ಯೋಹಾನನು
ಬರೆದ ಸುವಾರ್ತೆ
1
ವಾಕ್ಯವು ದೇಹಧಾರಿಯಾದದ್ದು
ಆದಿಯಲ್ಲಿ ವಾಕ್ಯವಿತ್ತು, ಆ ವಾಕ್ಯವು ದೇವರ ಬಳಿಯಲ್ಲಿತ್ತು, ಆ ವಾಕ್ಯವು ದೇವರಾಗಿತ್ತು. ಆ ವಾಕ್ಯವೆಂಬುವವರು ಆದಿಯಲ್ಲಿ ದೇವರ ಬಳಿಯಲ್ಲಿದ್ದರು. ಆ ವಾಕ್ಯವೆಂಬುವವರ ಮೂಲಕವಾಗಿಯೇ ಸಮಸ್ತವೂ ಸೃಷ್ಟಿಯಾಯಿತು. ಸೃಷ್ಟಿಯಾದವುಗಳಲ್ಲಿ ಯಾವುದೂ ಅವರಿಲ್ಲದೆ ಸೃಷ್ಟಿಯಾಗಲಿಲ್ಲ. ಅವರಲ್ಲಿ ಜೀವವಿತ್ತು. ಆ ಜೀವವು ಮಾನವರಿಗೆ ಬೆಳಕಾಗಿತ್ತು. ಆ ಬೆಳಕು ಕತ್ತಲಲ್ಲಿ ಪ್ರಕಾಶಿಸುತ್ತದೆ. ಕತ್ತಲೆಯು ಆ ಬೆಳಕನ್ನು ಅಡಗಿಸಲಿಲ್ಲ.
ದೇವರು ಕಳುಹಿಸಿದ ಒಬ್ಬ ಮನುಷ್ಯನಿದ್ದನು. ಅವನ ಹೆಸರು ಯೋಹಾನನು. ತನ್ನ ಮೂಲಕ ಎಲ್ಲರು ವಿಶ್ವಾಸವಿಡುವಂತೆ ಅವನು ಆ ಬೆಳಕಿನ ವಿಷಯದಲ್ಲಿ ಸಾಕ್ಷಿ ಕೊಡಲು ಯೋಹಾನನು ಸಾಕ್ಷಿಯಾಗಿ ಬಂದನು. ಅವನೇ ಆ ಬೆಳಕಾಗಿರಲಿಲ್ಲ. ಆ ಬೆಳಕಿನ ವಿಷಯದಲ್ಲಿ ಸಾಕ್ಷಿಯಾಗಿ ಬಂದನಷ್ಟೇ.
ನಿಜ ಬೆಳಕು ಲೋಕಕ್ಕೆ ಬರುವುದಾಗಿತ್ತು. ಆ ಬೆಳಕೇ ಪ್ರತಿ ಮಾನವನಿಗೂ ಬೆಳಕನ್ನು ನೀಡುವುದಾಗಿತ್ತು. 10 ಆ ವಾಕ್ಯವೆಂಬುವವರು ಲೋಕದಲ್ಲಿದ್ದರು ಮತ್ತು ಲೋಕವು ಅವರ ಮೂಲಕ ಉಂಟಾಯಿತು. ಆದರೂ ಲೋಕವು ಅವರ ಗುರುತು ಹಿಡಿಯಲಿಲ್ಲ. 11 ಅವರು ತಮ್ಮ ಸ್ವಜನರ ಬಳಿಗೆ ಬಂದರು. ಆದರೆ ಸ್ವಜನರೇ ಅವರನ್ನು ಸ್ವೀಕರಿಸಲಿಲ್ಲ. 12 ಆದರೂ ಯಾರಾರು ಅವರನ್ನು ಸ್ವೀಕರಿಸಿದರೋ, ಅಂದರೆ ಅವರ ಹೆಸರಿನಲ್ಲಿ ವಿಶ್ವಾಸವಿಟ್ಟರೋ ಅವರೆಲ್ಲರಿಗೆ ದೇವರ ಮಕ್ಕಳಾಗುವ ಅಧಿಕಾರವನ್ನು ಕೊಟ್ಟರು. 13 ಇವರು ರಕ್ತಸಂಬಂಧದಿಂದಾಗಲಿ, ದೈಹಿಕ ಇಚ್ಛೆಯಿಂದಾಗಲಿ, ಪುರುಷನ ಇಚ್ಛೆಯಿಂದಾಗಲಿ ಹುಟ್ಟಿದವರಲ್ಲ, ದೇವರಿಂದಲೇ ಹುಟ್ಟಿದವರು.
