59
ಹಿಂಸೆಗೊಳಗಾದ ನಿರಪರಾಧಿಯ ಪ್ರಾರ್ಥನೆ
ಪ್ರಧಾನಗಾಯಕನ ಕೀರ್ತನ ಸಂಗ್ರಹದಿಂದ ಆರಿಸಿಕೊಂಡದ್ದು; ಅಲ್ತಷ್ಖೇತೆಂಬ ರಾಗ; ಸೌಲನ ಕಡೆಯವರು ದಾವೀದನ ಜೀವತೆಗೆಯಬೇಕೆಂದು ಅವನ ಮನೆಯ ಸುತ್ತಲೂ ಹೊಂಚುಹಾಕುತ್ತಿದ್ದಾಗ ಅವನು ರಚಿಸಿದ ಕಾವ್ಯ.
1 ನನ್ನ ದೇವರೇ, ಶತ್ರುಗಳ ಕೈಯಿಂದ ನನ್ನನ್ನು ಬಿಡಿಸು;
ನನಗೆ ವಿರುದ್ಧವಾಗಿ ಎದ್ದಿರುವವರಿಗೆ ನನ್ನನ್ನು ತಪ್ಪಿಸಿ ಭದ್ರಸ್ಥಳದಲ್ಲಿರಿಸು.
2 ಕೆಡುಕರಿಂದ ಬಿಡಿಸು; ಕೊಲೆಪಾತಕರಿಂದ ನನ್ನನ್ನು ರಕ್ಷಿಸು.
3 ಇಗೋ, ಅವರು ನನ್ನ ಜೀವಕ್ಕೆ ಹೊಂಚುಹಾಕುತ್ತಾರೆ;
ಬಲಿಷ್ಠರು ನನಗೆ ವಿರುದ್ಧವಾಗಿ ಗುಂಪುಕೂಡಿದ್ದಾರೆ.
ಯೆಹೋವನೇ, ನಾನು ನಿರ್ದೋಷಿಯೂ ನಿರಪರಾಧಿಯೂ ಅಲ್ಲವೇ!
4 ನಿಷ್ಕಾರಣವಾಗಿ ನನ್ನ ಮೇಲೆ ಬೀಳಲು ಮುತ್ತಿಗೆ ಹಾಕಿ ನಿಂತಿದ್ದಾರೆ;
ಎದ್ದು ಬಂದು ಪರಾಂಬರಿಸಿ ನನಗೆ ಸಹಾಯಮಾಡು.
5 ಸೇನಾಧೀಶ್ವರನಾದ ಯೆಹೋವನೇ, ಇಸ್ರಾಯೇಲರ ದೇವರೇ,
ನೀನು ಎಚ್ಚರವಾಗಿ ಎಲ್ಲಾ ಅನ್ಯಜನಾಂಗಗಳನ್ನು ದಂಡಿಸು.
ದುಷ್ಟದ್ರೋಹಿಗಳಲ್ಲಿ ಒಬ್ಬನಿಗೂ ದಯತೋರಿಸಬೇಡ.
ಸೆಲಾ
6 ಅವರು ಪ್ರತಿಸಾಯಂಕಾಲವೂ ಬಂದು ಬಂದು
ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಿದ್ದಾರೆ.
7 ಇಗೋ, ಅವರ ಬಾಯಿಗಳು ಎಷ್ಟೋ ಮಾತುಗಳನ್ನು ಕಕ್ಕುತ್ತವೆ;
ಅವೆಲ್ಲಾ ಹರಿತವಾದ ಕತ್ತಿಗಳಂತಿವೆ,
ಅವರು, “ನಮ್ಮನ್ನು ಕೇಳುವವರು ಯಾರು?” ಅಂದುಕೊಳ್ಳುತ್ತಾರೆ.
8 ಯೆಹೋವನೇ, ನೀನಾದರೋ ಅವರನ್ನು ನೋಡಿ ನಗುವಿ;
ಎಲ್ಲಾ ಅನ್ಯಜನಾಂಗಗಳನ್ನು ಪರಿಹಾಸ್ಯಮಾಡುವಿ.
9 ನನ್ನ ಬಲವೇ, ನಿನ್ನನ್ನು ನಿರೀಕ್ಷಿಸುತ್ತಿದ್ದೇನೆ.
