ಕೀರ್ತನೆ 19
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ದಾವೀದನ ಕೀರ್ತನೆ.
1 ಆಕಾಶವು ದೇವರ ಮಹಿಮೆಯನ್ನು ಸಾರುತ್ತದೆ;
ಅಂತರಿಕ್ಷವು ಅವರ ಕೈಕೆಲಸವನ್ನು ಘೋಷಿಸುತ್ತದೆ.
2 ಹಗಲೆಲ್ಲಾ ಅವು ಮಾತನಾಡುತ್ತವೆ;
ರಾತ್ರಿಯೆಲ್ಲಾ ಅವು ಅರಿವನ್ನು ಪ್ರಕಟಿಸುತ್ತವೆ.
3 ಅವುಗಳಿಗೆ ಮಾತೂ ಇಲ್ಲ, ಪದವೂ ಇಲ್ಲ,
ಅವುಗಳ ಸ್ವರವು ಕೇಳುವುದೂ ಇಲ್ಲ.
4 ಅವುಗಳ ಧ್ವನಿ ಭೂಲೋಕವೆಲ್ಲಾ ಹರಡಿವೆ;
ಅವುಗಳ ಮಾತುಗಳೋ ಲೋಕದ ಕಟ್ಟಕಡೆಯವರೆಗೂ ಹೋಗುತ್ತವೆ;
ಆಕಾಶದಲ್ಲಿ ದೇವರು ಸೂರ್ಯನಿಗೆ ಗುಡಾರ ಹಾಕಿದ್ದಾರೆ.
5 ಸೂರ್ಯನು ಮದುಮಗನಂತೆ ತನ್ನ ಕೊಠಡಿಯಿಂದ ಹೊರಟುಬಂದು,
ಪಂದ್ಯಕ್ಕೆ ಹರ್ಷದಿಂದ ಓಡುವ ಪರಾಕ್ರಮಶಾಲಿಯಂತೆ ಇದ್ದಾನೆ.
6 ಆಕಾಶದ ಒಂದು ಕಡೆಯಿಂದ ಉದಯಿಸಿ
ಮತ್ತೊಂದು ಕಡೆಯವರೆಗೆ ಹೊರಟು ಪ್ರಯಾಣಿಸುತ್ತಾನೆ;
ಅದರ ಬಿಸಿಲಿಗೆ ಮರೆಯಾದದ್ದು ಒಂದೂ ಇಲ್ಲ.
7 ಯೆಹೋವ ದೇವರ ನಿಯಮವು ಸಂಪೂರ್ಣವಾಗಿದ್ದು,
ಪ್ರಾಣಕ್ಕೆ ಜೀವಕರವಾಗಿದೆ;
ಯೆಹೋವ ದೇವರ ಶಾಸನಗಳು ವಿಶ್ವಾಸಪಾತ್ರವಾಗಿದ್ದು,
ಮುಗ್ಧನನ್ನು ಜ್ಞಾನಿಗಳನ್ನಾಗಿ ಮಾಡುತ್ತವೆ.
8 ಯೆಹೋವ ದೇವರ ಸೂತ್ರಗಳು ನೀತಿಯುಳ್ಳವುಗಳಾಗಿದ್ದು
ಅವು ಹೃದಯಕ್ಕೆ ಆನಂದಕರವಾಗಿವೆ;
ಯೆಹೋವ ದೇವರ ಆಜ್ಞೆಗಳು ಸ್ಪಷ್ಟವಾಗಿದ್ದು,
ಕಣ್ಣುಗಳಿಗೆ ಪ್ರಕಾಶಕರವಾಗಿವೆ.
9 ಯೆಹೋವ ದೇವರ ಭಯವು ಶುದ್ಧವಾಗಿದ್ದು,
ಎಂದೆಂದಿಗೂ ಶಾಶ್ವತವಾಗಿದೆ.
ಯೆಹೋವ ದೇವರ ತೀರ್ಪುಗಳು ಸತ್ಯವಾಗಿದ್ದು,
ಅವೆಲ್ಲವೂ ನೀತಿಯುಳ್ಳದ್ದಾಗಿವೆ.
10 ಅವು ಬಂಗಾರಕ್ಕಿಂತಲೂ,
ಅಪರಂಜಿಗಿಂತಲೂ ಅಮೂಲ್ಯವಾಗಿವೆ;
ಅವು ಜೇನಿಗಿಂತಲೂ,
ಅಪ್ಪಟ ಜೇನುತುಪ್ಪಕ್ಕಿಂತಲೂ ಸಿಹಿಯಾಗಿವೆ.
11 ನಿಮ್ಮ ಸೇವಕನು ಅವುಗಳಿಂದ ಎಚ್ಚರಿಕೆ ಪಡೆಯುತ್ತಾನೆ;
ಅವುಗಳನ್ನು ಕೈಗೊಳ್ಳುವುದರಲ್ಲಿ ದೊಡ್ಡ ಪ್ರತಿಫಲವುಂಟು.
12 ತಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಯಾರಿಗೆ ಸಾಧ್ಯ?
ನನ್ನ ಗುಪ್ತ ಪಾಪಗಳನ್ನು ಕ್ಷಮಿಸು.
13 ಬೇಕುಬೇಕೆಂದು ಪಾಪಮಾಡದಂತೆ ನಿಮ್ಮ ಸೇವಕನನ್ನು ಕಾಪಾಡು;
ಅಂಥ ಪಾಪಗಳು ನನ್ನ ಮೇಲೆ ಆಳಿಕೆ ಮಾಡದಿರಲಿ.
ಆಗ ನಾನು ತಪ್ಪಿಲ್ಲದವನಾಗಿ,
ಮಹಾಪರಾಧದಿಂದ ಬಿಡುಗಡೆಯಾಗಿರುವೆನು.
14 ಯೆಹೋವ ದೇವರೇ, ನನ್ನ ಬಂಡೆಯೇ, ನನ್ನ ವಿಮೋಚಕರೇ,
ನನ್ನ ಬಾಯಿಯ ಮಾತುಗಳೂ ನನ್ನ ಹೃದಯದ ಧ್ಯಾನವೂ
ನಿಮ್ಮ ದೃಷ್ಟಿಯಲ್ಲಿ ಮೆಚ್ಚಿಕೆಯಾಗಿರಲಿ.