51
ಚೀಯೋನಿಗೆ ಶಾಶ್ವತವಾದ ರಕ್ಷಣೆ
ನೀತಿಯನ್ನು ಹಿಂಬಾಲಿಸುವ ಯೆಹೋವನ ಭಕ್ತರೇ, ನನ್ನ ಮಾತನ್ನು ಕೇಳಿರಿ,
ನೀವು ಯಾವ ಬಂಡೆಯೊಳಗಿಂದ ಒಡೆದು ತೆಗೆಯಲ್ಪಟ್ಟಿರೋ, ಯಾವ ಗುಂಡಿಯಿಂದ ಅಗೆಯಲ್ಪಟ್ಟಿರೋ ಆ ಕಡೆಗೆ ನೋಡಿರಿ.
ನಿಮ್ಮ ಪಿತೃವಾದ ಅಬ್ರಹಾಮನನ್ನೂ, ನಿಮ್ಮನ್ನು ಹೆತ್ತ ಸಾರಳನ್ನೂ ದೃಷ್ಟಿಸಿರಿ. ಅಬ್ರಹಾಮನು ಒಬ್ಬನೇ ಇದ್ದಾಗ
ನಾನು ಅವನನ್ನು ಕರೆದು, ಆಶೀರ್ವದಿಸಿ ಅವನ ಸಂತಾನವನ್ನು ಹೆಚ್ಚಿಸಿದೆನು.
ಯೆಹೋವನು ಚೀಯೋನನ್ನು ಸಂತೈಸುವನು. ಅಲ್ಲಿನ ಹಾಳು ಪ್ರದೇಶಗಳನ್ನೆಲ್ಲಾ ಸುಧಾರಿಸಿ,
ಕಾಡುನೆಲವನ್ನು ಏದೆನ್ ಉದ್ಯಾನದಂತೆಯೂ, ಬೀಳುಭೂಮಿಯನ್ನು ಯೆಹೋವನ ವನದ ಹಾಗೆ ಕಂಗೊಳಿಸುವಂತೆ ಮಾಡುವನು.
ಹರ್ಷ, ಉಲ್ಲಾಸ, ಸ್ತೋತ್ರ, ಗಾನಧ್ವನಿ ಇವು ಅಲ್ಲಿ ನೆಲೆಯಾಗಿರುವವು.
“ನನ್ನ ಜನರೇ, ಆಲಿಸಿರಿ! ನನ್ನ ಪ್ರಜೆಗಳೇ, ಕಿವಿಗೊಡಿರಿ!
ಧರ್ಮೋಪದೇಶವು ನನ್ನಿಂದ ಹೊರಡುವುದು, ನನ್ನ ನ್ಯಾಯಬೋಧನೆಯನ್ನು ಜನಾಂಗಗಳಿಗೆ ಬೆಳಕನ್ನಾಗಿ ಸ್ಥಾಪಿಸುವೆನು.
ನನ್ನ ರಕ್ಷಣಾಧರ್ಮದ ಕಾರ್ಯವು ಸಮೀಪಿಸಿದೆ, ನನ್ನ ವಿಮೋಚನಕ್ರಿಯೆಯು ತಲೆದೋರಿದೆ, ನನ್ನ ಹಸ್ತವು ಜನಾಂಗಗಳಿಗೆ ನ್ಯಾಯತೀರಿಸುವುದು,
ದ್ವೀಪನಿವಾಸಿಗಳು ನನ್ನನ್ನು ನಿರೀಕ್ಷಿಸಿಕೊಂಡು ನನ್ನ ಹಸ್ತಕಾರ್ಯಕ್ಕೆ ಕಾದಿರುವರು.
ನಿಮ್ಮ ಕಣ್ಣುಗಳನ್ನು ಮೇಲಕ್ಕೆತ್ತಿ ಆಕಾಶಮಂಡಲವನ್ನು ನೋಡಿರಿ, ಕೆಳಗೆ ಭೂಮಂಡಲವನ್ನು ದೃಷ್ಟಿಸಿರಿ.
ಆಕಾಶವು ಹೊಗೆಯಂತೆ ಚದರಿ ಹೋಗುವುದು, ಭೂಮಿಯು ಹಳೆಯ ವಸ್ತ್ರದಂತಾಗುವುದು, ಭೂನಿವಾಸಿಗಳು ಸೊಳ್ಳೆಗಳೋಪಾದಿಯಲ್ಲಿ ಸಾಯುವರು.