14 ವಾಕ್ಯವೆಂಬುವವರು ದೇಹಧಾರಿಯಾಗಿ ನಮ್ಮ ಮಧ್ಯದಲ್ಲಿ ವಾಸಿಸಿದರು. ನಾವು ಅವರ ಮಹಿಮೆಯನ್ನು ಕಂಡೆವು. ಆ ಮಹಿಮೆಯು ತಂದೆಯಿಂದ ಬಂದ ಏಕೈಕ ಪುತ್ರ ಆಗಿರುವವರಿಗೆ ಇರತಕ್ಕ ಮಹಿಮೆ. ಆ ವಾಕ್ಯವೆಂಬುವವರು ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವರಾಗಿದ್ದರು.
15 “ಅವರನ್ನು ಕುರಿತು ಯೋಹಾನನು ಸಾಕ್ಷಿ ಕೊಡುತ್ತಾ, ‘ನನ್ನ ಬಳಿಕ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು’ ಎಂದು ನಾನು ಹೇಳಿದವರು ಇವರೇ,” ಎಂದು ಘೋಷಿಸಿದನು. 16 ಅವರ ಪರಿಪೂರ್ಣತೆಯಿಂದ ನಾವೆಲ್ಲರೂ ಕೃಪೆಯ ಮೇಲೆ ಕೃಪೆಯನ್ನು ಪಡೆದೆವು. 17 ಏಕೆಂದರೆ ನಿಯಮವು ಮೋಶೆಯ ಮೂಲಕ ಕೊಡಲಾಯಿತು. ಕೃಪೆಯೂ ಸತ್ಯವೂ ಕ್ರಿಸ್ತ ಯೇಸುವಿನ ಮೂಲಕ ಬಂದವು. 18 ದೇವರನ್ನು ಯಾರೂ ಎಂದೂ ಕಂಡಿಲ್ಲ; ತಂದೆ ದೇವರ ಹೃದಯಕ್ಕೆ ಹತ್ತಿರವಾಗಿರುವ ಏಕೈಕ ಪುತ್ರ ಆಗಿರುವವರೂ ಸ್ವತಃ ದೇವರೂ ಆಗಿರುವವರೂ ತಂದೆಯನ್ನು ಪ್ರಕಟಪಡಿಸಿದ್ದಾರೆ.
ಸ್ನಾನಿಕ ಯೋಹಾನನು ತಾನು ಕ್ರಿಸ್ತ ಅಲ್ಲ ಎಂದು ಪ್ರಕಟಿಸುವುದು
19 ಯೆರೂಸಲೇಮಿನ ಯೆಹೂದ್ಯ ನಾಯಕರು, ಯಾಜಕರನ್ನು ಮತ್ತು ಲೇವಿಯರನ್ನು ಯೋಹಾನನ ಬಳಿಗೆ ಕಳುಹಿಸಿ, “ನೀನು ಯಾರು?” ಎಂದು ಕೇಳಿದರು. 20 ಅದಕ್ಕೆ ಯೋಹಾನನು, “ನಾನು ಕ್ರಿಸ್ತನಲ್ಲ” ಎಂದು ಅರಿಕೆಮಾಡಿ ಸಾಕ್ಷಿಕೊಟ್ಟನು.
21 ಅದಕ್ಕೆ ಅವರು, “ಹಾಗಾದರೆ ನೀನು ಎಲೀಯನೋ?” ಎಂದು ಕೇಳಿದರು.
ಅದಕ್ಕೆ ಅವನು, “ನಾನು ಎಲೀಯನಲ್ಲ.”
“ನೀನು ಆ ಪ್ರವಾದಿಯೋ?” ಎಂದು ಕೇಳಿದರು.
ಅದಕ್ಕೆ ಅವನು, “ಅಲ್ಲ” ಎಂದನು.
22 ಅವರು, “ನೀನು ಯಾರು? ನಮ್ಮನ್ನು ಕಳುಹಿಸಿದವರಿಗೆ ನಾವು ಉತ್ತರ ಕೊಡುವಂತೆ ನಿನ್ನ ವಿಷಯವಾಗಿ ನೀನು ಏನು ಹೇಳುತ್ತೀ?” ಎಂದು ಕೇಳಿದರು.
23 ಅದಕ್ಕೆ ಯೋಹಾನನು, “ಪ್ರವಾದಿ ಯೆಶಾಯನು ಹೇಳಿದಂತೆ, ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವೇ ನಾನು,*ಯೆಶಾಯ 40:3” ಎಂದು ಹೇಳಿದನು.
