3
ನಂಬಿಕೆಯೋ ನಿಯಮವೋ?
ಬುದ್ಧಿಯಿಲ್ಲದ ಗಲಾತ್ಯದವರೇ, ನಿಮಗೆ ಮಾಟಮಾಡಿಸಿದವರು ಯಾರು? ಯೇಸು ಕ್ರಿಸ್ತರು ಶಿಲುಬೆಗೆ ಹಾಕಿಸಿಕೊಂಡದ್ದನ್ನು ನಾನು ನಿಮ್ಮ ಕಣ್ಣೆದುರಿನಲ್ಲಿಯೇ ಚಿತ್ರೀಕರಿಸಲಿಲ್ಲವೆ? ಇದೊಂದನ್ನು ಮಾತ್ರ ನಿಮ್ಮಿಂದ ತಿಳಿಯಬಯಸುತ್ತೇನೆ. ನೀವು ಪವಿತ್ರ ಆತ್ಮರನ್ನು ಹೊಂದಿದ್ದು ನಿಯಮದ ಕ್ರಿಯೆಯಿಂದಲೋ? ಇಲ್ಲವೆ ಕೇಳಿದ್ದನ್ನು ನಂಬಿದ್ದರಿಂದಲೋ? ನೀವು ಇಷ್ಟು ಬುದ್ಧಿಯಿಲ್ಲದವರಾಗಿದ್ದೀರಾ? ನೀವು ಪವಿತ್ರ ಆತ್ಮರಲ್ಲಿ ಪ್ರಾರಂಭಿಸಿ ಈಗ ಮಾನವೀಯವಾಗಿ ಪರಿಪೂರ್ಣರಾಗಬೇಕೆಂದ್ದೀರಾ? ನೀವು ಎಷ್ಟೋ ಬಾಧೆಗಳನ್ನು ಅನುಭವಿಸಿದ್ದು ವ್ಯರ್ಥವಾಯಿತೋ? ನಿಜವಾಗಿಯೂ ವ್ಯರ್ಥವಾಯಿತು. ದೇವರು ಪವಿತ್ರ ಆತ್ಮರನ್ನು ನಿಮಗೆ ಕೊಟ್ಟದ್ದು ಮತ್ತು ನಿಮ್ಮಲ್ಲಿ ಅದ್ಭುತಕಾರ್ಯಗಳನ್ನು ನಡೆಸಿದ್ದು ನಿಯಮದ ಕ್ರಿಯೆಗಳಿಂದಲೋ ಅಥವಾ ನೀವು ಕೇಳಿ ನಂಬಿದ್ದರಿಂದಲೋ? ಈ ರೀತಿಯಾಗಿ, “ಅಬ್ರಹಾಮನು ದೇವರನ್ನು ನಂಬಿದನು. ಆ ನಂಬಿಕೆಯು ಅದು ಅವನ ಲೆಕ್ಕಕ್ಕೆ ನೀತಿ ಎಂದು ಎಣಿಸಲಾಯಿತು.”*ಆದಿ 15:6
ಆದ್ದರಿಂದ ನಂಬುವವರೇ, ಅಬ್ರಹಾಮನ ಮಕ್ಕಳೆಂದು ನೀವು ಅರ್ಥಮಾಡಿಕೊಳ್ಳಿರಿ. ಯೆಹೂದ್ಯರಲ್ಲದವರನ್ನು ನಂಬಿಕೆಯಿಂದಲೇ ದೇವರು ನೀತಿವಂತರನ್ನಾಗಿ ಮಾಡುವರು ಎಂದು ಪವಿತ್ರ ವೇದವು ಮೊದಲೇ ಕಂಡು, “ನಿನ್ನ ಮೂಲಕ ಎಲ್ಲಾ ಜನಾಂಗಗಳಿಗೂ ಆಶೀರ್ವಾದ ಉಂಟಾಗುವುದು,”ಆದಿ 12:3; 18:18; 22:18 ಎಂಬ ಸುವಾರ್ತೆಯನ್ನು ಅಬ್ರಹಾಮನಿಗೆ, ಮುಂಚಿತವಾಗಿಯೇ ಸಾರಿತು. ಆದ್ದರಿಂದ, ದೇವರನ್ನು ನಂಬುವ ಎಲ್ಲರೂ ಅಬ್ರಹಾಮನು ಆಶೀರ್ವಾದ ಹೊಂದಿದ ಹಾಗೆಯೇ ಆಶೀರ್ವಾದ ಹೊಂದುವರು.