ಆದರೆ ನನ್ನ ವಿಮೋಚನಕ್ರಿಯೆಯೋ ಶಾಶ್ವತವಾಗಿ ನಿಲ್ಲುವುದು, ನನ್ನ ರಕ್ಷಣಾಧರ್ಮದ ಕಾರ್ಯಕ್ಕೆ ಭಂಗವೇ ಇರುವುದಿಲ್ಲ.
ಧರ್ಮವನ್ನರಿತು ನನ್ನ ಉಪದೇಶವನ್ನು ಹೃದಯದಲ್ಲಿಟ್ಟುಕೊಂಡಿರುವ ಜನರೇ ಕಿವಿಗೊಡಿರಿ,
ಮನುಷ್ಯರ ದೂರಿಗೆ ಹೆದರಬೇಡಿರಿ, ಅವರ ದೂಷಣೆಗೆ ಅಂಜದಿರಿ.
ನುಸಿಯು ಅವರನ್ನು ಬಟ್ಟೆಯಂತೆ ತಿಂದುಹಾಕುವುದು, ಹುಳವು ಅವರನ್ನು ಉಣ್ಣೆಯಂತೆ ತಿಂದುಬಿಡುವುದು.
ನನ್ನ ರಕ್ಷಣಧರ್ಮದ ಕಾರ್ಯವೋ ಶಾಶ್ವತವಾಗಿ ನಿಲ್ಲುವುದು. ನನ್ನ ವಿಮೋಚನ ಕ್ರಿಯೆಯು ತಲತಲಾಂತರಕ್ಕೂ ನೆಲೆಯಾಗಿರುವುದು.”
ಯೆಹೋವನ ಭುಜವೇ, ಎಚ್ಚರಗೊಳ್ಳು, ಎಚ್ಚರಗೊಂಡು, ಬಲವನ್ನು ತಂದುಕೋ!
ಪೂರ್ವಕಾಲದಲ್ಲಿ, ತಲಾಂತರಗಳಲ್ಲಿ, ಎಚ್ಚರಗೊಂಡಂತೆ ಈಗಲೂ ಎಚ್ಚೆತ್ತುಕೋ,
ರಹಬನ್ನು*ರಹಬನ್ನು ಕಾನಾನ್ಯರ ಪುರಾಣದಲ್ಲಿ ರಹಾಬ ಎಂಬುದು ಸೃಷ್ಟಿಯಲ್ಲಿ ಸ್ಥಾಪಿಸಲಾದ ವ್ಯವಸ್ಥೆಯಿಂದ ಅಸ್ತವ್ಯಸ್ತ ಸ್ಥಿತಿಗೆ ಮರಳಿ ಕೊಂಡ್ಯೊಯುವ ಬೆದರಿಕೆಯನ್ನೊಡುವ ನೀರನ್ನು ಸೂಚಿಸುತ್ತದೆ. ಇದು ಸಮುದ್ರ ಮತ್ತು ಘಟಸರ್ಪಕ್ಕೆ ಸಂಬಂಧಿಸಿದ್ದಾಗಿದೆ. ಛೇದಿಸಿ ಘಟಸರ್ಪವನ್ನು ತಿವಿದುಬಿಟ್ಟವನು ನೀನಲ್ಲವೋ?
10 ಸಮುದ್ರವನ್ನೂ, ಮಹಾಸಾಗರದ ಜಲರಾಶಿಯನ್ನೂ ಬತ್ತಿಸಿ ವಿಮುಕ್ತ ಜನರು ಹಾದುಹೋಗುವುದಕ್ಕೆ,
ಸಮುದ್ರದ ತಳವನ್ನು ಮಾರ್ಗವನ್ನಾಗಿ ಮಾಡಿದವನು ನೀನಲ್ಲವೋ?
11 ಯೆಹೋವನು ವಿಮೋಚಿಸಿದವರು ಹಿಂದಿರುಗಿ ಶಾಶ್ವತ ಸಂತೋಷವೆಂಬ ಕಿರೀಟವನ್ನು ಧರಿಸಿಕೊಂಡು ಉತ್ಸಾಹಧ್ವನಿಯೊಡನೆ ಚೀಯೋನಿಗೆ ಸೇರುವರು.