24 ಬಂದಿದ್ದವರು ಫರಿಸಾಯರ ಕಡೆಯವರಾಗಿದ್ದರು. 25 ಅವರು ಯೋಹಾನನಿಗೆ, “ನೀನು ಕ್ರಿಸ್ತ ಇಲ್ಲವೆ ಎಲೀಯನಾಗಲಿ, ಆ ಪ್ರವಾದಿಯಾಗಲಿ ಆಗಿರದಿದ್ದರೆ ನೀನು ದೀಕ್ಷಾಸ್ನಾನ ಕೊಡುವುದೇಕೆ?” ಎಂದು ಪ್ರಶ್ನಿಸಿದರು.
26 ಅದಕ್ಕೆ ಯೋಹಾನನು, “ನಾನು ನೀರಿನಿಂದ ದೀಕ್ಷಾಸ್ನಾನ ಮಾಡಿಸುತ್ತೇನೆ. ಆದರೆ ನೀವು ಅರಿಯದ ಒಬ್ಬ ವ್ಯಕ್ತಿ ನಿಮ್ಮ ನಡುವೆ ಇದ್ದಾರೆ. 27 ಅವರೇ ನನ್ನ ಬಳಿಕ ಬರುವವರು. ಅವರ ಪಾದರಕ್ಷೆಗಳ ದಾರವನ್ನು ಬಿಚ್ಚುವುದಕ್ಕೂಆ ಕಾಲದಲ್ಲಿ ಈ ಕೆಲಸವನ್ನು ಗುಲಾಮರು ಮಾಡುತ್ತಿದ್ದರು ನಾನು ಯೋಗ್ಯನಲ್ಲ,” ಎಂದು ಉತ್ತರಕೊಟ್ಟನು.
28 ಇದೆಲ್ಲಾ ಯೋಹಾನನು ದೀಕ್ಷಾಸ್ನಾನ ಮಾಡಿಸುತ್ತಿದ್ದ ಯೊರ್ದನ್ ನದಿಯ ಆಚೆಕಡೆಯಲ್ಲಿರುವ ಬೇಥಾನ್ಯದಲ್ಲಿ ನಡೆಯಿತು.
ಯೋಹಾನನು ಕ್ರಿಸ್ತ ಯೇಸುವಿನ ಬಗ್ಗೆ ಸಾಕ್ಷಿ ಹೇಳಿದ್ದು
29 ಮರುದಿನ ಯೇಸು ತನ್ನ ಕಡೆಗೆ ಬರುತ್ತಿರುವುದನ್ನು ಯೋಹಾನನು ಕಂಡು, “ಇಗೋ, ಲೋಕದ ಪಾಪವನ್ನು ತೆಗೆದುಹಾಕುವ ದೇವರ ಕುರಿಮರಿ, 30 ‘ನನ್ನ ತರುವಾಯ ಬರುವವರು ನನಗಿಂತ ಮೊದಲೇ ಇದ್ದುದರಿಂದ ಅವರು ನನಗಿಂತಲೂ ಶ್ರೇಷ್ಠರು,’ ಎಂದು ನಾನು ಹೇಳಿದವರು ಇವರೇ. 31 ನನಗೂ ಇವರ ಗುರುತಿರಲಿಲ್ಲ. ಆದರೆ ಇವರನ್ನು ಇಸ್ರಾಯೇಲರಿಗೆ ಪ್ರಕಟಪಡಿಸುವುದಕ್ಕೊಸ್ಕರ ನಾನು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸುತ್ತಾ ಬಂದೆನು,” ಎಂದು ಹೇಳಿದನು.
32 ಯೋಹಾನನು ಸಾಕ್ಷಿಕೊಟ್ಟು, “ಪವಿತ್ರಾತ್ಮರು ಪರಲೋಕದಿಂದ ಪಾರಿವಾಳದಂತೆ ಇಳಿದುಬಂದು ಯೇಸುವಿನ ಮೇಲೆ ನೆಲೆಗೊಂಡಿರುವುದನ್ನು ನಾನು ಕಂಡೆನು. 33 ನನಗೂ ಅವರ ಗುರುತಿರಲಿಲ್ಲ. ಆದರೆ ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಲು ನನ್ನನ್ನು ಕಳುಹಿಸಿದವರು, ‘ಯಾರ ಮೇಲೆ ಪವಿತ್ರಾತ್ಮರು ಇಳಿದುಬಂದು ನೆಲೆಸುವುದನ್ನು ನೀನು ನೋಡುವಿಯೋ ಅವರೇ ಪವಿತ್ರಾತ್ಮರಿಂದ ದೀಕ್ಷಾಸ್ನಾನ ಮಾಡಿಸುವವರು,’ ಎಂದು ತಿಳಿಸಿದರು. 34 ಈಗ ನಾನು ಕಂಡು, ಇವರೇ ದೇವರ ಪುತ್ರರುಕೆಲವು ಪ್ರತಿಗಳಲ್ಲಿ ದೇವರಿಂದ ಆಯ್ಕೆಯಾದವನು ಎಂದಿದೆ. ಎಂದು ಸಾಕ್ಷಿ ನೀಡುತ್ತಿದ್ದೇನೆ,” ಎಂದು ಹೇಳಿದನು.
