52
ಯೆರೂಸಲೇಮಿನ ಬಿಡುಗಡೆ
1 ಚೀಯೋನೇ, ಎಚ್ಚರಗೊಳ್ಳು, ಎಚ್ಚರಗೊಳ್ಳು, ನಿನ್ನ ಪ್ರತಾಪವನ್ನು ಧರಿಸಿಕೋ!
ಯೆರೂಸಲೇಮೇ ಪರಿಶುದ್ಧ ಪಟ್ಟಣವೇ, ನಿನ್ನ ಸುಂದರವಾದ ಉಡುಪನ್ನು ಹಾಕಿಕೋ!
ಇಂದಿನಿಂದ ಅಶುದ್ಧರೂ, ಸುನ್ನತಿಯಿಲ್ಲದವರೂ ನಿನ್ನೊಳಗೆ ಪ್ರವೇಶಮಾಡುವುದಿಲ್ಲ.
2 ಯೆರೂಸಲೇಮೇ, ಧೂಳನ್ನು ಝಾಡಿಸಿಕೋ! ಎದ್ದು ಆಸನದ ಮೇಲೆ ಕುಳಿತುಕೋ!
ಸೆರೆಯಲ್ಲಿ ಬಿದ್ದ ಚೀಯೋನ್ ಪುತ್ರಿಯೇ, ನಿನ್ನ ಕುತ್ತಿಗೆಯ ಬಂಧನವನ್ನು ಬಿಚ್ಚಿಕೋ!
3 ಯೆಹೋವನ ಈ ಮಾತನ್ನು ಕೇಳಿರಿ, “ಲಾಭಪಡೆಯದೆ ನಿಮ್ಮನ್ನು ಮಾರಿದೆನು,
ಹಣತಕ್ಕೊಳ್ಳದೆ ನಿಮ್ಮನ್ನು ಬಿಡುಗಡೆಮಾಡುವೆನು.”
4 ಕರ್ತನಾದ ಯೆಹೋವನು ಹೀಗೆಂದುಕೊಳ್ಳುತ್ತಾನೆ, “ನನ್ನ ಜನರು ಮೊಟ್ಟಮೊದಲು ಐಗುಪ್ತದಲ್ಲಿ ಇಳಿದುಕೊಳ್ಳಬೇಕೆಂದು ಹೋಗಿ ಅಲ್ಲಿ ಸೆರೆಯಾದರು.
ಅಶ್ಶೂರ್ಯರು ಕಾರಣವಿಲ್ಲದೆ ಅವರನ್ನು ಬಾಧೆಪಡಿಸಿದರು.”
5 ಕರ್ತನಾದ ಯೆಹೋವನು ಹೇಳುವುದೇನೆಂದರೆ, “ಈಗಲೂ ಅನ್ಯರು ನನ್ನ ಜನರನ್ನು ಕಾರಣವಿಲ್ಲದೆ ಸೆರೆತೆಗೆದುಕೊಂಡು ಹೋಗಿರುವಾಗ
ನಾನು ಇಲ್ಲಿ ಸುಮ್ಮನಿರುವುದು ಹೇಗೆ? ನನ್ನ ಪ್ರಜೆಯನ್ನು ಆಳುವವರು ರೌದ್ರದಿಂದ ಅರಚುತ್ತಾರೆ.*ಅರಚುತ್ತಾರೆ. ಅಥವಾ ಪರಿಹಾಸ್ಯ ಮಾಡುತ್ತಾರೆ.
ನನ್ನ ನಾಮವು ದಿನವೆಲ್ಲಾ ಎಡೆಬಿಡದೆ ದೂಷಣೆಗೆ ಗುರಿಯಾಗಿದೆ.
6 ಹೀಗಿರಲು ನನ್ನ ಜನರು ನನ್ನ ನಾಮದ ಮಹತ್ತನ್ನು ತಿಳಿದುಕೊಳ್ಳುವರು.
ಹೀಗೆ ಆ ದಿನದಲ್ಲಿ ಅವರ ಸಂಗಡ ಮಾತನಾಡಿದವನು ನಾನೇ. ಹೌದು ನಾನೇ” ಎಂದು ಗ್ರಹಿಸಿಕೊಳ್ಳುವ ಹಾಗೆ ಮಾಡುವೆನು.
7 ಪರ್ವತಗಳ ಮೇಲೆ ತ್ವರೆಪಡುತ್ತಾ, ಶುಭಸಮಾಚಾರವನ್ನು ತಂದು, ಸಮಾಧಾನವನ್ನು ಸಾರುವ ದೂತನ ಪಾದಗಳು ಎಷ್ಟೋ ಅಂದವಾಗಿವೆ!
