2
ಯೇಸು ನೀರನ್ನು ದ್ರಾಕ್ಷಾರಸವನ್ನಾಗಿ ಮಾರ್ಪಡಿಸಿದ್ದು
1 ಮೂರನೆಯ ದಿನದಲ್ಲಿ ಗಲಿಲಾಯದ ಕಾನಾ ಎಂಬ ಊರಿನಲ್ಲಿ ಒಂದು ಮದುವೆ ನಡೆಯಿತು. ಯೇಸುವಿನ ತಾಯಿ ಅಲ್ಲಿ ಇದ್ದಳು. 2 ಯೇಸು ಮತ್ತು ಅವರ ಶಿಷ್ಯರು ಮದುವೆಗೆ ಆಮಂತ್ರಿತರಾಗಿದ್ದರು. 3 ಅಲ್ಲಿ ದ್ರಾಕ್ಷಾರಸವು ಮುಗಿದು ಹೋದಾಗ, ಯೇಸುವಿನ ತಾಯಿ, “ಅವರಲ್ಲಿ ದ್ರಾಕ್ಷಾರಸ ಮುಗಿದು ಹೋಗಿದೆ,” ಎಂದು ಯೇಸುವಿಗೆ ತಿಳಿಸಿದಳು.
4 ಯೇಸು ಆಕೆಗೆ, “ಅಮ್ಮಾ,*ಗ್ರೀಕ್ ಭಾಷೆಯಲ್ಲಿ ಸ್ತ್ರೀ ನಾನು ನಿಮಗೆ ಏನು ಮಾಡಲು ಬಯಸುತ್ತೀರಿ? ನನ್ನ ಸಮಯವು ಇನ್ನೂ ಬಂದಿಲ್ಲ,” ಎಂದು ಹೇಳಿದರು.
5 ಯೇಸುವಿನ ತಾಯಿಯು ಸೇವಕರಿಗೆ, “ಆತನು ನಿಮಗೆ ಹೇಳಿದಂತೆ ಮಾಡಿರಿ,” ಎಂದು ಹೇಳಿದಳು.
6 ಯೆಹೂದ್ಯರ ಶುದ್ಧಾಚಾರದ ಪ್ರಕಾರ ಅಲ್ಲಿ ಕಲ್ಲಿನ ಆರು ಬಾನೆಗಳು ಇದ್ದವು. ಪ್ರತಿಯೊಂದು ಬಾನೆಯೂ ಎರಡು ಇಲ್ಲವೆ ಮೂರು ಕೊಡದ ಅಳತೆಯುಳ್ಳದ್ದಾಗಿತ್ತು.†ಸುಮಾರು 75 ಲೀಟರಿಂದ 115 ಲೀಟರ್
7 ಯೇಸು ಸೇವಕರಿಗೆ, “ಆ ಬಾನೆಗಳಲ್ಲಿ ನೀರು ತುಂಬಿರಿ,” ಎಂದರು. ಅವರು ಅವುಗಳನ್ನು ಕಂಠದವರೆಗೆ ತುಂಬಿದರು.
8 ಅನಂತರ ಯೇಸು ಅವರಿಗೆ, “ಈಗ ಇದನ್ನು ತೆಗೆದುಕೊಂಡು ಔತಣದ ಮೇಲ್ವಿಚಾರಕನಿಗೆ ಕೊಡಿರಿ,” ಎಂದರು.