ಯೇಸುವಿನ ಪ್ರಥಮ ಶಿಷ್ಯರು
35 ಮರುದಿನ ಯೋಹಾನನು ಪುನಃ ತನ್ನ ಶಿಷ್ಯರಲ್ಲಿ ಇಬ್ಬರೊಂದಿಗೆ ನಿಂತುಕೊಂಡಿದ್ದನು. 36 ಆಗ ಯೇಸು ಹೋಗುತ್ತಿರುವುದನ್ನು ಕಂಡು ಅವನು, “ಇಗೋ, ದೇವರ ಕುರಿಮರಿ,” ಎಂದು ಹೇಳಿದನು.
37 ಆ ಇಬ್ಬರು ಶಿಷ್ಯರು ಅವನು ಹೇಳಿದ್ದನ್ನು ಕೇಳಿ ಯೇಸುವನ್ನು ಹಿಂಬಾಲಿಸಿದರು. 38 ಯೇಸು ಹಿಂತಿರುಗಿ ತನ್ನನ್ನು ಹಿಂಬಾಲಿಸುತ್ತಿದ್ದ ಅವರನ್ನು ನೋಡಿ, “ನಿಮಗೆ ಏನು ಬೇಕು?” ಎಂದು ಕೇಳಲು,
ಅವರು, “ಬೋಧಕರೇ, ನೀವು ವಾಸಿಸುವುದು ಎಲ್ಲಿ?” ಎಂದು ಕೇಳಿದರು.
39 ಯೇಸು ಅವರಿಗೆ, “ಬಂದು ನೋಡಿರಿ,” ಎಂದು ಹೇಳಲು,
ಅವರು ಹೋಗಿ ಯೇಸು ವಾಸಿಸುತ್ತಿದ್ದ ಸ್ಥಳವನ್ನು ಕಂಡು ಆ ದಿವಸ ಅವರ ಸಂಗಡ ಇದ್ದರು. ಆಗ ಸಂಜೆ ಸುಮಾರು ನಾಲ್ಕು ಗಂಟೆಯಾಗಿತ್ತು.
40 ಯೋಹಾನನ ಮಾತನ್ನು ಕೇಳಿ ಯೇಸುವನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್ ಪೇತ್ರನ ಸಹೋದರ ಅಂದ್ರೆಯನು ಒಬ್ಬನಾಗಿದ್ದನು. 41 ಅಂದ್ರೆಯನು ಮೊದಲು ತನ್ನ ಸಹೋದರ ಸೀಮೋನನನ್ನು ಕಂಡು, “ನಾವು ಮೆಸ್ಸೀಯ ಆಗಿರುವವರನ್ನು ಕಂಡೆವು,” ಎಂದು ಹೇಳಿ, 42 ಅವನನ್ನು ಯೇಸುವಿನ ಬಳಿಗೆ ಕರೆತಂದನು. “ಮೆಸ್ಸೀಯ” ಎಂದರೆ ಕ್ರಿಸ್ತ ಎಂದು ಅರ್ಥ.
ಯೇಸು ಅವನನ್ನು ನೋಡಿ, “ನೀನು ಯೋಹಾನನ ಮಗ ಸೀಮೋನನು. ನಿನ್ನನ್ನು ‘ಕೇಫ’ ಎಂದು ಕರೆಯುವರು,” ಎಂದು ಹೇಳಿದರು. “ಕೇಫ” ಎಂದರೆ ಪೇತ್ರ ಇಲ್ಲವೆ ಬಂಡೆ ಎಂದರ್ಥ.
ಯೇಸು ಫಿಲಿಪ್ಪನನ್ನು ಮತ್ತು ನತಾನಯೇಲನನ್ನು ಕರೆದದ್ದು
43 ಯೇಸು ಮರುದಿನ ಗಲಿಲಾಯಕ್ಕೆ ಹೋಗಬೇಕೆಂದಿದ್ದಾಗ, ಅವರು ಫಿಲಿಪ್ಪನನ್ನು ಕಂಡು, “ನನ್ನನ್ನು ಹಿಂಬಾಲಿಸು,” ಎಂದರು.
