4
ಆದರೆ ನಾನು ಹೇಳುವುದೇನೆಂದರೆ, ವಾರಸುದಾರನು ತಾನು ಇಡೀ ಆಸ್ತಿಗೆಲ್ಲಾ ಧಣಿಯಾಗಿದ್ದರೂ ಬಾಲಕನಾಗಿರುವ ತನಕ ಅವನಿಗೂ ದಾಸನಿಗೂ ವ್ಯತ್ಯಾಸವಿರುವುದಿಲ್ಲ. ಆದರೆ ಅವನ ತಂದೆಯು ಮುಂಚಿತವಾಗಿ ನೇಮಿಸಿದ ದಿನದವರೆಗೂ ಅವನು ಪೋಷಕರ ಹಾಗೂ ಆಡಳಿತಗಾರರ ಕೈಕೆಳಗಿರುವನು. ಅದರಂತೆಯೇ ನಾವು ಬಾಲಕರಾಗಿದ್ದಾಗ ಲೋಕದ ಮೂಲಪಾಠಗಳಿಗೆ ಗುಲಾಮರಾಗಿದ್ದೆವು. ಆದರೆ ನಿಯಮಿತ ಕಾಲವು ಪರಿಪೂರ್ಣವಾದಾಗ, ದೇವರು ತಮ್ಮ ಮಗನನ್ನು ಸ್ತ್ರೀಯಿಂದ ಹುಟ್ಟಿದವನಾಗಿಯೂ ನಿಯಮಕ್ಕೆ ಒಳಗಾದವನನ್ನಾಗಿಯೂ ಕಳುಹಿಸಿಕೊಟ್ಟರು. ಹೀಗೆ ದೇವರು ನಿಯಮಕ್ಕೆ ಒಳಗಾದ ನಮ್ಮನ್ನು ವಿಮೋಚಿಸಿ, ನಾವು ಪುತ್ರರ ಸ್ಥಾನವನ್ನು ಹೊಂದುವಂತೆ ಮಾಡಿದರು. ನೀವು ದೇವರ ಪುತ್ರರಾಗಿರುವುದರಿಂದ, ದೇವರು ತಮ್ಮ ಪುತ್ರ ಆಗಿರುವವರ ಆತ್ಮನನ್ನು ನಮ್ಮ ಹೃದಯಗಳಲ್ಲಿ ಕಳುಹಿಸಿ, “ಅಪ್ಪಾ ತಂದೆಯೇ!” ಎಂದು ಕರೆಯುವಂತೆ ಮಾಡಿದ್ದಾರೆ. ಹೀಗಿರುವಲ್ಲಿ ಇನ್ನು ನೀನು ದಾಸನಲ್ಲ ಪುತ್ರನಾಗಿದ್ದೀ. ನೀನು ದೇವರ ಮಗು ಎಂದ ಮೇಲೆ ದೇವರ ಮೂಲಕ ವಾರಸುದಾರನೂ ಆಗಿದ್ದೀ.
ಗಲಾತ್ಯದವರ ಬಗ್ಗೆ ಪೌಲನ ಚಿಂತೆ
ಮುಂಚೆ ನೀವು ದೇವರನ್ನು ಅರಿಯದವರಾಗಿದ್ದಾಗ, ಸ್ವಾಭಾವಿಕವಾಗಿ ದೇವರಲ್ಲದವುಗಳಿಗೆ ನೀವು ಗುಲಾಮರಾಗಿದ್ದೀರಿ. ಈಗಲಾದರೋ ನೀವು ದೇವರನ್ನು ಅರಿತುಕೊಂಡಿದ್ದೀರಿ. ನಿಜವಾಗಿ ಹೇಳಬೇಕಾದರೆ, ದೇವರು ನಿಮ್ಮನ್ನು ಅರಿತುಕೊಂಡಿದ್ದಾರೆ. ಹೀಗಿರಲಾಗಿ ನೀವು ಬಲಹೀನವಾದ ದರಿದ್ರ ಮೂಲಪಾಠಗಳಿಗೆ ಪುನಃ ಗುಲಾಮರಾಗಬೇಕೆಂದು ಅಪೇಕ್ಷಿಸಿ, ಅವುಗಳಿಗೆ ನೀವು ತಿರುಗಿಕೊಳ್ಳುವುದು ಹೇಗೆ? 10 ನೀವು ದಿನಗಳನ್ನೂ ಮಾಸಗಳನ್ನೂ ಕಾಲಗಳನ್ನೂ ಸಂವತ್ಸರಗಳನ್ನೂ ಆಚರಿಸುತ್ತೀರಿ. 11 ನಾವು ನಿಮ್ಮ ಮಧ್ಯದಲ್ಲಿ ಪ್ರಯಾಸಪಟ್ಟದ್ದು ವ್ಯರ್ಥವಾಯಿತೇನೋ ಎಂದು ನಿಮ್ಮ ವಿಷಯದಲ್ಲಿ ನಾನು ಭಯಪಡುತ್ತೇನೆ.