10 ಮೋಶೆಯ ನಿಯಮದ ಕ್ರಿಯೆಗಳನ್ನು ಆಶ್ರಯಿಸಿಕೊಳ್ಳುವವರೆಲ್ಲರೂ ಶಾಪಾಧೀನರಾಗಿದ್ದಾರೆ. ಏಕೆಂದರೆ, “ಮೋಶೆಯ ನಿಯಮದ ಗ್ರಂಥದಲ್ಲಿ ಬರೆದಿರುವವುಗಳನ್ನೆಲ್ಲಾ ನಿರಂತರವಾಗಿ ಕೈಗೊಳ್ಳದಿರುವ ಪ್ರತಿಯೊಬ್ಬನೂ ಶಾಪಗ್ರಸ್ತನು,”ಧರ್ಮೋ 27:26 ಎಂದು ಬರೆದಿದೆ. 11 ಇದಲ್ಲದೆ ನಿಯಮದಿಂದ ದೇವರ ಮುಂದೆ ಯಾರೂ ನೀತಿವಂತರೆಂಬ ನಿರ್ಣಯವನ್ನು ಹೊಂದುವುದಿಲ್ಲವೆಂಬುದು ಸ್ಪಷ್ಟವಾಗಿದೆ. ಏಕೆಂದರೆ, “ನೀತಿವಂತನು ನಂಬಿಕೆಯಿಂದಲೇ ಬದುಕುವನು.”§ಹಬ 2:4 12 ನಿಯಮವು ನಂಬಿಕೆಯನ್ನು ಆಧಾರಗೊಂಡದ್ದಲ್ಲ. ಆದರೆ, “ನಿಯಮಗಳ ಕ್ರಿಯೆಗಳನ್ನು ಮಾಡುವವನು ಅವುಗಳ ಮೂಲಕ ಬದುಕುವನು.”*ಯಾಜಕ 18:5 13 ಪವಿತ್ರ ವೇದದಲ್ಲಿ, “ಮರಕ್ಕೆ ತೂಗುಹಾಕಲಾದ ಪ್ರತಿಯೊಬ್ಬನೂ ಶಾಪಗ್ರಸ್ತನು,”ಧರ್ಮೋ 21:23 ಎಂದು ಬರೆದಿರುವಂತೆ ಕ್ರಿಸ್ತ ಯೇಸು ಮರಕ್ಕೆ ತೂಗುಹಾಕಲಾಗಿ ನಮಗೋಸ್ಕರ ಶಾಪಗ್ರಸ್ಥರಾಗಿ ನಿಯಮದ ಶಾಪದೊಳಗಿಂದ ನಮ್ಮನ್ನು ವಿಮೋಚಿಸಿದರು. 14 ಅಬ್ರಹಾಮನ ಆಶೀರ್ವಾದವು ಕ್ರಿಸ್ತ ಯೇಸುವಿನ ಮೂಲಕ ಯೆಹೂದ್ಯರಲ್ಲದವರಿಗೆ ಉಂಟಾಗಿ, ನಂಬಿಕೆಯ ಮೂಲಕ ವಾಗ್ದಾನದ ಪವಿತ್ರಾತ್ಮರನ್ನು ನಾವು ಪಡೆದುಕೊಳ್ಳುವುದಕ್ಕಾಗಿಯೇ ದೇವರು ನಮ್ಮನ್ನು ವಿಮೋಚಿಸಿದರು.
ನಿಯಮವೂ ವಾಗ್ದಾನವೂ
15 ಪ್ರಿಯರೇ, ನಾನು ದಿನನಿತ್ಯದ ವ್ಯವಹಾರದಂತೆ ಮಾತನಾಡುತ್ತಿದ್ದೇನೆ. ಮತ್ತೊಬ್ಬನೊಡನೆ ಯಾರಾದರೂ ಒಡಂಬಡಿಕೆಯನ್ನು ಮಾಡಿಕೊಂಡು ಅದನ್ನು ಸ್ಥಿರಪಡಿಸಿದ ಮೇಲೆ ಯಾರೂ ಅದನ್ನು ರದ್ದು ಮಾಡುವುದಿಲ್ಲ, ಇಲ್ಲವೆ ಕೂಡಿಸುವುದಿಲ್ಲ. 16 ಹಾಗೆಯೇ ಅಬ್ರಹಾಮನಿಗೂ ಅವನ ಸಂತತಿಗೂ ವಾಗ್ದಾನಗಳು ಮಾಡಲಾದವು. ಅದರಲ್ಲಿ, “ನಿನ್ನ ಸಂತತಿಗಳಿಗೆ,” ಎಂದು ಹೇಳಿ ಅನೇಕರನ್ನು ಸೂಚಿಸದೆ, “ನಿನ್ನ ಸಂತತಿಗೆ,”ಆದಿ 12:7; 13:15; 24:7 ಎಂದು ಹೇಳಿದ ಒಬ್ಬರನ್ನೇ ಸೂಚಿಸಿದೆ. ಆ ಒಬ್ಬ ವ್ಯಕ್ತಿ ಕ್ರಿಸ್ತ ಯೇಸುವೇ. 