ಸೇವಕರು ತೆಗೆದುಕೊಂಡು ಹೋದರು. 9 ಔತಣದ ಮೇಲ್ವಿಚಾರಕನು ದ್ರಾಕ್ಷಾರಸವಾಗಿದ್ದ ನೀರನ್ನು ರುಚಿನೋಡಿದಾಗ, ಅದು ಎಲ್ಲಿಂದ ಬಂತೆಂದು ಅವನಿಗೆ ತಿಳಿದಿರಲಿಲ್ಲ. ಆದರೆ ನೀರನ್ನು ತಂದ ಸೇವಕರಿಗೆ ತಿಳಿದಿತ್ತು. ಔತಣದ ಮೇಲ್ವಿಚಾರಕನು ಮದುಮಗನನ್ನು ಕರೆದು, 10 “ಪ್ರತಿಯೊಬ್ಬನು ಉತ್ತಮ ದ್ರಾಕ್ಷಾರಸವನ್ನು ಮೊದಲು ತಂದಿಟ್ಟು ಜನರು ತುಂಬಾ ಕುಡಿದ ಮೇಲೆ ಸಾಧಾರಣವಾದದ್ದನ್ನು ಕೊಡುತ್ತಾರೆ, ನೀನಾದರೋ ಉತ್ತಮ ದ್ರಾಕ್ಷಾರಸವನ್ನು ಇನ್ನೂ ಇಟ್ಟುಕೊಂಡಿರುವೆ,” ಎಂದನು.
11 ಯೇಸು ಗಲಿಲಾಯದ ಕಾನಾದಲ್ಲಿ ಮಾಡಿದ ಸೂಚಕಕಾರ್ಯಗಳಲ್ಲಿ ಇದು ಮೊದಲನೆಯದಾಗಿತ್ತು. ಹೀಗೆ ಯೇಸು ತಮ್ಮ ಮಹಿಮೆಯನ್ನು ತೋರ್ಪಡಿಸಿದರು. ಯೇಸುವಿನ ಶಿಷ್ಯರು ಅವರಲ್ಲಿ ನಂಬಿಕೆಯಿಟ್ಟರು.
12 ಇದಾದ ಮೇಲೆ ಯೇಸು ತಮ್ಮ ತಾಯಿ, ಸಹೋದರರು ಮತ್ತು ಶಿಷ್ಯರೊಡನೆ ಕಪೆರ್ನೌಮಿಗೆ ಹೋದರು. ಅಲ್ಲಿ ಅವರು ಕೆಲವು ದಿವಸ ಇದ್ದರು.
ಯೇಸು ದೇವಾಲಯವನ್ನು ಶುದ್ಧಗೊಳಿಸಿದ್ದು
13 ಯೆಹೂದ್ಯರ ಪಸ್ಕಹಬ್ಬವು‡ಈಜಿಪ್ಟ್‌ನಲ್ಲಿದ್ದ ಇಸ್ರಾಯೇಲರ ಬಿಡುಗಡೆಯನ್ನು ಸ್ಮರಿಸುವ ಹಬ್ಬ ಹತ್ತಿರವಾದಾಗ ಯೇಸು ಯೆರೂಸಲೇಮಿಗೆ ಹೋದರು. 14 ಅವರು ದೇವಾಲಯದ ಅಂಗಳದಲ್ಲಿ ದನ, ಕುರಿ ಹಾಗೂ ಪಾರಿವಾಳಗಳನ್ನು ಮಾರುವವರೂ ಹಣ ಬದಲಾಯಿಸುವವರೂ ಕುಳಿತಿರುವುದನ್ನು ಕಂಡರು. 15 ಯೇಸು ಹಗ್ಗಗಳಿಂದ ಕೊರಡೆ ಮಾಡಿ ಕುರಿ, ದನ ಸಹಿತ ಎಲ್ಲರನ್ನೂ ದೇವಾಲಯದ ಹೊರಕ್ಕೆ ಅಟ್ಟಿ, ಹಣ ಬದಲಾಯಿಸುವವರ ನಾಣ್ಯಗಳನ್ನು ಮತ್ತು ಮೇಜುಗಳನ್ನು ಕೆಡವಿದರು. 16 ಯೇಸು ಪಾರಿವಾಳ ಮಾರುವವರಿಗೆ, “ಇವುಗಳನ್ನು ತೆಗೆದುಕೊಂಡು ಹೋಗಿರಿ, ನನ್ನ ತಂದೆಯ ಮನೆಯನ್ನು ವ್ಯಾಪಾರದ ಮನೆಯನ್ನಾಗಿ ಮಾಡಬೇಡಿರಿ,” ಎಂದರು. 17 ಯೇಸುವಿನ ಶಿಷ್ಯರು, “ನಿನ್ನ ಆಲಯದ ಮೇಲಿನ ಆಸಕ್ತಿಯು ನನ್ನನ್ನು ಬೆಂಕಿಯಂತೆ ದಹಿಸುತ್ತದೆ,”§ಕೀರ್ತನೆ 69:9 ಎಂದು ಪವಿತ್ರ ವೇದದಲ್ಲಿ ಬರೆದಿರುವುದನ್ನು ಜ್ಞಾಪಕಮಾಡಿಕೊಂಡರು.