ಹರ್ಷಾನಂದಗಳನ್ನು ಅನುಭವಿಸುವರು, ಮೊರೆಯೂ ಕರಕರೆಯೂ ತೊಲಗಿಹೋಗುವವು.
12 ನಾನೇ, ನಾನೇ ನಿನ್ನನ್ನು ಸಂತೈಸುವವನು.
ಮರ್ತ್ಯಮನುಷ್ಯನಿಗೆ, ಹುಲ್ಲಿನ ಗತಿಗೆ ಬರುವ ನರಜನ್ಮದವನಿಗೆ ಭಯಪಡುವ ನೀನು ಎಂಥವನು?
13 ಆಕಾಶಮಂಡಲವನ್ನು ಹರಡಿ, ಭೂಲೋಕವನ್ನು ಸ್ಥಾಪಿಸಿದ ನಿನ್ನ ಸೃಷ್ಟಿಕರ್ತನಾದ ಯೆಹೋವನನ್ನು ಮರೆತುಬಿಟ್ಟೆಯಾ?
ನಾಶಮಾಡಬೇಕೆಂದು ಬಾಣವನ್ನು ಹೂಡುವ ಹಿಂಸಕನ ಕ್ರೋಧಕ್ಕೆ ದಿನವೆಲ್ಲಾ ಎಡೆಬಿಡದೆ ಅಂಜುತ್ತೀಯಾ?
ಆ ಹಿಂಸಕನ ಕ್ರೋಧವು ಎಲ್ಲಿ ಇದೆ?
14 ಸೆರೆಯಲ್ಲಿ ಕುಗ್ಗಿರುವವನು ಸಾಯನು, ಪಾತಾಳಕ್ಕೆ ಇಳಿಯನು,
ಬೇಗನೆ ಬಿಡುಗಡೆಯಾಗುವನು. ಅವನಿಗೆ ಅನ್ನದ ಕೊರತೆಯೇ ಇರುವುದಿಲ್ಲ.
15 ಅಲೆಗಳು ಭೋರ್ಗರೆಯುವಷ್ಟು ಸಮುದ್ರವನ್ನು ರೇಗಿಸುವ ನಿನ್ನ ದೇವರಾದ ಯೆಹೋವನು ನಾನೇ,
ಸೇನಾಧೀಶ್ವರನಾದ ಯೆಹೋವನೆಂಬುದೇ ನನ್ನ ನಾಮಧೇಯ.
16 ಆಕಾಶವನ್ನು ನಿಲ್ಲಿಸಬೇಕೆಂತಲೂ, ಭೂಲೋಕವನ್ನು ಸ್ಥಾಪಿಸಬೇಕೆಂತಲೂ,
ಚೀಯೋನಿಗೆ, “ನೀವು ನನ್ನ ಜನರು” ಎಂದು ಹೇಳಬೇಕೆಂದು ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟು, ನನ್ನ ಕೈಯ ನೆರಳಿನಲ್ಲಿ ನಿನ್ನನ್ನು ಹುದುಗಿಸಿದ್ದೇನೆ.
ಯೆಹೋವನ ರೋಷ ಪಾತ್ರೆ
17 ಯೆಹೋವನು ತನ್ನ ರೋಷವನ್ನು ತುಂಬಿಕೊಟ್ಟ ಪಾತ್ರೆಯಿಂದ ಕುಡಿದ ಯೆರೂಸಲೇಮೇ,
ಎಚ್ಚೆತ್ತುಕೋ, ಎಚ್ಚೆತ್ತುಕೋ, ಎದ್ದುನಿಲ್ಲು!
ಭ್ರಮಣಗೊಳಿಸುವ ಆ ಪಾನದ ಪಾತ್ರೆಯಲ್ಲಿ ಒಂದು ತೊಟ್ಟನ್ನೂ ಉಳಿಸದೆ ಕುಡಿದುಬಿಟ್ಟಿದ್ದಿ.
18 ಅವಳು ಹೆತ್ತ ಮಕ್ಕಳಲ್ಲಿ ಅವಳನ್ನು ನಡೆಸಿಕೊಂಡು ಹೋಗುವವನು ಯಾರೂ ಇಲ್ಲ.
ಸಾಕಿದ ಆ ಸಕಲ ಕುಮಾರರಲ್ಲಿ ಅವಳ ಕೈ ಹಿಡಿಯುವವನು ಒಬ್ಬನೂ ಇಲ್ಲ.