ನನ್ನ ಆಶ್ರಯದುರ್ಗವು ದೇವರೇ.
10 ನನ್ನ ದೇವರು ತನ್ನ ಮಹಾ ಪ್ರೀತಿಯಿಂದ ನನಗೆ ಸಹಾಯಮಾಡುವನು;
ನನ್ನ ವಿರೋಧಿಗಳಿಗುಂಟಾದ ಶಿಕ್ಷೆಯನ್ನು ನಾನು ನೋಡುವಂತೆ ಮಾಡುವನು.
11 ಕರ್ತನೇ, ನಮ್ಮ ಗುರಾಣಿಯೇ, ಅವರನ್ನು ಫಕ್ಕನೆ ಸಂಹರಿಸಬೇಡ.
ನನ್ನ ಜನರು ಮರೆತುಬಿಡದ ಹಾಗೆ ಅವರು ಉಳಿಯಲಿ.
ನಿನ್ನ ಸೇನಾಬಲದಿಂದ ಚದುರಿಸಿ, ಭ್ರಾಂತಿಯಿಂದ ಅಲೆದಾಡಿಸಿ ಅವರನ್ನು ಕೆಡವಿಬಿಡು.
12 ಅವರ ಬಾಯಿಂದ ಬರುವುದೆಲ್ಲಾ ಪಾಪದ ಮಾತೇ.
ಅವರ ಅಹಂಕಾರದಿಂದಲೇ ಅವರು ಸಿಕ್ಕಿಬೀಳಲಿ.
13 ಅವರು ನುಡಿಯುವ ಶಾಪಕ್ಕಾಗಿಯೂ ಸುಳ್ಳಿಗಾಗಿಯೂ,
ಅವರನ್ನು ರೌದ್ರದಿಂದ ಸಂಹರಿಸಿ ನಿರ್ನಾಮಗೊಳಿಸು.
*ಅಥವಾ ಇಸ್ರಾಯೇಲ ದೇಶವನ್ನು.ಯಾಕೋಬನ ವಂಶದವರನ್ನು ಆಳುವವನು ದೇವರೇ ಎಂಬುದು,
ಭೂಲೋಕದಲ್ಲೆಲ್ಲಾ ಗೊತ್ತಾಗಲಿ.
ಸೆಲಾ
14 ಅವರು ಪ್ರತಿಸಾಯಂಕಾಲವೂ ಬಂದು ಬಂದು,
ನಾಯಿಗಳಂತೆ ಗುರುಗುಟ್ಟುತ್ತಾ ಪಟ್ಟಣವನ್ನೆಲ್ಲಾ ಸುತ್ತುತ್ತಾ ಇದ್ದಾರೆ.
15 ಆಹಾರಕ್ಕಾಗಿ ಅತ್ತಿತ್ತ ತಿರುಗುತ್ತಾರೆ;
ಹೊಟ್ಟೆಗಿಲ್ಲದಿದ್ದರೆ ಗುಣುಗುಟ್ಟುತ್ತಾರೆ†ಗುಣುಗುಟ್ಟುತ್ತಾರೆ ಅಥವಾ ರಾತ್ರಿಯೆಲ್ಲಾ ಗುಣುಗುಟ್ಟುತ್ತಾರೆ..
16 ನಾನಾದರೋ, ಇಕ್ಕಟ್ಟಿನ ಕಾಲದಲ್ಲಿ
ಆಶ್ರಯವೂ ದುರ್ಗವೂ ಆಗಿರುವ ನಿನ್ನ ಬಲವನ್ನು ಹಾಡಿ ಹೊಗಳುವೆನು;
ಪ್ರಾತಃಕಾಲದಲ್ಲಿ ನಿನ್ನ ಪ್ರೇಮವನ್ನು ಉಲ್ಲಾಸದಿಂದ ಕೊಂಡಾಡುವೆನು.
17 ನನ್ನ ಬಲವೇ, ನಿನ್ನನ್ನು ಹಾಡಿಹರಸುವೆನು,
ನನ್ನ ಆಶ್ರಯದುರ್ಗವೂ ಕೃಪಾನಿಧಿಯೂ ದೇವರೇ.