12 ಪ್ರಿಯರೇ, ನಾನು ನಿಮ್ಮ ಹಾಗೆ ಆದ್ದರಿಂದ ನೀವು ನನ್ನ ಹಾಗೆ ಆಗಬೇಕೆಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ. ನೀವು ನನಗೆ ಯಾವ ಕೇಡನ್ನೂ ಮಾಡಲಿಲ್ಲ. 13 ನಾನು ಮುಂಚೆ ನಿಮಗೆ ಸುವಾರ್ತೆ ಸಾರಿದ್ದು, ನನ್ನ ಶರೀರದ ಬಲಹೀನತೆಯಿಂದ ಎಂದು ನೀವು ಬಲ್ಲಿರಿ. 14 ನನ್ನ ದೇಹಸ್ಥಿತಿ ನಿಮಗೆ ಬೇಸರಗೊಳಿಸುವುದಾಗಿದ್ದರೂ ನೀವು ನನ್ನನ್ನು ಹೀನೈಸಲಿಲ್ಲ, ತಿರಸ್ಕರಿಸಲಿಲ್ಲ. ಆದರೆ ನನ್ನನ್ನು ದೇವದೂತನಂತೆಯೂ ಕ್ರಿಸ್ತ ಯೇಸುವಿನಂತೆಯೂ ಸೇರಿಸಿಕೊಂಡಿರಿ. 15 ನೀವು ಕೋರಿದ ಆ ಶುಭವೆಲ್ಲಿ? ಸಾಧ್ಯವಾಗಿದ್ದರೆ ನಿಮ್ಮ ಕಣ್ಣುಗಳನ್ನೇ ಕಿತ್ತು ನನಗೆ ಕೊಡುತ್ತಿದ್ದಿರಿ ಎಂದು ನಿಮ್ಮ ವಿಷಯವಾಗಿ ನಾನು ಸಾಕ್ಷಿಕೊಡುತ್ತೇನೆ. 16 ಹೀಗಿರಲಾಗಿ ಸತ್ಯವನ್ನು ಹೇಳಿದ್ದರಿಂದ ನಾನು ನಿಮಗೆ ಶತ್ರುವಾಗಿಬಿಟ್ಟೆನೋ?
17 ಅವರು ನಿಮ್ಮನ್ನು ಆಕರ್ಷಿಸಲು ಆಸಕ್ತರಾಗಿದ್ದಾರೆ. ಆದರೆ ಒಳ್ಳೆಯ ಅಭಿಪ್ರಾಯದಿಂದ ಅಲ್ಲ. ನೀವು ಅವರ ವಿಷಯದಲ್ಲಿ ಆಸಕ್ತರಾಗಬೇಕೆಂದು ಅವರು ನಿಮ್ಮನ್ನು ನಮ್ಮಿಂದ ಪ್ರತ್ಯೇಕಿಸುವುದಕ್ಕೆ ಅಪೇಕ್ಷಿಸುತ್ತಾರೆ. 18 ನಾನು ನಿಮ್ಮ ಸಂಗಡ ಇರುವಾಗ ಮಾತ್ರವಲ್ಲದೆ ಯಾವಾಗಲೂ ಉತ್ತಮ ಕಾರ್ಯಗಳಲ್ಲಿ ನೀವು ಆಸಕ್ತರಾಗಿರುವುದು ಒಳ್ಳೆಯದು. 19 ನನ್ನ ಮಕ್ಕಳೇ, ಕ್ರಿಸ್ತ ಯೇಸುವು ನಿಮ್ಮಲ್ಲಿ ರೂಪುಗೊಳ್ಳುವ ತನಕ ನಾನು ನಿಮಗಾಗಿ ಪುನಃ ಪ್ರಸವವೇದನೆ ಪಡುತ್ತೇನೆ. 20 ನಾನು ಈಗ ನಿಮ್ಮ ಜೊತೆಯಲ್ಲಿದ್ದು ನನ್ನ ಸ್ವರವನ್ನು ಬದಲಾಯಿಸಬೇಕೆಂದು ಅಪೇಕ್ಷಿಸುತ್ತೇನೆ, ಏಕೆಂದರೆ, ನಾನು ನಿಮ್ಮ ವಿಷಯದಲ್ಲಿ ಚಿಂತಿಸುವವನಾಗಿದ್ದೇನೆ.