19 ನಿನಗೆ ಈ ಎರಡು ಬಾಧೆಗಳು ಬಂದಿವೆ, ನಿನಗೋಸ್ಕರ ಸಂತಾಪವನ್ನು ತೋರಿಸುವವರು ಯಾರಿದ್ದಾರೆ?
ನಾಶವೋ, ಸಂಹಾರವೋ, ಕ್ಷಾಮವೋ, ಶಕ್ತಿಯೋ.
ನಾನು ನಿನ್ನನ್ನು ಹೇಗೆ ಸಂತೈಸಲಿ?
20 ನಿನ್ನ ಮಕ್ಕಳು ಪ್ರಜ್ಞೆತಪ್ಪಿದವರಾಗಿ ಬಲೆಗೆ ಸಿಕ್ಕಿದ ಜಿಂಕೆಗಳಂತೆ ಬೀದಿಗಳಲ್ಲಿ, ಚೌಕದಲ್ಲಿ ಬಿದ್ದಿದ್ದಾರೆ.
ಯೆಹೋವನ ರೋಷವನ್ನೂ, ನಿನ್ನ ದೇವರ ಗದರಿಕೆಯನ್ನೂ ಸಾಕಷ್ಟು ಅನುಭವಿಸಿದ್ದಾರೆ.
21 ನೀನು ಹಿಂಸೆಗೊಳಗಾಗಿದ್ದಿ. ಕುಡಿದು ಅಮಲೇರಿದ್ದಿ.
ಆದರೆ ದ್ರಾಕ್ಷಾರಸದಿಂದಲ್ಲ. ಆದುದರಿಂದ ಈಗ ಇದನ್ನು ಕೇಳು.
22 ನಿನ್ನ ಕರ್ತನೂ, ತನ್ನ ಜನರ ಪಕ್ಷವಾಗಿ ವ್ಯಾಜ್ಯವಾಡುವ ನಿನ್ನ ದೇವರೂ ಆದ ಯೆಹೋವನು ಹೀಗೆನ್ನುತ್ತಾನೆ,
“ಇಗೋ, ಭ್ರಮಣಗೊಳಿಸುವ ಪಾನದ ಪಾತ್ರೆಯನ್ನು ಅಂದರೆ, ನನ್ನ ರೋಷದಿಂದ ತುಂಬಿರುವ ಬಟ್ಟಲನ್ನು ನಿನ್ನ ಕೈಯೊಳಗಿಂದ ತೆಗೆದುಹಾಕುವೆನು.
ಅದನ್ನು ನೀನು ತಿರುಗಿ ಕುಡಿಯುವುದೇ ಇಲ್ಲ.
23 ನಿನ್ನನ್ನು ಬಾಧಿಸುವವರ ಕೈಗೆ ಅದನ್ನು ಕೊಡುವೆನು.
ಅವರು ನಿನಗೆ, ‘ನೀನು ಬಿದ್ದುಕೋ, ನಿನ್ನನ್ನು ತುಳಿಯುತ್ತಾ ಹೋಗುವೆವು’ ಎಂದು ಹೇಳಲು,
ನೀನು ಹಾದುಹೋಗುವ ಅವರಿಗೆ ನಿನ್ನ ಬೆನ್ನನ್ನು ನೆಲವನ್ನಾಗಿಯೂ, ಬೀದಿಯ ಮಣ್ಣನ್ನಾಗಿಯೂ ಮಾಡಿಕೊಂಡೆಯಲ್ಲಾ.”

*51:9 ರಹಬನ್ನು ಕಾನಾನ್ಯರ ಪುರಾಣದಲ್ಲಿ ರಹಾಬ ಎಂಬುದು ಸೃಷ್ಟಿಯಲ್ಲಿ ಸ್ಥಾಪಿಸಲಾದ ವ್ಯವಸ್ಥೆಯಿಂದ ಅಸ್ತವ್ಯಸ್ತ ಸ್ಥಿತಿಗೆ ಮರಳಿ ಕೊಂಡ್ಯೊಯುವ ಬೆದರಿಕೆಯನ್ನೊಡುವ ನೀರನ್ನು ಸೂಚಿಸುತ್ತದೆ. ಇದು ಸಮುದ್ರ ಮತ್ತು ಘಟಸರ್ಪಕ್ಕೆ ಸಂಬಂಧಿಸಿದ್ದಾಗಿದೆ.