17 ನಾನು ಹೇಳುವ ಮಾತಿನ ತಾತ್ಪರ್ಯ ಏನೆಂದರೆ, ದೇವರು ಸ್ಥಿರಪಡಿಸಿ ಮುಗಿಸಿದ ಒಡಂಬಡಿಕೆಯನ್ನು ನಾನೂರ ಮೂವತ್ತು ವರ್ಷಗಳ ತರುವಾಯ ಬಂದ ಮೋಶೆಯ ನಿಯಮವು ಆ ವಾಗ್ದಾನವನ್ನು ರದ್ದುಪಡಿಸಲಾಗದು ಮತ್ತು ವ್ಯರ್ಥಪಡಿಸಲಾಗದು. 18 ಏಕೆಂದರೆ ಆ ಬಾಧ್ಯತೆಯು ನಿಯಮದ ಪ್ರಕಾರವಾಗಿದ್ದರೆ, ಅದು ಇನ್ನು ವಾಗ್ದಾನದ ಮೇಲೆ ಆಧಾರವಾದದ್ದಲ್ಲ. ಆದರೆ ದೇವರು ತಮ್ಮ ಕೃಪೆಯಿಂದ ಅಬ್ರಹಾಮನಿಗೆ ವಾಗ್ದಾನದ ಮೂಲಕವೇ ಆ ಬಾಧ್ಯತೆಯನ್ನು ಕೊಟ್ಟಿದ್ದಾರೆ.
19 ಹಾಗಾದರೆ ಮೋಶೆಯ ನಿಯಮವನ್ನು ಏಕೆ ಕೊಡಲಾಯಿತು? ಅಪರಾಧಗಳ ಅರಿವನ್ನು ಮೂಡಿಸುವುದಕ್ಕಾಗಿ, ನಿಯಮವು ಸೇರಿಸಲಾಯಿತು. ಇದು ಆ ಸಂತತಿಯಾದಾತನು ಬರುವ ವಾಗ್ದಾನದ ತನಕ ಮಾತ್ರವಾಗಿರುವುದು. ಹೀಗೆ ನಿಯಮವು ದೇವದೂತರ ಮುಖಾಂತರ ಮಧ್ಯಸ್ಥನಾದ ಮೋಶೆಯ ಕೈಯಲ್ಲಿ ಕೊಡಲಾಯಿತು. 20 ಒಂದು ಪಕ್ಷಕ್ಕಿಂತಲೂ ಹೆಚ್ಚಿನವನಾಗಿದ್ದರೆ ಮಾತ್ರ ಮಧ್ಯಸ್ಥನ ಅಗತ್ಯವಿರುವುದು; ದೇವರಾದರೋ ಒಬ್ಬರೇ.
21 ಹಾಗಾದರೆ ನಿಯಮವು ದೇವರ ವಾಗ್ದಾನಗಳಿಗೆ ವಿರುದ್ಧವೋ? ಹಾಗೆ ಎಂದಿಗೂ ಆಗಬಾರದು! ಕೊಡಲಾಗಿದ್ದ ನಿಯಮವು ಒಂದು ವೇಳೆ ಜೀವವನ್ನು ನೀಡುವುದಕ್ಕೆ ಶಕ್ತಿಯುಳ್ಳದ್ದಾಗಿದ್ದರೆ, ನಿಶ್ಚಯವಾಗಿಯೂ ಮೋಶೆಯ ನಿಯಮದಿಂದ ನೀತಿವಂತರಾಗುತ್ತಿದ್ದೆವು. 22 ಆದರೆ ಸಮಸ್ತವೂ ಪಾಪದ ಅಧೀನಕ್ಕೆ ಒಳಗಾಯಿತು ಎಂದು ಪವಿತ್ರ ವೇದ ಸ್ಪಷ್ಟೀಕರಿಸುತ್ತದೆ. ಇದು ಕ್ರಿಸ್ತ ಯೇಸುವಿನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬರಿಗೂ ಮಾಡಿದ ವಾಗ್ದಾನವು ಅವರ ನಂಬಿಕೆಯ ಆಧಾರವಾಗಿ ಕೊಡಲಾಗುತ್ತದೆ.
