ್ದವನ್ನು ಮುಟ್ಟಿಸುವವು;
ಪಕ್ಷಿಯು ಆ ವಿಷಯವನ್ನು ತಿಳಿಸುವುದು.

*10:4 ತಾಳ್ಮೆಯು ದೊಡ್ಡ ಸಿಟ್ಟನ್ನು ಅಡಗಿಸುತ್ತದೆ ಅಥವಾ ನೀನು ಶಾಂತನಾಗಿರುವಾಗ ದೊಡ್ಡ ದೋಷಗಳು ಕ್ಷಮಿಸಲ್ಪಡುತ್ತವೆ ಅಥವಾ ನಿನ್ನ ದೋಷಗಳನ್ನು ಅವನಿಗೆ ಒಪ್ಪಿಸಿಕೊಡು.

10:16 ಯುವಕನಾಗಿದ್ದರೆ, ಅಥವಾ ಸೇವಕನಾಗಿದ್ದರೆ.