ಶುಭವರ್ತಮಾನವನ್ನು, ಶುಭದ ಸುವಾರ್ತೆಯನ್ನು ತಂದು, ರಕ್ಷಣೆಯನ್ನು ಪ್ರಕಟಿಸುತ್ತಾ, “ನಿನ್ನ ದೇವರು ರಾಜ್ಯಭಾರವನ್ನು ವಹಿಸಿದ್ದಾನೆ” ಎಂದು ಚೀಯೋನಿಗೆ ತಿಳಿಸುವವನಾಗಿದ್ದಾನೆ.
8 ಇಗೋ, ನಿನ್ನ ಕಾವಲುಗಾರರ ಕೂಗು! ಸ್ವರವೆತ್ತಿ ಒಟ್ಟಿಗೆ ಹರ್ಷಧ್ವನಿಗೈಯುತ್ತಾರೆ. ಯೆಹೋವನು ಚೀಯೋನಿಗೆ ತಿರುಗಿ ಬರುವುದನ್ನು ಪ್ರತ್ಯಕ್ಷವಾಗಿ ನೋಡುವರು.
9 ಯೆರೂಸಲೇಮಿನ ಹಾಳುಪ್ರದೇಶಗಳೇ, ತಟ್ಟನೆ ಜಯಘೋಷಮಾಡಿ ಒಟ್ಟಿಗೆ ಹರ್ಷಧ್ವನಿಗೈಯಿರಿ!
ಯೆಹೋವನು ಯೆರೂಸಲೇಮನ್ನು ವಿಮೋಚಿಸಿ ತನ್ನ ಜನರನ್ನು ಸಂತೈಸಿದ್ದಾನೆ.
10 ಯೆಹೋವನು ಸಕಲ ಜನಾಂಗಗಳ ಕಣ್ಣೆದುರಿನಲ್ಲಿ ತನ್ನ ದಿವ್ಯಬಾಹುವನ್ನು ತೆರೆದು ತೋರಿಸಿದ್ದಾನೆ.
ಭೂಮಿಯ ಎಲ್ಲಾ ದಿಕ್ಕಿನವರೂ ನಮ್ಮ ದೇವರ ರಕ್ಷಣಾಕಾರ್ಯವನ್ನು ನೋಡುವರು.
11 ತೊಲಗಿರಿ, ತೊಲಗಿರಿ, ಬಾಬೆಲಿನಿಂದ ಹೊರಡಿರಿ, ಅಶುದ್ಧವಾದ ಯಾವುದನ್ನೂ ಮುಟ್ಟದಿರಿ,
ಅದರಿಂದ ದೂರ ಹೋಗಿ, ಯೆಹೋವನ ಆರಾಧನೆಯ ಉಪಕರಣಗಳನ್ನು ಹೊರುವವರೇ, ಶುದ್ಧರಾಗಿರಿ!
12 ನೀವು ಅವಸರದಿಂದ ಹೊರಡಬೇಕಾಗಿಲ್ಲ, ಓಡಿಹೋಗಬೇಕಾಗಿಲ್ಲ.
ಯೆಹೋವನು ನಿಮಗೆ ಮುಂಬಲವಾಗಿ ಮುಂದೆ ಹೋಗುವನು.
ಇಸ್ರಾಯೇಲಿನ ದೇವರು ನಿಮಗೆ ಹಿಂಬಲವಾಗಿಯೂ ಕಾಯುವನು.
ಯೆಹೋವನ ಸೇವಕನ ಶ್ರಮೆ, ಪ್ರಾಣತ್ಯಾಗ ಅದರ ಪ್ರತಿಫಲ
13 ಇಗೋ, ನನ್ನ ಸೇವಕನು ಕೃತಾರ್ಥನಾಗುವನು.
ಅವನು ಉನ್ನತನಾಗಿ ಮೇಲಕ್ಕೇರಿ ಮಹೋನ್ನತ ಪದವಿಗೆ ಬರುವನು.
14 ಅವನ ಮುಖವು ಸಕಲ ಮನುಷ್ಯರ ಮುಖಕ್ಕಿಂತಲೂ,
ಅವನ ರೂಪವು ಎಲ್ಲಾ ನರಜನ್ಮದವರ ರೂಪಕ್ಕಿಂತಲೂ ವಿಕಾರವಾಗಿರುವುದನ್ನು ನೋಡಿ,
ಅನೇಕರು ಹೇಗೆ ಹೆದರಿದರೋ,
15 ಹಾಗೆಯೇ ಅನೇಕ ಜನಾಂಗಗಳವರು ಅವನನ್ನು ಕಂಡು ವಿಸ್ಮಯದಿಂದ ಚಕಿತರಾಗುವರು.
ಅರಸರೂ ಅವನ ಮುಂದೆ ಬಾಯಿಮುಚ್ಚಿಕೊಳ್ಳುವರು.
ಏಕೆಂದರೆ ಸುದ್ದಿಯೇ ಇಲ್ಲದ ಸಂಗತಿಯನ್ನು ನೋಡುವರು, ಎಂದೂ ಕೇಳದೇ ಇರುವ ವಿಷಯವನ್ನು ಗ್ರಹಿಸಿಕೊಳ್ಳುವರು.