44 ಫಿಲಿಪ್ಪನು, ಅಂದ್ರೆಯ ಮತ್ತು ಪೇತ್ರನ ಪಟ್ಟಣವಾದ ಬೇತ್ಸಾಯಿದಕ್ಕೆ ಸೇರಿದವನು. 45 ಫಿಲಿಪ್ಪನು ನತಾನಯೇಲನನ್ನು ಕಂಡು, “ಮೋಶೆಯ ನಿಯಮದಲ್ಲಿ ಸೂಚಿಸಿದವರೂ ಪ್ರವಾದಿಗಳೂ ಯಾರನ್ನು ಕುರಿತು ಬರೆದಿದ್ದಾರೋ ಅವರು ನಮಗೆ ಸಿಕ್ಕಿದ್ದಾರೆ. ಅವರೇ ಯೋಸೇಫನ ಪುತ್ರರಾಗಿರುವ ನಜರೇತಿನ ಯೇಸು,” ಎಂದನು.
46 “ಏನು? ನಜರೇತಿನಿಂದ ಒಳ್ಳೆಯದೇನಾದರೂ ಬರಲು ಸಾಧ್ಯವೋ?” ಎಂದು ನತಾನಯೇಲನು ಕೇಳಲು,
“ಬಂದು ನೋಡು,” ಎಂದು ಫಿಲಿಪ್ಪನು ಹೇಳಿದನು.
47 ನತಾನಯೇಲನು ತಮ್ಮ ಬಳಿಗೆ ಬರುವುದನ್ನು ಯೇಸು ಕಂಡು ಅವನ ವಿಷಯವಾಗಿ, “ಇವನು ನಿಜವಾದ ಇಸ್ರಾಯೇಲನು, ಇವನಲ್ಲಿ ಕಪಟವಿಲ್ಲ,” ಎಂದು ಹೇಳಿದರು.
48 ಅದಕ್ಕೆ ನತಾನಯೇಲನು, “ನೀವು ನನ್ನನ್ನು ಹೇಗೆ ಬಲ್ಲಿರಿ?” ಎಂದು ಕೇಳಲು,
ಯೇಸು ಅವನಿಗೆ, “ಫಿಲಿಪ್ಪನು ನಿನ್ನನ್ನು ಕರೆಯುವುದಕ್ಕಿಂತ ಮುಂಚೆಯೇ ನೀನು ಅಂಜೂರದ ಮರದ ಕೆಳಗಿರುವುದನ್ನು ನಾನು ಕಂಡೆನು,” ಎಂದು ಉತ್ತರಿಸಿದರು.
49 ಅದಕ್ಕೆ ನತಾನಯೇಲನು, “ಗುರುವೇ, ನೀವು ದೇವಪುತ್ರ; ಇಸ್ರಾಯೇಲಿನ ಅರಸ ನೀವೇ,” ಎಂದನು.
50 ಯೇಸು ಅವನಿಗೆ, “ನಿನ್ನನ್ನು ಅಂಜೂರದ ಮರದ ಕೆಳಗೆ ಕಂಡಿದ್ದೆ ಎಂದು ನಾನು ಹೇಳಿದ್ದಕ್ಕೆ ನೀನು ನಂಬುತ್ತೀಯೋ? ನೀನು ಇವುಗಳಿಗಿಂತಲೂ ಮಹಾಕಾರ್ಯಗಳನ್ನು ಕಾಣುವೆ,” ಎಂದು ಉತ್ತರಿಸಿದರು. 51 ಯೇಸು ಅವನಿಗೆ, “ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ, ನೀವು ಪರಲೋಕವು ತೆರೆದಿರುವುದನ್ನೂ ದೇವದೂತರು ಮನುಷ್ಯಪುತ್ರನಾದ ನನ್ನ ಮುಖಾಂತರ ಇಳಿಯುತ್ತಾ ಏರುತ್ತಾ ಇರುವುದನ್ನೂ ಕಾಣುವಿರಿ,”§ಆದಿ 28:12 ಎಂದು ಹೇಳಿದರು.

*1:23 ಯೆಶಾಯ 40:3

1:27 ಆ ಕಾಲದಲ್ಲಿ ಈ ಕೆಲಸವನ್ನು ಗುಲಾಮರು ಮಾಡುತ್ತಿದ್ದರು

1:34 ಕೆಲವು ಪ್ರತಿಗಳಲ್ಲಿ ದೇವರಿಂದ ಆಯ್ಕೆಯಾದವನು ಎಂದಿದೆ.

§1:51 ಆದಿ 28:12