18 ಆಗ ಯೆಹೂದ್ಯರು ಯೇಸುವಿಗೆ, “ಇವುಗಳನ್ನು ಮಾಡುವ ಅಧಿಕಾರ ನಿನಗಿದೆ ಎಂಬುದಕ್ಕೆ ಯಾವ ಸೂಚಕಕಾರ್ಯವನ್ನು ತೋರಿಸುತ್ತೀ?” ಎಂದು ಕೇಳಿದರು.
19 ಅದಕ್ಕೆ ಯೇಸು ಅವರಿಗೆ, “ಈ ದೇವಾಲಯವನ್ನು ಕೆಡವಿರಿ. ನಾನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆನು,” ಎಂದು ಉತ್ತರಕೊಟ್ಟರು.
20 ಅದಕ್ಕೆ ಯೆಹೂದ್ಯರು, “ಈ ದೇವಾಲಯವನ್ನು ಕಟ್ಟುವುದಕ್ಕೆ ನಲವತ್ತಾರು ವರ್ಷಗಳಾದವು. ನೀನು ಮೂರು ದಿನಗಳಲ್ಲಿ ಅದನ್ನು ಎಬ್ಬಿಸುವೆಯೋ?” ಎಂದರು. 21 ಆದರೆ ಯೇಸು ತಮ್ಮ ದೇಹವೆಂಬ ಆಲಯವನ್ನು ಕುರಿತು ಹೇಳಿದ್ದರು. 22 ಆದ್ದರಿಂದ ಯೇಸು ಸತ್ತವರೊಳಗಿಂದ ಜೀವಂತವಾಗಿ ಎದ್ದಾಗ, ಅವರ ಶಿಷ್ಯರು ಅವರು ಹೇಳಿದ ಈ ಮಾತನ್ನು ನೆನಪು ಮಾಡಿಕೊಂಡು ಪವಿತ್ರ ವೇದವನ್ನೂ ಯೇಸು ತಮಗೆ ಹೇಳಿದ ಮಾತನ್ನೂ ನಂಬಿದರು.
23 ಯೇಸು ಪಸ್ಕಹಬ್ಬದಂದು ಯೆರೂಸಲೇಮಿನಲ್ಲಿದ್ದಾಗ ಮಾಡಿದ ಸೂಚಕಕಾರ್ಯಗಳನ್ನು ಅನೇಕರು ಕಂಡು ಅವರ ಹೆಸರಿನಲ್ಲಿ ನಂಬಿಕೆ ಇಟ್ಟರು.*ಕೆಲವು ಪ್ರತಿಗಳಲ್ಲಿ ಆತನಲ್ಲಿ ಎಂದಿದೆ. 24 ಆದರೆ ಯೇಸು ಎಲ್ಲರನ್ನೂ ಅರಿತವರಾದ್ದರಿಂದ ತಮ್ಮನ್ನು ಒಪ್ಪಿಸಿಕೊಡಲಿಲ್ಲ. 25 ಯೇಸು ಮನುಷ್ಯರ ಅಂತರಂಗವನ್ನು ತಿಳಿದವರಾದ ಕಾರಣ ಯಾರೂ ಯಾವ ಮನುಷ್ಯನ ವಿಷಯದಲ್ಲಿಯೂ ಅವರಿಗೆ ಸಾಕ್ಷಿ ಕೊಡಬೇಕಾದ ಅವಶ್ಯವಿರಲಿಲ್ಲ.