ದೇವಪುತ್ರರು
23 ನಂಬಿಕೆ ಬರುವುದಕ್ಕೆ ಮುಂಚೆ ನಾವು ನಿಯಮದ ಅಧೀನದಲ್ಲಿ ಇದ್ದೆವು. ಬರಲಿರುವ ಆ ನಂಬಿಕೆಯು ಪ್ರಕಟವಾಗುವ ತನಕ ನಾವು ಸೆರೆಯಾದವರಂತೆ ಇದ್ದೆವು. 24 ಹೀಗಿರಲಾಗಿ ನಿಯಮವು ನಮ್ಮ ಪೋಷಕನಂತಿತ್ತು. ನಾವು ನಂಬಿಕೆಯ ಮೂಲಕ ನೀತಿವಂತರಾಗುವುದಕ್ಕಾಗಿ ಕ್ರಿಸ್ತ ಯೇಸುವಿನ ಬಳಿಗೆ ತರುವ ತನಕ ನಮ್ಮನ್ನು ಪೋಷಿಸುತ್ತದೆ. 25 ಆದರೆ ಈಗ ನಂಬಿಕೆಯು ಬಂದಿರುವುದರಿಂದ, ಇನ್ನೆಂದಿಗೂ ನಾವು ಪೋಷಕ ಎಂಬ ನಿಯಮದ ಕೆಳಗೆ ಇಲ್ಲ.
26 ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿಟ್ಟಿರುವ ನಂಬಿಕೆಯ ಮೂಲಕ ದೇವರ ಮಕ್ಕಳಾಗಿದ್ದೀರಿ. 27 ಹೇಗೆಂದರೆ, ಕ್ರಿಸ್ತ ಯೇಸುವಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡಿರುವ ನೀವೆಲ್ಲರೂ ಕ್ರಿಸ್ತನನ್ನು ಧರಿಸಿಕೊಂಡಿರಿ. 28 ನೀವೆಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಂದೇ ಆಗಿರುವುದರಿಂದ, ಯೆಹೂದ್ಯರು ಯೆಹೂದ್ಯರಲ್ಲದವರು ಎಂದೂ ದಾಸರು ಸ್ವತಂತ್ರರು ಎಂದೂ ಗಂಡು ಹೆಣ್ಣು ಎಂದೂ ಭೇದವಿಲ್ಲ. 29 ಆದರೆ ನೀವು ಕ್ರಿಸ್ತನವರಾಗಿದ್ದರೆ, ಅಬ್ರಹಾಮನ ಸಂತತಿಯವರಾಗಿದ್ದೀರಿ ಮಾತ್ರವಲ್ಲದೆ ವಾಗ್ದಾನಕ್ಕನುಸಾರವಾಗಿ ವಾರಸುದಾರರೂ ಆಗಿದ್ದೀರಿ.

*3:6 ಆದಿ 15:6

3:8 ಆದಿ 12:3; 18:18; 22:18

3:10 ಧರ್ಮೋ 27:26

§3:11 ಹಬ 2:4

*3:12 ಯಾಜಕ 18:5

3:13 ಧರ್ಮೋ 21:23

3:16 ಆದಿ 12:7; 13:15; 24:7