58
ಅನ್ಯಾಯಾಧಿಕಾರಿಗಳಿಗೆ ಪ್ರತಿದಂಡನೆಯಾಗಬೇಕೆಂದು ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ದಾವೀದನ ಕಾವ್ಯ.
ಅಧಿಕಾರಿಗಳೇ*ಅಧಿಕಾರಿಗಳೇ ಅಥವಾ ದೇವರುಗಳೇ ಅಥವಾ ಮೂಕರು., ನೀವು ಕೊಡುವ ತೀರ್ಪುಗಳು ನೀತಿಗನುಸಾರವಾಗಿವೆಯೋ?
ಜನರ ವ್ಯಾಜ್ಯಗಳನ್ನು ನ್ಯಾಯಯುತವಾಗಿ ಬಗೆಹರಿಸುತ್ತಿರೋ?
ನಿಮ್ಮ ಮನಸ್ಸಿನ ಕಲ್ಪನೆಯೆಲ್ಲಾ ಕೆಟ್ಟತನವೇ;
ನೀವು ದೇಶದವರಿಗೆ ಅನ್ಯಾಯವನ್ನೇ ತೂಗಿಕೊಡುವವರಾಗಿದ್ದೀರಲ್ಲಾ.
ದುಷ್ಟರು ಜನ್ಮದಿಂದಲೇ ಧರ್ಮಭ್ರಷ್ಟರು;
ಅವರು ಹುಟ್ಟಿದಂದಿನಿಂದ ಸುಳ್ಳುಗಾರರಾಗಿ ದಾರಿ ತಪ್ಪಿದವರು.
ಅವರು ಸರ್ಪದಂತೆ ವಿಷಭರಿತರು.
ಜಾಣತನದಿಂದ ಮಂತ್ರಿಸುವ ಹಾವಾಡಿಗರ ನಾಗಸ್ವರಕ್ಕೂ ಮರುಳಾಗದ
ಅಥವಾ ಅದಕ್ಕೆ ಕಿವಿಗೊಡದ ಕಳ್ಳ ಹಾವಿನಂತೆ ಇರುತ್ತಾರೆ.
ದೇವರೇ, ಅವರ ಹಲ್ಲುಗಳನ್ನು ಮುರಿದುಬಿಡು;
ಯೆಹೋವನೇ, ಪ್ರಾಯದ ಸಿಂಹಗಳ ಕೋರೆ ಹಲ್ಲುಗಳನ್ನು ಕಿತ್ತುಹಾಕು.
ಕ್ಷಣದಲ್ಲಿ ಹರಿದು ಕಾಣದೆ ಹೋಗುವ ನೀರಿನಂತೆ ಅವರು ಮಾಯವಾಗಲಿ;
ಬಾಣ ತಾಗಿತೋ ಎಂಬಂತೆ ಅವರು ಬೀಳಲಿ.
ಒಣಗಿ ಸತ್ತ ಬಸವನಹುಳದಂತೆ ನಿರ್ನಾಮವಾಗಲಿ;
ಗರ್ಭವಿಳಿದ ಪಿಂಡದಂತೆ ಸೂರ್ಯನನ್ನು ನೋಡದೆ ಹೋಗಲಿ.
ಇನ್ನೂ ಹಸಿರಿರುರುವಾಗಲೇ ಒಲೆಗೆ ಹಾಕಿದ ಮುಳ್ಳಿನ ಕೊಂಪೆಯನ್ನು ಬಿರುಗಾಳಿಯು ಹಾರಿಸಿಬಿಡುವಂತೆ
ದೇವರ ಉಗ್ರಕೋಪವು ಅವರನ್ನು ನಿಶ್ಶೇಷಮಾಡಲಿ.
10 ದುಷ್ಟರಿಗಾಗುವ ಪ್ರತಿದಂಡನೆಯನ್ನು ಭಕ್ತರು ನೋಡಿ ಹರ್ಷಿಸಿ,
ಅವರ ರಕ್ತದಲ್ಲಿ ಕಾಲಾಡಿಸುವರು.
11 ನೀತಿವಂತನಿಗೆ ಫಲವುಂಟೆಂತಲೂ,
ಲೋಕದಲ್ಲಿ ನ್ಯಾಯಸ್ಥಾಪಕನಾದ ದೇವರು ಇದ್ದಾನೆಂತಲೂ ಸರ್ವರು ಒಪ್ಪಿಕೊಳ್ಳುವರು.

*58:1 ಅಧಿಕಾರಿಗಳೇ ಅಥವಾ ದೇವರುಗಳೇ ಅಥವಾ ಮೂಕರು.