ಹಾಗರ್ ಮತ್ತು ಸಾರಳು
21 ಮೋಶೆಯ ನಿಯಮದ ಕೆಳಗಿರಲು ಬಯಸುವವರೇ, ನಿಯಮವು ಏನು ಹೇಳುತ್ತದೆಯೆಂದು ನೀವು ಸ್ಪಷ್ಟವಾಗಿ ಅರ್ಥಮಾಡಿಕೊಂಡಿದ್ದೀರಾ? ನನಗೆ ಹೇಳಿರಿ. 22 ಏಕೆಂದರೆ ದಾಸಿಯಿಂದ ಒಬ್ಬನು, ಧರ್ಮಪತ್ನಿಯಿಂದ ಒಬ್ಬನು ಹೀಗೆ ಅಬ್ರಹಾಮನಿಗೆ ಇಬ್ಬರು ಪುತ್ರರಿದ್ದರೆಂದು ಪವಿತ್ರ ವೇದದಲ್ಲಿ ಬರೆದಿದೆ. 23 ದಾಸಿಯ ಮಗನು ಶಾರೀರಿಕವಾಗಿ ಹುಟ್ಟಿದವನು. ಆದರೆ ಧರ್ಮಪತ್ನಿಯ ಮಗನಾದರೋ ದೇವರ ವಾಗ್ದಾನದ ಮೂಲಕ ಹುಟ್ಟಿದನು.
24 ಈ ಸಂಗತಿಗಳು ಉಪಮಾನವಾಗಿವೆ. ಹೇಗೆಂದರೆ, ಇವರು ಎರಡು ಒಡಂಬಡಿಕೆಗಳೇ. ಒಂದು ಒಡಂಬಡಿಕೆ ಸೀನಾಯಿ ಪರ್ವತದಿಂದ ಉಂಟಾಗಿ ದಾಸತ್ವದಲ್ಲಿರಬೇಕಾದ ಮಕ್ಕಳನ್ನು ಹೆರುವಂಥದು. ಅದೇ ಹಾಗರ್. 25 ಹಾಗರ್ ಅರೇಬಿಯಾದಲ್ಲಿರುವ ಸೀನಾಯಿ ಪರ್ವತ. ಅದು ಈಗಿನ ಯೆರೂಸಲೇಮಿಗೆ ಸರಿಹೊಂದುತ್ತಾಳೆ. ಏಕೆಂದರೆ ಆಕೆಯು ಈಗಲೂ ತನ್ನ ಮಕ್ಕಳ ಸಹಿತ ದಾಸ್ಯದಲ್ಲಿದ್ದಾಳೆ. 26 ಆದರೆ ಸ್ವರ್ಗೀಯ ಯೆರೂಸಲೇಮ್ ಸ್ವತಂತ್ರಳು. ಈಕೆಯೇ ನಮ್ಮ ತಾಯಿ. 27 ಏಕೆಂದರೆ,
“ಬಂಜೆಯೇ, ಹೆರದವಳೇ, ಆನಂದಿಸು.
ಪ್ರಸವವೇದನೆ ಪಡದವಳೇ,
ಸ್ವರವೆತ್ತಿ ಹರ್ಷದಿಂದ ಸ್ವರವೆತ್ತಿ ಕೂಗು;
ಗಂಡನುಳ್ಳವಳಿಗಿಂತ ಗಂಡ ಬಿಟ್ಟವಳಿಗೆ
ಎಷ್ಟೋ ಹೆಚ್ಚು ಮಕ್ಕಳಿದ್ದಾರೆ,”*ಯೆಶಾಯ 54:1
ಎಂದು ಪವಿತ್ರ ವೇದದಲ್ಲಿ ಬರೆದಿದೆ.
28 ಪ್ರಿಯರೇ, ನಾವು ಇಸಾಕನಂತೆ ವಾಗ್ದಾನದ ಮಕ್ಕಳಾಗಿದ್ದೇವೆ. 29 ಆದರೆ ಆಗ ಶರೀರಕ್ಕನುಸಾರವಾಗಿ ಹುಟ್ಟಿದವನು ಆತ್ಮಕ್ಕನುಸಾರವಾಗಿ ಹುಟ್ಟಿದವನನ್ನು ಹಿಂಸೆಪಡಿಸಿದಂತೆಯೇ, ಈಗಲೂ ನಡೆಯುತ್ತದೆ. 30 ಆದರೆ ಪವಿತ್ರ ವೇದವು ಏನು ಹೇಳುತ್ತದೆ? “ದಾಸಿಯನ್ನೂ, ಅವಳ ಮಗನನ್ನೂ ಹೊರಗೆ ಹಾಕು. ಏಕೆಂದರೆ ದಾಸಿಯ ಮಗನು ಧರ್ಮಪತ್ನಿಯ ಮಗನೊಂದಿಗೆ ಎಂದಿಗೂ ವಾರಸುದಾರನಾಗಬಾರದು.”ಆದಿ 21:10 ಎಂದಲ್ಲವೇ? 31 ಹೀಗಿರುವಲ್ಲಿ ಪ್ರಿಯರೇ, ನಾವು ದಾಸಿಯ ಮಕ್ಕಳಲ್ಲ, ಧರ್ಮಪತ್ನಿಯ ಮಕ್ಕಳೇ ಆಗಿದ್ದೇವೆ.

*4:27 ಯೆಶಾಯ 54:1

4:30 ಆದಿ 21:10